ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾವೃಕ್ಷ: ಜೀವಪ್ರಜ್ಞೆಯ ಪ್ರತಿನಿಧೀಕರಣದ ಕಥನ

Last Updated 19 ಫೆಬ್ರುವರಿ 2022, 19:30 IST
ಅಕ್ಷರ ಗಾತ್ರ

ಪುರಾಣ, ಇತಿಹಾಸ ಹಾಗೂ ಸಾಮಾಜಿಕ ವಸ್ತುವಿನ ಮುಖಾಂತರ ಈವರೆಗೂ ತಮ್ಮ ಬರಹದಲ್ಲಿ ಮನುಷ್ಯನ ಮಾನಸಿಕ ಕ್ಷೋಭೆಗಳನ್ನು ಶೋಧಿಸುತ್ತಾ ಬಂದ ಕಂನಾಡಿಗ ನಾರಾಯಣ ಅವರು ಈ ಕಾದಂಬರಿಯಲ್ಲಿ ಅವೆಲ್ಲವನ್ನು ಸಮನ್ವಯಗೊಳಿಸಿದ ಲೋಕದಂದುಗದ ಕಥನವನ್ನು ಫ್ಯಾಂಟಸಿ ಮಾದರಿಯಲ್ಲಿ ಮಂಡಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಹಾಗೆ ನೋಡಿದರೆ ಈ ಬಗೆಯ ತಂತ್ರ ಕನ್ನಡಕ್ಕೇನೂ ಹೊಸದಲ್ಲ. ಪ್ರಾಚೀನ ಪಂಚತಂತ್ರ ಕಥೆಯಿಂದ ಆರಂಭಗೊಂಡು ನವ್ಯರಲ್ಲಂತೂ ಉತ್ಕಟತೆಯನ್ನು ಪಡೆದುಕೊಂಡ ತಂತ್ರ ಕೌಶಲವಿದು. ಕಂನಾಡಿಗ ತಮ್ಮ ತಾತ್ವಿಕ ದೃಷ್ಟಿಯ ನಿರೂಪಣೆಗೆ ಈ ವಿಧಾನ ಪೂರಕವೆಂದು ಭಾವಿಸಿರುವುದು ಮತ್ತು ಅದು ಅವರ ಕೈಹಿಡಿದು ನಡೆಸಿರುವುದನ್ನು ಈ ಕಾದಂಬರಿಯ ಆಶಯ ಮತ್ತು ಆಕೃತಿಯ ನೆಲೆಯಲ್ಲಿ ಕಾಣಬಹುದು.

ಆಲದಮರವೊಂದರ ಆತ್ಮಸಾಕ್ಷಿಯಲ್ಲಿ ಸಾಗುವ ಈ ಕಥನ ಏಕಕಾಲಕ್ಕೆ ಮರದ ಆತ್ಮಕಥೆಯಂತೆಯೂ ಲೋಕಕಥೆಯಂತೆಯೂ ಒಂದರೊಳಗೊಂದು ಹೆಣೆಗೆ ಹಾಕಿಕೊಳ್ಳುತ್ತಾ ಮನುಷ್ಯಲೋಕದ ಕ್ರೌರ್ಯವನ್ನೂ, ಮಾನವೀಯ ಅಂತಃಕರಣದ ತೆಳುವಾದ ಎಳೆಗಳನ್ನೂ ಮುಖಾಮುಖಿಯಾಗಿಸುತ್ತಾ ಹೋಗುತ್ತದೆ. ಪ್ರೀತಿ, ಕರುಣೆ ಮತ್ತು ಔದಾರ್ಯಗಳು ಹೇಗೆ ಕಣ್ಮರೆಯಾಗುತ್ತಾ, ಮನುಷ್ಯನ ಸ್ವಾರ್ಥವೇ ಮೇಲುಗೈ ಪಡೆಯುತ್ತದೆಯೆಂದು ವಿಷಾದದಿಂದಲೇ ನಿರೂಪಿಸುತ್ತದೆ. ನೆಲದ ಎದೆಗೆ ಬೇರಿಳಿಸಿ ಆಕಾಶವನ್ನು ತಬ್ಬಿ ಸಕಲೆಂಟು ಪ್ರಾಣಿ, ಪಕ್ಷಿಗಳಿಗೆ ಆಸರೆ ನೀಡುತ್ತಾ, ಅದರಲ್ಲೇ ಸಾರ್ಥಕತೆ ಕಾಣುತ್ತಿರುವ ಒಂದು
ಆಲದ ಸಸಿ, ಮಹಾವೃಕ್ಷವಾದಂತೆ ಮನುಷ್ಯನೇಕೆ ಮಹಾ ಮಾನವನಾಗಲಿಲ್ಲ – ಎಂಬ ದೊಡ್ಡ ಪ್ರಶ್ನೆಯೊಂದನ್ನು ಕಾದಂಬರಿ ಪ್ರತೀ ಹಂತದಲ್ಲೂ ಪರಿಶೀಲಿಸುತ್ತಾ ಹೋಗುತ್ತದೆ.

ಇದಕ್ಕೆ ಪೂರಕವಾದ ಅನೇಕ ಸಂಗತಿಗಳನ್ನು ಮೌಖಿಕ ಹಾಗೂ ಲಿಖಿತ ಪಠ್ಯಗಳಿಂದ ಆಯ್ಕೆ ಮಾಡಿಕೊಂಡು ಕ್ರಮಾಗತವಾಗಿ ಮಂಡಿಸುತ್ತಾ ಹೋಗುತ್ತದೆ. ಹಾಗಾಗಿ ಆದಿಮ ಕಾಲದಿಂದ ಹಿಡಿದು ಕೊರೊನಾ ಕಾಲದವರೆಗಿನ ಅನೇಕ ಘಟನಾವಳಿಗಳನ್ನು ಕಾದಂಬರಿ ಮೆಲುಕು ಹಾಕುತ್ತದೆ. ಮರದ ನೋಟ ಕ್ರಮದಲ್ಲಿ ಅದನ್ನು ತತ್ಕಾಲೀನಗೊಳಿಸುತ್ತದೆ. ಹಾಗಾಗಿ ತ್ರಿಕಾಲದ ಸಂಭವಗಳನ್ನು ವರ್ತಮಾನಗೊಳಿಸುವ ರೀತಿಯಿಂದ ಕಾದಂಬರಿ ವಿಶಿಷ್ಟವೆನಿಸುತ್ತದೆ. ಅದು ತತ್ಕಾಲೀನವಾಗುವುದು ಪಠ್ಯಗಳ ಮರು ನಿರೂಪಣೆಯಿಂದ ಮಾತ್ರವಲ್ಲ, ಅವುಗಳ ಅಪವರ್ಗೀಕರಣಗೊಳಿಸುವ ಪ್ರಕ್ರಿಯೆಯಿಂದ.

ಮಲೆನಾಡಿನ ಶಾಂತ ಕಾಡು ಪರಿಸರದಲ್ಲಿ ಜರುಗುವ ಎಲ್ಲ ಘಟನೆಗಳಿಗೂ ಮರ ಸಾಕ್ಷಿಯಾಗುತ್ತಾ, ಗೃಹೀತ ಪಠ್ಯಗಳಿಗೆ ಇರುವ ಮತ್ತೊಂದು ಮುಖದ ಅನಾವರಣ ಕೂಡ ಮಾಡುತ್ತದೆ. ವಿಶೇಷವಾಗಿ ಪುಣ್ಯಕೋಟಿ ಪಠ್ಯದ ಹಿಂದಿರುವ ಸಂಸ್ಕೃತೀಕರಣದ ಹುನ್ನಾರವನ್ನು ಬಯಲು ಮಾಡುವುದು, ಶಿವಪ್ಪನಾಯಕ, ಕೃಷ್ಣದೇವರಾಯ, ಪುರಂದರದಾಸರ ಬದುಕಿನ ಕಥನಗಳನ್ನು ರೀತಿಯನ್ನು ವಿಭಿನ್ನವಾಗಿ ಮಂಡಿಸುತ್ತಾ ಹೋಗುವುದು. ಅಳಲೆಕಾಯಿ ಪಂಡಿತ ಗುರುಪಾದಪ್ಪನ ಚಿಕಿತ್ಸೆ ಮತ್ತು ಕಾರ್ಪೊರೇಟ್‌ ಹೈಟೆಕ್‌ ಆಸ್ಪತ್ರೆಗಳ ಲೂಟಿಕೋರತನದ ನಡುವೆ ಕಳಚಿಹೋಗಿರುವ ಮಾನವೀಯ ಸಂಬಂಧದ ಕ್ರೂರ ಮುಖವನ್ನು ವಿಷಾದದೊಂದಿಗೆ ವಿಶ್ಲೇಷಿಸುತ್ತದೆ.

ಗಾಂಧಿ ವೇಷಧಾರಿ ಮುದುವೀರಪ್ಪನ ಆಶಯ ಮತ್ತು ಮುಗ್ಧತೆಯನ್ನು ದಾಖಲಿಸುತ್ತಾ, ಮೊಲೆಯ ಮೇಲೆ ವಿಧಿಸುತ್ತಿದ್ದ ಕರ ಮತ್ತು ಅದನ್ನು ಪ್ರತಿಭಟಿಸಿ ವ್ಯವಸ್ಥೆಯ ಮನೋಬಲವನ್ನೇ ಕುಗ್ಗಿಸುವ ಹೆಣ್ಣಿನ ಚಿತ್ರಣವನ್ನು ಮುಂದಿಡುತ್ತದೆ.

ಪರಿಸರವಾದಿಗಳು, ಅಪ್ಪಿಕೋ ಚಳವಳಿ–ಪ್ರಕೃತಿ ಹೋರಾಟದ ಪರವಾದ ಅನೇಕ ಸಂಗತಿಗಳ ಮಂಡನೆಯಾಗುವುದು ಕಥನ ಕುತೂಹಲವನ್ನು ಜೀವಂತವಾಗಿರಿಸಿವೆ. ಹಾಗಾಗಿಯೇ ಇದು ಜೀವಪ್ರಜ್ಞೆಯ ಪ್ರತಿನಿಧೀಕರಣದ ಕಥನವೂ ಆಗಿದೆ. ವೈಚಾರಿಕ ನೆಲೆ ಕಳೆದುಕೊಂಡು ಸ್ಥಾವರವಾಗುವ ಮಠವ್ಯವಸ್ಥೆಯನ್ನು, ಪ್ರಗತಿಪರರ ಆಷಾಢಭೂತಿತನವನ್ನು ಕಾದಂಬರಿ ವಿಷಾದಪೂರ್ಣ ವ್ಯಂಗ್ಯದೊಂದಿಗೆ ಚಿತ್ರಿಸುತ್ತಾ ಹೋಗುತ್ತದೆ.

ಈ ಕಾದಂಬರಿಯಲ್ಲಿ ಪ್ರತಿಯೊಂದು ಅಧ್ಯಾಯವೂ ಸ್ವಾಯತ್ತವೇ. ಒಂದೊಂದನ್ನೂ ಒಂದು‘ಕೊಂಬೆ’ ಎಂದು ಕರೆದಿದ್ದಾರೆ. ಓದುಗ ಎಲ್ಲಿಂದಲಾದರೂ ಓದಬಹುದೆಂಬ ರೀತಿಯಲ್ಲಿ ಪ್ರತೀ ಅಧ್ಯಾಯವನ್ನು ರೂಪಿಸಲಾಗಿದೆ. ಗಾಂಧಿ, ಅಂಬೇಡ್ಕರ್‌, ಮಾರ್ಕ್ಸ್‌, ಬುದ್ಧ, ಬಸವ, ಬರಹಗಾರರಾದ ಲಂಕೇಶ್‌, ಕುವೆಂಪು, ಕುಂವೀ ಎಲ್ಲರೂ ಇಲ್ಲಿ ಬಂದು ಹೋಗುತ್ತಾರೆ. ಸಿನಿಮಾ ಜಗತ್ತಿನ, ರಾಜಕಾರಣದ ಈ ಹೊತ್ತಿನ ವ್ಯಕ್ತಿಗಳೂ ಈ ಕಥನದ ಮಡಿಕೆಯಲ್ಲಿ ಸೇರಿಕೊಂಡಿದ್ದಾರೆ.

ಕಥೆಯ ಆಕೃತಿ ಹೇಗಿದೆಯೆಂದರೆ ಅದೊಂದು ಹೋಲ್ಡಾಲ್‌ ಇದ್ದ ಹಾಗೆ. ಕಾದಂಬರಿಕಾರ ಏನನ್ನಾದರೂ ಇಲ್ಲಿ ತುಂಬಬಹುದು. ತರ್ಕಕ್ಕೆ ಇಲ್ಲಿ ಆಸ್ಪದ ನೀಡದಂತೆ ಕಾದಂಬರಿಕಾರ ಆಕೃತಿ ಸಮಸ್ಯೆಯನ್ನು ಬಗೆಹರಿಸಿಕೊಂಡಿದ್ದಾರೆ. ಹಾಗಾಗಿ ಇದೊಂದು ಚಿತ್ರಸಂತೆಯನ್ನು ಹೊಕ್ಕಂಥ ಅನುಭವ, ಗಲಿಬಿಲಿ, ಗೊಂದಲ, ಓದುಗನಿಗೆ ಉಂಟಾಗುವುದುರ ಜೊತೆ ತಾನು ಒಪ್ಪಿದ ಪಠ್ಯವು ಇಷ್ಟೊಂದು ಜಾಳುಜಾಳಾಗಿದೆಯೇ ಎಂಬುದನ್ನು ಪುನರ್‌ ಪರಿಶೀಲಿಸುವ ಆಯಾಮಕ್ಕೂ ಕಾದಂಬರಿ ಎಡೆಮಾಡಿಕೊಡುತ್ತದೆ. ಹೀಗೆ ಘಟನೆಗಳ ಸರಮಾಲೆಯಿಂದ ಕಾದಂಬರಿ ಇಡುಕಿರಿದಿದೆ. ಇಂಥ ಮನುಷ್ಯನ ನಡಾವಳಿಗಳ ಎಷ್ಟೋ ಸಂಗತಿಗಳನ್ನು ತುಂಬಲು ಇಲ್ಲಿ ಅವಕಾಶವಿದೆ ಮತ್ತು ಸ್ವಾತಂತ್ರ್ಯವಿದೆ. ಇದು ಕಾದಂಬರಿಕಾರನ ಓದಿನ ವಿಸ್ತಾರ ಮತ್ತು ಬೌದ್ಧಿಕತೆಯನ್ನು ಅನಾವರಣ ಮಾಡುವ ವೇದಿಕೆಯೂ ಆದಂತಿದೆ. ಲೀಲಾಜಾಲವಾಗಿ ಕುತೂಹಲದಿಂದ ಓದಿಸಿಕೊಂಡು ಹೋಗುವ ಗುಣದಿಂದ ಕಾದಂಬರಿ ಓದುಗರಿಗೆ ಹಿತವಾದ ಅನುಭವವನ್ನು ನೀಡುವುದರಲ್ಲಿ ಯಶಸ್ವಿಯಾಗಿದೆ.

ಕೃತಿ:ಮಹಾವೃಕ್ಷ – ಕಾದಂಬರಿ
ಕಂನಾಡಿಗ ನಾರಾಯಣ
ನವಕರ್ನಾಟಕ ಪ್ರಕಾಶನ
ಪುಟ: 144, ಬೆಲೆ ರೂ: 160
080-22161900

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT