ಸೋಮವಾರ, ಏಪ್ರಿಲ್ 19, 2021
23 °C

ಕೇಂದ್ರ ಸರ್ಕಾರದಿಂದ ರಾಜ್ಯದ ಸ್ವಾಯತ್ತತೆಗೆ ಕುತ್ತು?

ವಾಸು ಎಚ್.ವಿ. Updated:

ಅಕ್ಷರ ಗಾತ್ರ : | |

Prajavani

ಕೇಂದ್ರ ಸರ್ಕಾರವು ರಾಜ್ಯಗಳ ಹಕ್ಕಿನ ಮೇಲೆ ದಾಳಿ ಮಾಡುತ್ತಿದೆ ಎಂಬ ಪುಕಾರು ಹಿಂದೆಂದಿಗಿಂತಲೂ ಈಗ ಹೆಚ್ಚಾಗಿದೆ. ಹೌದುSS, ಈಗೇಕೆ ಇಷ್ಟೊಂದು ಹುಯಿಲು? ಕರ್ನಾಟಕದ ಅಸ್ಮಿತೆಯನ್ನು ಕಾಪಾಡಿಕೊಳ್ಳುವ ದಾರಿ ಯಾವುದು?

ಕರ್ನಾಟಕ ಸರ್ಕಾರದ ಹಿರಿಯ ಸಚಿವರೊಬ್ಬರು ಈಚೆಗೆ ರಾಜ್ಯಗಳ ಸ್ವಾಯತ್ತತೆಯ ಮೇಲೆ ಒಕ್ಕೂಟ ಸರ್ಕಾರದ ಹಸ್ತಕ್ಷೇಪವು ಮಿತಿ ಮೀರುತ್ತಿರುವುದರ ಕುರಿತು ಸಾರ್ವಜನಿಕವಾಗಿಯೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪಶ್ಚಿಮ ಬಂಗಾಳದ ಚುನಾವಣೆಯ ಅಗಾಧ ಬಿಸಿಯ ನಡುವೆಯೇ ಅಲ್ಲಿನ ಮುಖ್ಯಮಂತ್ರಿಯು ದೇಶದ ಹಲವಾರು ಮುಖ್ಯಮಂತ್ರಿಗಳು ಮತ್ತು ವಿರೋಧ ಪಕ್ಷಗಳ ನಾಯಕರಿಗೆ ಪತ್ರವೊಂದನ್ನು ಬರೆದು ಇದನ್ನೇ ಪ್ರಸ್ತಾಪಿಸಿದ್ದಾರೆ. ‘ದೇಶದ ಇತಿಹಾಸದಲ್ಲಿ ಹಿಂದೆಂದೂ ಇರದ ಪ್ರಮಾಣಕ್ಕೆ ದೆಹಲಿಯಲ್ಲಿನ ಒಕ್ಕೂಟ ಸರ್ಕಾರವು ರಾಜ್ಯಗಳ ಹಕ್ಕುಗಳ ಮೇಲೆ ದಾಳಿ ಮಾಡುತ್ತಿದೆ’ ಎಂದು ಅವರು ಹೇಳಿರುವುದು ವರದಿಯಾಗಿದೆ.

ದೆಹಲಿಯಲ್ಲಿ ಆಳುತ್ತಿರುವ ಪಕ್ಷವೇ ಕರ್ನಾಟಕದಲ್ಲೂ ಸರ್ಕಾರ ನಡೆಸುತ್ತಿರುವಾಗ ಇನ್ನೂ ಗಂಭೀರವಾದ ಹಲವು ಪ್ರಶ್ನೆಗಳು ಏಳುತ್ತಿವೆ. ಎರಡೂ ಕಡೆ ಒಂದೇ ಪಕ್ಷವಿದ್ದರೆ ಅನುಕೂಲ ಎಂಬ ಪ್ರತಿಪಾದನೆಯನ್ನು ಅಂಕಿ-ಅಂಶಗಳು ಮತ್ತು ವಾಸ್ತವ ಸಂಗತಿಗಳು ಸಮರ್ಥಿಸುತ್ತಿಲ್ಲ. ದೇಶದಲ್ಲಿ ಸಾಪೇಕ್ಷವಾಗಿ ಅಭಿವೃದ್ಧಿ ಹೊಂದಿದ ರಾಜ್ಯಗಳ ಪಟ್ಟಿಯಲ್ಲಿದ್ದ ಕರ್ನಾಟಕವು, ಹಿನ್ನಡೆ ಅನುಭವಿಸುವ ಕಡೆಗೆ ಹೋಗಲಿದೆಯೇ ಎಂಬ ಅನುಮಾನ ಮೂಡುತ್ತಿದೆ.

ಬೆಂಗಳೂರು ಮತ್ತು ದೆಹಲಿ ಎರಡೂ ಕಡೆ ಒಂದೇ ಪಕ್ಷದ ಸರ್ಕಾರ ಇರುವುದು ಒಳ್ಳೆಯದೋ ಅಲ್ಲವೋ ಎಂಬುದನ್ನು ಎರಡು ಸಂಗತಿಗಳು ನಿರ್ಧರಿಸುತ್ತವೆ. ಒಂದು, ದೆಹಲಿಯ ಒಕ್ಕೂಟ ಸರ್ಕಾರದ ಆದ್ಯತೆಗಳು, ಎರಡನೆಯದು ರಾಜ್ಯ ಸರ್ಕಾರಗಳ ಚೌಕಾಶಿ ಸಾಮರ್ಥ್ಯ. ಈ ವಿಚಾರದಲ್ಲಿ ಎಲ್ಲಾ ರಾಜ್ಯಗಳ ಹಿತಾಸಕ್ತಿಯನ್ನು ಕಾಪಾಡುವ ಆಲೋಚನೆಯುಳ್ಳ ಯಾವ ಸರ್ಕಾರವೂ ದೆಹಲಿಯಲ್ಲಿ ಇದುವರೆಗೆ ಬಂದಿಲ್ಲವೆಂದೇ ಹೇಳಬೇಕು. ಆದರೆ ಈಗಿನ ಸರ್ಕಾರವು, ರಾಜ್ಯಗಳ ಹಿತಾಸಕ್ತಿಯನ್ನು ಕಾಪಾಡುವುದು ಹೋಗಲಿ, ಮತ್ತಷ್ಟು ಅಪಾಯಕ್ಕೆ ದೂಡುತ್ತಿದೆ. ಈಗ ಅಧಿಕಾರ ನಡೆಸುತ್ತಿರುವ ದೆಹಲಿಯ ಒಕ್ಕೂಟ ಸರ್ಕಾರದ ಆದ್ಯತೆಯು ಮತ್ತಷ್ಟು ಕೇಂದ್ರೀಕರಣದ ಕಡೆಗಿದೆ.

ಇದಕ್ಕಿಂತ ಸಾಪೇಕ್ಷವಾಗಿ ಉತ್ತಮವಾಗಿದ್ದ ಕೆಲವು ಸರ್ಕಾರಗಳು ಹಿಂದೆ ಇದ್ದವು; ಅದರಲ್ಲೂ ಪ್ರಾದೇಶಿಕ ಪಕ್ಷಗಳ ಮೇಲೆ ಅವಲಂಬಿತವಾಗಬೇಕಿದ್ದ ಸರ್ಕಾರಗಳೇ ಹೆಚ್ಚಿನ ಅಭಿವೃದ್ಧಿ ಸಾಧಿಸಿದವು. ಹಲವಾರು ಅಂಕಿ-ಅಂಶಗಳು ಅದನ್ನು ಸಾಬೀತುಪಡಿಸುತ್ತವೆ. ಜಿಡಿಪಿಯ ಬೆಳವಣಿಗೆ ಮೂಲಕ ಅಭಿವೃದ್ಧಿಯನ್ನು ಅಳೆಯುವುದಿರಲಿ ಅಥವಾ ಮಾನವ ಅಭಿವೃದ್ಧಿ ಸೂಚ್ಯಂಕಗಳ ಮೇಲೆ ಅಳೆಯುವುದಿರಲಿ, ಎರಡೂ ಸಂದರ್ಭಗಳಲ್ಲಿ ಕಿಚಡಿ ಸರ್ಕಾರಗಳ ಸಾಧನೆಯೇ ಉತ್ತಮವಾಗಿತ್ತು. ರಾಜ್ಯ ಸರ್ಕಾರಗಳ ಚೌಕಾಶಿ ಸಾಮರ್ಥ್ಯಕ್ಕೂ ಇದಕ್ಕೂ ನೇರ ಸಂಬಂಧವಿದೆ. ದೆಹಲಿಯ ಒಕ್ಕೂಟ ಸರ್ಕಾರವು ಘಾತುಕ ಬಹುಮತವನ್ನು ಹೊಂದಿರುವ ಎಲ್ಲಾ ಸಂದರ್ಭಗಳಲ್ಲೂ ರಾಜ್ಯಗಳ ಹಿತಾಸಕ್ತಿಯನ್ನು ಕಡೆಗಣಿಸಲಾಗಿದೆ. ಅದು ರಾಜೀವ್‍ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರವಿರಲಿ, ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವಿರಲಿ ಈ ವಿಚಾರ ಸ್ಪಷ್ಟ. ಅಂತಹ ಸಂದರ್ಭಗಳಲ್ಲಿ ಎರಡೂ ಕಡೆ ಒಂದೇ ಪಕ್ಷದ ಸರ್ಕಾರವಿದ್ದರಂತೂ ಕನಿಷ್ಠ ಬಾಯಿಮಾತಿನ ವಿರೋಧವೂ, ಹಕ್ಕಿನ ಪ್ರತಿಪಾದನೆಯೂ ನಡೆದಿಲ್ಲ ಎಂಬುದೇ ಇದುವರೆಗಿನ ಇತಿಹಾಸ.

ರಾಜ್ಯಗಳಿಗೆ ರಾಚನಿಕವಾಗಿ ಮಹತ್ವವಿಲ್ಲದಂತೆ ಆಗುತ್ತಿರುವ ಸಂದರ್ಭದಲ್ಲಿ ನಾವಿದ್ದೇವೆ. ದೆಹಲಿಯಲ್ಲಿ ಆಳುತ್ತಿರುವ ಪಕ್ಷದ ಪ್ರಭುಗಳ ಎದುರು ದನಿಯೆತ್ತುವ ಸಾಮರ್ಥ್ಯ ಆ ಪಕ್ಷದ ಯಾವ ಸ್ಥಳೀಯ ನಾಯಕರಲ್ಲೂ ಇಲ್ಲವಾಗಿದೆ. ಹೀಗಾಗಿ ಬಯಸಿದರೂ ಪರಿಸ್ಥಿತಿಯನ್ನು ಗಣನೀಯವಾಗಿ ಬದಲಿಸುವ ಸಾಧ್ಯತೆಯೇ ಇಲ್ಲದಿರುವ ದುರಂತ ಎದುರಾಗಿದೆ.

ಒಕ್ಕೂಟ ಸರ್ಕಾರವು ಸಂಗ್ರಹಿಸುವ ತೆರಿಗೆಗಳಲ್ಲಿ ರಾಜ್ಯದ ಪಾಲಿನ ಕುರಿತು ಹಣಕಾಸು ಆಯೋಗಗಳು ಶಿಫಾರಸು ಮಾಡುತ್ತವೆ. ಅಪರೂಪದ ಸಂದರ್ಭಗಳನ್ನು ಬಿಟ್ಟರೆ ಉಳಿದಂತೆ ಈ ಶಿಫಾರಸುಗಳು ಸಂಪೂರ್ಣ ಜಾರಿಗೆ ಬರುತ್ತವೆ. ಆದರೆ, ಈಗಿನ ಪರಿಸ್ಥಿತಿ ಹೇಗಿದೆಯೆಂದರೆ ಅದನ್ನು ಜಾರಿ ಮಾಡುವುದೇ ಅಪರೂಪವಾಗಿದೆ. ಅಂದರೆ ರಾಜ್ಯಗಳ ಪಾಲಿಗೆ ಶಿಫಾರಸಾದ ಅನುದಾನದ ಪ್ರಮಾಣವನ್ನು ಒಕ್ಕೂಟ ಸರ್ಕಾರ ನೀಡದೇ, ರಾಜ್ಯಗಳಿಗೆ ಕೊರತೆ ಹೆಚ್ಚಾಗುತ್ತಲೇ ಇದೆ.

ಯುಪಿಎ ಸರ್ಕಾರದ ಕಡೆಯ ವರ್ಷದಲ್ಲೇ ಈ ಛಾಯೆ ಕಂಡಿತಾದರೂ ಅದು ಕೇವಲ ಶೇ -4ರಷ್ಟಿತ್ತು. ಆದರೆ, 2014-15ರಲ್ಲಿ ಅದು ಶೇ -14ರಷ್ಟಾಯಿತು. ಅಲ್ಲಿಂದ ಹಿಗ್ಗುತ್ತಾ ಹೋಗಿ ಕಳೆದ ವರ್ಷ ಅದು ಶೇ -37 ಆಗಿದೆ. ಕೇವಲ ಆರು ವರ್ಷಗಳಲ್ಲಿ ರಾಜ್ಯಗಳು ಈ ಬಾಬ್ತಿನಲ್ಲಿ ಕಳೆದುಕೊಂಡ ಒಟ್ಟು ಹಣ ಹತ್ತಿರತ್ತಿರ ₹ 8 ಲಕ್ಷ ಕೋಟಿ. ಹಣಕಾಸು ಆಯೋಗದ ಶಿಫಾರಸಿನಲ್ಲೇ ಕರ್ನಾಟಕದಂತಹ ರಾಜ್ಯಗಳಿಗೆ ಅನ್ಯಾಯವಾಗಿರುತ್ತದೆ. ಉದಾಹರಣೆಗೆ ಈ ಹಿಂದೆ ಕರ್ನಾಟಕಕ್ಕೆ ಈ ರಾಜ್ಯದ ಕಡೆಯಿಂದ ಹೋಗುವ ₹ 100 ತೆರಿಗೆಯಲ್ಲಿ ₹ 53 ವಾಪಸ್ ಸಿಗುತ್ತಿತ್ತು. ಈಗ (15ನೇ ಹಣಕಾಸು ಆಯೋಗದ ಶಿಫಾರಸಿನ ನಂತರ) ನಮ್ಮ ರಾಜ್ಯದಿಂದ ಹೋಗುವ ₹ 100 ತೆರಿಗೆ ಹಣದಲ್ಲಿ ₹ 40  ಮಾತ್ರ ಸಿಗುತ್ತಿದೆ. ಹಾಗಾಗಿಯೇ ಈ ಸಾರಿ ಯಡಿಯೂರಪ್ಪನವರು ಮಂಡಿಸಿದ ಬಜೆಟ್ಟಿನಲ್ಲಿ ಒಕ್ಕೂಟ ಸರ್ಕಾರದಿಂದ ಬರುವ ತೆರಿಗೆಯ ಪಾಲು ರೂಪಾಯಿಗೆ 12 ಪೈಸೆಯಿಂದ 10 ಪೈಸೆಗೆ ಇಳಿದಿದೆಯೆಂದು ಹೇಳಿದ್ದಾರೆ. ಒಕ್ಕೂಟ ಸರ್ಕಾರದ ಅನುದಾನದ ಬಾಬ್ತೂ ರೂಪಾಯಿಗೆ 7 ಪೈಸೆಯಿಂದ 6 ಪೈಸೆಗೆ ಇಳಿದಿದೆ. ದೆಹಲಿಯ ಒಕ್ಕೂಟ ಸರ್ಕಾರದಿಂದ ಬರುತ್ತದೆಂದು ಅಂದಾಜಿಸಲಾಗುವ ಈ ಪ್ರಮಾಣದ ಹಣವೂ ಅಂತಿಮವಾಗಿ ಬಾರದೇ ಹೋದರೆ ಏನಾಗಬಹುದು?

ಮೇಲಿನವು ಒಕ್ಕೂಟ ಸರ್ಕಾರವು ರಾಜ್ಯಗಳಿಂದಲೇ ಸಂಗ್ರಹಿಸಿ ಅವುಗಳೊಂದಿಗೆ ಹಂಚಿಕೊಳ್ಳಲೇಬೇಕಾದ ತೆರಿಗೆಯ ಪಾಲಾದರೆ, ಹಂಚಿಕೊಳ್ಳುವ ಅಗತ್ಯವಿರದ ಸೆಸ್ ಮತ್ತು ಸರ್‌ಚಾರ್ಜ್‌ಗಳೆಂಬ ಅಡ್ಡಹಾದಿಗಳೂ ದೆಹಲಿಗಿವೆ. ಅದನ್ನು ಹೆಚ್ಚಳ ಮಾಡುತ್ತಾ ಬಂದಿರುವ ಒಕ್ಕೂಟ ಸರ್ಕಾರವು ರಾಜ್ಯಗಳನ್ನು ಆ ರೀತಿಯೂ ವಂಚಿಸಲು ಶುರು ಮಾಡಿದೆ. 2014-15ರಲ್ಲಿ ಒಕ್ಕೂಟ ಸರ್ಕಾರದ ತೆರಿಗೆ ಆದಾಯದ ಶೇ 9.3ರಷ್ಟಿದ್ದ ಸೆಸ್ ಮತ್ತು ಸರ್‌ಚಾರ್ಜ್‌ಗಳ ಬಾಬ್ತು ಕಳೆದ ವರ್ಷದ ಹೊತ್ತಿಗೆ ಶೇ 15ಕ್ಕೇರಿತ್ತು.

ತನ್ನ ರಾಜ್ಯದೊಳಗೆ ತಾನು ವಿಧಿಸಿಕೊಳ್ಳುತ್ತಿದ್ದ ವಿವಿಧ ಬಗೆಯ ತೆರಿಗೆ ವಿಧಾನಗಳನ್ನು ಜಿಎಸ್‍ಟಿಯ ಹೆಸರಿನಲ್ಲಿ ಒಕ್ಕೂಟ ಸರ್ಕಾರದ ಅಧೀನಕ್ಕೆ ಅರ್ಪಿಸಿದ ನಂತರ ಸ್ವಂತ ತೆರಿಗೆ ಹೆಚ್ಚಿಸಿಕೊಳ್ಳುವ ಸಾಧ್ಯತೆಯೂ ರಾಜ್ಯಗಳಿಗೆ ಕಡಿಮೆಯಾಗಿದೆ. ಇದರಿಂದ ಉಂಟಾಗುವ ಕೊರತೆಯನ್ನು 2022ರವರೆಗೆ ತುಂಬಿಕೊಡುವುದಾಗಿ ಹೇಳಿದ್ದ ಒಕ್ಕೂಟ ಸರ್ಕಾರವು ಕರ್ನಾಟಕಕ್ಕೆ ಇದುವರೆಗೆ ಒಂದು ವರ್ಷವೂ ಅದನ್ನು ಪೂರ್ಣ ತುಂಬಿಕೊಟ್ಟಿಲ್ಲ. ಇದನ್ನು ಆಯಾ ಅವಧಿಯ ಮುಖ್ಯಮಂತ್ರಿಗಳೇ ವಿಧಾನ ಮಂಡಲದಲ್ಲಿ ಹೇಳಿದ್ದಾರೆ. ಗಮನಿಸಿ: ನಾಲ್ಕಾರು ಬಗೆಗಳಲ್ಲಿ ರಾಜ್ಯ ಸರ್ಕಾರವು ಅನ್ಯಾಯವನ್ನು ಅನುಭವಿಸುತ್ತಿದೆ.

ರಾಜ್ಯಗಳ ವಿತ್ತೀಯ ಸ್ವಾಯತ್ತತೆಯ ಪರಿಸ್ಥಿತಿ ಹೀಗಾದಾಗ, ರಾಜ್ಯ ಸರ್ಕಾರಗಳೆಂಬುವು ಒಕ್ಕೂಟ ಸರ್ಕಾರದ ಯೋಜನೆಗಳನ್ನು ಅನುಷ್ಠಾನ ಮಾಡುವ ಶಾಖೆಗಳಾಗಿಬಿಡುತ್ತವೆ. ಇದರಾಚೆಗೆ ಸಾಲ ಮಾಡಲೂ ಒಕ್ಕೂಟ ಸರ್ಕಾರದ ಅನುಮತಿ ಬೇಕು. ಈ ಹಿಂದೆ ರಾಜ್ಯಗಳು ಜಿಎಸ್‍ಡಿಪಿಯ (ರಾಜ್ಯಗಳ ಒಟ್ಟು ಆಂತರಿಕ ಉತ್ಪನ್ನದ) ಶೇ 3ರಷ್ಟು ಸಾಲ ಮಾಡಬಹುದಿತ್ತು, ಈಗ ಅದನ್ನು ಶೇ 5ಕ್ಕೆ ಹೆಚ್ಚಿಸಲು ಅನುಮತಿ ನೀಡಲಾಗಿದೆ. ಈ ಅನುಮತಿ ಸಿಕ್ಕಿದ್ದು ಸಹ ಅವರು ಹಾಕಿದ ರಾಜ್ಯಗಳ ಹಿತಾಸಕ್ತಿ ವಿರೋಧಿ ಷರತ್ತುಗಳನ್ನು (ಜಿಎಸ್‍ಟಿ ನಷ್ಟವನ್ನು ಪ್ರಶ್ನಿಸದೇ ಇರುವುದು ಮತ್ತು ಜನರಿಂದ ಕಟ್ಟುನಿಟ್ಟಾದ ತೆರಿಗೆ ವಸೂಲಿ ಮಾಡುವುದು) ರಾಜ್ಯ ಸರ್ಕಾರವು ಒಪ್ಪಿದ್ದರಿಂದ. ಈ ಸಾಲ ಮಾಡುವ ಸ್ವಾತಂತ್ರ್ಯವನ್ನು ಬಳಸಿಕೊಂಡ ನಮ್ಮ ರಾಜ್ಯ ಸರ್ಕಾರವು ಈ ವರ್ಷ ಸಾಲದ ಬಾಬ್ತನ್ನು ರೂಪಾಯಿಯಲ್ಲಿ 22 ಪೈಸೆಯಿಂದ 29 ಪೈಸೆಗೆ ಹೆಚ್ಚಿಸಿಕೊಂಡಿದೆ.

ಇವೆಲ್ಲ ಕೊರತೆಗಳ ನಂತರ ರಾಜ್ಯ ಸರ್ಕಾರದ ಆದ್ಯತೆಯೇನು ಎಂದು ನೋಡಿದರೆ ಅದರಲ್ಲೂ ದೆಹಲಿ ಸಿಂಹಾಸನವನ್ನಾಳುತ್ತಿರುವ ಪಕ್ಷದ ಆದ್ಯತೆಯು ಎದ್ದು ಕಾಣುತ್ತದೆಯೇ ಹೊರತು, ಸಮಸ್ತ ಕರ್ನಾಟಕದ ಆದ್ಯತೆಗಳಲ್ಲ. ಅಯೋಧ್ಯೆಯಲ್ಲಿ ಯಾತ್ರಿ ನಿವಾಸ, ಆಗಸ್ಟ್ 2021ರೊಳಗೆ ಒಂದು ರಾಷ್ಟ್ರ ಒಂದು ಕಾರ್ಡ್ ಯೋಜನೆ ಜಾರಿ, ಮಠಮಾನ್ಯಗಳಿಗೆ ಅನುದಾನ, ಬಲಾಢ್ಯ ಜಾತಿಗಳೆರಡಕ್ಕೂ ತಲಾ ₹ 500 ಕೋಟಿ ಅನುದಾನವಿರುವ ನಿಗಮಗಳು ಇತ್ಯಾದಿ ಇತ್ಯಾದಿಗಳೆಲ್ಲವೂ ಯಾರ ಆದ್ಯತೆ ಎಂಬ ಪ್ರಶ್ನೆಯನ್ನು ಹಾಕಿಕೊಂಡರೆ ಇದು ಅರ್ಥವಾಗುತ್ತದೆ.

ಬಜೆಟ್‍ನಲ್ಲಿ ಬೃಹತ್ ನೀರಾವರಿ, ಬೆಂಗಳೂರು ನಗರಾಭಿವೃದ್ಧಿ, ಇಂಧನ ಹಾಗೂ ಲೋಕೋಪಯೋಗಿ ಇಲಾಖೆಗಳಿಗೆ ಮಾತ್ರ ಹೆಚ್ಚಿನ ಅನುದಾನ ಸಂದಾಯವಾಗುತ್ತದೆ. ಏಕೆ ಹೀಗೆ? ಇದರಿಂದ ಈ ನಾಲ್ಕು ಇಲಾಖೆಗಳಿಗೆ ಸಂಬಂಧಿಸಿದಂತೆ ದೊಡ್ಡ ಅಭಿವೃದ್ಧಿಯೇನಾದರೂ ಆಗುತ್ತದೆಯೇ? ಹಾಗೇನಿಲ್ಲ, ಇದಕ್ಕೆ ಎರಡು ಕಾರಣಗಳಿವೆ. ಒಂದು, ಸದರಿ ಖಾತೆಗಳನ್ನು ಹಿಡಿಯುವ ಮಂತ್ರಿಗಳೆಲ್ಲರೂ ನಂತರ ಪ್ರಭಾವಿಗಳಾಗುತ್ತಾರೆ ಮತ್ತು ಫಲವತ್ತಾಗುತ್ತಾರೆ. ಹೈಕಮಾಂಡ್‍ ಅನ್ನು ಸಾಕುವುದಕ್ಕೂ ಈ ಇಲಾಖೆಗಳ ಹಣವೇ ಬಳಕೆಯಾಗುತ್ತದೆ. ಹಾಗಾಗಿ ನೀರೂ ಹರಿಯುವುದಿಲ್ಲ, ಇಲಾಖೆಗಳೂ ಅಭಿವೃದ್ಧಿಯಾಗುವುದಿಲ್ಲ. ಇದು ಕರ್ನಾಟಕವನ್ನು ಕಾಡುತ್ತಿರುವ ಮತ್ತೊಂದು ಪಿಡುಗು.

ಇಂತಹ ಸರ್ಕಾರಗಳು ಮತ್ತು ಒಕ್ಕೂಟ ಸರ್ಕಾರದ ನೀತಿಯು ಕರ್ನಾಟಕವನ್ನು ಹಿಂದುಳಿದ ರಾಜ್ಯವನ್ನಾಗಿಸುವುದರ ಕಡೆಗೆ ತಳ್ಳುತ್ತಿವೆ. ಒಂದು ವೇಳೆ ಬಯಸಿದರೂ ಈಗಿರುವ ಪಕ್ಷಗಳು ಕರ್ನಾಟಕದ ಘನತೆ, ವಿತ್ತೀಯ ಹಾಗೂ ಆಡಳಿತಾತ್ಮಕ ಸ್ವಾಯತ್ತತೆಯ ಕೂಗನ್ನು ಹಾಕಲಾರವು. ಈ ಗಂಭೀರ ಸಮಸ್ಯೆಗಳನ್ನು ಸಮಸ್ತ ಕರ್ನಾಟಕದ ಹಿತ ಬಯಸುವ ಪ್ರಜ್ಞಾವಂತರು ತಮ್ಮ ಆದ್ಯತೆಯ ಸಂಗತಿಗಳನ್ನಾಗಿಸಿಕೊಳ್ಳುವುದು ಇಂದಿನ ತುರ್ತಾಗಿದೆ.

ಮೊದಲಿಗೆ, ಸಮಸ್ತ ಕರ್ನಾಟಕದ ಸಮಗ್ರ ಹಿತಾಸಕ್ತಿಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುವುದರಿಂದ ಆರಂಭಿಸಬೇಕು. ಅಲ್ಲಿಂದ ಮುಂದಕ್ಕೆ ರಾಜಕೀಯ ಒತ್ತಡ ನಿರ್ಮಾಣದ ಕಡೆಗೆ ಅದು ಸಾಗಬೇಕು. ಆದರೆ, ಇಂದಿನ ಸ್ಥಾಪಿತ ಪಕ್ಷಗಳ ನೆಲೆಯಿಂದಲೇ ಪ್ರಾದೇಶಿಕ ಹಿತಾಸಕ್ತಿಯೂ ಹುಟ್ಟಿ ಬರಬೇಕೆಂಬ ನಿರೀಕ್ಷೆ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಅದು ಸಾಧ್ಯವಿದ್ದದ್ದೇ ಆಗಿದ್ದಲ್ಲಿ, ಈಗಿನ ಅಪಾಯಕಾರಿ ವಿದ್ಯಮಾನಗಳಿಗೆ ಆಳುವ ಪಕ್ಷವನ್ನು ಪಕ್ಕಕ್ಕಿಟ್ಟರೂ, ಕರ್ನಾಟಕದ ವಿರೋಧ ಪಕ್ಷಗಳು ಪ್ರತಿಕ್ರಿಯಿಸಬೇಕಿದ್ದ ರೀತಿಯೇ ಬೇರೆಯಾಗಬೇಕಿತ್ತು. ಹಾಗಾಗಿಯೇ ಹೊಸ ರಾಜಕೀಯ ಒತ್ತಾಸೆಯನ್ನು ಕಟ್ಟಬೇಕಾದ ಅಗತ್ಯವು ಎದ್ದು ಕಾಣುತ್ತಿದೆ.
ಅಂತಹ ಹೊಸದು, ಈಗಿನ ರಾಜಕೀಯ ಪಕ್ಷಗಳ ಒಳಗಿಂದ ಹುಟ್ಟುವುದು ಅಸಾಧ್ಯವೆಂದಾಗ ಚಳವಳಿಗಳ ಕಡೆಗೆ ದೃಷ್ಟಿ ಹೋಗುತ್ತದೆ. ಅಲ್ಲಿ ವಿವಿಧ ಜನಸಮುದಾಯಗಳ ಪರವಾಗಿ ಕೆಲಸ ಮಾಡುತ್ತಿರುವ ಗುಂಪುಗಳು ಇವೆಯಾದರೂ, ಸಮಸ್ತ ಕರ್ನಾಟಕದ ಹಿತಾಸಕ್ತಿಯನ್ನು ಕೈಗೆತ್ತಿಕೊಂಡು ನಿರಂತರವಾಗಿ ಚಳವಳಿ ರೂಪಿಸಿದ್ದು ಕಾಣುವುದಿಲ್ಲ.

ದೆಹಲಿ ಸಿಂಹಾಸನಾಧೀಶ್ವರರ ಕಿರೀಟಕ್ಕೆ ಪೆಟ್ಟು ನೀಡಿರುವ ರೈತ ಹೋರಾಟದ ಶಕ್ತಿಯನ್ನು ನಾವು ನೋಡುತ್ತಿದ್ದೇವೆ. ಅದು ಕೇವಲ ಎಪಿಎಂಸಿ, ಕನಿಷ್ಠ ಬೆಂಬಲ ನೀತಿಯ ವಿಚಾರದ್ದು ಮಾತ್ರವಾಗಿರದೇ, ರಾಜ್ಯಪಟ್ಟಿಯಲ್ಲಿರುವ ಬಾಬ್ತುಗಳ ಮೇಲೆ ಒಕ್ಕೂಟ ಸರ್ಕಾರದ ದಾಳಿಯ ವಿರುದ್ಧ ನಡೆಯುತ್ತಿರುವ ಹೋರಾಟವೂ ಆಗಿದೆ. ಆದರೆ ದೆಹಲಿ ಹೋರಾಟಕ್ಕೆ ‘ಬೆಂಬಲವಾಗಿ’ ಮಾತ್ರ ಕರ್ನಾಟಕದಲ್ಲಿ ಚಳವಳಿ ನಡೆಯುವುದು ಕರ್ನಾಟಕದ ಸಮಸ್ಯೆಗೆ ಪರಿಹಾರ ಒದಗಿಸುವುದಿಲ್ಲ. ಅದನ್ನು ದಾಟಿ ಗ್ರಾಮೀಣ ಕರ್ನಾಟಕದ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ‘ಕರ್ನಾಟಕದ ಮಾದರಿ’ಯೊಂದನ್ನು ನಿರ್ಮಿಸಬೇಕು. ಸಮಸ್ತ ಕರ್ನಾಟಕದ ವಿಚಾರಗಳನ್ನು ಮುಂದಿಟ್ಟುಕೊಂಡು ನಗರ ಗ್ರಾಮೀಣಗಳೆರಡನ್ನೂ ಬೆಸೆಯುವ ವಿನೂತನ ಮಾದರಿಯೊಂದು ಸಾಧ್ಯವೂ ಇದೆ. ಅದು ಯಶಸ್ವಿಯಾದರೆ ಕರ್ನಾಟಕಕ್ಕೆ ಘನತೆಯನ್ನೂ, ಸ್ವಾಯತ್ತತೆಯನ್ನೂ ತಂದುಕೊಡುವ ರಾಜಕೀಯ ಜಾಗೃತಿಗೆ ದಾರಿ ಮಾಡಿಕೊಡಬಲ್ಲದು.

ಆ ನಿಟ್ಟಿನಲ್ಲಿ ಕರ್ನಾಟಕದ ಎಲ್ಲಾ ಭಾಗಗಳ, ಎಲ್ಲಾ ಸಮುದಾಯಗಳ ಮತ್ತು ವಿವಿಧ ತಲೆಮಾರಿನ ಪ್ರಜ್ಞಾವಂತರು ಜೊತೆ ಸೇರಿ ಪ್ರಯತ್ನ ಮಾಡಿದರೆ ಅಂತಹದೊಂದು ಸಾಧ್ಯತೆ ತೆರೆದುಕೊಳ್ಳುವುದರಲ್ಲಿ ಸಂಶಯವಿಲ್ಲ. ಆದರೆ ಅದು ಇದುವರೆಗಿನ ಅರೆಬರೆ ಪ್ರಯತ್ನಗಳ ರೂಪದಲ್ಲಲ್ಲದೇ, ವಿನೂತನ ಹಾಗೂ ಪರಿಣಾಮಕಾರಿ ಪ್ರಯತ್ನವಾದರೆ ಮಾತ್ರ ಸಾಕಾರವಾಗಲು ಸಾಧ್ಯ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು