ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಕ್ಷಗಾನದ ಅಭಯ ಚೈತನ್ಯ

Last Updated 9 ಜನವರಿ 2020, 19:30 IST
ಅಕ್ಷರ ಗಾತ್ರ

ನಮ್ಮ ಕಾಲದ ನಾಡಿನ ದೇಶದ ಅಸಾಮಾನ್ಯ ಕಲಾಚೈತನ್ಯವೊಂದು ಗತಿಸಿದೆ. ಒಪ್ಪಲು ಕಷ್ಟದ ಸತ್ಯ ಇದು. ಯಕ್ಷಗಾನದ ವಿವಿಧ ರಂಗಗಳಲ್ಲಿ, ಅಂಗಗಳಲ್ಲಿ ಪ್ರವೇಶ, ಪ್ರಭುತ್ವ, ಕಾಯಕ ಹೀಗೆ ತ್ರಿವಿಧವಾಗಿ ಈಜಾಡಿದ ಹೊಸ್ತೋಟದ ಮಂಜುನಾಥ ಭಾಗವತರು (80ವ.) ಅಸಾಧಾರಣ ಸಾಧಕ. ದೇಶದ ಪಾರಂಪರಿಕ ರಂಗಭೂಮಿಯ ಶ್ರೇಷ್ಠ ಸಾರ್ವಭೌಮ ವಿದ್ವಾಂಸರಲ್ಲೊಬ್ಬರು.

ಶಿರಸಿ ಬಳಿಯ ಹೊಸ್ತೋಟದಲ್ಲಿ ಜನಿಸಿದ ಮಂಜುನಾಥರಿಗೆ ಯಕ್ಷಗಾನವು ಬಾಳಿನುದ್ದಕ್ಕೂ ಸಂಗಾತಿ, ವ್ರತ, ಛಲ ಮತ್ತು ಅಧ್ಯಾತ್ಮದಂತಹ ಜೀವದ ಜೀವ. ವೆಂಕಪ್ಪ ಭಾಗವತರು ನಜವರಶಿವರಾಮ ಹೆಗ್ಡೆ, ಮಹಾಬಲ ಹೆಗ್ಡೆ ಅವರ ಶಿಷ್ಯರಾಗಿ ಹಲವರ ಒಡನಾಡಿಯಾಗಿ ಕಲಾಶಿಕ್ಷಕ, ಅರ್ಥಧಾರಿ, ವೇಷಧಾರಿ, ಭಾಗವತ, ವಾದಕ ಮತ್ತು ಕಲಾ ಚಿಂತಕರಾಗಿ ವಿಕ್ರಮಗಾಥೆ ಜೀವಿಸಿದವರು. ಅವರು ಪ‍್ರವರ್ತಿಸಿದ ಒಂದೊಂದು ಕ್ಷೇತ್ರದಲ್ಲೂ ಹೊಸ ಬೆಳೆ ಬೆಳೆಸಿದ, ಹೊಸತೋಟದ ಸಮೃದ್ಧ ಕೃಷಿಕ. ಕೆಲವು ಕಾಲ ರಾಮಕೃಷ್ಣ ಆಶ್ರಮದಲ್ಲಿ ವ್ರತಿಯಾಗಿದ್ದು, ಅಭಯಚೈತನ್ಯ ನಾಯಕರಾಗಿ ರಾಮಕೃಷ್ಣರ ಗಟ್ಟಿ ಪ್ರಭಾವಕ್ಕೊಳಗಾಗಿ ಬಾಳಿನುದ್ದಕ್ಕೂ ಹಾಗೆ ಬದುಕಿದ ಯಕ್ಷಗಾನದ ಯತಿ, ಸನ್ಯಾಸಿ. ‘ಶ್ರೀರಾಮಕೃಷ್ಣ ಚರಿತೆ’ ಅವರು ಸೃಜನಾತ್ಮಕವಾಗಿ ನೀಡಿದ ಮಹಾಕಾವ್ಯ.

ಮುನ್ನೂರು ಯಕ್ಷಗಾನ ಪ್ರಸಂಗ: ನಾಲ್ಕೈದು ಯಕ್ಷಗಾನ ಸಂಶೋಧನಾ ಕೃತಿಗಳು, ಅಂಧ ಮಕ್ಕಳ ಯಕ್ಷಗಾನ ಪ್ರದರ್ಶನಗಳ ತರಬೇತಿ ತಯಾರಿ, ಐನೂರು ಯಕ್ಷಗಾನ ಮಟ್ಟುಗಳ ಗುರುತಿಸುವಿಕೆ, ವಿನೂತನ ಶಿಕ್ಷಣ ಕ್ರಮ ಎಲ್ಲವೂ ಅಸಾಧಾರಣವೆನ್ನುವ ಆಚಾರ್‍ಯ ಕಾರ್ಯಗಳು. ಇತ್ತೀಚೆಗೆ ಪ್ರಕಟಗೊಂಡ ಅವರ ‘ಯಕ್ಷಗಾನ ಶಿಕ್ಷಣ –ಲಕ್ಷಣ’ (ಪ್ರಕಾಶಕರು ಯಕ್ಷಮಿತ್ರ ಬೊರೊಂಬೋ) ಅವರಿಗೆ ಸೂಕ್ತ ಗೌರವ ಸನ್ಮಾನ ನಮನವೆನಿಸಿತು. ‘ಯಕ್ಷ ಋಷಿ, ಷಷ್ಟ್ಯಬ್ಧ, ಬಹುಮುಖ, ಮೂರು ಅಭಿನಂದಾನಾಗ್ರಂಥಗಳು, ಕಿರು ಪುಸ್ತಕ ಪ್ರಕಟಣೆ– ಎಲ್ಲದರಲ್ಲೂ ಅವರದ್ದು ದಾಖಲೆ. ಆದರೆ, ನಿಸ್ಪ್ರಹ ಸಮರ್ಪಿತ.

ತನಗಿತ್ತ ಸಂವಾಮ ನಿಧಿಯನ್ನು ಸ್ವರ್ಣಾವಲ್ಲಿ ಮಠದಲ್ಲಿ ಯಕ್ಷ ಶಾಲ್ಮಲ ಟ್ರಸ್ಟ್ ಆಗಿ ನೀಡಿ, ತಾನೇನು ಪಡೆಯದ ಜೋಗಿಯೂ ಆಗಿ ಉಳಿದರು. ತನ್ನ ಬಗ್ಗೆ ಯೋಚಿಸದೆ ನಡೆಯಿತು ಅವರ ಜೀವನ. ಕೊನೆಗಾಲಕ್ಕೆ ಅಂಕೋಲಾದ ಬಳಿ ಕುಟೀರವೊಂದರಲ್ಲಿ ಮೌನವಾದರು. ಆಗಲೂ ತನ್ನ ನಿತ್ಯದ ನಿರ್ವಹಣೆಗೆ ನೆರವಾದ ಮನೆಗೆ ನಿಗದಿತ ಮೊತ್ತ ನೀಡುತ್ತಿದ್ದರು.

‘ಪವಾಡದಲ್ಲಿ ವಿಸ್ಮಯ’ ಅವರ ಆತ್ಮಕತೆ. ಆ ಹೆಸರೇ ಅವರ ದೃಷ್ಟಿಯವ್ಯಾಖ್ಯೆ. ಯಕ್ಷಗಾನದ ಧ್ರುವತಾರೆ ಶಿವರಾಮ ಹೆಗ್ಗಡೆ ಅವರ ಕುರಿತಾದ ವಿಶಿಷ್ಟ ಚಿತ್ರಣ, ಶಬ್ದಗಳ ವಿಡಿಯೊ ಎನ್ನಬಹುದಾದ ಕಥನ.

ಇಂತಹವರೊಬ್ಬರು ನಮ್ಮ ನಡುವೆ ಇದ್ದರು. ನಾವು ಅವರ ಒಡನಾಡಿಯಾಗಿದ್ದೆವು ಎಂಬುದು ಬಾಳಿನ ಬುತ್ತಿ. ನಿತ್ಯನಲಿವ ಹೊಸತೋಟದ, ಮಂಜುಳನಾದದ ಮಂಜುನಾಥ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT