ಭಾನುವಾರ, ಆಗಸ್ಟ್ 1, 2021
21 °C

ಸಂಯಮದ ಪಯಣದಲ್ಲಿ ಅರಳಿದ ಕಾವ್ಯಪುಷ್ಪ

ಆರ್‌. ತಾರಿಣಿ ಶುಭದಾಯಿನಿ Updated:

ಅಕ್ಷರ ಗಾತ್ರ : | |

Prajavani

‘ಮದರಂಗಿ ವೃತ್ತಾಂತ’ ಕೃತಿಯು ಎಚ್.ಎಲ್.ಪುಷ್ಪ ಅವರ ಸುಮಾರು ಇಪ್ಪತ್ತೆಂಟು ವರ್ಷಗಳ ಕಾವ್ಯ ಪಯಣ (ಇದರಲ್ಲಿ ‘ಅಮೃತಮತಿಯ ಸ್ವಗತ’, ‘ಗಾಜುಗೋಳ’, ‘ಲೋಹದ ಕಣ್ಣು’ ಹಾಗೂ ‘ಸೋಲಾಬರಸ್ ಹುಡುಗರು ಹಾಗೂ ಎಕ್ಕದ ಬೀಜ’ ಎಂಬ ನಾಲ್ಕು ಸಂಕಲನಗಳು ಅಡಕಗೊಂಡಿವೆ). ಈ ಪಯಣವು ಸಂಯಮದ ಪಯಣ. ಏಕೆಂದರೆ, ಪ್ರತೀ ಕಾವ್ಯ ಸಂಕಲನವು ಸಾಕಷ್ಟು ಅಂತರಗಳನ್ನು ಹೊಂದಿದೆ. ಕಾವ್ಯವನ್ನು ಧ್ಯಾನದಂತೆ ಭಾವಿಸಿ ಬದುಕಿನ ನಿಜವನ್ನು ಒಳಗಣ್ಣಿನಿಂದ ನೋಡುವುದಕ್ಕೆ ಸಾವಧಾನವೇ ಮಾರ್ಗ ಎಂದು ನಂಬುವುದು ಈಗಿನ ವೇಗದ ಉತ್ಕರ್ಷಗುಣಕ್ಕೆ ಹೊರತಾದುದು.

ನಿರ್ದಿಷ್ಟ ಪಂಥ ಅಥವಾ ಚಳವಳಿಯ ಸಂದರ್ಭದಲ್ಲಿ ಹುಟ್ಟುವ ಕಾವ್ಯವು ಕೇವಲ ಚಾರಿತ್ರಿಕತೆಯನ್ನು ಪಡೆದುಕೊಂಡರೆ ಅದನ್ನು ದಾಟಿ ಕಾವ್ಯವನ್ನು ಋಜುತ್ವದ ಶೋಧವೆಂದು ಭಾವಿಸಿ ಮುಂದುವರೆಯುವುದು ಉತ್ತಮ ಮಾರ್ಗವೆಂದು ಹೇಳಬಹುದು. ಪುಷ್ಪ ಅವರು ಸ್ತ್ರೀವಾದಿ ಪಂಥವು ಉತ್ಕರ್ಷದಲ್ಲಿದ್ದಾಗ ಕಾವ್ಯವನ್ನು ಬರೆಯಲಾರಂಭಿಸಿದವರು. ಅವರ ಮೊದಲ ಕವನ ಸಂಕಲನವಾದ ‘ಅಮೃತಮತಿಯ ಸ್ವಗತ’ವು ಒಂದು ಬಗೆಯ ಮ್ಯಾನಿಫ್ಯಾಸ್ಟೊ ತರದ ಕವಿತೆಗಳನ್ನು ಕೊಟ್ಟಿತ್ತು. ಆದರೆ ಪುಷ್ಪ ಅವರನ್ನು ಪಾಂಥಿಕ ಕವಿ ಎಂದು ಸೀಮಿತಗೊಳಿಸಲಾಗದು. ಅವರು ತಮ್ಮ ಕಾವ್ಯವನ್ನು ಸ್ತ್ರೀವಾದದ ಲಯಗಳೊಂದಿಗೆ ಬದುಕಿನ ಸತ್ಯದ ನೆಲೆಗಳನ್ನು ಅರಸುವ ಶೋಧವನ್ನಾಗಿ ಮಾಡಿಕೊಳ್ಳುತ್ತಾರೆ. ಅವರ ಕಾವ್ಯದೊಳಗಿನ ಸಾಮಾಜಿಕತೆಯು ಆಧ್ಯಾತ್ಮಿಕತೆಯ ಹರಹನ್ನು ಪಡೆದುಕೊಂಡು ಮುನ್ನಡೆಯುತ್ತದೆ. ಈ ದೃಷ್ಟಿಯಿಂದ ಅವರ ಕವಿತೆಗಳನ್ನು ಗಮನಿಸಬೇಕು. ದಟ್ಟವಾದ ಸ್ತ್ರೀವಾದೀ ಸತ್ವಗಳನ್ನು ತಮ್ಮದಾಗಿಸಿಕೊಳ್ಳುತ್ತಲೇ ಜಗದ ನೆಲೆಗಳನ್ನು ಅರಿಯುವ ನೆಲೆ ಇವರದು.

ಪುಷ್ಪ ಅವರ ಕಾವ್ಯದಲ್ಲಿ ಗಮನಿಸಬೇಕಾದ ಎರಡು ಮುಖ್ಯ ಅಂಶಗಳೆಂದರೆ ಒಂದು, ಅವರ ಕಾವ್ಯವು ವಾಚಾಳಿತನವನ್ನು ಬಿಟ್ಟುಕೊಟ್ಟು ಆತ್ಮಾವಲೋಕನಕ್ಕೆಡೆ ಮಾಡಿಕೊಡುವ ಸ್ವಗತವನ್ನು ಮೈಗೂಡಿಸಿಕೊಂಡಿರುವುದು; ಮತ್ತೊಂದು ಸುಳ್ಳಿನ ಗಾಜುಗೋಳಗಳನ್ನು ಒಡೆದುಕೊಂಡು ನಿಜದ ಅನಾವರಣ ಮಾಡಿಕೊಳ್ಳುವ ಗುರಿ ಹೊಂದಿರುವುದು. ಈ ಎರಡೂ ಅಂಶಗಳು ಆತ್ಮಿಕವಾಗಿ ಶೋಧವನ್ನು ಮಾಡುವುದಕ್ಕೆ ಇಂಬು ನೀಡುವಂತಹವು.

ಹೊರಗಿನ ಮಾತು ಮಾತುಗಳ ಜಿಜ್ಞಾಸೆಯನ್ನು ಸೀಮಿತಗೊಳಿಸಿ ತನ್ನಂತರಂಗದ ಮಾತುಗಳನ್ನು ಆಡಬೇಕೆನ್ನುವ ವಾಂಛೆಯಿಂದ ಹುಟ್ಟುವ ಸ್ವಗತವು ಒಳಮುಖವಾಗಿರುವಂಥದ್ದು. ಮಾತಿನ ಸತ್ವದ ಬಗ್ಗೆ ಕವಿಯ ಮೊದಲ ಕಾವ್ಯ ಸಂಕಲನವಾದ ‘ಅಮೃತಮತಿಯ ಸ್ವಗತ’ದಿಂದ ಆರಂಭವಾಗಿ ‘ಸೋಲಾಬರಸ್ ಹುಡುಗರು ಹಾಗೂ ಎಕ್ಕದ ಬೀಜ’ ಸಂಕಲನದ ತನಕ ಒಂದು ದ್ಯಾಸ ಇರುವುದು ಕಾಣುತ್ತದೆ. ಅಂತೆಯೇ, ‘ಬೀದಿಗೆ ಬಂದಿದೆ ಮಾತು ಬಾಗಿಲು ತೆರೆದು/ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ತೆವಳುತ್ತಾ/ಅಕ್ಷರಗಳು ತೇಲಾಡುತ್ತಿವೆ’(ಎಕ್ಕದ ಬೀಜದಂತೆ ಮಾತು) ಎನ್ನುವ ಸಾಲುಗಳು ಬರುತ್ತವೆ. ಸ್ವಗತದಲ್ಲಿ ಆಡುವ ಮಾತುಗಳ ನಿಜವು ಬೀದಿಗೆ ಬಂದು ತೆವಳುವ ಮಾತಿಗೆ ಪ್ರತಿಯಾಗಿ ನಿಲ್ಲುತ್ತದೆ. ಈ ಅಂತರವನ್ನು ಗುರುತಿಸಿಕೊಳ್ಳುವುದು ಅವರ ಕಾವ್ಯಪಯಣದಲ್ಲಿ ಆಗಿರುವ ಬೆಳವಣಿಗೆ.

ಎರಡನೆಯದಾಗಿ, ಪುಷ್ಪ ಅವರು ಆಧ್ಯಾತ್ಮಿಕ ಹಸಿವಿನ ಕವಿ. ಅದಾಗಲೇ ಹೇಳಿದಂತೆ ಗಾಜುಗೋಳಗಳನ್ನು ಕಟ್ಟಿಕೊಂಡಿರುವ ಜಗತ್ತನ್ನು ಒಡೆದುಕೊಳ್ಳುವುದು ಮುಖ್ಯವಾದ ಆಧ್ಯಾತ್ಮಿಕ ಪ್ರಶ್ನೆ. ಗಾಜುಗೋಳಗಳು ಮಿಥ್ಯೆಗಳು. ಅವುಗಳನ್ನು ಸಾರಿ ಪಾರಾದವರ ಸಂತತಿಯನ್ನು ಪುಷ್ಪ ತಮ್ಮ ಕವಿತೆಗಳಲ್ಲಿ ಮಾತನಾಡಿಸುತ್ತಾ ಹೋಗುತ್ತಾರೆ. ಬುದ್ಧನಿಂದ ಮೊದಲುಗೊಂಡು, ಅಕ್ಕಮಹಾದೇವಿ, ದೋಪ್ದಿ, ಗೆಲಿಲಿಯೊ ಮುಂತಾದ ನಿಜದ ಪರೀಕ್ಷೆಗೆ ನಿಂತವರನ್ನು ತಮ್ಮ ಕವಿತೆಗಳಲ್ಲಿ ಎತ್ತಿಕೊಳ್ಳುವ
ಮೂಲಕ ತಮ್ಮ ನಿಲುವನ್ನು ಖಚಿತಗೊಳಿಸಿಕೊಳ್ಳುತ್ತಿದ್ದಾರೆ. ಮಿಥ್ಯೆ ಮತ್ತು ಸತ್ಯಗಳ ದ್ವಂದ್ವವು ಮಾಂಸ ಮತ್ತು ಆತ್ಮಗಳ ಪರಸ್ಪರ ದ್ವಿತ್ವದಿಂದ ಅಭಿವ್ಯಕ್ತಗೊಳ್ಳುವುದನ್ನು ಅವರ ಕಾವ್ಯದಲ್ಲಿ ಗುರುತಿಸಬಹುದು.

 ಮಿಥ್ಯೆ ಎನ್ನುವುದು ಆಧ್ಯಾತ್ಮಿಕ ಪರಿಭಾಷೆಯಷ್ಟೇ ಅಲ್ಲ. ಅದು ಹೆಣ್ಣಿನ ಅಸ್ಮಿತೆಯ ಸಂದರ್ಭದಲ್ಲಿ ಸದಾ ಜಾಗೃತಗೊಳ್ಳುವ ಅಂಶವಾಗಿದೆ. ಸಾಮಾಜಿಕವಾಗಿ ನಿರ್ಧರಿಸಲ್ಪಡುವ ಹೆಣ್ಣಿನ ಅಸ್ಮಿತೆಯು ಸಿದ್ಧ ಚೌಕಟ್ಟುಗಳಲ್ಲಿ ಹೊರಹೊಮ್ಮುವುದು ಪುಷ್ಪ ಅವರಿಗೆ ಒಂದು ಮಿಥ್ಯೆ. ಅದನ್ನು ಮೀರಿ ಅವಳಿಗಿರುವ ಆಧ್ಯಾತ್ಮಿಕ ಹಸಿವು ಎಂದರೆ ತಾನು ಯಾರು ಎನ್ನುವುದನ್ನು ಕೇಳಿಕೊಳ್ಳುವುದು. ಸ್ತ್ರೀವಾದಿ ಓದುಗಳಲ್ಲಿ ಹೆಣ್ಣಿನ ಅಸ್ಮಿತೆಯು ಮೊದಲೇ ಭಾವಿಸಿಕೊಂಡಂತೆ ದಮನಕ್ಕೆ ಒಳಗಾಗಿರುತ್ತದೆ. ಅದು ಮಾತನಾಡಲಾರದು, ಏನನ್ನೂ ವಿಚಾರ ಮಾಡಿನೋಡಲು ಅಶಕ್ತವಾಗಿರುವಂಥದ್ದು. ಆದರೆ ಪುಷ್ಪ ಅವರು ಈ ಪೂರ್ವಗ್ರಹವನ್ನು ಬಿಡಿಸಿಕೊಳ್ಳಲೆತ್ನಿಸುತ್ತಾರೆ.

ಕವಿಯ ಪ್ರಕಾರ ತಾನು ಯಾರು? ಏಕೆ ಹೀಗಿದ್ದೇನೆ ಎಂಬ ಪ್ರಶ್ನೆಗಳನ್ನು ಕೇಳಿಕೊಳ್ಳುವುದು ಸತ್ಯದ ಹುಡುಕಾಟದ ಆರಂಭಿಕ ಹಂತ. ಆದುದರಿಂದಲೇ ಅಮೃತಮತಿ, ಮಾಧವಿ, ಕುಂಡಲಕೇಶಿಯರು ಅವರ ಕಾವ್ಯದ ಮುಖ್ಯಭೂಮಿಕೆಯಲ್ಲಿದ್ದಾರೆ. ‘ತನ್ನ ಚಿಪ್ಪೊಳಗೆ ನುಗ್ಗುವ ಆಮೆ/ ಎಂದು ಬಂದೀತು ಹೊರಕ್ಕೆ/ ನೀರ ಬಿಟ್ಟು ಮೇಲಕ್ಕೆ’ ಎಂದು ಅವರ ‘ಆಮೆಗಳು’ ಪದ್ಯದ ಸಾಲುಗಳು ಹೇಳುವಂತೆ ಅವರು ಆಶಿಸುವುದು ಸ್ವಂತವೆನಿಸಿಕೊಂಡಿದ್ದು ಹೊರಗೆ ಬರಬೇಕು. ಅದಕ್ಕೆ ಪೂರ್ವಪೀಠಿಕೆಯಾಗಿ ಸ್ವಗತವು ಬರುತ್ತದೆ.

ಪುಷ್ಪ ಅವರ ಕಾವ್ಯವು ಸ್ತ್ರೀತ್ವದ ಅಸ್ಮಿತೆಯನ್ನು ಗಂಡಿನ ಅಸ್ತಿತ್ವಕ್ಕೆ ಪ್ರತಿಯಾಗಿ ಕಲ್ಪಿಸುವುದಕ್ಕೆ ಸೀಮಿತವಾಗಿಲ್ಲ. ಗಂಡುಹೆಣ್ಣಿನ ಪ್ರೇಮ ಹಾಗೂ ಸಾಮರಸ್ಯಗಳು ಅವರ ಕಾವ್ಯದ ಭಾಗವಾಗಿರುವಂತೆಯೇ ಹೆಣ್ಣುಗಂಡುಗಳ ನಡುವಿನ ಸಂಘರ್ಷ, ಹಿಂಸೆಗಳು ಸಹ ಪ್ರಮುಖವಾದ ಅಂಗವೇ ಆಗಿವೆ. ಹೆಣ್ಣಿನ ಅಸ್ಮಿತೆಯಲ್ಲಿ ದೇಹವೇ ಕೇಂದ್ರವೆಂದು ನೋಡುವ ಸಮಾಜದ ದೃಷ್ಟಿಕೋನವು ಆಕೆಯ ಬುದ್ಧಿವಂತಿಕೆಯನ್ನು ಒಪ್ಪದು. ‘ಪ್ರಿಯೇ ನೀನೆಂದೂ ಬುದ್ಧಿವಂತಳಾಗುವುದು ಬೇಡ/ನೀ ಬುದ್ಧಿವಂತೆಯಾದರೆ ನನ್ನ ಬಗ್ಗೆ ತಿರಸ್ಕಾರ ಮೂಡಿ/ನಿನ್ನ ನುಣುಪು ಮುಖದ ಮೇಲೆ ದರಿದ್ರ ಬುದ್ಧಿರೇಖೆಗಳು ಮೂಡುತ್ತವೆ’ (ಪ್ರೇಮ ಸಿದ್ಧಾಂತಗಳು) ಎಂದು ಗಂಡು ಸಹಜವೆನ್ನುವಂತೆ ಹೇಳುವುದು ಹೆಣ್ಣು ಗಂಡಿನ ಹೊಡೆತಕ್ಕೆ ಕೇರೆ ಹೊರಳಿದಂತೆ ಹೊರಳುವುದು ಸಾಮಾನ್ಯವಾಗಿದೆ.

ಹೆಣ್ಣಿನ ಅಸ್ಮಿತೆಯಲ್ಲಿ ಕವಿಯ ಪ್ರಕಾರ ಮುಖ್ಯವಾಗುವುದು ತನ್ನತನವನ್ನು ನಿರ್ಧರಿಸುವುದು, ತನ್ನ ಆಸೆಗಳನ್ನು ನಿರಾಕರಿಸದೇ ಅವುಗಳನ್ನು ನೇರವಾಗಿ ಅಭಿವ್ಯಕ್ತಿಸುವುದು. ಹಾಗಾಗಿ ಅಮೃತಮತಿ ತನ್ನ ಲೈಂಗಿಕ ಆಸೆಗಳನ್ನು ದೇಹದ ಬಯಕೆಯಾಗಿಸಿಕೊಂಡಂತೆಯೇ ಸ್ವಾತಂತ್ರ್ಯದ ಬಯಕೆಯನ್ನಾಗಿಯೂ ಹೊಂದಿದ್ದಾಳೆ. ನಿರಂಕುಶಮತಿಯಾಗಿ ತನ್ನನ್ನು ತಾನು ನಿರೂಪಿಸಿಕೊಳ್ಳುವುದು ಒಂದು ದಿಟ್ಟತನದ ನಿಲುವು. ಇದು ‘ಗಾಜುಗೋಳ’ ಸಂಕಲನದ ಕುಂಡಲಕೇಶಿಯಲ್ಲೂ ಕಾಣುತ್ತದೆ. ಇದಕ್ಕಾಗಿ ಅವಮಾನ ನೋವುಗಳನ್ನು ಅನುಭವಿಸಿದರೂ ಅದಕ್ಕಾಗಿ ಹೋರಾಟ ಮಾಡುವುದು ಘನತೆಯ ಸಂಕೇತವಾಗುತ್ತದೆ. ಗಂಡು ಹೆಣ್ಣಿನ ಮಧ್ಯೆ ಏಳುವ ಹಿಂಸಾತ್ಮಕ ಸಂಘರ್ಷ ಹಾಗೂ ಹೊರಜಗತ್ತಿನ ಕ್ರೌರ್ಯವು ಒಂದಕ್ಕೊಂದು ಪೂರಕವಾಗಿರುವಂಥದ್ದು. ಆದುದರಿಂದಲೇ
ಹೆಣ್ಣಿನ ಅಸ್ಮಿತೆ ಎಂದರೆ ಲೈಂಗಿಕ ಮುಕ್ತತೆಯಲ್ಲಾಗಲೀ ಸ್ವಾತಂತ್ರ್ಯದ ಸ್ವಪ್ನದಲ್ಲಾಗಲೀ
ಆವಿರ್ಭವಿಸುವ ಸಂಗತಿಯಲ್ಲ. ಅದೊಂದು ಸಂಕೀರ್ಣವಾದ ಪ್ರಕ್ರಿಯೆ.  ಆದುದರಿಂದಲೇ ಪುಷ್ಪ ಅವರ ಕಾವ್ಯದ ಸಾಲುಗಳು ಅನೇಕ ಬಾರಿ broken lines ಆಗಿರುತ್ತವೆ.

ಪುಷ್ಪ ಅವರ ಕಾವ್ಯ, ಅವರ ನೆಚ್ಚಿನ ಕವಿ ಗಂಗಾಧರ ಚಿತ್ತಾಲರಂತೆಯೇ ಗಾಢವಾದ ಬೌದ್ಧಿಕ ಅರಿವಿನ ಅನುಭವದ ಚಿಂತನೆಯ ವಿನ್ಯಾಸವುಳ್ಳದ್ದು. ಕನ್ನಡದಲ್ಲಿ ಹಾಸುಹೊಕ್ಕಾದ ಅಧ್ಯಾತ್ಮ/ಅನುಭಾವಗಳು ಹಾಗೂ ಸ್ತ್ರೀವಾದ/ಬಂಡಾಯದ ಪಾಂಥಿಕ ತಿಳಿವಳಿಕೆಗಳನ್ನು ಅವರ ಕಾವ್ಯ ಬಳಸಿಕೊಂಡಿದೆಯಾದರೂ ಮೈದುಂಬಿಕೊಂಡು ತನ್ನ ಹಾದಿಯ ತಾನೇ ಹುಡುಕಿಕೊಂಡು ಹರಿವ ನದಿಯ ಹರಿವಿನಂತೆ ಸಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು