ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್‌ ‘ಅಭಿಮಾನ’ದ ಕಣಜ !

ಇಲ್ಲೊಬ್ಬರು ರಾಜ್‌ಕುಮಾರ್‌ ಅಪ್ಪಟ ಅಭಿಮಾನಿ
Last Updated 27 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ಹಳೆಯ ವಿನ್ಯಾಸದ ಕೋಟು, ಬೂಟು, ಟೈ ತೊಟ್ಟ ಹಿರಿಯರೊಬ್ಬರು, ಹೆಗಲಲ್ಲಿದ್ದ ಬ್ಯಾಗನ್ನು ಕೆಳಗಿಳಿಸಿದರು. ಕುರ್ಚಿ ಮೇಲೆ ಕುಳಿತು, ಬ್ಯಾಗ್‌ ಜಿಪ್‌ ತೆಗೆದರು. ಅದರಿಂದ ಒಂದಷ್ಟು ಫೋಟೊಗಳು, ಪತ್ರಿಕೆಗಳ ತುಣುಕು, ಲೇಖನಗಳ ಕಟ್ಟಿಂಗ್ಸ್‌ ತೆಗೆಯುತ್ತಾ ಟೇಬಲ್‌ ಮೇಲೆ ಜೋಡಿಸಿದರು. ಅವರು ಜೋಡಿಸಿದ ವಸ್ತುಗಳೆಲ್ಲಲ್ಲ ಕನ್ನಡದ ವರನಟ ಡಾ.ರಾಜ್‌ಕುಮಾರ್‌ ಅವರ ಸಿನಿ ಬದುಕಿನ ಚಿತ್ತಾರಗಳಿದ್ದವು !

ಹೀಗೆ ಜೋಡಿಸಿದ ಫೋಟೊ, ಲೇಖನಗಳ ತುಣುಕಿನ ಎದುರು ಕುಳಿತಿದ್ದ ದಾಂಡೇಲಿ ಸಮೀಪದ ತಾಟಗೆರೆಯ ಶ್ರೀನಿವಾಸ ಪಾಟೀಲ,‘ನಾನು ರಾಜ್‌ಕುಮಾರ್ ಅವರ ಅಪ್ಪಟ ಅಭಿಮಾನಿ’ ಎಂದು ಮುಗುಳು ನಕ್ಕರು. ಅಷ್ಟೇ ಅಲ್ಲ ಪ್ರತಿ ಫೋಟೊ ಹಿಂದಿನ ಕಥೆ ಹೇಳಿದರು. ಲೇಖನ, ಸುದ್ದಿಗಳ ತುಣುಕುಗಳನ್ನೂ ಸಂದರ್ಭ ಸಹಿತ ವಿವರಿಸಿದರು.

ಬಾಲ್ಯದಿಂದಲೂ ರಾಜ್‌ರನ್ನು ಆರಾಧಿಸಿಕೊಂಡೇ ಬೆಳೆದಿರುವ 68ರ ಹರೆಯದ ಶ್ರೀನಿವಾಸ ಪಾಟೀಲರಅಭಿಮಾನ ಇಷ್ಟಕ್ಕೇ ಮುಗಿಯುವುದಿಲ್ಲ. ರಾಜ್‌ ಅವರ ಸಿನಿಬದುಕಿನ ಅನೇಕ ಸಂಗತಿಗಳನ್ನು ಮನದಲ್ಲಿ ಬೆಚ್ಚಗೆ ಕಾಪಿಟ್ಟಿದ್ದಾರೆ. ಆ ಎಲ್ಲ ನೆನಪಿನ ಪುಟಗಳನ್ನು ಒಂದೊಂದಾಗಿ ತೆರೆದಿಟ್ಟರು.

ಟೆಂಟ್‌ ಸಿನಿಮಾದಿಂದ...

ಟೆಂಟ್‌ ಸಿನಿಮಾಗಳಿಂದ ಥಿಯೇಟರ್‌ವರೆಗೂ ಹೋಗಿ ರಾಜ್‌ಕುಮಾರ್‌ ಸಿನಿಮಾ ನೋಡಿರುವ ಪಾಟೀಲರು ‘‌ರಾಜ್‌ಕುಮಾರ್‌ ಅವರ ಎಲ್ಲಾ ಸಿನಿಮಾಗಳನ್ನು ಮೊದಲ ದಿನ, ಮೊದಲ ಶೋ ನೋಡುತ್ತಿದ್ದೆ’ ಎಂದು ನೆನಪಿಸಿಕೊಳ್ಳುತ್ತಾರೆ.

ರಾಜ್‌ ಅಭಿನಯದ 208 ಸಿನಿಮಾಗಳಲ್ಲಿ, 194 ಸಿನಿಮಾ ನೋಡಿದ್ದಾರೆ. ಭಕ್ತ ಕುಂಬಾರ, ಮಣ್ಣಿನ ಮಗ, ಸೋದರಿ, ಭೂಕೈಲಾಸ ಸೇರಿದಂತೆ ಕೆಲ ಸಿನಿಮಾಗಳನ್ನು 50ಕ್ಕೂ ಹೆಚ್ಚು ಬಾರಿ ನೋಡಿದ್ದಾರೆ. ’ಇವತ್ತಿಗೂ ಟಿವಿಯಲ್ಲಿ ಪ್ರಸಾರವಾಗುವ ರಾಜ್‌ಕುಮಾರ್‌ ಸಿನಿಮಾಗಳನ್ನು ಯಾವುದನ್ನೂ ಬಿಡುವುದಿಲ್ಲ’ ಎನ್ನುತ್ತಾರೆ ಅವರು.

ರಾಜ್‌ ಅಭಿನಯದ ಎಲ್ಲ ಸಿನಿಮಾಗಳ ಹೆಸರನ್ನು ಇಸವಿ ಪ್ರಕಾರ ಪಟ ಪಟ ಅಂತ ಹೇಳುತ್ತಾರೆ. ಅಷ್ಟೇ ಅಲ್ಲ, ಆ ಸಿನಿಮಾದ ನಿರ್ಮಾಪಕ, ನಿರ್ದೇಶಕ, ಸಹಕಲಾವಿದರು, ಬಿಡುಗಡೆಯಾದ ವರ್ಷ ಜತೆಗೆ, ಸಿನಿಮಾದ ಕಥೆಯನ್ನೂ ಹೇಳುತ್ತಾರೆ.

ನೆನಪಿಟ್ಟುಕೊಳ್ಳುವ ಕ್ರಮವೇ ವಿಭಿನ್ನ

ರಾಜ್‌ಕುಮಾರ್‌ ಅವರ ಸಿನಿಮಾಗಳ ಹೆಸರನ್ನು ನೆನಪಿಟ್ಟುಕೊಂಡಿರುವ ಇವರ ಕ್ರಮವೂ ವಿಶಿಷ್ಟವಾಗಿದೆ. ಮೊದಲು ಮೂರಕ್ಷರದ ಸಿನಿಮಾಗಳನ್ನು ನೆನಪಿಟ್ಟುಕೊಂಡಿದ್ದಾರೆ. ಆಮೇಲೆ ನಾಲ್ಕಕ್ಷರ, ಐದಕ್ಷರ.. ಎಂದು ವಿಭಾಗಿಸಿಕೊಂಡು ನೆನಪಿಟ್ಟುಕೊಂಡಿದ್ದಾರಂತೆ. ’ಮೂರಕ್ಷರದ ಸಿನಿಮಾ 9, ನಾಲ್ಕಕ್ಷರದ ಸಿನಿಮಾ 44, ಐದಕ್ಷರದ ಸಿನಿಮಾ 58, ಆರಕ್ಷರದ ಸಿನಿಮಾ 42, 7 ಅಕ್ಷರದ ಸಿನಿಮಾ 23, 8 ಅಕ್ಷರದ ಸಿನಿಮಾ 21...‘ ಎನ್ನುತ್ತಾ ಸಿನಿಮಾದ ಹೆಸರು ಸಮೇತ ಲೆಕ್ಕ ಹಾಕಿ ಹೇಳುತ್ತಾರೆ.

ಅಷ್ಟೇ ಅಲ್ಲ,ರಾಜ್‌ಕುಮಾರ್‌ ಅಭಿನಯದ ಪೌರಾಣಿಕ, ಸಾಮಾಜಿಕ, ಪತ್ತೇದಾರಿ, ಪೊಲೀಸ್‌ ಆಫೀಸರ್‌ ಪಾತ್ರದ ಸಿನಿಮಾಗಳ ಹೆಸರನ್ನೂ ಪ್ರತ್ಯೇಕ ಮಾಡಿ ಹೇಳುತ್ತಾರೆ. ’ರಾಜ್‌ಕುಮಾರ್‌ ಅವರು 12 ಸಿನಿಮಾಗಳಲ್ಲಿ ದ್ವಿಪಾತ್ರ ಮಾಡಿದ್ದಾರೆ. ಮೂರು ಸಿನಿಮಾಗಳಲ್ಲಿ ತ್ರಿಪಾತ್ರ ಮಾಡಿದ್ದಾರೆ‘ ಎಂದು ನೆನಪಿಸಿಕೊಳ್ಳುತ್ತಾರೆ. ರಾಜ್‌ಕುಮಾರ್‌ ಅವರ ಬಗ್ಗೆ ಆರು ಹಾಡುಗಳನ್ನು ಬರೆದಿದ್ದಾರೆ. ಅವರ ಸಿನಿಮಾಗಳ ಕೆಲವು ದೃಶ್ಯಗಳನ್ನು ಏಕಪಾತ್ರಾಭಿನಯ ಮಾಡುತ್ತಾರೆ.

ರಾಜ್‌ ಜನ್ಮದಿನ, ತೀರಿಹೋಗಿದ್ದು, ವೀರಪ್ಪನ್‌ನಿಂದ ಅಪಹರಣಕ್ಕೊಳಗಾದ ದಿನಗಳನ್ನು ನೆನಪಿಟ್ಟುಕೊಂಡಿದ್ದಾರೆ. ರಾಜ್‌ ಅವರ ಸಾಧನೆ ಮಾಡಿದ್ದು, ಪ್ರಶಸ್ತಿ – ಪುರಸ್ಕಾರಗಳನ್ನು ಪಡೆದಿದ್ದು, ಶತದಿನ ಆಚರಿಸಿಕೊಂಡ ಅವರ ಸಿನಿಮಾಗಳ ಹೆಸರುಗಳೆಲ್ಲ ಬೆರಳ ತುದಿಯಲ್ಲಿವೆ. ‘ರಾಜ್‌ಕುಮಾರ್ ಬಗೆಗಿನಎಲ್ಲಾ ವಿವರಗಳನ್ನು ಲೇಖನಗಳನ್ನು ಓದುತ್ತಾ ತಿಳಿದುಕೊಂಡಿದ್ದೇನೆ. ಚಂದದ ಚಿತ್ರಗಳು ಹಾಗೂ ಲೇಖನಗಳನ್ನು ನಾನು ಸಂಗ್ರಹಿಸಿಟ್ಟುಕೊಂಡಿದ್ದೇನೆ’ ಎಂದು ಹೇಳುತ್ತಾರೆ ಶ್ರೀನಿವಾಸ್.

ರಾಜ್‌ಕುಮಾರ್ ಯಾಕಿಷ್ಟ ?

‘ಸರಿ, ನಿಮಗೆ ರಾಜ್‌ಕುಮಾರ್‌ ಅಂದರೆ ಯಾಕಿಷ್ಟ?’ ಎಂದು ಪಾಟೀಲರನ್ನು ಪ್ರಶ್ನಿಸಿದರೆ ‘ಅವರು, ಕನ್ನಡಕ್ಕಾಗಿ ದುಡಿದಿದ್ದಾರೆ. ಬೇರೆ ಭಾಷೆಗಳ ಸಿನಿಮಾಗಳಿಂದ ಬೇಡಿಕೆ ಬಂದರೂ ಅವುಗಳನ್ನು ಒಪ್ಪಿಕೊಳ್ಳದೇ ಕನ್ನಡ ಸಿನಿಮಾಗಳನ್ನಷ್ಟೇ ಮಾಡಿದ್ದಾರೆ. ಅದಕ್ಕೆ ಅವರೆಂದರೆ ಪ್ರೀತಿ, ಗೌರವ‘ ಎಂದು ಹೇಳುತ್ತಾ ಭಾವುಕರಾಗುತ್ತಾರೆ.

‘ರಾಜ್‌ಕುಮಾರ್ ದುಡ್ಡಿಗಾಗಿ ಸಿನಿಮಾ ಮಾಡಲಿಲ್ಲ. ‘ಶ್ರೀಶೈಲ ಮಹಾತ್ಮೆ‘ ಎಂಬ ಚಿತ್ರಕ್ಕೆ ₹5 ಸಾವಿರ, ‘ಭೂ ಕೈಲಾಸ‘ ಚಿತ್ರಕ್ಕೆ ₹12 ಸಾವಿರ ಸಂಭಾವನೆ ಪಡೆದಿದ್ದಾರಂತೆ‘ ಎಂದು ಉಲ್ಲೇಖಿಸುತ್ತಾರೆ. ರಾಜ್‌ ಅವರಮೈಕಟ್ಟು, ಪೌರಾಣಿಕ, ಸಾಮಾಜಿಕ, ಸೇರಿದಂತೆ ಎಲ್ಲ ಪಾತ್ರಕ್ಕೂ ನ್ಯಾಯ ಒದಗಿಸುತ್ತಿದ್ದ ಅವರನ್ನುಪರದೆ ಮೇಲೆ ನೋಡುವುದೇ ಖುಷಿ’ ಎನ್ನುತ್ತಾರೆ ಪಾಟೀಲರು.

ಇಂಥ ಶ್ರೀನಿವಾಸ ಪಾಟೀಲರು ಒಂದರ್ಥದಲ್ಲಿ ಡಾ.ರಾಜ್‌ ಅವರ ಅಭಿಮಾನಿಯೂ ಹೌದು, ಅಭಿಮಾನದ ಮಾಹಿತಿ ಕಣಜವೂ ಹೌದು. ರಾಜ್‌ ಅವರ ಸಿನಿ ಪಯಣವನ್ನೇ ನೆನಪಿಟ್ಟುಕೊಳ್ಳುವ ಮೂಲಕ ಪಾಟೀಲರು, ಇತರೆ ಅಭಿಮಾನಿಗಳಿಗಿಂತ ವಿಭಿನ್ನವಾಗಿ ಕಾಣುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT