ಶುಕ್ರವಾರ, ಆಗಸ್ಟ್ 6, 2021
25 °C

ಅಪ್ಪನ ನೆನಪು | ‘ಅಮ್ಮನಂತಹ ಅಪ್ಪ...’

ಪ್ರತೀಕ್ಷಾ ಕಾಶಿ Updated:

ಅಕ್ಷರ ಗಾತ್ರ : | |

ಅಪ್ಪ ಶಿಸ್ತಿನ ಮನುಷ್ಯ, ಹಾಗೆಂದು ಅದನ್ನು ಇತರರ ಮೇಲೆ ಹೇರುತ್ತಿರಲಿಲ್ಲ. ‌ಸ್ಚಯಂ ನಡೆಯಿಂದ ಸೂಕ್ಷ್ಮವಾಗಿ ಕಲಿಸಿದರು. ಸಣ್ಣ ಕಾರ್ಯಕ್ರಮಕ್ಕೂ ಐದು ನಿಮಿಷ ತಡವಾಗಿ ಹೋಗುವವರಲ್ಲ. ಸಿನಿಮಾ ವಿಚಾರದಲ್ಲೂ ಅಷ್ಟೇ ಬದ್ಧತೆ. ನಾಳೆ ಶೂಟಿಂಗ್‌ ಇದೆ ಎಂದಾದರೆ ಹಿಂದಿನ ದಿನ ಸಂಜೆಯಿಂದಲೇ ತಯಾರಿ ನಡೆಸುತ್ತಿದ್ದರು. ನಿದ್ದೆ ಚೆನ್ನಾಗಿ ಆದರೆ ಮುಖ ಫ್ರೆಶ್ ಆಗಿರುತ್ತದೆ ಎಂದು ರಾತ್ರಿ ಬೇಗನೆ ಮಲಗುತ್ತಿದ್ದರು.

ಹೊರಗಡೆ ಅಪ್ಪ ನಟನಾಗಿದ್ದರೆ, ಮನೆಯೊಳಗಡೆ ಪಕ್ಕಾ ಫ್ಯಾಮಿಲಿ ಮ್ಯಾನ್‌. ಅಮ್ಮನನ್ನು (ವೈಜಯಂತಿ ಕಾಶಿ) ನೃತ್ಯ ಕ್ಷೇತ್ರದಲ್ಲಿ ಮುಂದುವರಿಯಲು ಹುರಿದುಂಬಿಸಿದರು. ಅಮ್ಮ ಕೆಲಸದ ಮೇಲೆ ಹೊರಗಿದ್ದಾಗೆಲ್ಲ ಕೈತುತ್ತು ಉಣಿಸಿದರು. ಸಿನಿಮಾ ಕ್ಷೇತ್ರದಲ್ಲಿದ್ದವರಿಗೆ ವೈಯಕ್ತಿಕ ಬದುಕಿನ ಕಡೆಗೆ ಗಮನ ಹರಿಸುವುದು ಕಷ್ಟ. ಆದರೆ ಅಪ್ಪ ಎಷ್ಟೇ ಬ್ಯುಸಿಯಿದ್ದರೂ ಹಾಗಾಗದಂತೆ ನೋಡಿಕೊಂಡರು. ರಜೆ ಇದ್ದಾಗ ಅಪ್ಪ ಶಟಲ್‌ ಬ್ಯಾಡ್ಮಿಂಟನ್‌ ಆಡಲು ಹೋಗುತ್ತಿದ್ದರು. ಆಟ ಮುಗಿದ ಕೂಡಲೇ ‘ಮಗಳು ಕಾಯ್ತಿರ್ತಾಳೆ, ಅವಳ ಹೋಂವರ್ಕ್‌ ಮಾಡಿಸಬೇಕು’ ಎಂದು ಓಡಿಬರುತ್ತಿದ್ದರು. 

ಸಣ್ಣವಳಿದ್ದಾಗ ಶಾಲೆಯಲ್ಲಿ ಹೊಡೆತ ತಿಂದು, ಅಪ್ಪನ ಬಳಿ ಬಂದು ದೂರು ಹೇಳಿದ್ದೆ. ನಾನು ಅಪ್ಪನ ಮುದ್ದಿನ ಮಗಳು. ಅವರು ನಟ ಕೂಡ. ಟೀಚರ್ ಹತ್ರ ಬಂದು ಪ್ರಶ್ನಿಸಬಹುದು ಅಂದುಕೊಂಡಿದ್ದೆ. ಆದರೆ ಅಪ್ಪ ‘ನಿನ್ನದೇ ತಪ್ಪು’ ಎಂದು ಬುದ್ಧಿವಾದ ಹೇಳಿದ್ದರು.

ನನಗೆ ಪಿಯು ಯಲ್ಲಿದ್ದಾಗಲೇ ಕೆಲ ಸಿನಿಮಾಗಳ ಆಫರ್‌ಗಳು ಬಂದಿದ್ದವು. ಶಿಕ್ಷಣವೇ ಮುಖ್ಯ ಎಂದು ನಂಬಿದ್ದ  ಅಪ್ಪ, ಆಫರ್ ನಿರಾಕರಿಸಿದ್ದರು. ಪ್ರೌಢತೆ ಬಂದ ನಂತರ, ಖ್ಯಾತಿ, ಜನಪ್ರಿಯತೆಯನ್ನು ಒಂದೇ ಮನಸ್ಸಿನಿಂದ ನಿಭಾಯಿಸಲು ಕಲಿತ ನಂತರ ಈ ಲೋಕಕ್ಕೆ ಕಾಲಿಡಬೇಕು ಎಂದು ಸಲಹೆ ನೀಡುತ್ತಿದ್ದರು. 

ಅಪ್ಪ ನಾನು ಸ್ಟಾರ್‌, ಸಿನಿಮಾ ನಟ ಎಂದು ಹಮ್ಮುಪಟ್ಟುಕೊಂಡಿದ್ದು ನಾನು ನೋಡಿಲ್ಲ. ನಾನು ‘ಕಾದಂಬರಿ ಕಣಜ’ ಧಾರಾವಾಹಿ ಮೂಲಕ ನಟನೆಗೆ ಕಾಲಿಟ್ಟಾಗ, ‘ನೀನು ನಟನ ಮಗಳಾಗಿದ್ದರೂ, ಆಸಕ್ತಿ ಮತ್ತು ಪ್ರತಿಭೆ ಇದ್ದರಷ್ಟೇ ಅಲ್ಲಿ ಮನ್ನಣೆ’ ಎಂದು ಎಚ್ಚರಿಕೆ ನೀಡಿದ್ದರು.  

ಎಂಜಿನಿಯರಿಂಗ್‌ ಮುಗಿಸಿದ ನಂತರ ನಾನು ಖಾಸಗಿ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆದೆ. ಕೈ ತುಂಬಾ ಸಂಬಳ. ನೃತ್ಯದ ಬಗ್ಗೆ ಆಸಕ್ತಿ ಹೊಂದಿದ್ದರಿಂದ ಕೆಲಸ ಬಿಡುವ ಆಲೋಚನೆ ಬರುತ್ತಿತ್ತು. ಆದರೆ ಧೈರ್ಯ ಇರಲಿಲ್ಲ. ಆಗ ಅಪ್ಪ ‘ಡಾನ್ಸ್‌ ಬಗ್ಗೆ ಪ್ರೀತಿ ಇದೆ. ನಿನ್ನಲ್ಲಿ ಪ್ರತಿಭೆಯೂ ಇದೆ. ದುಡ್ಡಿನ ಬಗ್ಗೆ ಆಲೋಚನೆ ಬೇಡ. ಜನರು ನಿನ್ನ ನೃತ್ಯ ನೋಡಿ ಚಪ್ಪಾಳೆ ತಟ್ಟಿದರೆ ಅದಕ್ಕಿಂತ ದೊಡ್ಡ ಬಹುಮಾನ ಬೇರೆನಿದೆ? ಮನಸ್ಸಿನ ಮಾತು ಕೇಳು’ ಎಂದಿದ್ದರು.

‘ಮದುವೆ ನಂತರ ನೃತ್ಯ ವೃತ್ತಿ ಮುಂದುವರಿಸಿದರೆ  ಕುಟುಂಬವನ್ನು ನಿರ್ಲಕ್ಷ್ಯ ಮಾಡುತ್ತಿದ್ದೀನಾ?’ ಎಂಬ ಅಪರಾಧ ಭಾವ ನನ್ನನ್ನು ಕಾಡತೊಡಗಿತ್ತು. ’ಕುಟುಂಬ ನಿಭಾಯಿಸುತ್ತಾ ವೃತ್ತಿ ಮುಂದುವರಿಸಿಕೊಂಡು ಹೋಗುವ ಚಾಕಚಕ್ಯತೆ ನಿನ್ನಲ್ಲಿದೆ‘ ಎಂದು ಅಪ್ಪ ನನಗೆ ಧೈರ್ಯ ತುಂಬಿದರು. ಅಪ್ಪನದ್ದು ಮಾತೃವಾತ್ಸಲ್ಯ, ಅಮ್ಮನ ಮನಸ್ಸು.

ಸಾಗರ ಮೂಲದ ಅಪ್ಪನಿಗೆ ಬೆಂಗಳೂರಿಗೆ ಬಂದ ಆರಂಭದಲ್ಲಿ ತೋಟ ಮಾಡಬೇಕೆಂಬ ಆಸೆ ಇತ್ತು. ಕೆಂಗೇರಿಯಲ್ಲಿ ಮೂವತ್ತು ವರ್ಷಗಳ ಹಿಂದೆ ಜಾಗ ಖರೀದಿಸಿದರು. ಈಗ ಅಪ್ಪ ಬಿಡುವಿನಲ್ಲಿ ತೋಟದಲ್ಲೇ ಇರುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು