ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡದ ಕೆಲಸ: ನಾನು non ಕನ್ನಡಿಗ- ಸಿಲಿಕಾನ್‌ ಸಿಟಿಯಲ್ಲಿ ಕನ್ನಡದ ಪಾಠ!

Last Updated 30 ಅಕ್ಟೋಬರ್ 2021, 19:30 IST
ಅಕ್ಷರ ಗಾತ್ರ

ಕನ್ನಡದ ಕಂಪು ಪಸರಿಸಿ, ಕನ್ನಡ ಕಲಿಸುವ, ಬೆಳೆಸುವ ಅಭಿಯಾನ ಇದು.

ಸಿಲಿಕಾನ್‌ ಸಿಟಿಯಲ್ಲಿ ಕನ್ನಡೇತರರಿಗೆ ಸ್ಥಳೀಯ ಭಾಷೆಯ ಸೊಗಡು, ಕಲೆ, ಸಂಸ್ಕೃತಿ ಪರಿಚಯಿಸಿ ಕಲಿಯುವಂತೆ ಪ್ರೇರಣೆ ನೀಡುವ ವಾತಾವರಣ ಸೃಷ್ಟಿಸುವ ಪ್ರಯತ್ನವೊಂದು ಸದ್ದಿಲ್ಲದೆ ಸಾಗಿದೆ.

ವಿನಯ ಶಿಂಧೆ
ವಿನಯ ಶಿಂಧೆ

ವೈವಿಧ್ಯ ಮತ್ತು ಬಹುಭಾಷಾ ಸಂಸ್ಕೃತಿ ಹೊಂದಿರುವ ಬೆಂಗಳೂರಿನ ಮಾಹಿತಿ ತಂತ್ರಜ್ಞಾನದ ಕಾರಿಡಾರ್‌ ವೈಟ್‌ಫೀಲ್ಡ್‌ನಲ್ಲಿ ಇಂತಹ ಕೈಂಕರ್ಯವನ್ನು ‘ವಿಮೋವೇ’ ಪ್ರತಿಷ್ಠಾನ ಕೈಗೊಂಡಿದೆ.

‘ವೈಟ್‌ಫೀಲ್ಡ್‌ ನಾನು ಕನ್ನಡಿಗ‌, ನನ್ನ ಬೆಂಗಳೂರು’ ಹಾಗೂ ‘ಕನ್ನಡ ಕಲಿಯೋಣ’ ಹೆಸರಿನಲ್ಲಿ ‘ವಿಮೋವೇ’ ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ನೂರಾರು ಸಂಸ್ಥೆಗಳು, ಸಮುದಾಯಗಳು ಮತ್ತು ಮಾಹಿತಿ ತಂತ್ರಜ್ಞಾನ ಕಂಪನಿಗಳಲ್ಲಿನ ಕನ್ನಡೇತರರನ್ನು ಸಂಪರ್ಕಿಸಿ ಕನ್ನಡ ಭಾಷೆ ಕಲಿಯುವಂತೆ ಪ್ರೇರಣೆ ನೀಡಲಾಗುತ್ತಿದೆ.

2010ರಿಂದ ಹೊರ ರಾಜ್ಯದವರನ್ನು ಸೇರಿಸಿಕೊಂಡು ರಾಜ್ಯೋತ್ಸವ ಆಚರಿಸುವ ಮೂಲಕ ಪ್ರತಿಷ್ಠಾನವು ಕನ್ನಡ ಸೇವೆಯ ಕೈಂಕರ್ಯ ಆರಂಭಿಸಿತು. ಈ ಮೂಲಕ ಸದಾ ಕಾಲ ‘ಕನ್ನಡದ ಪರಿಸರ’ ಸೃಷ್ಟಿಸುವ ಕಾರ್ಯದಲ್ಲಿ ತೊಡಗಿದೆ. ಹೊರರಾಜ್ಯದವರಿಗೆ ಕನ್ನಡದ ಹಾಡುಗಳು, ಬಸವಣ್ಣನ ವಚನ, ಕುವೆಂಪು ಅವರ ಸಂದೇಶಗಳನ್ನು ಪರಿಚಯಿಸುವ ಮೂಲಕ ಭಾಷೆಯತ್ತ ಆಕರ್ಷಿಸುವ ವಿಷಯಗಳನ್ನು ತಿಳಿಸುವ ಯತ್ನ ನಡೆಸಿದೆ.

‘NON–ಕನ್ನಡಿಗನಿಂದ ನಾನು ಕನ್ನಡಿಗ' ಅಥವಾ ‘ಕನ್ನಡ ಗೊತ್ತಿಲ್ಲದಿಂದ... ಕನ್ನಡ ಬರುತ್ತೆ’ ಎನ್ನುವ ವಾತಾವರಣ ಸೃಷ್ಟಿಯಾಗಬೇಕಾಗಿದೆ. ಈ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಕನ್ನಡವು ಸರಳ ಮತ್ತು ಶ್ರೀಮಂತ ಭಾಷೆಯಾಗಿದೆ. ಆದರೆ, ಮಾಹಿತಿ ತಂತ್ರಜ್ಞಾನದ ರಾಜಧಾನಿಯಾಗಿರುವ ಬೆಂಗಳೂರಿನಲ್ಲೇ ಈ ಭಾಷೆ ಆಕರ್ಷಣೆ ಕಳೆದುಕೊಳ್ಳುತ್ತಿದೆ. ಇಂತಹ ಸನ್ನಿವೇಶದಲ್ಲಿ ಇತರ ರಾಜ್ಯದವರಿಗೂ ನಮ್ಮ ಭಾಷೆ ಪರಿಚಯಿಸುವುದು ಇಂದಿನ ತುರ್ತು ಅಗತ್ಯ’ ಎಂದು ‘ವಿಮೋವೇ’ ಪ್ರತಿಷ್ಠಾನದ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನಯ ಶಿಂಧೆ ಪ್ರತಿಪಾದಿಸುತ್ತಾರೆ.

‘ಬೇರೆ ಭಾಷೆಯವರು ಸಹ ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಕನ್ನಡ ನಾಡು, ನುಡಿ ಬಗ್ಗೆ ಭಾವನಾತ್ಮಕ ಸಂಬಂಧ ಬೆಳೆಸಿಕೊಂಡ ಕನ್ನಡೇತರರು ಸ್ಫೂರ್ತಿಯಾಗಿದ್ದಾರೆ. ನಿವೃತ್ತ ಐಎಎಸ್‌ ಅಧಿಕಾರಿ ಚಿರಂಜೀವಿ ಸಿಂಗ್‌ ಇದಕ್ಕೆ ಅತ್ಯುತ್ತಮ ಉದಾಹರಣೆ. ಇಂತಹ ಸಾಧಕರನ್ನು ‘ವಿಮೋವೇ’ ಗೌರವಿಸಿದೆ. ಈ ರೀತಿಯ ಪರಸ್ಪರ ಸಂಬಂಧ ಬೆಸೆಯುವ ಕಾರ್ಯಗಳು ನಡೆಯಬೇಕಾಗಿದೆ’ ಎನ್ನುತ್ತಾರೆ ಶಿಂಧೆ.

‘ಹೊರರಾಜ್ಯದವರು ಕನ್ನಡ ಕಲಿಯುವುದಿಲ್ಲ ಎಂದು ದೂರುವ ಬದಲು ಕನ್ನಡ ಕಲಿಯಲು ಪ್ರೇರಣೆ ನೀಡುವ ಕಾರ್ಯಗಳು ಹೆಚ್ಚು ನಡೆಯಬೇಕಾಗಿದೆ. ವೈಟ್‌ಫೀಲ್ಡ್‌ನಲ್ಲೇ ಸುಮಾರು ಹತ್ತು ಲಕ್ಷ ಕನ್ನಡೇತರರು ಇದ್ದಾರೆ. ಇವರಿಗೆ ಭಾಷೆ ಮತ್ತು ಸಂಸ್ಕೃತಿ ಪರಿಚಯಿಸುವ ಜತೆಗೆ, ಕಲಿಯುವಂತೆ ಪ್ರೇರಣೆ ನೀಡುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಈ ಬಾರಿ ನಮ್ಮ ಕಲೆ, ಸಂಗೀತ, ಇತಿಹಾಸ, ಆಹಾರ, ಪ್ರವಾಸ, ಸಂಸ್ಕೃತಿ, ಬೆಂಗಳೂರು ನಗರ ಮುಂತಾದ ವಿಷಯಗಳ ಬಗ್ಗೆ ಕನ್ನಡೇತರರು ಮಾತನಾಡಿರುವುದನ್ನು ದಾಖಲಿಸಿಕೊಂಡಿದ್ದೇವೆ. 2–3 ನಿಮಿಷಗಳ ಕಿರು ಅವಧಿಯ ವಿಡಿಯೊಗಳನ್ನು ನವೆಂಬರ್‌ 1ರಂದು ಬೆಳಿಗ್ಗೆ 11ಕ್ಕೆ ವಿಮೋವೇ ಪ್ರತಿಷ್ಠಾನದ ಎಲ್ಲ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡುವ ಯೋಜನೆ ರೂಪಿಸಲಾಗಿದೆ. ಈ ಕಾರ್ಯಕ್ರಮದ ಮೂಲಕ ಕನ್ನಡೇತರರಿಗೆ ನಮ್ಮ ಭಾಷೆ, ಸಂಸ್ಕೃತಿ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ’ ಎಂದು ಶಿಂಧೆ ಹೇಳುತ್ತಾರೆ.

‘ಬೆಂಗಳೂರು ನಮ್ಮದು, ಕರ್ನಾಟಕ ನಮ್ಮದು ಎನ್ನುವ ಕಲ್ಪನೆ ಹೊರರಾಜ್ಯದವರಲ್ಲಿ ಮೂಡಿಸುವ ಪ್ರಯತ್ನಕ್ಕೆ ಸ್ಪಂದನೆಯೂ ಅತ್ಯುತ್ತಮವಾಗಿದೆ. ನಮ್ಮದು ಎನ್ನುವ ಭಾವನೆ ಮೂಡಿದಾಗ ಸಹಜವಾಗಿಯೇ, ಯಾವುದೇ ಒತ್ತಡ ಇಲ್ಲದೆ ಇಷ್ಟಪಟ್ಟು ಭಾಷೆ ಕಲಿಯುತ್ತಾರೆ. ಇಷ್ಟಪಟ್ಟಿದ್ದು ಮಾತ್ರ ಹೃದಯಕ್ಕೆ ತಟ್ಟುತ್ತದೆ’ ಎನ್ನುತ್ತಾರೆ ವಿನಯ ಶಿಂಧೆ.

ಮೂಲತಃ ಎಂಜಿನಿಯರ್‌ ಆಗಿರುವ ವಿನಯ ಶಿಂಧೆ ಅವರು ಹತ್ತು ವರ್ಷಗಳ ಕಾಲ ಲಂಡನ್‌ನಲ್ಲಿ ಕಾರ್ಯನಿರ್ವಹಿಸಿ ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ‘ವಿಮೋವೇ’ ಪ್ರತಿಷ್ಠಾನ ಹಾಗೂ ಕಾರ್ಪೋರೇಟ್‌ ಕಂಪನಿಗಳ ಸಹಭಾಗಿತ್ವದಲ್ಲಿ
25 ಸರ್ಕಾರಿ ಶಾಲೆಗಳನ್ನು ದತ್ತುಪಡೆದು ಸಮಗ್ರವಾಗಿ ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT