ಶುಕ್ರವಾರ, ಡಿಸೆಂಬರ್ 3, 2021
24 °C

ಮಕ್ಕಳ ದಿನಾಚರಣೆ ವಿಶೇಷ: ಅಪ್ಪ ಅಮ್ಮನ ಒದೆ ತಪ್ಪಿತು

ಧನರಾಜ್ Updated:

ಅಕ್ಷರ ಗಾತ್ರ : | |

ಕೋವಿಡ್ ಕಾರಣದಿಂದ ಮನೆಯಲ್ಲಿ ಇದ್ದಾಗ ಪಾಠಗಳು ಮರೆತು ಹೋಗುತ್ತಿದ್ದವು. ಆನ್‌ಲೈನ್ ಪಾಠ ನಡೆದರೂ ತರಗತಿಯಲ್ಲಿ ಹೇಳಿದ ಹಿತದ ಅನುಭವ ಆಗುತ್ತಿರಲಿಲ್ಲ.  

ಕೋವಿಡ್‌ ಸಂದರ್ಭದಲ್ಲಿ ಮನೆಯಲ್ಲಿದ್ದ ವೇಳೆ ಅಪ್ಪ, ಅಮ್ಮನಿಂದ ತಿಂದಷ್ಟು ಒದೆಯನ್ನು ನಾನು ಈ ಮುಂಚೆ ಎಂದೂ ತಿಂದಿಲ್ಲ. ಪಾಠಗಳು ಮರೆತುಹೋದ ಕಾರಣ ಒದೆ ಕೊಡುತ್ತಿದ್ದರು. ಸಣ್ಣ ಪುಟ್ಟದ್ದಕ್ಕೂ ಒದೆ ಬೀಳುತ್ತಿದ್ದವು. ಆ ಕಾರಣದಿಂದ ಶಾಲೆ ಆರಂಭವಾಗಿದ್ದು ಒಳ್ಳೆಯದೇ ಆಯಿತು. 

ಹಿಂದೆ ಶಾಲೆಯಲ್ಲಿ ನೋಟ್ಸ್ ಬರೆಸುತ್ತಿದ್ದರು. ವಿಷಯಗಳು ಗಟ್ಟಿಯಾಗಿ ತಲೆಯಲ್ಲಿ ಉಳಿದುಕೊಳ್ಳುತ್ತಿದ್ದವು. ಮನೆಯಲ್ಲಿ ನಾನೇ ಓದಿಕೊಳ್ಳುತ್ತಿದ್ದೆ. ಕೆಲವು ಅಂಶಗಳು ಮರೆತು ಹೋಗುತ್ತಿದ್ದವು. 9ನೇ ತರಗತಿಯ ನನ್ನ ಅಕ್ಕ ನಾನು ಓದಿದ್ದರ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಿದ್ದಳು. ಭಯದಿಂದಲೇ ಉತ್ತರಿಸುತ್ತಿದ್ದೆ. ತಪ್ಪಾದರೆ ಅವಳೂ ಒದೆ ಕೊಡುತ್ತಿದ್ದಳು.

ಸೈಕಲ್ ಓಡಿಸುವುದು, ಆಟವಾಡುವುದು, ಟಿ.ವಿ. ನೋಡುವುದು... ಹೀಗೆ ಪಾಠಕ್ಕಿಂತ ಆಟಕ್ಕೆ ಹೆಚ್ಚು ಸಮಯ ಕೊಡುತ್ತಿದ್ದೆ. ಇದು ನನ್ನ ಓದಿನ ಮೇಲೆ ಪರಿಣಾಮ ಬೀರುತ್ತಿತ್ತು. ಶಾಲೆಗೆ ಬಂದ ನಂತರ ಓದಿಗೆ ಹೆಚ್ಚು ಸಮಯವಿದೆ. ಬೆಳಿಗ್ಗೆ 10ಕ್ಕೆ ಬಂದರೆ ಸಂಜೆ 5ಕ್ಕೆ ಮನೆಗೆ ಹೋಗಬೇಕು.


ಧನರಾಜ್

ಗಣಿತ ನನಗೆ ಕಠಿಣವಾದ ವಿಷಯ. ಶಾಲೆಯಲ್ಲಿ ಪಾಠಗಳು ನಡೆಯುವಾಗ ಅವುಗಳು ಮನವರಿಕೆ ಆಗುತ್ತಿದ್ದವು. ಆದರೆ ಮನೆಯಲ್ಲಿ ಎಷ್ಟೇ ಪ್ರಯತ್ನಪಟ್ಟರೂ ಮರೆತು ಹೋಗುತ್ತಿದ್ದವು. ಶಿಕ್ಷಕರು ವಿಸ್ತಾರವಾಗಿ ಹೇಳುತ್ತಿದ್ದ ಕಾರಣ ಮತ್ತು ಅಲ್ಲಿಯೇ ಲೆಕ್ಕಗಳನ್ನು ನೀಡುತ್ತಿದ್ದರಿಂದ ಶಾಲೆಯಲ್ಲಿ ಗಣಿತ ಸುಲಭವಾಗಿತ್ತು. ಮನೆಯಲ್ಲಿ ಇದ್ದಾಗ ಕಲಿತಿದ್ದು ಮರೆತು ಹೋಗುವ ಭಯ ಹೆಚ್ಚು ಆವರಿಸಿತ್ತು. ಅಷ್ಟರಲ್ಲಿ ಶಾಲೆ ಆರಂಭವಾಯಿತು. ಈಗ ಖುಷಿಯೋ ಖುಷಿ.  ಒಮ್ಮೊಮ್ಮೆ ಅಪ್ಪ ಮೊಬೈಲ್ ಹೊರಗೆ ತೆಗೆದುಕೊಂಡು ಹೋಗುತ್ತಿದ್ದರು. ಆಗ ಆನ್‌ಲೈನ್ ಕ್ಲಾಸ್‌ ಸಹ ದೊರೆಯುತ್ತಿರಲಿಲ್ಲ. 

ಮನೆಯಲ್ಲಿದ್ದಾಗ ಆಟದ ಬಗ್ಗೆ ಹೆಚ್ಚು ಗಮನ ಇರುತ್ತಿತ್ತು. ನೋಟ್ಸ್ ಬರೆಯುತ್ತಿರಲಿಲ್ಲ. ಆದರೆ ಶಾಲೆಗೆ ಬಂದ ನಂತರ ಮರೆಯುವ, ಒದೆ ತಿನ್ನುವ ಅವಕಾಶಗಳು ಕಡಿಮೆ. ಪ್ರಶ್ನೆಗಳಿಗೆ ಧೈರ್ಯವಾಗಿ ಉತ್ತರಿಸುವೆ. ಶಾಲೆಯಲ್ಲಿ ಎಲ್ಲ ಸ್ನೇಹಿತರು ಕಣ್ಣಮುಂದೆ ಇದ್ದಾಗ ಒದೆ ತಿನ್ನುವುದಕ್ಕೆ ಮುಜುಗರ ಅಲ್ಲವೇ?. ಎಲ್ಲರಿಗಿಂತ ನಾನೂ ಶಾಲೆಯಲ್ಲಿ ಓದಬೇಕು ಎನ್ನುವ ಛಲ ಬಂದೇ ಬರುತ್ತದೆ.

-ಧನರಾಜ್, 6ನೇ ತರಗತಿ ವಿದ್ಯಾರ್ಥಿ, ಕರ್ನಾಟಕ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಚಿಕ್ಕಬಳ್ಳಾಪುರ
(ನಿರೂಪಣೆ: ಡಿ.ಎಂ. ಪ್ರಶಾಂತ್ ಕುರ್ಕೆ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು