ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ವಿಶ್ವಕೋಶ: ಗತಕಾಲದ ಸಿಹಿ; ವರ್ತಮಾನದ ಕಹಿ

Last Updated 19 ಸೆಪ್ಟೆಂಬರ್ 2020, 19:31 IST
ಅಕ್ಷರ ಗಾತ್ರ

ಕನ್ನಡ ವಿಶ್ವಕೋಶ, ಪದಕೋಶ ಮೊದಲಾದ ಅತ್ಯುತ್ಕೃಷ್ಟ ಗ್ರಂಥ ಸರಣಿಗಳಲ್ಲದೆ ಪ್ರಚಾರೋಪನ್ಯಾಸ ಮಾಲೆಯಂತಹ ಪುಟ್ಟ ಪುಸ್ತಕಗಳನ್ನೂ ಹೊರತಂದು ಕನ್ನಡಿಗರ ಅರಿವನ್ನು ವಿಸ್ತರಿಸಿದ ಇತಿಹಾಸ ನಮ್ಮ ವಿಶ್ವವಿದ್ಯಾಲಯಗಳಿಗಿದೆ. ಆದರೆ, ಈಗೇನಾಗಿದೆ?

***

ಕನ್ನಡಿಗರ ವಾಚನಾಭಿರುಚಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ, ಸಂಘ ಸಂಸ್ಥೆಗಳು ಹಾಗೂ ವಿಶ್ವವಿದ್ಯಾಲಯಗಳು ಕಾಲದಿಂದ ಕಾಲಕ್ಕೆ ನೀಡಿರುವ ಗಮನ, ತೋರಿರುವ ಆಸಕ್ತಿ ಗಮನಾರ್ಹ. 20ನೇ ಶತಮಾನದ ಆದಿಭಾಗದಲ್ಲಿ ಪ್ರಾರಂಭವಾದ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಭಾಷೆ ಮತ್ತು ಸಾಹಿತ್ಯದ ಸರ್ವಾಂಗೀಣ ಅಭಿವೃದ್ಧಿಗೆ ಅಕ್ಷರಶಃ ಟೊಂಕಕಟ್ಟಿ ನಿಂತಿತೆಂದರೆ ತಪ್ಪಲ್ಲ. ಪಂಪ ಭಾರತ, ಜೈಮಿನಿ ಭಾರತ, ರಾಜಶೇಖರ ವಿಳಾಸಗಳಂತಹ ಅಭಿಜಾತ ಕೃತಿಗಳ ಸಂಪಾದನೆ, ಪ್ರಕಟಣೆಯಂತಹ ವಿದ್ವತ್ ಕಾರ್ಯಗಳಿಗೆ ಮಾತ್ರ ತನ್ನನ್ನು ಸೀಮಿತಗೊಳಿಸಿಕೊಳ್ಳದೆ ಪರಿಷತ್ತು ‘ಜ್ಯೋತಿರ್ವಿನೋದಿನಿ’, ‘ನಕ್ಷತ್ರ ದರ್ಶನ’, ‘ಅಲರ್ಜಿ’ಯಂತಹ ಅಪ್ಪಟ ವೈಜ್ಞಾನಿಕ ಕೃತಿಗಳನ್ನೂ ಆರಂಭದ ದೆಸೆಯಲ್ಲೇ ಪ್ರಕಟಿಸಿದ್ದು ಗಮನಿಸಬೇಕಾದ ಅಂಶ.

ಪರಿಷತ್ತಿನ ಜೊತೆಜೊತೆಗೇ ಜನ್ಮತಳೆದ ಮೈಸೂರು ವಿಶ್ವವಿದ್ಯಾಲಯವು ಮೊದಲ ದಿನಗಳಿಂದಲೂ ಬೋಧನೆ- ಸಂಶೋಧನೆಗಳ ಜೊತೆಜೊತೆಗೆ ಗ್ರಂಥ ಪ್ರಕಟಣೆಯನ್ನು ತನ್ನ ತೆಕ್ಕೆಯಲ್ಲಿರಿಸಿಕೊಂಡು ಪೋಷಿಸಿತು. ಜಿ. ಹನುಮಂತ ರಾಯರು, ಕುವೆಂಪು, ದೇಜಗೌ ಮುಂತಾದ ದಿಗ್ಗಜರು ಕಟ್ಟಿಬೆಳೆಸಿದ ‘ಪ್ರಸಾರಾಂಗ’ ಮೈಸೂರು ವಿಶ್ವವಿದ್ಯಾಲಯದ ಹೆಮ್ಮೆಗಳಲ್ಲೊಂದು. ಇದುವರೆಗೂ ಸುಮಾರು ಎರಡು ಸಾವಿರಕ್ಕಿಂತ ಹೆಚ್ಚು ಕೃತಿಗಳು, ಎಪಿಗ್ರಾಫಿಯಾ ಕರ್ಣಾಟಿಕಾ, ಕನ್ನಡ ವಿಶ್ವ ಕೋಶಗಳು, ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ, ಕನ್ನಡ ಛಂದಸ್ಸಿನ ಚರಿತ್ರೆ ಮುಂತಾದ ವಿಶೇಷ ಸರಣಿಯ ಅನೇಕ ಮೌಲಿಕ ಕೃತಿಗಳನ್ನು ಪ್ರಸಾರಾಂಗವು ಪ್ರಕಟಿಸಿದೆಯಾದರೂ ಅದರ ಕೀರ್ತಿ ಕಡಲಿನಾಚೆ ಪಸರಿಸಿದ್ದು ಈ ಬೃಹತ್ ಗ್ರಂಥಗಳಿಗಿಂತ ಹೆಚ್ಚಾಗಿ ಅಂಗೈಅಗಲದ ಪುಟ್ಟಪುಸ್ತಕಗಳಿಂದ!

ವಿಶ್ವವಿದ್ಯಾಲಯದ ಪ್ರಾಧ್ಯಾಪಕರ ಬೋಧನಾನುಭವ ಕೇವಲ ವಿದ್ಯಾರ್ಥಿಗಳಿಗೆ ಸೀಮಿತವಾಗಬಾರದು, ಜನಸಾಮಾನ್ಯರನ್ನೂ ತಲುಪಬೇಕು ಎಂಬ
ಎನ್.ಎಸ್. ಸುಬ್ಬರಾಯರಂತಹ ಕುಲಪತಿಗಳ ಕನಸು ಸಾಕಾರಗೊಂಡಿದ್ದು ಈ ‘ಪ್ರಚಾರೋಪನ್ಯಾಸ ಮಾಲೆ’ಯ ಉಪನ್ಯಾಸಗಳಲ್ಲಿ. ನುರಿತ ಅಧ್ಯಾಪಕರು ನಾಡಿನಾದ್ಯಂತ ಸಂಚರಿಸಿ ನೀಡಿದ ಉಪನ್ಯಾಸಗಳನ್ನು ಪುಟ್ಟ ಪುಸ್ತಕಗಳ ರೂಪದಲ್ಲಿ ಪ್ರಕಟಿಸಿ ನಾಲ್ಕಾಣೆಗೊಂದರಂತೆ ಮಾರುವ ಪದ್ಧತಿ ವಿದೇಶಗಳಲ್ಲಿ ‘ಮೈಸೂರು ಎಕ್ಸ್‌ಪೆರಿಮೆಂಟ್‌’ ಎಂದೇ ಪ್ರಸಿದ್ಧವಾಯಿತು. ನಂತರದ ಕಾಲಘಟ್ಟಗಳಲ್ಲಿ ರಾಜ್ಯದಲ್ಲಿ ಹುಟ್ಟಿಕೊಂಡ ಬಹುತೇಕ ಎಲ್ಲ ವಿಶ್ವವಿದ್ಯಾಲಯಗಳೂ ತಮ್ಮವೇ ಆದ ಪ್ರಕಟಣ ವಿಭಾಗಗಳನ್ನು ಹೊಂದಿ ಹಲವು ಬಗೆಯ ಕೃತಿ ಪ್ರಕಟಣೆಗೆ ಮುಂದಾದವು.

ಸ್ವಾತಂತ್ರ್ಯಾನಂತರ ಈ ನಾಡಿನ ಆಡಳಿತದ ಚುಕ್ಕಾಣಿಯನ್ನು ಹಿಡಿದ ಎಲ್ಲ ಸರ್ಕಾರಗಳೂ ಕನ್ನಡ ಭಾಷೆ ಮತ್ತು ಸಾಹಿತ್ಯದ ಏಳಿಗೆಗೆ ಸಂಬಂಧಿಸಿದಂತೆ ಕೈಗೊಂಡಿರುವ ಕಾರ್ಯಗಳನ್ನು ಗಮನಿಸಿದರೆ ಹೆಮ್ಮೆಯಾಗದಿರದು. 1954ರಷ್ಟು ಹಿಂದೆಯೇ ಅಂದಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರು ಏಳುನೂರು ಪುಟಗಳ ‘ಕುಮಾರವ್ಯಾಸ ಭಾರತ’ವನ್ನು ಕೇವಲ ಎರಡು ರೂಪಾಯಿಗಳಿಗೆ ನಾಡಿನ ಮನೆಮನೆಗಳಿಗೆ ತಲುಪಿಸಿದ್ದು ಇಂದಿಗೂ ಮುರಿಯಲಾರದ ದಾಖಲೆ. ಅಂತೆಯೇ ವಿಶ್ವ ಕನ್ನಡ ಸಮ್ಮೇಳನಕ್ಕೆಂದು ಗುಂಡೂರಾಯರ ಸರ್ಕಾರ ಪ್ರಕಟಿಸಿದ 117 ಪುಸ್ತಕಗಳು ಮತ್ತು ರಾಮಕೃಷ್ಣ ಹೆಗಡೆಯವರ ಕಾಲದಲ್ಲಿ ಅದೇ ಮಾಲಿಕೆಯಲ್ಲಿ ಬಂದ ಮತ್ತೈವತ್ತು ಕೃತಿಗಳಂತೂ ಕೆಲವೇ ದಿನಗಳಲ್ಲಿ ಬಿಸಿ ದೋಸೆಗಳಂತೆ ಖರ್ಚಾಗಿ ಹೋದವು! ಆನಂತರದ ದಿನಗಳಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹೊರಬಂದ ಸಮಗ್ರ ವಚನ ಸಂಪುಟಗಳು, ಸಮಗ್ರ ದಾಸಸಾಹಿತ್ಯ ಯೋಜನೆಯ ಸಂಪುಟಗಳು, ಗಳಗನಾಥ, ಡಿವಿಜಿ, ಶಿವರಾಮ ಕಾರಂತ, ಫ.ಗು. ಹಳಕಟ್ಟಿ ಮುಂತಾದ ಹಿರಿಯರ ಸಮಗ್ರಕೃತಿ ಸಂಪುಟಗಳು - ಎಲ್ಲವೂ ಸರ್ಕಾರದ ಸಾಹಿತ್ಯ ಪ್ರೀತಿಯ ದ್ಯೋತಕವೇ ಆಗಿವೆ.

ಇದೆಲ್ಲ ಹಿಂದಿನ ಶತಮಾನದ ಮಾತಾಯಿತು. ಈಗ ಕೃಷ್ಣೆ- ಕಾವೇರಿಗಳಲ್ಲಿ ಸಾಕಷ್ಟು ನೀರು ಹರಿದಿದೆ. ಹಿಂದೆಂದಿಗಿಂತಲೂ ಸರ್ಕಾರಿ ಅನುದಾನಿತ ಅಕಾಡೆಮಿ, ಪ್ರಾಧಿಕಾರಗಳ ಸಂಖ್ಯೆ ಅಗಾಧವಾಗಿ ಬೆಳೆದಿದೆ. ಹಲವು ಬಗೆಯ ಪುಸ್ತಕ ಪ್ರಕಟಣ ಯೋಜನೆಗಳಿಗೆ ಕೋಟ್ಯಂತರ ರೂಪಾಯಿ ಹಣ ಮಂಜೂರಾಗುತ್ತಿದೆ. ಆದರೆ, ಅದರ ಫಲಿತವನ್ನು ಜನಸಾಮಾನ್ಯರ ಪುಸ್ತಕದ ಕಪಾಟುಗಳಲ್ಲಿ ಕಾಣಬಹುದೇ ಎಂಬ ಪ್ರಶ್ನೆಗೆ ಪ್ರಾಮಾಣಿಕವಾಗಿ ಉತ್ತರವನ್ನು ಕಂಡುಕೊಳ್ಳುವುದು ಕಷ್ಟ. ಅಂತಾರಾಷ್ಟ್ರೀಯ ಖ್ಯಾತಿಯ ಆಂಗ್ಲ ಗ್ರಂಥ ಸರಣಿಯ ಕನ್ನಡಾನುವಾದದ ಪ್ರಕಟಣೆಯನ್ನು ಜಾತಿಯ ಕಾರಣಕ್ಕೆ ಅರ್ಧಕ್ಕೆ ನಿಲ್ಲಿಸಿದ್ದ, ತಮ್ಮದೇ ಪ್ರಕಟಣೆಯ ಗ್ರಂಥಗಳಲ್ಲಿನ ಲೇಖನಗಳನ್ನು ಬೇರೊಂದು ಶೀರ್ಷಿಕೆಯಡಿಯಲ್ಲಿ ‘ಹೊಸ ಸರಣಿ’ಯಾಗಿ ಪ್ರಕಟಿಸಿದ ಕೀರ್ತಿಗೆ ನಮ್ಮ ವಿಶ್ವವಿದ್ಯಾಲಯಗಳು ಭಾಜನವಾಗಿರುವ ಉದಾಹರಣೆಗಳಿವೆ! ಶಾಸ್ತ್ರೀಯ ಭಾಷೆಯ ಸ್ಥಾನ ದೊರೆತ ಮೇಲೂ ನಮ್ಮ ಪ್ರಕಟಣ ಯೋಜನೆಗಳ ಹಿಂದೆ ಜಾತಿ, ಪ್ರಾದೇಶಿಕತೆ, ಲಿಂಗ, ರಾಜಕೀಯ ವಶೀಲಿ ಬಾಜಿಗಳ ಕರಿನೆರಳು ದೂರವಾಗದಿರುವುದನ್ನು ಗಮನಿಸಿದರೆ ‘ಆಹಾ ಹೋಯಿತೆ ಆ ನಾಕ! ಅಯ್ಯೋ ಬಂದಿತೆ ಈ ಲೋಕ’ ಎನಿಸಿದರೆ ತಪ್ಪೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT