ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ: ‘ಅಪರಿಚಿತ’ ಜಗತ್ತಿನ ಭಾವಲೋಕ

Last Updated 9 ಜನವರಿ 2022, 2:52 IST
ಅಕ್ಷರ ಗಾತ್ರ

ಅಪರಿಚಿತ
ಮೂಲ: ಆಲ್ಬರ್ಟ್ ಕಮೂ
ಕನ್ನಡಕ್ಕೆ: ಪ್ರಕಾಶ್ ನಾಯಕ್
ಪ್ರ: ಮಣಿಪಾಲ್ ಯೂನಿವರ್ಸಲ್ ಪ್ರೆಸ್
ಸಂ: 820-2922954

‘ಸ್ಟ್ರೇಂಜರ್’, ‘ಔಟ್‍ಸೈಡರ್’ ಎಂಬ ಎರಡು ಹೆಸರುಗಳಲ್ಲಿ ಇಂಗ್ಲಿಷಿಗೆ ಅನುವಾದಗೊಂಡಿರುವ ಫ್ರೆಂಚ್ ಲೇಖಕ ಆಲ್ಬರ್ಟ್ ಕಮೂನ ಕಾದಂಬರಿ ಈಗ ‘ಅಪರಿಚಿತ’ ಎಂಬ ಹೆಸರಿನಲ್ಲಿ ಕನ್ನಡಕ್ಕೆ ಬಂದಿದೆ. ಪ್ರಕಾಶ್ ನಾಯಕ್ ಅನುವಾದಿಸಿರುವ ಈ ಕೃತಿ ಒಂದು ಬೀಚಿನಲ್ಲಿ ಆತ್ಮರಕ್ಷಣೆಗಾಗಿ ಅರಬನೊಬ್ಬನನ್ನು ಕೊಲ್ಲುವ ಪ್ಯಾಟ್ರಿಸ್ ಮರ್ಸೋನ ಕತೆ ಹೇಳುತ್ತದೆ.

ಮರ್ಸೋಗೆ ವಾಸ್ತವ ಜಗತ್ತಿನಲ್ಲಿ ‘ಅಸ್ತಿತ್ವ’ವಿಲ್ಲ; ಅವನು ಸುಮ್ಮನೆ ತನ್ನ ಮನಸ್ಸಿನ ಆವೇಗಕ್ಕೆ ತಕ್ಕಂತೆ ಪ್ರತಿಕ್ರಿಯಿಸುತ್ತಾನಷ್ಟೆ. ಅವನು ಕೊಲೆಮಾಡುವುದು ಒಂದು ಬೀಚು, ಒಬ್ಬ ಅರಬ, ಬಿಸಿಲು, ಕಿಸೆಯಲ್ಲಿರುವ ಒಂದು ರಿವಾಲ್ವರ್ - ಇಂಥ ಸನ್ನಿವೇಶಗಳ ಮೊತ್ತದಿಂದ. ಕೋರ್ಟಿನಲ್ಲಿ ಪಾಟೀ ಸವಾಲಿನ ಬಗೆಗಾಗಲೀ, ತನ್ನನ್ನು ಕುರಿತು ರೂಪಿಸಲಾಗಿರುವ ಚಿತ್ರದ ಬಗೆಗಾಗಲೀ, ಅಷ್ಟೇಕೆ, ತೀರ್ಪಿನ ಬಗೆಗಾಗಲೀ ಕಿಂಚಿತ್ತೂ ತಲೆಕೆಡಿಸಿಕೊಳ್ಳದೆ ತನ್ನದೇ ಹಿರಂಗಿನಲ್ಲಿ ಭಾಗವಹಿಸುವ ಅವನು ಅಪರಾಧಿ ತಾನಲ್ಲವೇ ಅಲ್ಲ ಎನ್ನುವಂತೆ ಒಂದೇ ಒಂದು ಮಾತಿಲ್ಲದೆ ಗಲ್ಲಿಗೇರುವವನು.

ಅರ್ಥರಹಿತ ಸಾಮಾಜಿಕ ವಿಧಿಗಳಿಗೆ ಸೊಪ್ಪುಹಾಕದೆ, ತನ್ನ ತಾಯಿಯ ಸಾವಿಗೆ ಶೋಕಿಸದೆ, ಅಪರಾಧವೊಂದಕ್ಕೆ ಸಂಬಂಧಪಟ್ಟವನಾಗಿದ್ದೂ ತಾನೊಬ್ಬ ಮುಗ್ಧ ಅಥವಾ ಅಪರಾಧಿ ಎಂದು ಒಪ್ಪಿಕೊಳ್ಳದೆ ಸಾವು ಬದುಕುಗಳ ನಡುವಣ ತೂಗಾಡುವ ಸ್ಥಿತಿಯಲ್ಲಿ ತನ್ನದೇ ಮೌಲ್ಯಗಳನ್ನು ಕಂಡುಕೊಳ್ಳುವ ಮರ್ಸೋ ಕೊಲೆಪಾತಕಿಯೆ? ಕೊಲೆಯೆಂದರೇನು? ಅಪರಾಧಪ್ರಜ್ಞೆಯ ಅರ್ಥವಾದರೂ ಏನು? ಸಮಾಜವೂ ನ್ಯಾಯ ವ್ಯವಸ್ಥೆಯೂ ಬಲಿಪಶುವಾಗಿರುವ ಅವನನ್ನೇ ಅಪರಾಧಿ ಎಂದು ತೀರ್ಮಾನಿಸುತ್ತವೆ; ಅವ್ಯಕ್ತ ಶಕ್ತಿಗಳು ಒಟ್ಟುಗೂಡಿ ಅವನ ಪತನವನ್ನು ಸನ್ನಿಹಿತಗೊಳಿಸುತ್ತವೆ. ಉಪೇಕ್ಷಿಸುವ ಜಗತ್ತಿನಲ್ಲಿ ಹುಟ್ಟಿದ ಅವನನ್ನು ಜಗತ್ತು ಅಷ್ಟೇ ಉಪೇಕ್ಷೆಯಿಂದ ತಿರಸ್ಕರಿಸುತ್ತದೆ.

ಮರ್ಸೋನನ್ನು ಮನೋವೈಜ್ಞಾನಿಕ ನೆಲೆಯಲ್ಲಿ ಪರಿಶೀಲಿಸುವ, ಆಲ್ಜಿಯರ್ಸ್‍ನ ವಾತಾವರಣವನ್ನು ಅದ್ಭುತವಾಗಿ ಹಿಡಿದುಕೊಡುವ ಈ ಕೃತಿ ಅವನ ಹಿರಂಗಿಗೂ ಅವನ ಅಪರಾಧಕ್ಕೂ ನಡುವೆ ಎಷ್ಟು ದೊಡ್ಡ ಕಂದರವಿದೆ ಎನ್ನುವುದನ್ನು ಅತ್ಯಂತ ನಿರ್ದಯವಾಗಿ ಚಿತ್ರಿಸುತ್ತದೆ. ಜೊತೆಗೆ ಸೂಕ್ಷ್ಮ ವಿಡಂಬನೆಯ ಮೂಲಕ ಖಾಸಗಿ ಘಟನೆಗಳು ಪಡೆದುಕೊಳ್ಳುವ ಸಾರ್ವತ್ರಿಕ ಆಯಾಮಗಳನ್ನೂ ಬಹಿರಂಗಗೊಳಿಸುತ್ತದೆ.

‘ಅಪರಿಚಿತ’ ಅನ್ಯೋಕ್ತಿಯೇನಲ್ಲ; ಅದು ಯಾವುದರ ಸಂಕೇತವೂ ಅಲ್ಲ. ಓದುಗನಾದವನು ನೀರಸ ಎನ್ನಿಸಬಹುದಾದ ಇಲ್ಲಿನ ನಿರೂಪಣೆಯಿಂದ ಹೇಗೆ ತಾನೆ ತೃಪ್ತನಾಗಬಲ್ಲ? ಲೇಖಕನ ಉದ್ದೇಶವೇನೆಂದು ಹುಡುಕಾಡದೆ ಅವನು ಇರುವುದಾದರೂ ಹೇಗೆ? ಅಥವಾ ಮರ್ಸೋನಲ್ಲಿ ತನ್ನನ್ನೇ ನೋಡಿಕೊಳ್ಳದೆ ಉಳಿಯುವುದುಂಟೆ? ಅರೆ ಅನಾಮಧೇಯನಂತಿರುವ ಈ ಅಸಾಮಾನ್ಯ ಹೀರೊನಿಂದಾಗಿಯೇ ಓದುಗ ಈ ಪಾತ್ರದ ಅಂತರಂಗಕ್ಕಿಳಿಯದೆ, ಅವನ ವಿಧಿಯನ್ನು ತನ್ನದೇ ವಿಧಿಯ ಜೊತೆ, ತನ್ನದೇ ಕತೆಯ ಜೊತೆ ಹೋಲಿಸಿಕೊಳ್ಳದೆ ಇರಲಾರ.

ಕಮೂ ಇಲ್ಲಿ ತೀರ ಸಾಮಾನ್ಯವಾದ ಸಾಮಾಜಿಕ ಸನ್ನಿವೇಶವನ್ನು ಚಿತ್ರಿಸುವುದಕ್ಕಾಗಿ ತನ್ನದೇ ಬಣ್ಣಗಳನ್ನು ಉಪಯೋಗಿಸುತ್ತಾನೆ. ಆ ಬಣ್ಣಗಳಲ್ಲಿ ಒಡಮೂಡುವ ಬೆಳಕು ಪ್ರತಿಯೊಬ್ಬ ವ್ಯಕ್ತಿಗೂ ಸಮ್ಮತವಾದದ್ದು. ಕತೆಯಲ್ಲಿ ಸೂಚ್ಯವಾಗಿರುವ ನೈತಿಕತೆ ಕಮೂವೇ ಬರೆದ ‘ಮಿಥ್ ಆಫ್ ಸಿಸಿಫಸ್’ ಎಂಬ ಪ್ರಬಂಧದ ದಾರ್ಶನಿಕತೆಯನ್ನು ಸಮರ್ಥಿಸುವಂತಿದೆ. ಆ ದಾರ್ಶನಿಕ ತತ್ವ ಜಗತ್ತನ್ನು ‘ಅಸಂಗತ’ ಎಂದು ನೋಡುವ, ಜೀವನವನ್ನು ನಿರಾಶೆಯಂತೆ ಪರಿಭಾವಿಸುವ ತತ್ವ. ಕಮೂ ದೃಷ್ಟಿಯಲ್ಲಿ ‘ಅಪರಿಚಿತ’ವಾದದ್ದೆಂದರೆ ಇದೇ ಅರ್ಥ.

ಈ ಕಾದಂಬರಿಯ ಪ್ರಾರಂಭದಲ್ಲಿರುವ ಪೀಠಿಕೆಯಂಥ ಬರಹದಲ್ಲಿ ಪ್ರಕಾಶ್ ನಾಯಕರೇ ಬರೆದಿರುವಂತೆ, ‘ಎಲ್ಲ ಘಟನೆಗಳಿಗೂ ಕಾರ್ಯ-ಕಾರಣ ಸಂಬಂಧ ಹುಡುಕುವ ಅವಸರದಲ್ಲಿ ಹತಾಶ ಮನಸ್ಸು ಅಲೌಕಿಕ ಪೂರ್ವಯೋಜಿತ ವ್ಯವಸ್ಥೆಯೊಂದನ್ನು ಕಲ್ಪಿಸಿಕೊಂಡು, ಅದನ್ನೇ ಸತ್ಯವೆಂದು ಒಪ್ಪಿಕೊಂಡುಬಿಡುತ್ತದೆ. ಆ ಅಸಂಬದ್ಧ ತರ್ಕವನ್ನು ಅಥವಾ ಹತಾಶೆಯನ್ನೇ ಆಧರಿಸಿದ ಆ ವ್ಯವಸ್ಥೆಯನ್ನು ಒಪ್ಪದ ಮನಸ್ಸುಗಳು ಅತಂತ್ರವಾಗುತ್ತವೆ, ಸುತ್ತಲಿನ ಸಮಾಜಕ್ಕೆ ಅಪರಿಚಿತವಾಗುತ್ತವೆ, ಅನ್ಯವಾಗುತ್ತವೆ. ಇದು ‘ದ ಸ್ಟ್ರೇಂಜರ್’ ಕಾದಂಬರಿಯ ಕಥಾವಸ್ತು.’

ಪ್ರಕಾಶ್ ನಾಯಕ್ ನಮ್ಮ ಉತ್ತಮ ಕತೆಗಾರರು, ಕಾದಂಬರಿಕಾರರು. ಆದ್ದರಿಂದಲೇ ಅವರ ಈ ಅನುವಾದದಲ್ಲಿ ಕಥಾಸಾಹಿತ್ಯದಲ್ಲಿ ಇರಬೇಕಾದ ಲಾಲಿತ್ಯವಿದೆ. ಅವರಿಗೆ ಅನುವಾದವೊಂದು ಅನುವಾದವಾಗಿಯೇ ಓದಿಸಿಕೊಳ್ಳಬೇಕಲ್ಲದೆ ಅದೊಂದು ಸ್ವತಂತ್ರ
ಕೃತಿಯಂತೆ ಓದಿಸಿಕೊಳ್ಳಬೇಕೆಂಬ ಹಟವಿಲ್ಲ. ಅವರು ಕಮೂನ ಗದ್ಯವನ್ನು ಸೊಗಸುಗೊಳಿಸುವುದಕ್ಕೋ ಅವನ ನಿರ್ದಿಷ್ಟ
ಕ್ರಿಯಾಕ್ಷೇತ್ರವನ್ನು ಸಾರ್ವತ್ರಿಕಗೊಳಿಸು
ವುದಕ್ಕೋ ಹೋಗುವುದಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ ನಮ್ಮ ಕೆಲವು ವಿಮರ್ಶಕ-ಅನುವಾದಕರಂತೆ ಮೂಲ ಕೃತಿಯನ್ನು ‘ಕನ್ನಡ ಜಾಯಮಾನಕ್ಕೆ ಒಗ್ಗಿಸುವ’ ಮೂಲಕ ಕನ್ನಡ ಓದುಗರಿಗೆ ಅರ್ಥಮಾಡಿಸುವ ಹೊಣೆಗಾರಿಕೆಯನ್ನು ಹೊತ್ತುಕೊಳ್ಳುವುದಿಲ್ಲ. ಅವರ ಅನುವಾದದಲ್ಲಿ ಸಹಜ ಓಘವಿದೆ, ಓಜಸ್ಸೂ ಇದೆ. ಮುಖ್ಯವಾಗಿ ಓದುಗರಿಗಿಲ್ಲಿ ಕೇಳಿಸುತ್ತಿರುವುದು ಕಮೂವಿನ ಧ್ವನಿಯೇ ಹೊರತು ಅನುವಾದಕರ ಧ್ವನಿಯಲ್ಲ. ಕಾದಂಬರಿಯಲ್ಲಿ ಮರ್ಸೋ ತನ್ನಿಂದಾದ ಕೊಲೆಯನ್ನು ಅದರ ಹಿನ್ನೆಲೆಯ ಜೊತೆ ನೆನಪುಮಾಡಿಕೊಳ್ಳುವ ಈ ಭಾಗವನ್ನು ನೋಡಿ:

‘ಆಗಲೇ ಎಲ್ಲವೂ ಆಗಲಾರಂಭಿಸಿದ್ದು: ಸಮುದ್ರ ಉರಿಯುತ್ತಿತ್ತು ಮತ್ತು ದಟ್ಟ ಉಬ್ಬುಸಿರು ಬಿಡುತ್ತಿತ್ತು. ಮುಗಿಲು ಒಂದೆಡೆಯಿಂದ ಇನ್ನೊಂದೆಡೆಗೆ ಬಾಯಿ ತೆರೆದು, ಬೆಂಕಿಯ ಮಳೆಗರೆಯುತ್ತಿರುವಂತೆ ಅನ್ನಿಸಿತು. ನಾನು ಉದ್ವಿಗ್ನನಾಗಿದ್ದೆ; ರಿವೊಲ್ವರ್ ಹಿಡಿದುಕೊಂಡಿದ್ದ ನನ್ನ ಕೈ ಟ್ರಿಗರನ್ನು ಎಳೆಯಿತು. ರಿವೊಲ್ವರಿನ ತಳದ ನುಣುಪು ನನ್ನ ಅರಿವಿಗೆ ಬಂತು. ಏಕಕಾಲದಲ್ಲಿ ಮೊನಚು ಮತ್ತು ಕಿವಿಗೆ ಗಡಚಿಕ್ಕುವ ಆ ಗದ್ದಲದಲ್ಲಿ, ಎಲ್ಲವೂ ಆರಂಭವಾಯಿತು. ನಾನು ಬೆವರು ಮತ್ತು ಸೂರ್ಯ ಎರಡನ್ನೂ ಅಲುಗಾಡಿಸಿದ್ದೆ. ಆ ದಿನದ ಸಾಂಗತ್ಯವನ್ನು, ನೆಮ್ಮದಿಯಿಂದಿದ್ದ ಆ ಸಮುದ್ರ ದಂಡೆಯ ಅಪೂರ್ವ ಮೌನವನ್ನು ನಾನು ಧ್ವಂಸಮಾಡಿದ್ದೆ ಎಂದು ಅರಿವಾಯಿತು. ನಂತರ ನಿಶ್ಚಲವಾಗಿದ್ದ ಆ ದೇಹದ ಮೇಲೆ ಇನ್ನೂ ನಾಲ್ಕು ಬಾರಿ ಗುಂಡು ಹಾರಿಸಿದೆ; ಯಾವ ಕುರುಹನ್ನೂ ಬಿಡದೆ ಅವು ದೇಹದೊಳಕ್ಕೆ ನಾಟಿದವು. ಅದು ವಿಷಾದದ ಬಾಗಿಲನ್ನು ಅವಸರದಿಂದ ನಾಲ್ಕು ಬಾರಿ ತಟ್ಟಿದಂತಿತ್ತು.’ (ಪುಟ 50)

ಹಿಂದೆ ನಡೆಯಿತೆನ್ನುವುದರ ನಿಷ್ಠುರ ಚಿತ್ರವಾಗಿರುವ ಈ ಭಾಗ ಧ್ವನಿಪೂರ್ಣವಾಗಿದೆ, ನಿಜ. ಆದರೆ ‘ಮೊನಚು ಮತ್ತು ಕಿವಿಗೆ ಗಡಚಿಕ್ಕುವ’, ‘ಬೆವರು ಮತ್ತು ಸೂರ್ಯ’ ಇತ್ಯಾದಿ ಪ್ರಯೋಗಗಳು ಗದ್ಯದ ಸಹಜ ಧಾಟಿಗೆ ಅಡ್ಡಿಯಾಗುತ್ತವೆ. ಇಂಗ್ಲಿಷಿನ ‘ಆಂಡ್’ ಎರಡು ನಾಮಪದಗಳನ್ನೋ ಎರಡು ಸಂಗತಿಗಳನ್ನೋ ಎರಡು ವಾಕ್ಯಗಳನ್ನೋ ಕೂಡಿಸುವುದಕ್ಕಾಗಿ ಬಳಕೆಯಾಗುವ ಶಬ್ದ. ಅದು ಆ ಭಾಷೆಯಲ್ಲಿ ಸಹಜವಾಗಿಯೇ ಕೇಳಿಸುತ್ತದೆ. ಆದರೆ ಅದಕ್ಕೆ ಕನ್ನಡ ಪರ್ಯಾಯ ಪದವಾಗಿರುವ ‘ಮತ್ತು’ ಮಾತ್ರ ಕನ್ನಡ ಕತೆ, ಕಾದಂಬರಿಗಳಲ್ಲಿ ಹೊಂದುವುದೇ ಇಲ್ಲ.

ಈ ಪುಸ್ತಕದ ಕಾಗದ, ಅಕ್ಷರ (ಫಾಂಟ್), ಮುದ್ರಣ ಎಲ್ಲವೂ ಸೊಗಸಾಗಿವೆ. ಈ ಸೊಗಸುಗಳಿಗೆ ಹೋಲಿಸಿದರೆ ಪುಸ್ತಕದ ಹೊದಿಕೆಯನ್ನು ಮಾತ್ರ ಸೊಗಸೆನ್ನಲಾಗದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT