ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದ್ರಯಾನಕ್ಕೂ ಕ್ವಾರಂಟೈನ್

Last Updated 13 ಜೂನ್ 2020, 19:31 IST
ಅಕ್ಷರ ಗಾತ್ರ
ADVERTISEMENT
""

ಚಂದ್ರನನ್ನು ತಲುಪುವ ಮಾನವನ ಶತ ಶತಮಾನಗಳ ಕನಸನ್ನು ನನಸು ಮಾಡಿದ ಗಗನಯಾನಿಗಳು ಚಂದ್ರನ ಪ್ಲೇಗ್‍ ಭಯದಿಂದ ಯಾವ ಹಾರ ತುರಾಯಿಗಳಿಲ್ಲದೇ, ಕುಟುಂಬಕ್ಕೂ ಸಿಗುವ ಅವಕಾಶವಿಲ್ಲದೇ, ಅಸಲಿಗೆ ಅಸ್ತಿತ್ವದಲ್ಲೇ ಇರದ ವೈರಸ್‍ವೊಂದರ ಭಯದಲ್ಲಿ ಗೂಡನ್ನು ಸೇರಬೇಕಾಯಿತು.

ಲಾಕ್‌ಡೌನ್‌, ಕ್ವಾರಂಟೈನ್, ಸೋಷಿಯಲ್ ಡಿಸ್ಟೆನ್ಸಿಂಗ್‌ ಇವುಗಳೆಲ್ಲ ಕೆಲವು ವಾರಗಳ ಹಿಂದೆಯಷ್ಟೇ ನಮ್ಮ ಶಬ್ದಕೋಶಕ್ಕೆ ಸೇರ್ಪಡೆಯಾಗಿ ಈಗಂತೂ ದಿನನಿತ್ಯ ಬಳಕೆಯಾಗುವ ಶಬ್ದಗಳಾಗಿವೆ. ಶರವೇಗದಲ್ಲಿ ಧಾವಿಸುತ್ತಿದ್ದ ಜೀವನಕ್ಕೆ ಇದ್ದಕ್ಕಿದ್ದಂತೆಯೇ ಕೊರೊನಾ ಲಾಕ್‌ಡೌನ್‌ನಿಂದ ಬ್ರೇಕ್ ಬಿದ್ದಿದ್ದು, ನಾಲ್ಕು ಗೋಡೆಯೊಳಗೆ ದಿನ ಕಳೆಯುವ ಜರೂರತ್ತು ಉಂಟಾಗಿದೆ.

ಇಷ್ಟವೋ, ಕಷ್ಟವೋ ಈ ಸಮಯವನ್ನು ನೆಚ್ಚಿನವರ ಜೊತೆಗೆ ಕಾಲ ಕಳೆಯುವ ಅವಕಾಶವೆಂದು ಕೆಲವರು ಸ್ವೀಕರಿಸಿದರೆ, ತಮ್ಮ ಜವಾಬ್ದಾರಿಯನ್ನು ಮುಂದಿನ ದಿನಗಳಲ್ಲಿ ಹೇಗೆ ನಿಭಾಯಿಸುವುದೆಂದು ಮಂಡೆ ಬಿಸಿ ಮಾಡಿಕೊಂಡವರು ಹಲವರು. ಲಾಕ್‌ಡೌನ್‌ ಹೆಂಗೋ ಅಡ್ಜಸ್ಟ್‌ ಮಾಡ್ಕೊಳ್ಳೋಣ. ಆದರೆ, ಕ್ವಾರಂಟೈನ್‍ನಲ್ಲಿಡುವ ಪರಿಸ್ಥಿತಿ ಮಾತ್ರ ನಮಗೆ ಬರದಿರಲಪ್ಪ ಅಂತ ತಮ್ಮಿಷ್ಟದ ದೇವತೆಗೆ ಹರಕೆ ಹೊತ್ತಿರುವ ಜನರು ಅದೆಷ್ಟೋ. ನಮಗೇನೋ ಇಂತಹದೊಂದು ಸನ್ನಿವೇಶ ಹೊಸತು. ಆದರೆ ಕ್ವಾರಂಟೈನ್‌ಗೆ ಒಳಗಾಗುವ ಈ ಪ್ರಕ್ರಿಯೆ ಕೆಲವರಿಗೆ ತಮ್ಮ ಕೆಲಸದ ಒಂದು ಭಾಗ.

ಅದು 1969ರ ಸಮಯ. ನಾಸಾದ ಅಪೊಲೊ 11 ಮಿಷನ್‌ಗೆ ತಯಾರಿ ಜೋರಾಗಿಯೇ ನಡೆದಿತ್ತು. ಚಂದ್ರನ ಮೇಲೆ ಮಾನವನ ಮೊದಲ ಹೆಜ್ಜೆಗೆ ಕ್ಷಣಗಣನೆ ಆರಂಭವಾಗಿದ್ದರೂ ಸಣ್ಣದೊಂದು ಆತಂಕ ವಿಜ್ಞಾನಿಗಳಲ್ಲಿ ಮನೆ ಮಾಡಿತ್ತು. ಜಗತ್ತು ಆಗಷ್ಟೇ ಪ್ಲೇಗ್‌, ಕಾಲರಾದಂತಹ ಮಹಾಮಾರಿಗಳ ದಾಳಿಗೆ ಸಿಲುಕಿ ನಿಧಾನವಾಗಿ ಸಾವರಿಸಿಕೊಳ್ಳುತ್ತಿದ್ದ ಕಾಲವದು. ಲಕ್ಷಾನುಗಟ್ಟಲೆ ಜೀವಗಳನ್ನು ನೋಡ ನೋಡುತ್ತಿದ್ದಂತೆಯೇ ಕಬಳಿಸಿದ ಕಹಿನೆನಪುಗಳು ಜನಮಾನಸದಲ್ಲಿ ಅಳಿಸಲಾರದ ಗಾಯಗಳನ್ನುಂಟು ಮಾಡಿ ಈ ವೈರಸ್‍ಗಳ ಹೆಸರು ಕೇಳಿದರೆ ಜನರು ಬೆಚ್ಚಿಬೀಳುವಂತಾಗಿತ್ತು.

ಕ್ವಾರಂಟೈನ್‌ನಲ್ಲಿರುವ ಗಗನಯಾತ್ರಿಗಳು

ಆ ಒಂದು ಹಿನ್ನೆಲೆಯಲ್ಲಿ ಅಪೊಲೊ 11 ಕಾರ್ಯಾಚರಣೆ ಸಮಯದಲ್ಲಿ ಭೂಮಿಗೆ ಅಪರಿಚಿತವಾಗಿರುವ ಚಂದ್ರನಲ್ಲಿನ ಹೊಸ ವೈರಾಣುಗಳೇನಾದರೂ ಚಂದ್ರಯಾನದ ಮೂಲಕ ಗಗನಯಾತ್ರಿಗಳಿಂದಲೋ, ಅವರು ಅಲ್ಲಿಂದ ಹೊತ್ತು ತರುವ ಮಾದರಿಗಳಿಂದಲೋ ಅನಪೇಕ್ಷಿತ ಅತಿಥಿಯಾಗಿ ಬಂದು ಭೂಮಿಗೆ ವಕ್ಕರಿಸಿಕೊಂಡರೆ ಈ ಪೂರ್ತಿ ಮಿಷನ್‌ಗೆ ಇನ್ನೊಂದು ಮಹಾಮಾರಿಯನ್ನು ಭೂಮಿಗೆ ಪರಿಚಯಿಸಿದ ಕಳಂಕ ಅಂಟಿಕೊಳ್ಳುವ ಸಾಧ್ಯತೆಯಿತ್ತು.

ಒಂದೊಮ್ಮೆ ಆ ಆತಂಕ ನಿಜವಾಗಿ ಪರಿಣಮಿಸಿದರೆ ಅದರ ಪರಿಣಾಮ ಎಷ್ಟು ಘೋರವಾಗಿರುವುದೆಂಬ ಅಂದಾಜು ವಿಜ್ಞಾನಿಗಳಿಗಿದ್ದ ಕಾರಣಕ್ಕೆ ಸಹಜವಾಗಿಯೆ ಅವರೆಲ್ಲ ಆತಂಕಕ್ಕೀಡಾಗಿದ್ದರು. ಇದಕ್ಕೆ ತುಪ್ಪ ಸುರಿಯುವಂತೆ ಆಗಿನ ಕೆಲವು ಪತ್ರಿಕೆಗಳು ಈ ಚಂದ್ರಯಾನವು ಚಂದ್ರನ ಪ್ಲೇಗ್‌ ಅನ್ನು ಹೊತ್ತು ತಂದು ಮನುಕುಲದ ವಿನಾಶಕ್ಕೆ ಕಾರಣವಾಗಬಲ್ಲದೆಂದು ಬಿಂಬಿಸಿ ಪುಟಗಟ್ಟಲೆ ಬರೆದಿದ್ದವು. ಈ ಭಯವನ್ನು ಸಮರ್ಪಕವಾಗಿ ನಿಭಾಯಿಸುವ ಒತ್ತಡದಲ್ಲಿ ಸಿಲುಕಿದ ವಿಜ್ಞಾನಿಗಳೆಲ್ಲಾ ಒಂದು ನಿರ್ಧಾರಕ್ಕೆ ಬಂದರು. ಅದೇ ಈ ಕ್ವಾರಂಟೈನ್.

ಹಾಗೆ ನೋಡಿದರೆ ಈ ಕ್ವಾರಂಟೈನ್ ವ್ಯೋಮಯಾತ್ರಿಗಳಿಗೇನೂ ಹೊಸತಾಗಿರಲಿಲ್ಲ. ಈ ಹಿಂದೆ ಅಪೋಲೊ 7ರ ಯಾನದ ಸಮಯದಲ್ಲಿ ಗಗನಯಾತ್ರಿಯೊಬ್ಬರು ವೈರಲ್ ಜ್ವರಕ್ಕೆ ತುತ್ತಾದ ಹಿನ್ನೆಲೆಯಲ್ಲಿ ಯಾನಕ್ಕೂ ಹಿಂದಿನ ಎರಡು ವಾರಗಳ ಕಾಲ ಗಗನಯಾತ್ರಿಗಳನ್ನು ಕ್ವಾರಂಟೈನ್‍ನಲ್ಲಿ ಇಡುವ ಪರಿಪಾಠ ಆರಂಭವಾಯಿತ್ತು. ಅಂದರೆ, ಗಗನಯಾತ್ರಿಗಳು ಅಂತರಿಕ್ಷಕ್ಕೆ ಚಿಮ್ಮುವ ಮೊದಲು ಆರೋಗ್ಯವಂತರಾಗಿದ್ದು ಅಲ್ಲಿಂದ ಬರುವಾಗ ಅದೇ ಸ್ಥಿತಿಯಲ್ಲಿ ವಾಪಸಾಗಿರುವುದನ್ನು ಖಾತ್ರಿಪಡಿಸಿಕೊಳ್ಳುವುದರ ಮೂಲಕ ಯಾವುದೇ ವೈರಸ್‌ಗಳ ನಿರ್ವಾಹಕರಾಗಿಲ್ಲದಿರುವುದನ್ನು ಖಚಿತಪಡಿಸಿಕೊಳ್ಳುವ ಪ್ರಕ್ರಿಯೆಯದು. ಅದನ್ನೇ ಅಪೊಲೊ 11 ತಂಡವು ವಾಪಸಾದ ನಂತರದ ಮೂರು ವಾರಗಳಿಗೆ ಇನ್ನೂ ಹೆಚ್ಚಿನ ಸುರಕ್ಷತೆಯೊಂದಿಗೆ ಮುಂದುವರಿಸಲು ನಾಸಾದ ವಿಜ್ಞಾನಿಗಳು ನಿರ್ಧರಿಸಿದರು.

ಅಂತೆಯೇ ಅಪೊಲೊ 11 ಚಂದ್ರಯಾನಕ್ಕೆ ವಿಸ್ತೃತ ಕ್ವಾರಂಟೈನ್ ಯೋಜನೆಯೊಂದು ತಯಾರಾಯ್ತು. ಅದರನ್ವಯ ಜುಲೈ 20ರಂದು ಮಾನವನ ಪ್ರಥಮ ಹೆಜ್ಜೆಗಳನ್ನು ಚಂದ್ರನ ಮೇಲೆ ದಾಖಲಿಸಿ ಗಗನಯಾನಿಗಳಾದ ನೀಲ್ ಆರ್ಮಸ್ಟ್ರಾಂಗ್ ಮತ್ತು ಬಜ್ ಆಲ್ಡ್ರಿನ್ ವಾಪಸ್‌ ತಮ್ಮ ನೌಕೆ ಸೇರಿಕೊಳ್ಳುತ್ತಿದ್ದಂತೆಯೇ ಕ್ವಾರಂಟೈನ್ ಯೋಜನೆಯ ಅನುಷ್ಠಾನ ಆರಂಭವಾಯ್ತು. ಆ ಪ್ರಕಾರವೇ ಜುಲೈ 24ರಂದು ನೌಕೆಯು ಭೂಮಿಗೆ ವಾಪಸಾಗುತ್ತಿದ್ದಂತೆಯೇ ನೇರವಾಗಿ ಬಂದಿಳಿದಿದ್ದು ಪೆಸಿಫಿಕ್ ಸಾಗರದಲ್ಲಿ.

ಸಾಗರದ ನೀರಲ್ಲಿ ಮುಳುಗೆದ್ದು ತೇಲುತ್ತಿದ್ದ ಈ ಗಗನನೌಕೆಯ ಮುಚ್ಚಳ ತೆಗೆದು ಯಾತ್ರಿಗಳಿಗೆಂದೇ ತಯಾರಿಸಿದ ಜೈವಿಕ ರಕ್ಷಣಾ ವಸ್ತ್ರ ತೊಡಿಸಿ ನೌಕೆಯಲ್ಲಿದ್ದ ಮೂವರು ಗಗನಯಾತ್ರಿಗಳು ಮತ್ತು ಅವರು ಚಂದ್ರನಿಂದ ತಂದಂತಹ ಕೆಲ ಮಾದರಿಗಳನ್ನು ಭದ್ರವಾಗಿ ಹಡಗಿನಲ್ಲಿ ವಿಶೇಷವಾಗಿ ನಿರ್ಮಿತವಾದ ಪಂಜರದೊಳಗೆ ಸ್ಥಳಾಂತರಿಸಲಾಯಿತು. ಅಲ್ಲಿಂದ ನಾಸಾದ ಮುಖ್ಯ ಕಚೇರಿಯಲ್ಲಿ ಸ್ಥಾಪಿತವಾದ ಕ್ವಾರಂಟೈನ್ ಕೊಠಡಿಯೊಂದಕ್ಕೆ ಹಡಗಿನಲ್ಲಿದ್ದ ಸಹಾಯಕ ಸಿಬ್ಬಂದಿಯ ಜೊತೆ ಸೇರಿಕೊಂಡ ಈ ತಂಡವು ಮುಂದಿನ ಮೂರು ವಾರಗಳನ್ನು ಅಲ್ಲೇ ಕಳೆಯಬೇಕಾಯಿತು.

ನಮ್ಮಲ್ಲಿ ವರ್ಲ್ಡ್‌ಕಪ್ ಗೆದ್ದು ಬರುವ ತಂಡಕ್ಕೆ ಸಿಗುವ ಸ್ವಾಗತವನ್ನೊಮ್ಮೆ ನೆನಪಿಸಿಕೊಳ್ಳಿ. ಚಂದ್ರನನ್ನು ತಲುಪುವ ಮಾನವನ ಶತ ಶತಮಾನಗಳ ಕನಸನ್ನು ನನಸು ಮಾಡಿದ ಈ ವೀರಾಗ್ರಣಿಗಳು ಈ ಚಂದ್ರನ ಪ್ಲೇಗ್‍ನ ಭಯದಿಂದ ಯಾವ ಹಾರ ತುರಾಯಿಗಳಿಲ್ಲದೇ ಕುಟುಂಬಕ್ಕೂ ಸಿಗುವ ಅವಕಾಶವಿಲ್ಲದೇ ಅಸಲಿಗೆ ಅಸ್ತಿತ್ವದಲ್ಲೇ ಇರದ ವೈರಸ್‍ವೊಂದರ ಭಯದಲ್ಲಿ ಗೂಡನ್ನು ಸೇರಬೇಕಾಯಿತು.

ಅಕ್ಷರಶಃ ಝೂನಲ್ಲಿನ ಪ್ರಾಣಿಗಳಂತಾಗಿದ್ದ ಈ ಗಗನಯಾತ್ರಿಗಳನ್ನು ದಿಗ್ಗಜರು, ಸ್ವತಃ ಕುಟುಂಬದವರು ಪಂಜರದ ಹೊರಗೆ ನಿಂತೇ ಅಭಿನಂದಿಸಿದರು. ನೀಲ್ ಆರ್ಮಸ್ಟ್ರಾಂಗ್‌ಗೆ ಹುಟ್ಟುಹಬ್ಬ ಕೂಡ ಇದೇ ಕ್ವಾರಂಟೈನ್ ಅವಧಿಯಲ್ಲಿ ಬಂದಿದ್ದರಿಂದ ಆ ಪಂಜರದಲ್ಲೇ ಕೇಕೊಂದನ್ನು ತಯಾರಿಸಿ ತಿನ್ನಬೇಕಾದ ಪರಿಸ್ಥಿತಿ ಎದುರಾಯಿತು. ಮೂರು ವಾರಗಳ ನಂತರ ಹಲವು ವೈದ್ಯಕೀಯ ತಪಾಸಣೆಗೊಳಗಾದ ತಂಡಕ್ಕೆ ಕೊನೆಗೂ ಪರಿಣತರಿಂದ ಅನುಮತಿ ಸಿಕ್ಕಿದ ಬಳಿಕ ಕ್ವಾರಂಟೈನ್‌ ಬಂಧಮುಕ್ತರಾಗಿ ತಮ್ಮ ಕುಟುಂಬ ಸೇರಿಕೊಂಡರು.

ನಂತರದ ದಿನಗಳಲ್ಲಿ ಜರುಗಿದ ಅಪೊಲೊ ಕಾರ್ಯಾಚರಣೆಯ ಅನುಭವಗಳ ಮೇಲೆ ಚಂದ್ರನಲ್ಲಿ ಈ ತರಹ ಯಾವುದೇ ಮಾರಕವಾದ ವೈರಸ್‍ಗಳು ಇಲ್ಲವೆಂದು ಖಾತ್ರಿಯಾಯಿತು. ಈ ಹಿನ್ನೆಲೆಯಲ್ಲಿ ಈ ಕ್ವಾರಂಟೈನ್ ಪ್ರಕ್ರಿಯೆಯನ್ನು ನಾಸಾ ಕೈ ಬಿಟ್ಟಿತು. ಆದರೆ, ಗಗನಯಾನದ ಮುನ್ನಾ ದಿನಗಳ ಎರಡು ವಾರಗಳ ಕ್ವಾರಂಟೈನ್‍ನ ಸಂಪ್ರದಾಯ ಇನ್ನೂ ಮುಂದುವರಿದಿದೆ.

ಜಾಗತಿಕವಾಗಿ ಭರ್ಜರಿ ಪ್ರಚಾರ, ಜನಪ್ರಿಯತೆ ಸಿಗುವ ಅಂತರಿಕ್ಷಯಾನಿಗಳ ಬದುಕು ಎಷ್ಟು ಕಠಿಣ ಎಂಬುದಕ್ಕೆ ಇದೊಂದು ಉದಾಹರಣೆಯಷ್ಟೇ. ಕಳೆದ ಸೆಪ್ಟೆಂಬರ್‌ನಿಂದ ಅಂತರಿಕ್ಷದಲ್ಲಿರುವ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿದ್ದು ಈ ತಿಂಗಳು ವಾಪಸಾಗುತ್ತಿರುವ ತಂಡದ ಸದಸ್ಯೆ ಜೆಸಿಕಾ ಮೇರ್ ಅವರನ್ನು ಸಂದರ್ಶಿಸಿದಾಗ ಆಕೆ ಇಷ್ಟು ದಿನಗಳ ಕಾಲ ಕುಟುಂಬ ಮತ್ತು ಸ್ನೇಹಿತರಿಂದ ದೂರವಿದ್ದು ಇದೀಗ ಅವರನ್ನು ಸೇರಿಕೊಳ್ಳುವ ಆಸೆ ಈ ಕೊರೊನಾದ ನಿರ್ಬಂಧದಿಂದ ಈಡೇರದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಸಮಾಜಕ್ಕಾಗಿ ಅಷ್ಟೊಂದು ತ್ಯಾಗ ಮಾಡಿದ, ಮಾಡುತ್ತಿರುವ ಈ ಅಂತರಿಕ್ಷಯಾನಿಗಳಿಂದ ಸ್ಫೂರ್ತಿ ಪಡೆದು ನಾವೂ ಮನೆಯಲ್ಲಿದ್ದು ಕೊರೊನಾವನ್ನು ಹೊಡೆದೋಡಿಸಲು ಸಹಕರಿಸೋಣ ಅಲ್ಲವೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT