ಶನಿವಾರ, ಜುಲೈ 24, 2021
22 °C
ಕಾಳಿದಾಸನ ನೆನಪು

ರಾಷ್ಟ್ರಕವಿಯ ಆರಾಧನೆ ಸಾಹಿತ್ಯದ ಸಮಾರಾಧನೆ

ಬಿ.ಎನ್. ಶಶಿಕಿರಣ್ Updated:

ಅಕ್ಷರ ಗಾತ್ರ : | |

Prajavani

ಕಾಳಿದಾಸನನ್ನು ‘ಕವಿಕುಲಗುರು’ ಎಂದು ನಮ್ಮ ಪರಂಪರೆ ಗೌರವಿಸಿದೆ. ಅವನ ಕೃತಿಗಳನ್ನು ಪಂಡಿತರಷ್ಟೇ ಅಲ್ಲ, ಸಾಮಾನ್ಯಜನರೂ ಕೂಡ ಓದಿ ಆಸ್ವಾದಿಸಿದ್ದಾರೆ...

‘ಈ ಜಗತ್ತು ಬಲು ಅಂದವಾಗಿದೆ ... ಎಂದು ಮೊದಲ ಬಾರಿಗೆ ನನಗುಸಿರಿದವರು ಇಬ್ಬರು; ಮೊದಲನೆಯದು ನಮ್ಮೂರ ಗುಡಿ — ಒಂದು ದಿವ್ಯಸಂಸ್ಥೆ, ಎರಡನೆಯದು ಒಬ್ಬ ಮಹಾಪುರುಷ — ಕಾಳಿದಾಸಕವಿ.’ಈ ಮಾತುಗಳನ್ನು ಆಡಿದವರು ನಮ್ಮ ನವೋದಯದ ಕವಿಗಳ ಪೈಕಿ ಪ್ರಮುಖರಾದ ಪು.ತಿ.ನರಸಿಂಹಾಚಾರ್ಯರು.

ಹೌದು, ಕಾಳಿದಾಸನ ಕಾವ್ಯಗಳನ್ನು ಮನವಿಟ್ಟು ಆಸ್ವಾದಿಸಿದರೆ ನಮ್ಮೀ ಜಗತ್ತು ನಿಜಕ್ಕೂ ಸುಂದರವೆಂಬ ಅರಿವು ಅರಳುತ್ತದೆ. ಪು.ತಿ.ನ. ಅವರಂತೆ ನಾವೂ ಭಗವಂತನ ಸಾನ್ನಿಧ್ಯದಲ್ಲಿ ಸೌಂದರ್ಯವನ್ನು ಸವಿಯಬಹುದು. ದೇವಾಲಯದ ಸಂಸ್ಕೃತಿಸುಭಗತೆ, ಅಲ್ಲಿಯ ಪ್ರಕೃತಿವಿಲಾಸ — ಇವೆಲ್ಲ ನಮ್ಮನ್ನು ಸೆಳೆಯಬಹುದು. ಇದಕ್ಕೂ ಮೀರಿದ ಆಸ್ವಾದ ಉಂಟೇ? ಉಂಟು ಎನ್ನುತ್ತಾನೆ ಕಾಳಿದಾಸ. ಅವನ ಕಲ್ಪನೆಯ ಕಣ್ಣಲ್ಲಿ ಕಂಡರೆ ಪ್ರಕೃತಿ ಮತ್ತು ಸಂಸ್ಕೃತಿಗಳು ರಮ್ಯವಾಗಿ ತೋರುವುದಷ್ಟೇ ಅಲ್ಲ, ಸ್ವಯಂ ಭಗವಂತನೇ ಸಾಕ್ಷಾತ್ಕರಿಸುತ್ತಾನೆ. ಪಾರ್ವತೀ-ಪರಮೇಶ್ವರರು ಒಬ್ಬರನ್ನೊಬ್ಬರು ಪಡೆಯಲು ಪರಸ್ಪರ ತಪ್ಪಸ್ಸು ಮಾಡಿದ ಕಾರಣದಿಂದಲೇ ‘ಅರ್ಧನಾರೀಶ್ವರ’ ಎಂಬ ಅಮೋಘತತ್ತ್ವ ಸಿದ್ಧಿಸಿದ್ದೆಂದು ಹೇಳದೆಯೇ ಹೇಳಿದವನಲ್ಲವೇ ಕಾಳಿದಾಸ!

ಕಾಳಿದಾಸನನ್ನು ‘ಕವಿಕುಲಗುರು’ ಎಂದು ನಮ್ಮ ಪರಂಪರೆ ಗೌರವಿಸಿದೆ. ಅವನ ಕೃತಿಗಳನ್ನು ಪಂಡಿತರಷ್ಟೇ ಅಲ್ಲ, ಸಾಮಾನ್ಯಜನರೂ ಕೂಡ ಓದಿ ಆಸ್ವಾದಿಸಿದ್ದಾರೆ. ಕುರುಬನಾದ, ದಡ್ಡ ಕಾಳಿಯ ಅನುಗ್ರಹದಿಂದ ಮಹಾಕವಿಯಾದ ಕಥೆಯನ್ನು ಯಾರು ತಾನೆ ಕೇಳಿಲ್ಲ? ಈ ಕಥೆಯನ್ನು ಕಟ್ಟಿದವರಾದರೂ ಯಾರು? ಪಂಡಿತರಂತೂ ಅಲ್ಲ. ನಮ್ಮ ಶ್ರೀಸಾಮಾನ್ಯರು ಕಾಳಿದಾಸನನ್ನು ತಮ್ಮವನನ್ನಾಗಿ ಮಾಡಿಕೊಂಡ ಫಲವೇ ಈ ಕಥೆ. ಇನ್ನು ವಿದ್ವಾಂಸರ ಕಡೆ ತಿರುಗಿದರೆ, ಕವಿ-ಶಾಸ್ತ್ರಕಾರ, ಭಾರತೀಯ-ವಿದೇಶೀಯ ಎಂಬ ಭೇದವಿಲ್ಲದೆ ಎಲ್ಲರೂ ಕಾಳಿದಾಸನನ್ನು ಮೆಚ್ಚಿಕೊಳ್ಳುವವರೇ. ದಿನನಿತ್ಯದ ಪೂಜೆಯಲ್ಲಿ ಅರ್ಚನೆಯ ಅಂಗವಾಗಿ ನಮ್ಮ ಕವಿಯ ‘ವಾಗರ್ಥಾವಿವ ಸಂಪೃಕ್ತೌ...’ ಎಂಬ ಶ್ಲೋಕವನ್ನು ಮಂತ್ರವೆಂಬಂತೆ ಎಷ್ಟು ಜನ ಪಠಿಸುವುದಿಲ್ಲ! ಪಾಪ, ಸಾವಿರಾರು ವೇದಮಂತ್ರಗಳಿಗೇ ಈ ಭಾಗ್ಯ ಸಂದಿಲ್ಲ.

ಈ ಬಗೆಯ ಆದರಕ್ಕೆ ಕಾರಣವಾದರೂ ಏನು? ಬೆರಳು ಮಾಡಿ ಇದಿಷ್ಟೇ ಎಂದು ತೋರಿಸಲು ಸಾಧ್ಯವಿಲ್ಲ. ಕೆಲವನ್ನಾದರೂ ಕಾಣೋಣ. ಕಾಳಿದಾಸ ನಮ್ಮ ದೇಶ ಕಂಡ ಮೊದಲ ನಾಗರಕಕವಿ. ಆತ ಗುಪ್ತರ ಸ್ವರ್ಣಯುಗಕ್ಕೆ ಸೇರಿದವನೆಂದು ಹೇಳುತ್ತಾರೆ. ನಮ್ಮ ರಾಷ್ಟ್ರ ಅಭ್ಯುದಯದ ಉತ್ಕರ್ಷವನ್ನು ಕಂಡಿದ್ದು ಆ ಕಾಲದಲ್ಲಿಯೇ. ಕಾಳಿದಾಸನ ಕಾವ್ಯಗಳಲ್ಲಿ ಸ್ವರ್ಣಯುಗದ ಸರ್ವಸ್ವವೂ ಅಂದವಾಗಿ ಅಡಕವಾಗಿದೆ; ಹಾಗಾಗಿ ಅವುಗಳನ್ನು ಓದುವುದರಿಂದ ಭಾರತದ ಅತ್ಯುತ್ತಮ ಅಂಶಗಳೆಲ್ಲ ನಮ್ಮ ಅರಿವಿಗೆಟುಕುತ್ತವೆ. ಇದು ಕವಿಯೊಬ್ಬನ ಸಾಧನೆಯ ಪರಾಕಾಷ್ಠೆ. ಇದನ್ನು ಸಾಧಿಸಿದ ಕಾಳಿದಾಸನ ದರ್ಶನವನ್ನು ಒಂದೇ ವಾಕ್ಯದಲ್ಲಿ ಅಡಗಿಸಬೇಕಾದರೆ ಹೀಗೆ ಸಂಗ್ರಹಿಸಬಹುದು — ಸುಖ ಪಡಬೇಕು, ಆದರೆ ಅದರಲ್ಲಿ ಅಂಟು ಬೆಳಸಿಕೊಳ್ಳಬಾರದು. ಜೀವನವನ್ನು ಚೆನ್ನಾಗಿ ನಡಸಿ ತೃಪ್ತಿ ಕಾಣಲು ಇದಕ್ಕಿಂತ ಒಳ್ಳೆಯ ಉಪದೇಶವನ್ನು ಅನುಸರಿಸುವುದು ಅಸಾಧ್ಯ.

ಕಾಳಿದಾಸನ ಕೃತಿಗಳು ಏಳು. ಎರಡು ಮಹಾಕಾವ್ಯಗಳು: ರಘುವಂಶ ಮತ್ತು ಕುಮಾರಸಂಭವ; ಎರಡು ಖಂಡಕಾವ್ಯಗಳು: ಋತುಸಂಹಾರ ಮತ್ತು ಮೇಘದೂತ; ಮೂರು ನಾಟಕಗಳು: ವಿಕ್ರಮೋರ್ವಶೀಯ, ಮಾಲವಿಕಾಗ್ನಿಮಿತ್ರ ಮತ್ತು ಅಭಿಜ್ಞಾನಶಾಕುಂತಲ. ಇವುಗಳಲ್ಲಿ ಒಂದೊಂದೂ ವಿಶಿಷ್ಟ. ರಾಮಾಯಣ ಮತ್ತು ಮಹಾಭಾರತಗಳನ್ನು ಹೊರತುಪಡಿಸಿದರೆ ರಘುವಂಶವೇ ಸಂಸ್ಕೃತದ ಉಚ್ಚಕೋಟಿಯ ಮಹಾಕಾವ್ಯ. ಕುಮಾರಸಂಭವ ತನ್ನ ಬೇರೆಯ ಸ್ವಾರಸ್ಯಗಳ ಹೊರತಾಗಿ ದೇವವಾಣಿಯ ಅತ್ಯಂತ ಚಿಕ್ಕದಾದ ಮಹಾಕಾವ್ಯವೆಂಬ ಕೀರ್ತಿ ಗಳಿಸಿದೆ; ಇದನ್ನು ಮಹಾಕಾವ್ಯವೆಂದು ಕರೆಯಲೆಂದೇ ಆಲಂಕಾರಿಕರು ತಮ್ಮ ನಿಲವುಗಳನ್ನು ಪರಿಷ್ಕರಿಸಿಕೊಂಡು ಹೊಸ ಲಕ್ಷಣಗಳನ್ನು ರೂಪಿಸಿದರು. ಋತುಗಳನ್ನು ಆಶ್ರಯಿಸಿ ಇಡಿಯ ಕಾವ್ಯ ಮೈದಾಳಬಹುದೆಂದು ಮೊದಲ ಬಾರಿಗೆ ತೋರಿಸಿಕೊಟ್ಟಿದ್ದು ಋತುಸಂಹಾರವಾದರೆ, ಸಂದೇಶಕಾವ್ಯವೆಂಬ ಪ್ರಕಾರಕ್ಕೆ ನಾಂದಿ ಹಾಡಿದ್ದು ಮೇಘದೂತ. ವಿಕ್ರಮೋರ್ವಶೀಯ ‘ತ್ರೋಟಕ’ ಎಂಬ ವಿಲಕ್ಷಣವಿಭಾಗವನ್ನು ಪ್ರತಿನಿಧಿಸಿ ವಿಶಿಷ್ಟವೆನಿಸಿದೆ. ಮಾಲವಿಕಾಗ್ನಿಮಿತ್ರ ಪ್ರಾಯಶಃ ‘ನಾಟಿಕೆ‘ಗಳ ವಲಯದಲ್ಲಿ ಅತ್ಯುತ್ತಮ. ಇನ್ನು ಅಭಿಜ್ಞಾನಶಾಕುಂತಲದ ಬಗೆಗೆ ಹೇಳಲೇಬೇಕಿಲ್ಲ. ವ್ಯಾಸರು ಸೃಜಿಸಿದ ಕಥೆಯನ್ನೂ ಮರೆಮಾಡಬಲ್ಲ ಕಸುವು ಇದಕ್ಕಿದೆಯೆಂದರೆ ಅದಕ್ಕಿಂತ ದೊಡ್ಡ ಪ್ರಶಸ್ತಿ ಏನಿದ್ದೀತು!  

ಕಾಳಿದಾಸನ ಕಾವ್ಯಧರ್ಮದ ಹೆಗ್ಗುರುತುಗಳಲ್ಲಿ ಮುಖ್ಯವಾದವು ಎರಡು: ಅತ್ಯಂತ ಉಚಿತವಾದ, ವಿನೂತನವಾದ ವಿಶೇಷಣಗಳು ಮತ್ತು ಜೀವನದ ಎಲ್ಲ ಆಯಾಮಗಳ ಸೂಕ್ಷ್ಮಪರಿಶೀಲನದಿಂದ ಹೊಮ್ಮಿದ ಹೋಲಿಕೆಗಳು. ಒಬ್ಬ ಋಷಿ ಎಲ್ಲರಲ್ಲಿಯೂ ಎಲ್ಲದರಲ್ಲಿಯೂ ಆತ್ಮೌಪಮ್ಯವನ್ನು ಕಂಡರೆ ಒಬ್ಬ ಮಹಾಕವಿ ಆವರಲ್ಲಿ, ಅವುಗಳಲ್ಲಿ ಔಪಮ್ಯವನ್ನು ಕಾಣುತ್ತಾನೆ. ಕಾಳಿದಾಸ ತನ್ನ ಈ ಸಾದೃಶ್ಯದರ್ಶನವನ್ನು ಬಗೆಬಗೆಯ ಉಪಮೆಗಳ ಮೂಲಕ ಕಂಡರಿಸಿ ಅರ್ಥಪೂರ್ಣವಾದ ವಿಶೇಷಣಗಳ ದೆಸೆಯಿಂದ ನಮಗೂ ತೋರ್ಪಡಿಸಿದ್ದಾನೆ. ಒಟ್ಟಿನಲ್ಲಿ ಈ ಮಹಾಕವಿಯಿಂದ ಎಲ್ಲರಿಗೂ ಪ್ರಯೋಜನವಿದೆ. ಕವಿ, ಗಾಯಕ, ನರ್ತಕ, ಶಿಲ್ಪಿ, ಚಿತ್ರಕಾರ, ಶಾಸ್ತ್ರಕಾರ, ಸಂಸ್ಕೃತಿಶೋಧಕ — ಎಲ್ಲರೂ ಕವಿಕುಲಗುರುವಿಗೆ ಋಣಿಗಳೇ. ಇನ್ನು ಸಹೃದಯರಾದ ನಾವು ಋಣಿಗಳಷ್ಟೇ ಅಲ್ಲ, ಅವನ ಆರಾಧಕರು!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.