ಮಂಗಳವಾರ, ಡಿಸೆಂಬರ್ 7, 2021
20 °C

ಪ್ರೀತಿಯ ಬೆಸುಗೆಗೆ ಕಾದಿದೆ ಕಾಶ್ಮೀರ

ರವೀಂದ್ರ ಭಟ್ Updated:

ಅಕ್ಷರ ಗಾತ್ರ : | |

Prajavani

ಕಾಶ್ಮೀರದ ಆಡಳಿತದ ಚಹರೆಯನ್ನಷ್ಟೇ ಬದಲಾಯಿಸಿ ಈ ಕಣಿವೆ ನಾಡು ಈಗ ಬದಲಾಗಿದೆ ಎಂದರೆ ಸಾಕೇ? ಭಯ, ಅಪನಂಬಿಕೆಗಳೆಲ್ಲ ಈಗಲೂ ಹಿಮಪರ್ವತಗಳಂತೆ ಗಟ್ಟಿಯಾಗಿ ನಿಂತಿವೆಯಲ್ಲ?

***

ಹಾಸ್ಯನಟ ದೊಡ್ಡಣ್ಣ ಅಭಿನಯದ ಕನ್ನಡದ ಸಿನಿಮಾವೊಂದರ ಸನ್ನಿವೇಶ ಹೀಗಿದೆ. ಅದರಲ್ಲಿ ಒಬ್ಬ ವ್ಯಕ್ತಿ ಬಂದು ದೊಡ್ಡಣ್ಣ ಅವರಿಗೆ ಪತ್ರ ಬರೆದುಕೊಡಲು ಹೇಳುತ್ತಾನೆ. ಪತ್ರದ ಆರಂಭ ಹೀಗಾಗುತ್ತದೆ. ‘ಯಕೋ, ನಾವೆಲ್ಲಾ ಇಲ್ಲಿ ಸುಖವಾಗಿ, ಸಂತೋಷವಾಗಿ ನೆಮ್ಮದಿಯಿಂದ ಇದ್ದೇವೆ. ಅಪ್ಪ ಹೊಲದಲ್ಲಿ ಉಳುವಾಗ ಜಾರಿ ಬಿದ್ದು ಸೊಂಟ ಮುರಿದುಕೊಂಡಿದ್ದಾನೆ. ಅವನನ್ನು ಆಸ್ಪತ್ರೆಯ ಮೂರನೇ ಹಾಸಿಗೆಯಲ್ಲಿ ಮಲಗಿಸಿದ್ದೇನೆ. ಅವ್ವ ಅಪ್ಪನಿಗೆ ಬಿಸಿ ನೀರು ಕಾಯಿಸುವಾಗ ಸೀರೆಗೆ ಬೆಂಕಿ ತಗುಲಿ ಅರ್ಧ ಮೈಸುಟ್ಟು ಹೋಗಿದೆ. ಅವಳನ್ನು ನಾಲ್ಕನೇ ಹಾಸಿಗೆಯಲ್ಲಿ ಮಲಗಿಸಿದ್ದೇನೆ. ಮಗಳು ನೇಣು ಹಾಕಿಕೊಳ್ಳಲು ಹೋಗಿದ್ದಳು. ಅವಳನ್ನು ಇಳಿಸಿ 5ನೇ ಹಾಸಿಗೆಯಲ್ಲಿ ಮಲಗಿಸಿದ್ದೇನೆ’ ಎಂದು ಪತ್ರ ಬರೆಸಲು ಬಂದವನು ಹೇಳಿದಾಗ ದೊಡ್ಡಣ್ಣ ‘ಮೊದಲು ಅದೇನೋ ನಾವೆಲ್ಲಾ ಸುಖವಾಗಿ, ಸಂತೋಷದಿಂದ ನೆಮ್ಮದಿಯಿಂದ ಇದ್ದೇವೆ ಎಂದು ಹೇಳಿದೆಯಲ್ಲ, ಅದನ್ನು ಅಳಿಸುತ್ತೇನೆ’ ಎನ್ನುತ್ತಾರೆ. ಅಲ್ಲದೆ ದೊಡ್ಡಣ್ಣ ಪತ್ರ ಹರಿದು ಹಾಕಿ ‘ಇದೆಲ್ಲಾ ಸಾಕಾಗಲ್ಲ. Whole family serious, start immediatley ಎಂದು ಟೆಲಿಗ್ರಾಂ ಕೊಡು’ ಎನ್ನುತ್ತಾರೆ.

ಸೆಪ್ಟೆಂಬರ್ ಕೊನೆಯ ವಾರದಲ್ಲಿ ನಾನು ಕಾಶ್ಮೀರಕ್ಕೆ ಭೇಟಿ ನೀಡಿ ಕೆಲವು ಕಡೆ ಸುತ್ತಾಡಿದಾಗ ನನ್ನ ಮನಸ್ಸಿನಲ್ಲಿ ಬಂದ ಚಿತ್ರ ಇದು. ಸದ್ಯಕ್ಕೆ ಕಾಶ್ಮೀರದ ಪರಿಸ್ಥಿತಿ ಕೂಡ ಹಾಗೆಯೇ ಇದೆ. ಅಲ್ಲಿ 370ನೇ ವಿಧಿಯನ್ನು ರದ್ದು ಮಾಡಿ ರಾಜ್ಯದ ಸ್ಥಾನಮಾನವನ್ನು ಕಿತ್ತು ಹಾಕಿ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿದ ನಂತರ ಅಭಿವೃದ್ಧಿ ಪರ್ವ ಶುರುವಾಗಿದೆ. ಕಾಮಗಾರಿಗಳು ನಡೆಯುತ್ತಿವೆ. ಹೆದ್ದಾರಿಗಳು, ಸೇತುವೆಗಳು, ಸುರಂಗಗಳು, ವಿಶ್ವವಿದ್ಯಾಲಯಗಳ ಕಟ್ಟಡಗಳ ಕಾಮಗಾರಿಗಳು ಜೋರಾಗಿ ಸಾಗಿವೆ. ಶ್ರೀನಗರ, ಸೋನಾಮಾರ್ಗ ಮುಂತಾದ ಪ್ರದೇಶಗಳಲ್ಲಿ ಈಗ ಭತ್ತದ ಕೊಯಿಲು ಜೋರಾಗಿದೆ. ಸೇಬು ಹಣ್ಣು ಕೀಳುವ, ಸಾಗಿಸುವ ಕಾರ್ಯವೂ ನಡೆಯುತ್ತಿದೆ. ಆಫ್ರಿಕಾಟ್ ಒಣಗಿಸಿ ಸಂಸ್ಕರಿಸುವ ಸಡಗರ ಹೆಚ್ಚಾಗಿದೆ. ಕೋವಿಡ್ ಕಾಲದ ನಂತರ ಕಾಶ್ಮೀರಕ್ಕೆ ಮತ್ತೆ ಪ್ರವಾಸಿಗರು ಬರಲು ಆರಂಭಿಸಿದ್ದಾರೆ. ಅವರಿಗೆ ಶಾಲು ಮಾರುವ, ಕೇಸರಿ ಖರೀದಿಸುವಂತೆ ಅವರನ್ನು ಉತ್ತೇಜಿಸುವ ಕಾರ್ಯದಲ್ಲಿ ಯುವಕರು ತೊಡಗಿದ್ದಾರೆ. ಮೇಲ್ನೋಟಕ್ಕೆ ಎಲ್ಲರೂ ಸುಖವಾಗಿ ಸಂತೋಷದಿಂದ ನೆಮ್ಮದಿಯಿಂದ ಇದ್ದಾರೆ ಎನಿಸುತ್ತದೆ. ಆದರೆ ಒಳಗೆ ದುಃಖ ಹೆಪ್ಪುಗಟ್ಟಿ ನಿಂತಿದೆ. ಅಲ್ಲಿ ಎಲ್ಲವೂ ಬಂದೂಕಿನ ನಳಿಕೆಯ ಕಾವಲಿನಲ್ಲಿಯೇ ನಡೆಯುತ್ತದೆ. ಪರಸ್ಪರ ಅಪನಂಬಿಕೆ, ಭಯ, ಅವಿಶ್ವಾಸ ಎಲ್ಲವೂ ಹೆಚ್ಚಾಗಿರುವ ಭಾವ. ಅಲ್ಲಿ ಇನ್ನೂ ಚಳಿ ಆರಂಭವಾಗಿಲ್ಲ. ಆದರೆ ದೂರದಲ್ಲಿ ಹಿಮದ ಪರ್ವತಗಳು ಕಾಣುತ್ತವೆ. ಜನರ ಜೊತೆ ಮಾತನಾಡಿದಾಗ ಅವರ ಹೃದಯದಲ್ಲಿಯೂ ಹಿಮಗಡ್ಡೆಗಳು ಪರ್ವತದಂತೆ ಕುಳಿತಿರುವ ಅನುಭವ.

ಹಿಮಗಡ್ಡೆಗಳು, ಹಿಮ ಪರ್ವತಗಳು ದೂರದಿಂದ ನೋಡಲು ಚೆಂದ. ಆದರೆ ಹಿಮಪಾತವಾದಾಗ ಅದು ಭೀಕರ. ಕಾಶ್ಮೀರದಲ್ಲಿ ಈಗ ಆಗಿರುವುದೂ ಅದೆ. ವಾತಾವರಣ ತಿಳಿಯಾಗಿ ಎಲ್ಲ ಸರಿಹೋಯ್ತು ಅನ್ನುವ ಹಾಗೆಯೇ ಎಲ್ಲೋ ಒಂದು ಕಡೆ ಉಗ್ರರ ದಾಳಿ ನಡೆಯುತ್ತದೆ. ಸೈನಿಕರು ಸಾಯುತ್ತಾರೆ. ಇಲ್ಲ ನಾಗರಿಕರ ಮೇಲೆಯೇ ದಾಳಿ ನಡೆಯುತ್ತದೆ. ಮತ್ತೆ ಇಡೀ ಕಾಶ್ಮೀರ ಪ್ರಕ್ಷುಬ್ಧವಾಗುತ್ತದೆ. ಆಗ ಇಡೀ ಪ್ರದೇಶ ಸೇನೆಯಿಂದ ಆವೃತವಾಗುತ್ತದೆ. ಕೆಲ ಕಾಲ ಎಲ್ಲ ಶಾಂತ. ಮತ್ತೆ ಹಿಮ ಸ್ಫೋಟ. ಒಟ್ಟಿನಲ್ಲಿ ಒಡಲಲ್ಲಿ ಕೆಂಡ ಇಟ್ಟುಕೊಂಡ ಅನುಭವ.

ಶ್ರೀನಗರದಿಂದ ಸೋನಾಮಾರ್ಗ ರಸ್ತೆಯಲ್ಲಿ ಗುಲಾನಬಿ ಪಾರೇಖ್ ಅವರ ಸೇಬು ತೋಟಕ್ಕೆ ಲಗ್ಗೆ ಇಟ್ಟಾಗ ಅವರ ಸಂಭ್ರಮ ಹೇಳತೀರದು. ದೂರದ ಕರ್ನಾಟಕದಿಂದ ಬಂದಿದ್ದೇವೆಂದು ತಿಳಿದು ಹಣ್ಣನ್ನು ಕಿತ್ತುಕೊಳ್ಳಲು ಹೇಳಿದರು. ಮನಸ್ಸಿಗೆ ಬಂದಷ್ಟು ತಿನ್ನಲೂ ಕೊಟ್ಟರು. ಹಣ ಕೊಡಲು ಹೋದರೆ ‘ನೀವು ನಮ್ಮ ಅತಿಥಿಗಳು’ ಎಂದು ಸತ್ಕರಿಸಿದರು. ದಾರಿಯಲ್ಲಿ ಸಿಕ್ಕ ಚಿಕ್ಕ ಚಿಕ್ಕ ಮಕ್ಕಳನ್ನು ಮಾತನಾಡಿಸಿದರೂ ಕೈಯಲ್ಲಿ ಇದ್ದ ಹಣ್ಣುಗಳನ್ನು ಕೊಟ್ಟು ಸ್ನೇಹದ ಹಸ್ತ ಚಾಚಿದರು. ಭಾಷೆ ಬಾರದಿದ್ದರೂ ಆತ್ಮೀಯತೆಯ ನಗುವಿಗೆ ಬರ ಇರಲಿಲ್ಲ. ಒಂದು ಆತ್ಮೀಯ ಆಲಿಂಗನಕ್ಕೆ, ಪ್ರೀತಿಯ ಬೆಸುಗೆಗೆ ಅವರು ಕಾದಿದ್ದಂತೆ ಕಂಡಿತು.

ಬೆಂಗಳೂರಿಗೂ ಶ್ರೀನಗರಕ್ಕೂ ಏನು ವ್ಯತ್ಯಾಸ? ಮೇಲ್ನೋಟಕ್ಕೆ ಏನೂ ಅನ್ನಿಸುವುದಿಲ್ಲ. ನಮ್ಮ ವೃತ್ತಗಳಲ್ಲಿ ಟ್ರಾಫಿಕ್ ಪೊಲೀಸರು ನಿಂತಿರುತ್ತಾರೆ. ಅಲ್ಲಿ ಮಿಲಿಟರಿಯವರು ನಿಂತಿರುತ್ತಾರೆ. ನಮ್ಮ ಮಾರುಕಟ್ಟೆಗಳಲ್ಲಿ ಪೊಲೀಸರ ಕಾವಲು. ಅಲ್ಲಿ ಸಿಆರ್‌ಪಿಎಫ್ ಕಾವಲು. ನಮ್ಮ ನಗರಗಳಲ್ಲಿ ಹೊಯ್ಸಳ ವಾಹನ ತಿರುಗುತ್ತದೆ. ಅಲ್ಲಿ ಮಿಲಿಟರಿ ವಾಹನಗಳು ಓಡಾಡುತ್ತವೆ. ನಮ್ಮ ಹೆದ್ದಾರಿಗಳಲ್ಲಿ ಹೆದ್ದಾರಿ ಕಾವಲು ಪಡೆಗಳು ಓಡಾಡುತ್ತವೆ. ಅಲ್ಲಿ ಸೈನಿಕರು ಕೈಯಲ್ಲಿ ಎಕೆ–47 ಹಿಡಿದು ಓಡಾಡುತ್ತಾರೆ. ಅವರ ಹದ್ದಿನಕಣ್ಣು ಎಲ್ಲ ಕಡೆ ನಿಗಾ ಇರುತ್ತದೆ. ನಮ್ಮ ಹೊಲ ಗದ್ದೆಗಳಲ್ಲಿ ರೈತರು ಅವರ ಪಾಡಿಗೆ ಅವರ ಕೆಲಸ ಮಾಡುತ್ತಿರುತ್ತಾರೆ. ಅಲ್ಲಿ ಹೊಲಗಳಲ್ಲಿಯೂ ಸೈನಿಕರು ಕಾವಲು ನಿಂತಿರುತ್ತಾರೆ. ಅವರ ಪಾಡಿಗೆ ಅವರು. ಇವರ ಪಾಡಿಗೆ ಇವರು. ಮೇಲ್ನೋಟಕ್ಕೆ ಎಲ್ಲವೂ ಶಾಂತ. ಆದರೆ ಅದು ಗಂಭೀರ ಶಾಂತ. ಯಾವಾಗ ಸ್ಫೋಟವಾಗುತ್ತದೋ ಹೇಳಲು ಆಗುವುದಿಲ್ಲ. ಪುಲ್ವಾಮಾ ಘಟನೆಯನ್ನು ನಾವು ಮರೆತಿಲ್ಲ. ಶ್ರೀನಗರ–ಜಮ್ಮು ಹೆದ್ದಾರಿಯಲ್ಲಿ ಶ್ರೀನಗರಕ್ಕೆ ಅತ್ಯಂತ ಸಮೀಪದಲ್ಲಿಯೇ ಇರುವ ಪುಲ್ವಾಮಾಕ್ಕೆ ಈಗ ಹೋದರೆ ಎಲ್ಲವೂ ಮಾಮೂಲು. ಆದರೂ ಸೆರಗಲ್ಲಿ ಕೆಂಡ ಕಟ್ಟಿಕೊಂಡ ಅನುಭವ. ಈ ಹೆದ್ದಾರಿಯಲ್ಲಿ ಸಾಗುತ್ತಿದ್ದರೆ ಒಂದು ವಿಚಿತ್ರ ಅನುಭವ. ದಾರಿಯುದ್ದಕ್ಕೂ ಬೇರೆ ಬೇರೆ ಮಾರುಕಟ್ಟೆಗಳು. ಒಂದಿಷ್ಟು ಕಿ.ಮೀ ಸಾಗಿದರೆ ಆ ಊರಲ್ಲಿ ಎಲ್ಲ ಅಂಗಡಿಗಳಲ್ಲೂ ಕೇಸರಿ ಮಾರುತ್ತಾರೆ. ಸುತ್ತಲೂ ಕೇಸರಿಯ ಗದ್ದೆಗಳು. ಕೊಂಚ ದೂರ ಹೋದರೆ ಎಲ್ಲ ಮನೆಗಳ ಮೇಲೂ ಕ್ರಿಕೆಟ್ ಬ್ಯಾಟುಗಳು. ದೇಶಕ್ಕೆ ಅತ್ಯಂತ ಹೆಚ್ಚು ಕ್ರಿಕೆಟ್ ಬ್ಯಾಟುಗಳನ್ನು ಸರಬರಾಜು ಮಾಡುವ ಸಂಗಮ ಅದು. ಕ್ರಿಕೆಟ್ ಬ್ಯಾಟ್ ತಯಾರಿಸುವ ಸಂತೆ ಅದು. ಅಲ್ಲಿ ಎಲ್ಲ ಅಂಗಡಿ, ಮನೆಗಳಲ್ಲೂ ಕ್ರಿಕೆಟ್ ಬ್ಯಾಟ್ ಮಾರಾಟ. ಇನ್ನೂ ಸ್ವಲ್ಪ ದೂರ ಹೋದರೆ ಸೇಬು ತೋಟ. ಸೇಬು ಅಂಗಡಿ. ಸೇಬು ಉಪ್ಪಿನಕಾಯಿ, ಚಟ್ನಿಯಿಂದ ಹಿಡಿದು ವಿನೆಗರ್‌ವರೆಗೆ ಎಲ್ಲವೂ ಅಲ್ಲಿ ಲಭ್ಯ. ಇನ್ನೊಂದಿಷ್ಟು ಮುಂದೆ ಸಾಗಿದರೆ ಆಫ್ರಿಕಾಟ್ ಸಾಮ್ರಾಜ್ಯ. ಎಲ್ಲ ಕಡೆಯೂ ಸ್ನೇಹಮಯಿ ವ್ಯಾಪಾರಿಗಳು. ಚೌಕಾಶಿ ಮಾಡುತ್ತಾರೆ. ಜೊತೆಗೆ ತಮ್ಮ ಬದುಕಿನ ಅನಿವಾರ್ಯತೆಯನ್ನೂ ಹೇಳಿಕೊಳ್ಳುತ್ತಾರೆ.   

ಹೀಗೆ ಶ್ರೀನಗರದಲ್ಲಿ ಯುವಕನೊಬ್ಬ ಸಿಕ್ಕ. ಆತನೊಬ್ಬ ಈಗಷ್ಟೇ ಪದವಿ ಪಡೆದ ವೈದ್ಯ. ಎಂ.ಡಿ ಮಾಡಿದ್ದಾನೆ. ಲೋಕಸೇವಾ ಆಯೋಗದ ಸಂದರ್ಶನಕ್ಕೆ ತೆರಳಿ ಬಂದಿದ್ದಾನೆ.

‘ಯಾಕೆ ನೀವು ಕಾಶ್ಮೀರದಲ್ಲಿಯೇ ಇರಲು ಬಯಸುತ್ತೀರಿ? ದೇಶದ ಇತರ ಬೃಹತ್ ನಗರಗಳಿಗೆ ಬಂದರೆ ನಿಮಗೆ ಇಲ್ಲಿಗಿಂತ ಹೆಚ್ಚು ವೇತನ ಸಿಗುತ್ತದೆಯಲ್ಲ’ ಎಂದು ಕೇಳಿದರೆ ಆತ ಮನೆಯ ತಾಪತ್ರಯಗಳ ಬಗ್ಗೆ ಹೇಳುತ್ತಾನೆ. ಆದರೆ ನಿಜವಾದ ಗುಟ್ಟು ಬೇರೆಯೇ ಇದೆ. ಅವನಿಗೆ ದೇಶದ ಬೇರೆ ಭಾಗದಲ್ಲಿ ಕೆಲಸ ಮಾಡಲು ಹಿಂಜರಿಕೆ.

ಪಹಲ್ಗಾಮ್ ನಲ್ಲಿ ಸಿಕ್ಕ ವ್ಯಾಪಾರಿಗಳೂ ಕರ್ನಾಟಕಕ್ಕೆ ಬಂದವರೇ ಆಗಿದ್ದಾರೆ. ‘ನಾವು ಬೆಂಗಳೂರಿನಿಂದ ಬಂದವರು’ ಎಂದು ಹೇಳಿದ ತಕ್ಷಣ ‘ಅಯ್ಯೋ ಬೆಂಗಳೂರಿನವರಾ, ನನಗೆ ಗೊತ್ತು, ಜಯನಗರ, ವಿಜಯನಗರ, ಶಿವಾಜಿನಗರ ಎಲ್ಲಾ ಗೊತ್ತು’ ಎಂದು ಹೇಳುತ್ತಾ ನಮಗೆ ಇನ್ನಷ್ಟು ಆತ್ಮೀಯನಾಗಲು ಬಯಸುತ್ತಾನೆ. ಕನ್ನಡದ ಒಂದೆರಡು ಶಬ್ದಗಳನ್ನು ಹೇಳುವ ಬೀದಿ ಬದಿ ವ್ಯಾಪಾರಿಗಳು ಪಹಲ್ಗಾಮ್, ಪುಲ್ವಾಮಾ, ಸಂಗಮ್, ದಾಲ್ ಲೇಕ್ ಮುಂತಾದ ಕಡೆ ಸಿಗುತ್ತಾರೆ. ಆದರೆ ಅವರೆಲ್ಲಾ ಹಾಗೆ ಬಂದು ಹೀಗೆ ಹೋದವರು. ಯಾರೂ ಇಲ್ಲಿಯೇ ನೆಲೆಸಲು ಬಯಸುವವರಲ್ಲ. ಜೊತೆಗೆ ಅದು ಅವರ ವ್ಯಾಪಾರದ ತಂತ್ರ. ಒಂದಷ್ಟು ಶಾಲು, ಒಂದಿಷ್ಟು ಕೇಸರಿ ಮಾರಾಟವಾದರೆ ಸಾಕು ಅವರಿಗೆ.

ನಾಲ್ಕು ದಿನದ ನಮ್ಮ ಪಯಣದಲ್ಲಿ ಸಿಕ್ಕ ಇಬ್ಬರು ವಾಹನ ಚಾಲಕರೂ ಅಷ್ಟೇ. ಬಸ್ಸಿನಲ್ಲಿ ನಮ್ಮ ಜೊತೆ ಅಂತ್ಯಾಕ್ಷರಿಯಲ್ಲಿ ಸೇರಿಕೊಂಡರು. ವಾಹನ ಓಡಿಸುತ್ತಲೇ ಹಾಡು ಹೇಳುತ್ತಾ ನಮ್ಮನ್ನು ರಂಜಿಸಿದರು. ಕೇಸರಿ ಮಾರಾಟದ ಮಳಿಗೆಗೆ ಕರೆದುಕೊಂಡು ಹೋಗಿ ಕೇಸರಿ ಕೊಡಿಸಿದ್ದೇ ಅಲ್ಲದೆ ‘ನಿಮ್ಮಲ್ಲೂ ಬೇಕಾದರೆ ಬೆಳೆಯಿರಿ’ ಎಂದು ತೋಟದಿಂದ ಕೇಸರಿ ಗಡ್ಡೆ ಕೀಳಿಸಿ ತರಿಸಿಕೊಟ್ಟರು. ‘ಕೇಸರಿ ಇಲ್ಲಿನ ವಾತಾವರಣಕ್ಕೆ ಬೆಳೆಯುತ್ತದೆ. ನಿಮ್ಮಲ್ಲಿ ಬರುತ್ತದೋ ಇಲ್ಲ ಗೊತ್ತಿಲ್ಲ. ಟ್ರೈ ಮಾಡಿ’ ಎಂದು ಹುಷಾರಿನಿಂದ ಗಡ್ಡೆಗಳನ್ನು ಸುತ್ತಿ ಕೊಟ್ಟರು. ಇದೆಲ್ಲ ನೋಡಿದಾಗ ಕಾಶ್ಮೀರಿಗಳ ಮನಸ್ಸು ಪ್ರೀತಿಗೆ ಹಾತೊರೆಯುತ್ತಿದೆ ಎನ್ನುವುದು ಸ್ಪಷ್ಟ.

ಬೆಂಗಳೂರನ್ನೇ ನೋಡಿ. ಇಲ್ಲಿ ಪಂಜಾಬಿಗಳಿದ್ದಾರೆ. ರಾಜಸ್ತಾನಿಗಳಿದ್ದಾರೆ. ಗುಜರಾತಿನಿಂದ ಬಂದವರಿದ್ದಾರೆ. ಬಿಹಾರದವರಂತೂ ಬೇಕಾದಷ್ಟು ಜನ ಇದ್ದಾರೆ. ಆದರೆ ಕಾಶ್ಮೀರಿಗಳು? ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಏನಿದರ ಹಕೀಕತ್. ಕಾಶ್ಮೀರಿಗಳಿಗೆ ಸದಾ ಕಾಲ ಅಭದ್ರತೆಯ ಚಿಂತೆ. ಪ್ರತ್ಯೇಕತೆಯ ಬೇಸರ. ಭಾರತದ ಇತರ ಭಾಗದ ಜನರು ತಮ್ಮನ್ನು ಸ್ವೀಕರಿಸುವುದಿಲ್ಲವೇನೋ ಎಂಬ ಭಾವನೆ. ಕಾಶ್ಮೀರ ಎಂದರೆ ಭಯೋತ್ಪಾದಕರು, ಉಗ್ರಗಾಮಿಗಳು ಎಂದೇ ಭಾವಿಸಬಹುದೆಂಬ ಕೀಳು ಭಾವನೆ ಅವರನ್ನು ಆವರಸಿದಂತೆ ಕಾಣುತ್ತದೆ. ಕಾಶ್ಮೀರದ ಜನರ ಜೊತೆ ಒಡನಾಟ ನಡೆಸಿದರೆ, ಅವರ ಜೊತೆ ಮಾತನಾಡುತ್ತಿದ್ದರೆ ಅವರು ಸ್ನೇಹಕ್ಕಾಗಿ ಹಾತೊರೆಯುತ್ತಿದ್ದಂತೆ ಭಾಸವಾಗುತ್ತದೆ. ನಾವೇ ಅವರನ್ನು ಪ್ರತ್ಯೇಕವಾಗಿ ಇಟ್ಟು ಬಿಟ್ಟುದ್ದೀವೇನೋ ಎಂಬ ಅಪರಾಧಿ ಪ್ರಜ್ಞೆ ಕಾಡಿದರೆ ಆಶ್ಚರ್ಯವಿಲ್ಲ. ನಿಜವಾದ ಅರ್ಥದಲ್ಲಿ ನಾವೇ ಪ್ರತ್ಯೇಕತಾವಾದಿಗಳು. ಅವರನ್ನು ನಮ್ಮವರನ್ನಾಗಿ ಮಾಡಿಕೊಳ್ಳುವಲ್ಲಿ ನಾವು ವಿಫಲವಾಗಿದ್ದೇವೆ ಎಂದೇ ಅನಿಸುತ್ತದೆ.

ಕನ್ನಡದ ಸಿನಿಮಾದಲ್ಲಿ ದೊಡ್ಡಣ್ಣ ಅವರ ಜೋಕ್ ನಲ್ಲಿ ಹೇಳುವಂತೆ ಕಾಶ್ಮೀರ ಈಗಲೂ ಸೀರಿಯಸ್ ಆಗಿದೆ. ಭಾರತದ ಎಲ್ಲರೂ ತಕ್ಷಣವೇ ಪ್ರೀತಿಯ ಭರವಸೆಯೊಂದಿಗೆ ಅಲ್ಲಿಗೆ ತೆರಳಬೇಕಿದೆ. ನಮ್ಮ ಆತ್ಮೀಯತೆಯ ಅಪ್ಪುಗೆಯಲ್ಲಿ ಮುಳುಗಿಸಬೇಕಿದೆ. ಮಿಲಿಟರಿ ಮಾಡದ ಕೆಲಸವನ್ನು ಒಂದು ವಿಶ್ವಾಸದ ನಗೆ, ಮಾಡುತ್ತದೆ. ಪ್ರೀತಿಯ ಬೆಸುಗೆಗೆ ಕಾದಿದೆ ಕಾಶ್ಮೀರ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು