ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶ್ವೇತ ಭವನ’ದ ವರ್ಣರಂಜಿತ ಕಥನ

Last Updated 7 ನವೆಂಬರ್ 2020, 19:30 IST
ಅಕ್ಷರ ಗಾತ್ರ

ಶ್ವೇತ ಭವನದ ಕಥನ
ಲೇ:
ಸುಧೀಂದ್ರ ಬುಧ್ಯ
ಪ್ರ: ಗೀತಾಂಜಲಿ ಪುಸ್ತಕ ಪ್ರಕಾಶನ
ಮೊ: 9449886390

***

ಜಗತ್ತಿನ ಎಲ್ಲ ಸುದ್ದಿ ಮಾಧ್ಯಮಗಳಲ್ಲೂ ಈಗ ಅಮೆರಿಕದ ಅಧ್ಯಕ್ಷೀಯ ಚುನಾವಣೆಯದೇ ಸದ್ದು. ಒಂದು ತಿಂಗಳಿನಿಂದಲೂ ಜೋರಾಗಿ ನಡೆಯುತ್ತಿರುವ ಈ ಮಥನ, ‘ಕದನ ಕುತೂಹಲ’ವನ್ನು ಹೆಚ್ಚಿಸಿದ್ದಲ್ಲದೆ, ರಾಜಕೀಯದ ಆಸಕ್ತರನ್ನೆಲ್ಲ ತುದಿಗಾಲ ಮೇಲೆ ನಿಲ್ಲಿಸಿದ್ದು ಸುಳ್ಳಲ್ಲ. ‘ಜಗತ್ತಿನ ದೊಡ್ಡಣ್ಣ’ನ ಮನೆಯ ಯಜಮಾನನು ‘ಶ್ವೇತ ಭವನ’ವನ್ನು ಪ್ರವೇಶಿಸುವ ಪ್ರಕ್ರಿಯೆ ಎಂದರೆ ಸುಮ್ಮನೆಯೇ ಮತ್ತೆ? ಹಿಂದಿನ ಬಾರಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಾಗ ಅಮೆರಿಕದಲ್ಲಿಯೇ ಇದ್ದ ಲೇಖಕ ಸುಧೀಂದ್ರ ಬುಧ್ಯ, ‘ಪ್ರಜಾವಾಣಿ’ಗಾಗಿ ಬರೆದ ಸರಣಿ ವರದಿಗಳ ಜತೆಗೆ ಅಪ್‌ಡೇಟ್‌ ಆದ ಮತ್ತಷ್ಟು ಲೇಖನಗಳನ್ನೂ ಸೇರಿಸಿಕೊಂಡು ಓದುಗರ ಕೈಸೇರಿರುವ ಹೊತ್ತಿಗೆಯೇ ‘ಶ್ವೇತ ಭವನ ಕಥನ’.

ವೃತ್ತಿಯಿಂದ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿರುವ ಬುಧ್ಯ, ರಾಜಕೀಯ ವಿಶ್ಲೇಷಕರೇನಲ್ಲ. ಆದರೆ, ‘ಪ್ರಜಾವಾಣಿ’ಗೆ ಅವರು ‘ಚುನಾವಣೆ ನಾಡಿನಿಂದ’ ವರದಿಗಳನ್ನು ಬರೆಯುವಾಗ ಅಮೆರಿಕದ ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಹತ್ತು–ಹಲವು ಗ್ರಂಥಗಳನ್ನು ಗುಡ್ಡೆ ಹಾಕಿಕೊಂಡು ಕುಳಿತು, ಅಧ್ಯಯನ ಮಾಡಿದವರು. ಅಲ್ಲಿನ ಗ್ರಂಥಾಲಯಗಳಲ್ಲಿ ಸಂಗ್ರಹಿಸಿಟ್ಟ ಅಪರೂಪದ ವಿವರಗಳ ಮೇಲೂ ಕಣ್ಣಾಡಿಸಿದವರು. ಸಂಶೋಧನಾ ವಿದ್ಯಾರ್ಥಿಯಂತೆ ಅಮೆರಿಕ ಅಧ್ಯಕ್ಷರ ಚುನಾವಣಾ ಚರಿತ್ರೆಯನ್ನೇ ಜಾಲಾಡಿದ ಅವರು, ಅಲ್ಲಿನ ರಾಜಕೀಯ ವಿದ್ಯಮಾನಗಳ ಆಳ ಅಗಲವನ್ನು ಸಮಗ್ರವಾಗಿ ಗ್ರಹಿಸಿ ಬರೆದ ವರದಿಗಳು ರಾಜಕೀಯ ಪಂಡಿತರನ್ನೂ ತಲೆದೂಗಿಸುವಂತಿವೆ.

ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಸಂಬಂಧಿಸಿದಂತೆ ಕನ್ನಡದಲ್ಲಿ ಇಂತಹದ್ದೊಂದು ಕೃತಿ ಇದುವರೆಗೆ ಬಂದಿಲ್ಲ. ನಮ್ಮ ಸಂವಿಧಾನ ರಚನಾ ಸಮಿತಿ ಸಭೆಗಳಲ್ಲಿ ಚುನಾವಣಾ ವ್ಯವಸ್ಥೆಯ ಸಂಬಂಧ ನಿರ್ಣಯ ಕೈಗೊಳ್ಳುವಾಗ, ಅಮೆರಿಕದ ಅಧ್ಯಕ್ಷೀಯ ಚುನಾವಣಾ ವ್ಯವಸ್ಥೆಯ ಕುರಿತೂ ದೀರ್ಘ ಚರ್ಚೆಗಳು ನಡೆದಿವೆ. ಸಂವಿಧಾನ ರಚನಾ ಸಮಿತಿಯಲ್ಲಿ ನಡೆದ ಆ ಚರ್ಚೆಯ ವಿವರಗಳನ್ನು ಹತ್ತು ಸಂಪುಟಗಳಲ್ಲಿ ಪ್ರಕಟಿಸಲಾಗಿದ್ದು, ಕುವೆಂಪು ಭಾಷಾ ಭಾರತಿ ವತಿಯಿಂದ ಕನ್ನಡಕ್ಕೂ ತರಲಾಗಿದೆ. ಆ ಸಂಪುಟಗಳಲ್ಲಿ ಅಮೆರಿಕ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಕುರಿತು ಅಲ್ಲಲ್ಲಿ ಕೆಲವು ವಿವರಗಳು ಇಣುಕಿವೆ. ತುಂಬಾ ಹಿಂದೆ ಕಡೆಂಗೋಡ್ಲು ಶಂಕರಭಟ್ಟರು ಸಂಪಾದಿಸುತ್ತಿದ್ದ ‘ರಾಷ್ಟ್ರಬಂಧು’ ಪತ್ರಿಕೆಯಲ್ಲೂ ಅಮೆರಿಕ ಅಧ್ಯಕ್ಷೀಯ ಚುನಾವಣೆ ಸಂದರ್ಭದಲ್ಲಿ ಸರಣಿ ಲೇಖನಗಳು ಪ್ರಕಟವಾದ ಉದಾಹರಣೆ ಇದೆ. ಆದರೆ, ಜಗತ್ತಿನ ಪ್ರಭಾವಿ ದೇಶದ ಪ್ರಥಮ ಪ್ರಜೆ ಎನಿಸಿಕೊಳ್ಳಲು ನಡೆಯುವ ಪೈಪೋಟಿ, ಹಾಗೆ ಪೈಪೋಟಿ ನಡೆಸುವವರ ವಿಕ್ಷಿಪ್ತ ವ್ಯಕ್ತಿತ್ವ, ಶ್ವೇತ ಭವನದ ಸುತ್ತಲಿನ ರಾಜಕೀಯ ಸುಳಿಗಳ ಕುರಿತು ಕನ್ನಡದ ಓದುಗರ ಕೈಗೆ ತುಂಬಾ ಕ್ವಚಿತ್ತಾಗಿ ಸಿಕ್ಕ ಪುಸ್ತಕ ಇದಾಗಿದೆ.

ಅಮೆರಿಕದ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯು ನಮ್ಮಲ್ಲಿ ನಡೆಯುವ ಚುನಾವಣೆಗಳಷ್ಟು ಸರಳವಾಗಿಲ್ಲ. ಅಲ್ಲಿನ ಸಂಕೀರ್ಣ ಪ್ರಕ್ರಿಯೆಯನ್ನು ಓದುಗರಿಗೆ ತುಂಬಾ ಸುಲಭವಾಗಿ ಅರ್ಥೈಸಿದ್ದಾರೆ ಬುಧ್ಯ. ಅಧ್ಯಕ್ಷಗಾದಿಯ ಬಯಕೆ ಹೊತ್ತವರು ಎದುರಿಸಬೇಕಾದ ಆರಂಭಿಕ ಸವಾಲುಗಳು, ಡೆಮಾಕ್ರಟ್‌ ಮತ್ತು ರಿಪಬ್ಲಿಕನ್‌ ಪಕ್ಷಗಳು ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ವಿಧಾನಗಳು, ಐಯೋವಾ ರಾಜ್ಯದಿಂದ ಶುರುವಾಗುವ ಚುನಾವಣೆ ಪ್ರಕ್ರಿಯೆಗಳು, ಅಧ್ಯಕ್ಷೀಯ ಸ್ಥಾನದ ಆಕಾಂಕ್ಷಿಗಳು ಸಾರ್ವಜನಿಕರ ಮುಂದೆ ನಡೆಸುವ ಸಂವಾದಗಳು... ಇವೇ ಮೊದಲಾದ ಸಂಗತಿಗಳ ಮೇಲೆ ಇಲ್ಲಿನ ಅಧ್ಯಾಯಗಳು ರನ್‌ವೇ ಉದ್ದಕ್ಕೂ ಇರುವ ಸಾಲು ದೀಪಗಳಂತೆ ಬೆಳಕು ಚೆಲ್ಲುತ್ತಾ ಹೋಗುತ್ತವೆ. ‘ಅಮೆರಿಕದ ಅಧ್ಯಕ್ಷೀಯ ಪಟ್ಟಕ್ಕೇರಲು ಅತಿರಥ ಮಹಾರಥರು ತೊಟ್ಟ ಶಸ್ತ್ರಗಳ, ಪಟ್ಟ ಪಡಿಪಾಟಲುಗಳ ರಥಯಾತ್ರೆಯೇ ಇಲ್ಲಿದೆ’ ಎನ್ನುವ ನಾಗೇಶ ಹೆಗಡೆ ಅವರ ಮಾತನ್ನು ಒಪ್ಪುವಂತೆ ಮಾಡುತ್ತವೆ.

ಪುಸ್ತಕ ಎರಡು ವಿಭಾಗಗಳನ್ನು ಹೊಂದಿದೆ. ಮೊದಲನೆಯದು ಚುನಾವಣಾ ಕಥನವಾದರೆ, ಎರಡನೆಯದು ವಿಚಾರ ಮಥನ. ವಿಚಾರ ಮಥನದ ಅಧ್ಯಾಯಗಳ ತುಂಬಾ ರಸವತ್ತಾದ ವಿವರಗಳು ಇಡುಕಿರಿದಿವೆ. ಅಧ್ಯಕ್ಷ ಪದವಿಗೇರಲು ಇಲಿನಾಯ್‌ದಿಂದ ವಾಷಿಂಗ್ಟನ್‌ ನಗರಕ್ಕೆ, ಮರಣಾನಂತರಮರಳಿ ಮಣ್ಣಿಗೆ ಸೇರಲು ವಾಷಿಂಗ್ಟನ್‌ನಿಂದ ಇಲಿನಾಯ್‌ಗೆ ನಡೆಯುವ ಲಿಂಕನ್‌ ಅವರ ರೈಲು ಯಾತ್ರೆಗಳ ವಿವರಗಳು ಕಣ್ಣಾಲಿಯನ್ನು ತೇವಗೊಳಿಸುತ್ತವೆ. ರೂಸ್ವೆಲ್ಟ್‌ ಛಾಯೆಯನ್ನು ಮೀರಿ ಬೆಳೆದ ಟ್ರೂಮನ್‌ ಅವರ ಸಾಧನೆ ಬೆರಗುಗೊಳಿಸುತ್ತದೆ. ಅಪ್ಪ–ಮಗ ಬುಷ್‌ ಇಬ್ಬರೂ ಅಧ್ಯಕ್ಷೀಯ ಹುದ್ದೆಗೇರಿದ ಕಥೆ, ವಿಲಾಸಿ ಜೀವನದ ಬೆನ್ನು ಹತ್ತಿದ್ದ ಕ್ಲಿಂಟನ್‌ ಸಾಹಸ ಮತ್ತಿತರ ಕಥನಗಳು ಕುತೂಹಲದಿಂದ ಓದಿಸಿಕೊಂಡು ಹೋಗುತ್ತವೆ.

ಅಧ್ಯಕ್ಷರ ಹುದ್ದೆಯಿಂದ ನಿರ್ಗಮಿಸಿದ ವ್ಯಕ್ತಿಗಳ ನಂತರದ ಜೀವನದ ವಿವರಗಳು ಖುಷಿ ಕೊಡುತ್ತವೆ. ಜಾರ್ಜ್‌ ವಾಷಿಂಗ್ಟನ್‌ ಅವರು ಅಧಿಕಾರದಿಂದ ಕೆಳಗಿಳಿದ ಮೇಲೆ ನದಿ ತೀರದಲ್ಲಿ ವಾಸವಿದ್ದು, ಗೋಧಿ, ಜೋಳ, ತಂಬಾಕು ಕೃಷಿಕರಾಗಿದ್ದು, ರೂಸ್ವೆಲ್ಟ್‌, ಆಫ್ರಿಕಾದ ಕಾಡುಗಳಲ್ಲಿ ಸುತ್ತಿದ್ದು, ವಿಲಿಯಂ ಟಾಫ್ಟ್‌ ಪ್ರಾಧ್ಯಾಪಕರಾಗಿದ್ದು, ಐಸೆನ್‌ ಹೊವರ್‌ ಪೇಂಟರ್‌ ಆಗಿದ್ದು... ಮೊದಲಾದ ಘಟನೆಗಳು ಅಬ್ಬಾ! ಎಂತಹ ಜನನಾಯಕರು ಎಂಬ ಉದ್ಗಾರವನ್ನು ಹೊರಡಿಸುತ್ತವೆ. ಭಾರತದಲ್ಲಿ ಇದು ಸಾಧ್ಯವೇ ಎಂಬ ಪ್ರಶ್ನೆಯನ್ನೂ ಎತ್ತುವಂತೆ ಮಾಡುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT