ಗುರುವಾರ , ಮೇ 26, 2022
23 °C

ನೋವದೆಂತಹುದೊ.. ವಸುಧೇಂದ್ರ ಅವರ ಲೇಖನ

ವಸುಧೇಂದ್ರ Updated:

ಅಕ್ಷರ ಗಾತ್ರ : | |

Prajavani

(ನೋವು ಅನುಭವಿಸದ ಜೀವವೇ ಇಲ್ಲ. ನೋವಿಲ್ಲದ ಜಗತ್ತಿಲ್ಲ. ಹಲವು ನೋವುಗಳನ್ನು ಉಪಶಮನ ಮಾಡುವ ಶಕ್ತಿಯನ್ನು ಮನುಷ್ಯ ಕಂಡುಕೊಂಡಿದ್ದಾನೆ ನಿಜ. ಆದರೆ ಎಷ್ಟೋ ನೋವುಗಳಿಗೆ ಯಾವುದೇ ಪರಿಹಾರವಿಲ್ಲ. ಅನುಭವಿಸುವುದು ಮಾತ್ರ ಅದರ ಬಿಡುಗಡೆಗೆ ಇರುವ ಏಕೈಕ ಮಾರ್ಗ. ನೋವು ನುಂಗುವುದನ್ನು ಕಲಿಯಬೇಕು ಎಂದು ಹಿರಿಯರು ಹೇಳುವುದು ಆ ಕಾರಣಕ್ಕಾಗಿಯೇ ಇರಬೇಕು. ಆದರೆ ಮಾತ್ರೆ ನುಂಗಿದಷ್ಟು ಸುಲಭವಾಗಿ ನೋವು ನುಂಗಲು ಆಗುವುದಿಲ್ಲ!)

‘ನೋವನರಿಯದವರೆತ್ತ ಬಲ್ಲರು?’ ಎಂಬ ಮಾತನ್ನು ಕ್ಲೀಷೆ ಎನ್ನುವಷ್ಟರ ಮಟ್ಟಿಗೆ ಕನ್ನಡ ಸಾರಸ್ವತ ಲೋಕದಲ್ಲಿ ಕೇಳುತ್ತಿರುತ್ತೇವೆ. ಅದೇ ಹೆಸರಿನ ಹಲವು ಕತೆ, ಕವನ, ಪುಸ್ತಕಗಳೂ ಪ್ರಕಟವಾಗಿವೆ. ಆದರೆ, ಬಹುತೇಕವಾಗಿ ಇದನ್ನು ನಾವು ಬಡತನ-ಸಿರಿತನದ ವ್ಯತ್ಯಾಸವನ್ನಷ್ಟೇ ಮನಸ್ಸಿನಲ್ಲಿಟ್ಟುಕೊಂಡು ಹೇಳುತ್ತಿರುತ್ತೇವೆ. ಆದರೆ, ‘ನೋವು’ ಎನ್ನುವುದು ಅಷ್ಟು ಸಂಕುಚಿತ ಅರ್ಥದಲ್ಲಿ ಈ ನಾಣ್ಣುಡಿಯಲ್ಲಿ ಬಳಕೆಯಾಗಿಲ್ಲ ಎನ್ನಿಸುತ್ತದೆ. ಹಲವು ಬಗೆಯ ನೋವುಗಳನ್ನು ಮನುಷ್ಯ ಅನುಭವಿಸುತ್ತಾನೆ. ದೈಹಿಕ, ಮಾನಸಿಕ, ಆರ್ಥಿಕ, ಸಾಮಾಜಿಕ, ಲೈಂಗಿಕ, ಭಿನ್ನಲಿಂಗ - ಇತ್ಯಾದಿಗಳೆಲ್ಲವೂ ಇದ್ದೇ ಇವೆ. ಆದರೆ ಇವೆಲ್ಲವೂ ಕೊನೆಗೂ ದೈಹಿಕ ಅಥವಾ ಮಾನಸಿಕ ನೋವಿನಲ್ಲಿ ಕೊನೆಗಾಣುತ್ತವೆ. ದೈಹಿಕ ನೋವಿಗೆ ಕೊಟ್ಟ ಮಹತ್ವವನ್ನು ಮಾನಸಿಕ ನೋವಿಗೆ ನಾವು ಕೊಟ್ಟಿಲ್ಲವೆನ್ನಿಸುತ್ತದೆ.

‘ನೋವು’ ಎನ್ನುವುದು ಸಾಪೇಕ್ಷವೆ ಅಥವಾ ನಿರಪೇಕ್ಷವೆ? ಇದು ಮೂಲಭೂತ ಪ್ರಶ್ನೆ. ಅಂದರೆ ಒಂದು ನೋವನ್ನು ಮತ್ತೊಂದು ನೋವಿನೊಡನೆ ಹೋಲಿಸಿ, ಯಾವುದು ಹೆಚ್ಚು ಅಥವಾ ಯಾವುದು ಕಡಿಮೆ ಎಂದು ಹೇಳಬಹುದೆ? ಬಹುಶಃ ಅದು ಸಾಧ್ಯವಾಗುವುದು ಎರಡೂ ನೋವನ್ನು ಅನುಭವಿಸಿದ ಅಥವಾ ಅನುಭವಿಸದೆ ಕೇವಲ ಊಹಿಸುವ ಮೂರನೆಯ ವ್ಯಕ್ತಿಯಿಂದ ಮಾತ್ರ. ಆದರೆ, ನೋವನ್ನು ಅನುಭವಿಸುತ್ತಿರುವವರಿಗೆ ತಮ್ಮದೇ ಅತ್ಯಂತ ದೊಡ್ಡ ನೋವಾಗಿರುತ್ತದೆ. ಆದ್ದರಿಂದ ‘ನೋವು’ ಎನ್ನುವುದು ಎಂದಿಗೂ ಸಾಪೇಕ್ಷವೇ ಆಗಿರುತ್ತದೆ ಮತ್ತು ಅನನ್ಯವಾಗಿರುತ್ತದೆ. ಒಂದು ಉದಾಹರಣೆಯನ್ನು ಗಮನಿಸಿದರೆ ಅದನ್ನು ಅರ್ಥ ಮಾಡಿಕೊಳ್ಳುವುದು ಸಾಧ್ಯ.

ಸಮಾಜದಲ್ಲಿ ಅತ್ಯಂತ ಶೋಷಣೆಗೆ ಒಳಗಾದ ದಲಿತ ಸಮುದಾಯ ಮತ್ತು ಲೈಂಗಿಕ ಅಲ್ಪಸಂಖ್ಯಾತರನ್ನು ಪರಿಗಣಿಸೋಣ. ದಲಿತರ ಮೇಲೆ ನಡೆದ ದೌರ್ಜನ್ಯ, ಅವಮಾನ, ಬಡತನ - ಎಲ್ಲವನ್ನೂ ನಾವು ಕಂಡಿದ್ದೇವೆ ಮತ್ತು ಚರಿತ್ರೆಯ ಮೂಲಕ ಅದರ ತೀವ್ರತೆಯನ್ನು ತಿಳಿದುಕೊಂಡಿದ್ದೇವೆ. ಅದೇ ರೀತಿ ಲೈಂಗಿಕ ಅಲ್ಪಸಂಖ್ಯಾತರ ಉದಾಹರಣೆಯನ್ನು ತೆಗೆದುಕೊಳ್ಳೋಣ. ಇವರೂ ಅಸಮಾನತೆ, ಅವಮಾನ, ದೌರ್ಜನ್ಯ ಎದುರಿಸಿದವರೇ ಆಗಿರುತ್ತಾರೆ. ಇವರು ಬಡವರೂ ಆಗಿರಬಹುದು, ಶ್ರೀಮಂತರೂ ಆಗಿರಬಹುದು, ಮೇಲ್ಜಾತಿಯವರೂ ಆಗಬಹುದು, ಕೆಳಜಾತಿಯವರೂ ಆಗಬಹುದು. ಎಲ್ಲ ದೇಶ-ಕಾಲದಲ್ಲೂ ಇವರು ಕಂಡು ಬರುತ್ತಾರೆ. ಆದರೆ ಇವರಿಬ್ಬರಲ್ಲಿ ಒಂದು ವ್ಯತ್ಯಾಸ ಸ್ಪಷ್ಟವಾಗಿ ಕಾಣುತ್ತದೆ. ದಲಿತ ವ್ಯಕ್ತಿಗೆ ತನ್ನದೇ ಆದ ಸಮುದಾಯವಿರುತ್ತದೆ.

ಅಂದರೆ ದಲಿತ ಮಗುವಿನ ತಂದೆ-ತಾಯಿ, ಅಕ್ಕ-ತಮ್ಮ, ನೆರೆ-ಹೊರೆ - ಎಲ್ಲರೂ ದಲಿತರೇ ಆಗಿರುವುದರಿಂದ ಇಲ್ಲಿ ಎಷ್ಟೇ ಶೋಷಣೆ ನಡೆದರೂ ಮಾನಸಿಕ ಧೈರ್ಯವಿರುತ್ತದೆ. ಇತ್ತೀಚೆಗೆ ಬಿಡುಗಡೆಯಾದ ಧನುಷ್ ನಟಿಸಿದ ತಮಿಳು ಸಿನಿಮಾ ‘ಅಸುರನ್’ ಅನ್ನು ಉದಾಹರಣೆಯಾಗಿ ತೆಗೆದುಕೊಳ್ಳಿ. ತನ್ನ ಮಗ ತಿಳಿಗೇಡಿಯಾಗಿ ಮಾಡಿದ ಅಪರಾಧವನ್ನೇ ದೊಡ್ಡದು ಮಾಡಿಕೊಂಡ ಮೇಲ್ಜಾತಿಯವರ ದೌರ್ಜನ್ಯವನ್ನು ಅವರಪ್ಪ ಎದುರಿಸುತ್ತಾನೆ. ಇಡೀ ಕುಟುಂಬವೇ ಮಗುವನ್ನು ಕಾಪಾಡಲು ನಿಲ್ಲುತ್ತದೆ. ಆದರೆ ಲೈಂಗಿಕ ಅಲ್ಪಸಂಖ್ಯಾತರಲ್ಲಿ ಬಹುತೇಕ ಹಾಗಾಗುವುದೇ ಇಲ್ಲ.

ಏಕೆಂದರೆ ಬಹುತೇಕರು ತಮ್ಮ ಭಿನ್ನ ಲೈಂಗಿಕತೆಯನ್ನು ಬಚ್ಚಿಡುತ್ತಾರೆ. ಏಕೆಂದರೆ ಅವರ ಅಪ್ಪ-ಅಮ್ಮ, ಅಕ್ಕ-ತಮ್ಮ, ನೆರೆ-ಹೊರೆ - ಯಾರೂ ಭಿನ್ನ ಲೈಂಗಿಕರಾಗಿರುವ ಸಾಧ್ಯತೆ ಕಡಿಮೆ. ಒಂದು ವೇಳೆ ಅಂತಹವರು ಇದ್ದರೂ ಎಲ್ಲವೂ ಗೌಪ್ಯ, ಹೇಳಿಕೊಳ್ಳುವುದಿಲ್ಲ. ಒಂದು ವೇಳೆ ತನ್ನ ಪರಿಸ್ಥಿತಿಯನ್ನು ಹೇಳಿಕೊಂಡರೂ ಕಾಪಾಡಲು ಬರುವ ’ಧನುಷ್’ ನಂತಹ ತಂದೆ-ಕುಟುಂಬ ಅಪರೂಪ. ಈ ವ್ಯಕ್ತಿ ಶ್ರೀಮಂತನೇ ಆಗಲಿ, ಬಡವನೇ ಆಗಲಿ - ಏಕಾಂಗಿಯಾಗಿ ನೋವಿನಲ್ಲಿ ನರಳುತ್ತಾನೆ. ದೈಹಿಕ, ಆರ್ಥಿಕ, ಸಾಮಾಜಿಕ - ಎಲ್ಲದರಲ್ಲೂ ಮೇಲಿನ ಸ್ತರದಲ್ಲಿದ್ದರೂ ಏಕಾಂಗಿಯಾಗಿ ನೋಯುವುದು ಸುಲಭವಲ್ಲ. ಹಾಗಿದ್ದರೆ ಇಲ್ಲಿ ಯಾರ ನೋವು ದೊಡ್ಡದು? ಯಾರದು ಚಿಕ್ಕದು?

ಈ ಪ್ರಶ್ನೆಗೆ ಉತ್ತರವಿಲ್ಲ. ಯಾಕೆಂದರೆ ನೋವೆನ್ನುವುದು ನಿರಪೇಕ್ಷವಾದ ಸಂಗತಿ. ಹೋಲಿಕೆಗೆ ದಕ್ಕದ, ಅಳತೆಗೋಲಿಂದ ಅಳೆಯಲಾಗದ ಸ್ಥಿತಿ. ಸಮಾಜದ ಸಂಗತಿಗಳನ್ನು ಅರ್ಥ ಮಾಡಿಕೊಂಡ ಮೂರನೆಯವರು ಯಾರಾದರೂ ಇವೆರಡನ್ನೂ ತುಲನೆ ಮಾಡಲು ಪ್ರಯತ್ನಿಸಬಹುದು. ಆದರೆ ಅನುಭವಿಸುವ ಇಬ್ಬರಿಗೂ ಅವರ ನೋವೇ ದೊಡ್ಡದಾಗಿರುತ್ತದೆ. ಈ ಮಾತು ಎಲ್ಲ ಬಗೆಯ ನೋವುಗಳಿಗೂ ಸಲ್ಲುತ್ತದೆ.

ಹಾಗಿದ್ದರೆ ‘ನೋವು’ ಎಂದರೇನು? ಇದು ಹೋಲಿಕೆಯಿಂದ ಹುಟ್ಟುವಂತಹದ್ದಾಗಿದೆ. ಒಂದು ಸಾಮ್ರಾಜ್ಯದಲ್ಲಿ ಇರುವವರೆಲ್ಲರೂ ಒಕ್ಕಣ್ಣರಾಗಿದ್ದರೆ, ಅಲ್ಲಿ ನೋವಿಗೆ ಆಸ್ಪದವಿರುವುದಿಲ್ಲ. ಆದರೆ ಎರಡು ಕಣ್ಣುಳ್ಳ ವ್ಯಕ್ತಿ ಅಕಸ್ಮಾತ್ತಾಗಿ ಆ ಸಾಮ್ರಾಜ್ಯಕ್ಕೆ ಭೇಟಿ ಕೊಟ್ಟು, ಅವನ ಸುಖವನ್ನು ಜನರೆಲ್ಲಾ ಗಮನಿಸಿದರೆಂದರೆ ತೀರಿತು. ನೋವಿನ ಚಿಲುಮೆ ಉಕ್ಕುತ್ತದೆ. ಶ್ರೀಮಂತ ಕಣ್ಣೆದುರು ಕಾಣುವುದರಿಂದಲೇ ನಮ್ಮ ಬಡತನ ನೋವು ನೀಡುತ್ತದೆ. ಆರೋಗ್ಯವಂಥ ವ್ಯಕ್ತಿಯನ್ನು ಕಂಡಾಗಲೇ ನಮ್ಮ ಅನಾರೋಗ್ಯ ಹೆಚ್ಚು ನೋವು ನೀಡುತ್ತದೆ. ಇದನ್ನು ಮತ್ತೊಂದು ರೀತಿಯಲ್ಲಿಯೂ ಹೇಳಬಹುದು.

ಶಾಲೆ ಮತ್ತು ಕಾಲೇಜುಗಳಲ್ಲಿ ಯಾವುದಾದರೂ ಪರೀಕ್ಷೆ ತುಂಬಾ ಕಠಿಣವಾಗಿದ್ದು, ಎಲ್ಲರೂ ಎಡವಿದ್ದರೆ ಆಗ ಯಾವ ವಿದ್ಯಾರ್ಥಿಗೂ ಅಷ್ಟೊಂದು ನೋವಾಗುವುದಿಲ್ಲ. ಕಾಲೇಜಿನ ದಿನಗಳಲ್ಲಿ ಅಂತಹ ಸಮಯದಲ್ಲಿ ಎಲ್ಲರೂ ಸಿನಿಮಾಕ್ಕೆ ಹೋಗಿ ಮಜಾ ಮಾಡಿ ಬಂದ ನೆನಪು ನನಗಾಗುತ್ತಿದೆ. ಏಕೆಂದರೆ ಎಲ್ಲರೊಂದಿಗೆ ನಾನಿದ್ದೇನೆ ಎಂಬ ಧೈರ್ಯವಿರುತ್ತದೆ. ಆದರೆ ಎಲ್ಲರೂ ಪರೀಕ್ಷೆಯನ್ನು ಚೆನ್ನಾಗಿ ಮಾಡಿ, ನಾವು ಮಾತ್ರ ಎಡವಿದಾಗ ಎದೆ ಬಡಿದುಕೊಳ್ಳಲು ಶುರುವಾಗುತ್ತದೆ. ನೋವಿನ ಸೆಲೆ ಶುರುವಾಗುತ್ತದೆ. ಹಾಗಂತ ಪರಿಪೂರ್ಣ ನೋವು ಇಲ್ಲವೆಂದೇನೂ ಅರ್ಥವಲ್ಲ. ಉದಾಹರಣೆಗೆ ನಿಮಗೆ ಮಂಡಿ ನೋವು ಪ್ರಾರಂಭವಾಗುತ್ತದೆ ಎಂದುಕೊಳ್ಳಿ.

ಅದು ಖಂಡಿತವಾಗಿಯೂ ಮತ್ತೊಬ್ಬರಿಗೆ ಇಲ್ಲ ಎನ್ನುವ ಕಾರಣಕ್ಕೆ ಆಗುವ ನೋವಲ್ಲ. ಆದರೆ ಅಲ್ಲಿಯೂ ಹೋಲಿಕೆ ಇರುತ್ತದೆ. ಅದು ಸ್ವಂತ ಹೋಲಿಕೆಯಾಗಿರುತ್ತದೆ. ಆ ಮಂಡಿ ನೋವಿಲ್ಲದ ಸ್ಥಿತಿ ಎಂತಹದು ಎನ್ನುವುದನ್ನು ನೀವು ಈಗಾಗಲೇ ಅನುಭವಿಸಿದ್ದೀರಿ. ಆದ್ದರಿಂದಲೇ ಅದು ಕಷ್ಟದ್ದು. ಹುಟ್ಟು ಕುರುಡುತನಕ್ಕಿಂತಲೂ, ಮಧ್ಯವಯಸ್ಕನೊಬ್ಬ ಕಣ್ಣು ಕಳೆದುಕೊಂಡರೆ ಹೆಚ್ಚು ದುಃಖಪಡುತ್ತಾನೆ ಅನ್ನಿಸುತ್ತದೆ.

ಒಬ್ಬರಿಗೆ ನಲಿವು ಕೊಡುವ ಸಂಗತಿ ಮತ್ತೊಬ್ಬರಿಗೆ ನೋವು ಕೊಡುವ ಸಾಧ್ಯತೆಗಳೂ ಇರುತ್ತವೆ. ಇಂತಹ ವಿಚಿತ್ರ ಸನ್ನಿವೇಶವನ್ನು ನಾನು ಆಪ್ತಸಮಾಲೋಚನೆಯೊಂದರಲ್ಲಿ ಎದುರಿಸಿದ್ದೇನೆ. ಆ ಹುಡುಗ ಬಹಳಷ್ಟು ಖಿನ್ನತೆಯಿಂದ ಬಳಲುತ್ತಿದ್ದ. ಸರಿಯಾದ ಮನೋವೈದ್ಯವನ್ನು ಕಂಡು ಆರೈಕೆ ಶುರು ಮಾಡಿಕೊಂಡಿಲ್ಲದ ಕಾರಣ, ಖಿನ್ನತೆ ಆತ್ಮಹತ್ಯೆಯ ಪ್ರಯತ್ನದ ತನಕ ಅವನನ್ನು ಒಯ್ದಿತ್ತು. ಅಂತಹ ಹೊತ್ತಿನಲ್ಲಿ ಅವನು ನನ್ನನ್ನು ಕಾಣಲು ಬಂದಿದ್ದ. ಅವನ ಆತ್ಮಹತ್ಯೆಯ ಪ್ರಯತ್ನದ ಸನ್ನಿವೇಶವನ್ನು ವಿವರಿಸಲು ಹೇಳಿದೆ.

‘ನದಿ ತುಂಬಿ ಹರಿಯುತ್ತಿತ್ತು ಸಾರ್. ನನಗೆ ಬದುಕು ಬೇಡವಾಗಿತ್ತು. ರಾತ್ರಿಯ ಹೊತ್ತು. ಯಾರೂ ಇರಲಿಲ್ಲ. ಅಲ್ಲಿಯ ತನಕ ಬೈಕಿನಲ್ಲಿ ಹೋಗಿ, ಸೇತುವೆಯ ಮೇಲೆ ಇಪ್ಪತ್ತು ನಿಮಿಷ ನಿಂತಿದ್ದೆ ಸಾರ್’

ನಾನು ಹೆಚ್ಚಿನ ಆಘಾತವನ್ನು ಮುಖದಲ್ಲಿ ತೋರಿಸದೆ ‘ಮತ್ತೆ ವಾಪಾಸು ಬರಲು ಕಾರಣವೇನು? ಯಾವ ಸಂಗತಿ ನಿಮ್ಮನ್ನು ಮತ್ತೆ ಬದುಕಿಗೆ ಹಿಂತಿರುಗಿಸಿತು’ ಎಂದು ಸಮಾಧಾನದಿಂದ ಕೇಳಿದೆ.

‘ನಂಗೆ ಬಾಲ್ಯದಿಂದಲೂ ಚೆನ್ನಾಗಿ ಈಜಲು ಬರುತ್ತದೆ ಸಾರ್. ಬಿದ್ದರೂ ಹೇಗೋ ಈ ಜೀವ ದಡದ ಕಡೆ ಈಜಿ ಉಳಿದುಬಿಡುತ್ತದೆ ಎಂದು ಮನಸ್ಸಿಗೆ ಗೊತ್ತಿತ್ತು. ಆದ್ದರಿಂದ ಜಿಗಿಯಲಿಲ್ಲ’

ಈ ಮಾತನ್ನು ಹೇಳುವಾಗ ಅವನ ಕಣ್ಣುಗಳು ತೇವಗೊಂಡಿದ್ದವು. ಸುಮ್ಮನೆ ಯಾರಿಗಾದರೂ ಈ ವಿಷಯವನ್ನು ಹೇಳಿದರೆ ಒಂದು ನಗೆಹನಿಯಾಗಿ ಕೇಳಿಸಬಹುದು. ಆದರೆ ಅವನು ನಿಜಕ್ಕೂ ನೊಂದಿದ್ದ. ಅವನ ನೋವು ನನಗೆ ಅರ್ಥವಾಗುತ್ತಿತ್ತು.

‘ಹಾಗಿದ್ದರೆ ಬೇರೆ ಬಗೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನವೇಕೆ ಮಾಡಲಿಲ್ಲ’ ಎಂದು ಕೇಳಿದೆ.

‘ಬೇರೆ ಕ್ರಮ ಭಯ ತರಿಸುತ್ತದೆ ಸಾರ್. ಸಾಧ್ಯವೇ ಇಲ್ಲ’ ಎಂದ. ಅಂದರೆ ಅವನಿಗೆ ಬದುಕಿನಲ್ಲಿ ಇನ್ನೂ ಆಸೆ ಇದೆ ಎನ್ನುವ ಸಂಗತಿ ನನಗೆ ಸೂಕ್ಷ್ಮವಾಗಿ ಅರ್ಥವಾಗಿತ್ತು. ನೀರಿನಲ್ಲಿ ಬಿದ್ದು ಉಲ್ಲಾಸದಿಂದ ಈಜಾಡುವ ಸುಖ ಈಜಲು ಬಲ್ಲವರೆಲ್ಲರಿಗೂ ಗೊತ್ತು. ಆದರೆ ಈಜು ಬಲ್ಲದ್ದಕ್ಕಾಗಿ ಈ ವ್ಯಕ್ತಿ ಕಣ್ಣೀರು ಹಾಕುತ್ತಿದ್ದ ಸಂಗತಿ ನನಗೆ ನೋವಿನ ಮತ್ತೊಂದು ವ್ಯಾಖ್ಯಾನವನ್ನು ನೀಡಿತ್ತು.

ನನ್ನ ಅಡುಗೆಯವಳು ಅಕಸ್ಮಾತ್ತಾಗಿ ಒಂದು ವಿಶೇಷ ಮಾತನ್ನು ಒಂದು ದಿನ ಹೇಳಿದಳು. ಅವಳು ಅಡುಗೆ ಮಾಡುವ ಮತ್ತೊಂದು ಮನೆಯಲ್ಲಿ ಪ್ರತಿ ತಿಂಗಳು ಮಾತ್ರೆಗಳಿಗಾಗಿ ಹತ್ತು ಸಾವಿರ ರೂಪಾಯಿ ಖರ್ಚು ಮಾಡುತ್ತಾರೆ ಎನ್ನುವ ಪ್ರಮುಖ ಸುದ್ದಿಯ ಜೊತೆಗೆ ‘ಬಡವರಿಗೆ ದೇವರು ಯಾವತ್ತೂ ಮಾತ್ರೆ ಖರ್ಚು ಕೊಡಲ್ಲ ಅಣ್ಣಾ’ ಎಂದಳು. ಕೇಳಲು ಬಹುರಮ್ಯವಾದ ಈ ಮಾತು ನನಗೆ ರೋಮಾಂಚನ ತಂದಿತ್ತು.

ಆದರೆ ಹಲವಾರು ಬಾರಿ ಆಸ್ಪತ್ರೆಗಳಿಗೆ ಭೇಟಿ ಕೊಟ್ಟಿರುವ ನನಗೆ ಇದು ಪೂರ್ತಿ ನಿಜವಲ್ಲ ಎನ್ನುವ ಕಹಿಸತ್ಯ ಗೊತ್ತು. ಬಡತನ ಸಾಕಷ್ಟು ದುಡಿಸುತ್ತದೆಯಾದ ಕಾರಣ ದೈಹಿಕ ಆರೋಗ್ಯವನ್ನು ಹೆಚ್ಚು ಕೊಡಬಹುದೇನೋ. ಆದರೆ ಮಾನಸಿಕ ಆರೋಗ್ಯದ ಸಂಗತಿ? ಮಾನಸಿಕ ಆಸ್ಪತ್ರೆಗಳಲ್ಲಿ ರಾಶಿ ರಾಶಿ ಬಡವರನ್ನೂ ನಾನು ಕಂಡಿದ್ದೇನೆ. ಕ್ಯಾನ್ಸರ್ ಕೇಂದ್ರಗಳಲ್ಲಿ ಹತ್ತಾರು ಬಡ ಕುಟುಂಬಗಳನ್ನು ನೋಡಿದ್ದೇನೆ.

ಮೊನ್ನೆ ಹೊಸಪೇಟೆಯ ಒಂದು ಔಷಧದ ಅಂಗಡಿಯಲ್ಲಿ ಹಳ್ಳಿಯ ಹೆಂಗಸೊಬ್ಬಳು ವೈದ್ಯರು ಬರೆದುಕೊಟ್ಟ ಚೀಟಿಯನ್ನು ತೋರಿಸಿ ತನಗೆ ಅಗತ್ಯವಾದ ಮಾತ್ರೆಗಳನ್ನು ಕೊಳ್ಳುತ್ತಿದ್ದಳು. ವೈದ್ಯರು ಹೇಳಿದಷ್ಟು ಮಾತ್ರೆಗಳನ್ನು ಕೊಂಡರೆ ನಾಲ್ಕು ನೂರಾ ಅರವತ್ತು ರೂಪಾಯಿ ಆಗುತ್ತದೆ ಎಂದು ಅಂಗಡಿಯ ಹುಡುಗಿ ಹೇಳಿದಳು.

‘ಯಕ್ಕಾ, ನನ್ನ ತಾವ ಇರೋದು ಬರೀ ನಾಕು ನೂರು ರೂಪಾಯಿ. ಹಳ್ಳಿಗೆ ಹೋಗಾಕೆ ಐವತ್ತು ರೂಪಾಯಿ ಬೇಕು. ಬರೀ ಮೂನ್ನೂರ ಐವತ್ತು ರೂಪಾಯಿದು ಗುಳಿಗಿ ಕೊಡಮ್ಮಾ... ಉಳಿದಿದ್ದಕ್ಕೆ ದೇವರಿದ್ದಾನೆ’ ಎಂದು ಬಿಟ್ಟಳು. ನೋವೆನ್ನುವುದು ಯಾರನ್ನೂ ಬಿಡುವುದಿಲ್ಲ. ಎಷ್ಟೋ ಬಾರಿ ಶ್ರೀಮಂತಿಕೆಯು ತನ್ನ ಆರ್ಥಿಕ ಶಕ್ತಿಯ ಆರ್ಭಟದಿಂದ ಹಲವು ನೋವುಗಳನ್ನು ಉಪಶಮನ ಮಾಡಿಕೊಂಡು ಬಿಡುತ್ತದೇನೋ ಎಂದು ನನಗನ್ನಿಸುತ್ತದೆ. ಅತ್ಯಾಧುನಿಕ ವೈದ್ಯೋಪಚಾರ ದಕ್ಕುವುದು ಯಾವತ್ತೂ ಶ್ರೀಮಂತರಿಗೇ ಆಗಿರುತ್ತದೆ. ಹಣವಿಲ್ಲವೆಂಬ ಕಾರಣಕ್ಕೇ ಎಷ್ಟೋ ಬಡವರು ಅನಾರೋಗ್ಯದಿಂದ ಸಾಯುತ್ತಾರೆ.

ನೋವಿಗೂ ದೈವಕ್ಕೂ ವಿಶೇಷ ಸಂಬಂಧವಿದೆ. ಮನುಷ್ಯನಿಗೆ ನೋವಿರದಿದ್ದರೆ ದೈವದ ಉದಯವೇ ಆಗುತ್ತಿರಲಿಲ್ಲ. ಮಹಾ ನಾಸ್ತಿಕರಾಗಿದ್ದವರು ನೋವಿನ ತೀಕ್ಷ್ಣ ಗಳಿಗೆಯಲ್ಲಿ ಆಸ್ತಿಕರಾಗಿ ಬದಲಾಗಿರುವುದನ್ನು ನಾವು ಕಾಣುತ್ತೇವೆ. ನೋವಿನ ತೀಕ್ಷ್ಣತೆಯನ್ನೂ ಎದುರಿಸಿ ನಾಸ್ತಿಕತೆಯನ್ನು ಕಾಪಾಡಿಕೊಳ್ಳುವ ಮಾನಸಿಕ ಸ್ಥೈರ್ಯ ಬಹುತೇಕರಿಗೆ ಇರುವುದಿಲ್ಲ.

ಮನುಷ್ಯರಾದವರು - ಅಪ್ಪ, ಅಮ್ಮ, ಗೆಳೆಯ, ವೈದ್ಯ - ಯಾರೂ ನಮ್ಮ ನೋವನ್ನು ಪರಿಹಾರ ಮಾಡಲು ಸಾಧ್ಯವೇ ಇಲ್ಲ ಎಂದು ಅರ್ಥವಾದಾಗ, ಬದುಕುಳಿಯಲು ಗಟ್ಟಿಯಾಗಿ ಹಿಡಿದುಕೊಳ್ಳಲು ಏನಾದರೂ ಬೇಕಾಗುತ್ತದೆ. ಅಂತಹ ಸೃಷ್ಟಿಯೇ ಭಗವಂತನಾಗಿರಬೇಕು. ಸುಲಭವಾಗಿ ಯಾವುದೋ ದೇವರನ್ನು ಸೃಷ್ಟಿ ಮಾಡಿಕೊಂಡು, ಅದನ್ನು ಸತ್ಯವೆಂದು ಒಪ್ಪಿಕೊಂಡು, ಹಲವು ತಲ್ಲಣಗಳಿಗೆ ಸಮಾಧಾನ ಮಾಡಿಕೊಳ್ಳುವುದು ಯಾರಿಗೆ ಬೇಡ? ಆದರೆ ಇಂದು ಆ ಭಗವಂತನ ಹೆಸರಿನಲ್ಲಿ ಬೇರೆಯೇ ಭ್ರಷ್ಟ ಸಂಗತಿಗಳು ನಡೆಯುತ್ತಿವೆ ಎನ್ನುವುದು ವಿಷಾದದ ವಿಷಯ. ಅದು ಬೇರೆಯೇ ಸಂಗತಿ.

‘ನಿತ್ಯ ಸಾಯುವವರಿಗೆ ಅಳುವವರು ಯಾರು?’ ಎನ್ನುವ ಪ್ರಸಿದ್ಧ ಗಾದೆ ಮಾತಿದೆ. ಇದು ಸತ್ಯದ ಮಾತೇ ಆದರೂ ಅತ್ಯಂತ ಕ್ರೌರ್ಯದ ನುಡಿಯಾಗಿದೆ. ಆರೋಗ್ಯದಿಂದ ಪುಟಿಪುಟಿಯುತ್ತಿರುವ ವಯಸ್ಕ ಮೊಮ್ಮಗ ಊರಿಗೆ ಬಂದಾಗ ಹಾಸಿಗೆಯಲ್ಲಿ ಬಹುಕಾಲದ ಅನಾರೋಗ್ಯದಿಂದ ಮಲಗಿದ ಅಜ್ಜಿಯನ್ನು ಕಂಡು ‘ಹೆಂಗಿದಿ ಅಜ್ಜಿ?’ ಎಂದು ಒಮ್ಮೆ ಪ್ರಶ್ನೆ ಕೇಳಿ ಆಕೆ ಉತ್ತರಿಸುವುದಕ್ಕೂ ಮುಂಚೆಯೇ ತನ್ನ ಕೋಣೆಗೆ ಓಡಿ ಹೋಗುತ್ತಾನಲ್ಲ, ಆಗ ಅದರ ಕ್ರೌರ್ಯ ತಿಳಿಯುತ್ತದೆ. ನೋವು ಹಂಚಿಕೊಂಡಷ್ಟೂ ಅದು ಕಡಿಮೆಯಾಗುತ್ತದೆ ಎಂದು ಹೇಳುತ್ತಾರೆ. ಆದರೆ ಹಂಚಿಕೊಳ್ಳಲು ತಕ್ಕ ಕಿವಿಗಳು ಸುಲಭವಾಗಿ ಸಿಕ್ಕುವುದಿಲ್ಲ.

ಸಿಕ್ಕರೂ ಅವರು ಒಮ್ಮೆ ಕೇಳಿಯಾರೇ ಹೊರತು ಮತ್ತೆ ಮತ್ತೆ ಕೇಳಲು ಅವರಿಗೂ ಸಾಧ್ಯವಿಲ್ಲ. ಆರೋಗ್ಯವು ಯಾವತ್ತೂ ಅನಾರೋಗ್ಯವನ್ನು ನಿಕೃಷ್ಟವಾಗಿಯೇ ಕಾಣುತ್ತದೆ. ಆದ್ದರಿಂದಲೇ ಬಹುತೇಕರು ಏಕಾಂಗಿಯಾಗಿ ಕೊರಗುವುದು. ಹಣವುಳ್ಳ ಸ್ಥಿತಿವಂತರು ತಮ್ಮ ನೋವನ್ನು ಹೇಳಿಕೊಳ್ಳಲು ಅಪರಿಚಿತ ಆಪ್ತಸಮಾಲೋಚಕರಿಗೆ ಹಣ ಕೊಡುತ್ತಾರೆ. ಒಂದು ತಾಸು ನೋವನ್ನು ಕೇಳಿಸಿಕೊಳ್ಳುವುದಕ್ಕೆ ಏನಿಲ್ಲವೆಂದರೂ ಎರಡು ಸಾವಿರ ತೆಗೆದುಕೊಳ್ಳುವ ಹಲವು ಆಪ್ತಸಮಾಲೋಚಕರು ಇಂದು ಇದ್ದಾರೆ. ಅವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೆ ಆಪ್ತಸಮಾಲೋಚನೆ ಮಾನಸಿಕ ನೋವಿಗೆ ಸಾಕಷ್ಟು ಉಪಶಮನ ನೀಡುತ್ತದೆಯಾದ್ದರಿಂದ ಈ ವೆಚ್ಚವನ್ನು ನಮ್ಮ ದೈಹಿಕ ಇಲಾಜಿಗೆ ನೀಡಿದ ಶುಲ್ಕದಂತೆಯೇ ಎಂದು ಭಾವಿಸಬೇಕಿದೆ.

ವಿಜ್ಞಾನ ಮತ್ತು ವೈದ್ಯಕೀಯ ಪ್ರಗತಿಯಿಂದಾಗಿ ಹಲವು ನೋವುಗಳನ್ನು ಇಂದು ಉಪಶಮನ ಮಾಡುವ ಶಕ್ತಿಯನ್ನು ಮನುಷ್ಯ ಕಂಡುಕೊಂಡಿದ್ದಾನೆ. ಆದರೆ ಎಷ್ಟೋ ನೋವುಗಳಿಗೆ ಯಾವುದೇ ಪರಿಹಾರವಿಲ್ಲ. ಅನುಭವಿಸುವುದು ಮಾತ್ರ ಅದಕ್ಕಿರುವ ಏಕೈಕ ಮಾರ್ಗ. ನೋವು ನುಂಗುವುದನ್ನು ಕಲಿಯಬೇಕು ಎಂದು ಹಿರಿಯರು ಹೇಳುವುದು ಆ ಕಾರಣಕ್ಕಾಗಿಯೇ ಇರಬೇಕು. ಆದರೆ ಮಾತ್ರೆ ನುಂಗಿದಷ್ಟು ಸುಲಭವಾಗಿ ನೋವು ನುಂಗಲು ಆಗುವುದಿಲ್ಲ. ಅಥವಾ ಸಾಲವನ್ನು ಹಂಚಿಕೊಂಡಂತೆ ಮತ್ತೊಬ್ಬ ಆತ್ಮೀಯರಿಗೆ ನೋವನ್ನು ವರ್ಗಾಯಿಸುವುದೂ ಸಾಧ್ಯವಿಲ್ಲ. ಅದೇನಿದ್ದರೂ ನಮ್ಮದು ಮಾತ್ರ! ಎದುರಿಸಬೇಕು ಇಲ್ಲವೇ ಶರಣಾಗಬೇಕು.

ಆದರೆ ಇಂದು ವೈದ್ಯಕೀಯ ರಂಗದ ಪ್ರಗತಿಯಿಂದಾಗಿ ಅಂಗಾಂಗ ದಾನ ಮಾಡುವ ಸಂಗತಿಗಳು ನಡೆಯುತ್ತಿವೆ. ಇದೊಂದು ರೀತಿಯಲ್ಲಿ ನೋವು ಹಂಚಿಕೊಂಡಂತೆಯೇ ಆಗಿದೆ. ಗಂಡನಿಗೆ ಹೆಂಡತಿಯೋ, ತಮ್ಮನಿಗೆ ಅಕ್ಕನೋ ಕಿಡ್ನಿ ದಾನ ಮಾಡುವ ಪ್ರಸಂಗ ಕೇಳಿದಾಗಲೆಲ್ಲಾ ನನಗೆ ನೋವು ಹಂಚಿಕೊಳ್ಳುತ್ತಿದ್ದಾರೆ ಎಂದೇ ಅನ್ನಿಸುತ್ತದೆ. ಹಣಕ್ಕಾಗಿ ಜೀವಂತ ವ್ಯಕ್ತಿ ಅಂಗಾಂಗ ಮಾರಿಕೊಳ್ಳುವುದು ಬಡತನದ ಕ್ರೌರ್ಯವನ್ನು ತೋರಿದರೆ, ತಮ್ಮ ಆತ್ಮೀಯರ ಒಳತಿಗಾಗಿ ಆರೋಗ್ಯವಂತರು ತಮ್ಮ ಒಂದು ಹೆಚ್ಚಿನ ಅಂಗವನ್ನು ದಾನ ಮಾಡುವ ಪ್ರಸಂಗವು ದೈವಸ್ವರೂಪದ್ದಾಗಿ ಕಾಣುತ್ತದೆ.

ಆರೋಗ್ಯವು ಅಹಂಕಾರವನ್ನು ಹೆಚ್ಚಿಸುತ್ತಲೇ ಇರುತ್ತದೆ. ಅದು ಶಾಶ್ವತ ಎನ್ನುವ ಹುಸಿಯನ್ನು ನಮ್ಮಲ್ಲಿ ತುಂಬುತ್ತಿರುತ್ತದೆ. ಆದರೆ ಒಂದು ದಿನ ಚಕ್ಕನೆ ಋತುಮಾನ ಬದಲಾದಂತೆ, ಅನಾರೋಗ್ಯ ಬಂದು ಒಕ್ಕರಿಸುತ್ತದೆ. ನಿನ್ನೆಯವರೆಗೆ ಆರೋಗ್ಯವಾಗಿದ್ದವರು, ಒಂದೆರಡು ದಿನ ಕಳೆಯುವುದರಲ್ಲಿ ನಿತ್ಯ ಹಲವು ಮಾತ್ರೆಗಳನ್ನು ನುಂಗುವವರಾಗಿ ಬಿಡುತ್ತೇವೆ. ನೋವಿಗಿಂತಲೂ ಈ ಬದಲಾವಣೆಯನ್ನು ಜೀರ್ಣಿಸಿಕೊಳ್ಳುವುದಕ್ಕೆ ಹಲವು ಸಮಯ ಬೇಕಾಗುತ್ತದೆ.

ಚಿಕ್ಕಂದಿನಲ್ಲಿ ನಾವು ಜ್ವರ ಬಂದು ನರಳುವಾಗ ನಮ್ಮಮ್ಮ ಹೇಳುತ್ತಿದ್ದ ಒಂದು ಮಾತು ನೆನಪಿಗೆ ಬರುತ್ತದೆ. ‘ದೇವರು ಮನುಷ್ಯರನ್ನ ಆಗಾಗ ಕಾಸಿ ಬಡಿದು ಸರಿಯಾದ ಆಕಾರಕ್ಕೆ ತರ್ತಾನೆ. ಜ್ವರ ಬಂತು ಅಂತ ದುಃಖ ಪಡಬಾರದು’ ಎನ್ನುತ್ತಿದ್ದಳು. ಜ್ವರದಂತಹ ಪುಟ್ಟ ಸಂಗತಿಗೆ ಅವಳ ಮಾತನ್ನು ಒಪ್ಪಿಕೊಳ್ಳೋಣ. ಆದರೆ ಸಾವನ್ನೇ ತಂದು ಬಿಡುವಂತಹ ಮಾರಕ ರೋಗ ಬಂದರೆ ಏನು ಹೇಳೋಣ? ‘ದೇವರು ಚಿತೆಗೆ ಒಗೆಯುತ್ತಿದ್ದಾನೆ’ ಎಂದು ಸಮಾಧಾನ ಮಾಡಿಕೊಳ್ಳುವ ಶಕ್ತಿ ಎಷ್ಟು ಜನರಿಗಿದೆ?

ಸರಿಯಾದ ಆಹಾರ, ಆರೈಕೆ, ವ್ಯಾಯಾಮ ಮತ್ತು ಅದೃಷ್ಟದಿಂದ ನಾವು ಹೇಗೋ ನೋವನ್ನು ತಪ್ಪಿಸಿಕೊಳ್ಳಬಹುದು. ಆದರೆ ನಮ್ಮ ಆತ್ಮೀಯರು ನೋವಿಗೆ ಸಿಕ್ಕಿದರೂ ಅದು ನಮ್ಮ ನೋವಾಗುತ್ತದೆಯಲ್ಲವೆ? ಮಾನಸಿಕ ಅಸ್ವಸ್ಥ ಮಕ್ಕಳನ್ನು ಪಡೆದ ತಂದೆ-ತಾಯಿಯರು ಆರೋಗ್ಯವಂತರಾಗಿದ್ದರೂ ನಿತ್ಯ ನವೆಯುತ್ತಾರೆ.

ನೋವು ಅನುಭವಿಸದ ಜೀವವೇ ಇಲ್ಲ. ನೋವಿಲ್ಲದ ಜಗತ್ತಿಲ್ಲ. ನೋವಿದೆಯಾದ ಕಾರಣದಿಂದಲೇ ನಲಿವಿಗೆ ಗೌರವ ಮತ್ತು ಘನತೆ. ಆದರೆ ಈ ಭುವಿಯಲ್ಲಿ ನೋವು ಅಥವಾ ನಲಿವು - ಯಾವುದೂ ಶಾಶ್ವತವಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.