ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈತೋಟದಲ್ಲಿ ಬಗೆಬಗೆಯ ಪುಷ್ಪಗಳು

Last Updated 28 ನವೆಂಬರ್ 2020, 19:30 IST
ಅಕ್ಷರ ಗಾತ್ರ

ನವೋನ್ಮೇಷ
ಲೇಖಕ: ಬಿ.ಆರ್‌.ಲಕ್ಷ್ಮಣರಾವ್‌
ಪ್ರಕಾಶನ: ಅಂಕಿತ ಪುಸ್ತಕ, 9845693614

ಕನ್ನಡದ ಹಿರಿಯ ಕವಿಗಳಲ್ಲಿ ಒಬ್ಬರಾದ ಬಿ.ಆರ್‌. ಲಕ್ಷ್ಮಣರಾವ್‌ ಅವರ ಕಾವ್ಯಕೃಷಿಗೆ ಇದೀಗ ಭರ್ತಿ ಐವತ್ತು ವರ್ಷ. ಅವರ ಮೊದಲ ಕವನ ಸಂಕಲನ ‘ಗೋಪಿ ಮತ್ತು ಗಾಂಡಲೀನ’ 1971ರಲ್ಲಿಯೇ ಪ್ರಕಟವಾಗಿತ್ತು. ಇದೀಗ ಅವರ ಒಂಬತ್ತನೇ ಕವನ ಸಂಕಲನ ‘ನವೋನ್ಮೇಷ’ ಓದುಗರ ಕೈಸೇರಿದೆ.

ಐದು ದಶಕಗಳಿಂದ ಕಾವ್ಯಪುಷ್ಪಗಳನ್ನು ಅರಳಿಸುತ್ತಿದ್ದರೂ ಈ ಕಾವ್ಯ ಕೃಷಿಕ ಒಂದಿನಿತೂ ದಣಿದಿಲ್ಲ. ಚಿಂತಾಮಣಿ ಕೊಡ್ಲೆಕೆರೆ ಅವರು ಅಭಿಪ್ರಾಯಪಟ್ಟಂತೆ ಹೊಸತು ಹೊಸತಾಗಿ ಅರಳುವುದು, ಹೊಸ ಹೊಳಹು, ಹೊಸ ಹೊಸ ಭಾವಗಳನ್ನು ಸಂತತವಾಗಿ ಕಾಣುವುದು ಬಿಆರ್‌ಎಲ್‌ ಅವರ ಕಾವ್ಯದ ಗುಣ. ಬಿಆರ್‌ಎಲ್‌ ಅವರು ತಮ್ಮ ಕಾವ್ಯ ಕೃಷಿಯನ್ನು ಪುಟ್ಟ ಕೈತೋಟ ಎಂದು ಹೇಳಿಕೊಂಡಿದ್ದುಂಟು. ಕೈತೋಟ ಪುಟ್ಟದಾದರೂ ಎಷ್ಟೊಂದು ಬಗೆ ಬಗೆಯ ಪುಷ್ಪಗಳನ್ನು ಅವರು ಅರಳಿಸಿದ್ದಾರೆ ಎಂಬುದನ್ನು ಅರಿಯಲು ನವೋನ್ಮೇಷದ ಮೇಲೆ ಒಮ್ಮೆ ಕಣ್ಣಾಡಿಸಬೇಕು.

ಪ್ರೇಮ ಸಲ್ಲಾಪದ ಹೊನಲು ಸಂಕಲನದ ಉದ್ದಕ್ಕೂ ನವೋನ್ಮೇಷವಾಗಿಯೇ ಹರಿದಿದೆ. ಪ್ರೀತಿ ಎಂದರೆ ಕವಿಗೆ ಭೂಮಿ, ಬಾನಾಗಿ ತೋರಿದೆ. ಅಂದರೆ ಪ್ರೀತಿಯನ್ನು ವಿಶ್ವವ್ಯಾಪಕವಾಗಿ ಕಾಣುವ ತುಡಿತ ಅವರದಾಗಿದೆ. ಅದೇ ಪ್ರೀತಿಯನ್ನು ‘ಪೂರ್ಣಾಹುತಿ’ ಎಂಬ ಮತ್ತೊಂದು ಕವನದಲ್ಲಿ ಕವಿ ತಮಾಷೆ ಮಾಡುವ ರೀತಿ ವಿಶಿಷ್ಟವಾಗಿದೆ. ‘ನಿನ್ನೆಲ್ಲ ಪ್ರೇಮ ಸಂದೇಶಗಳು ಸ್ವಾಹಾ, ಖಾಸಗಿ ಸೆಲ್ಫೀಗಳು ಸ್ವಾಹಾ’ ಎಂದು ಸಾಗುವ ಸಾಲುಗಳು ನಗೆ ಉಕ್ಕಿಸುತ್ತವೆ. ‘ವಾಟ್ಸ್ಯಾಪ್‌ ಪ್ರೇಮಿಯ ಸಂಕಟ’ ಕೂಡ ಕಚಗುಳಿ ಇಡುತ್ತದೆ.

ಆಧುನಿಕ ಸ್ತ್ರೀಲೋಕದ ದ್ವಂದ್ವಗಳನ್ನು ‘ಗೊಂದಲ’ ಪದ್ಯ ಸಶಕ್ತವಾಗಿ ಹಿಡಿದಿಟ್ಟಿದೆ. ವರ್ತಮಾನದ ಆಗುಹೋಗುಗಳಿಗೂ ಇಲ್ಲಿನ ಕವಿತೆಗಳು ಸ್ಪಂದಿಸುತ್ತವೆ. ಇದಕ್ಕೆ ಉದಾಹರಣೆಯಾಗಿ ‘ಅಭಿನಂದನೆ’ ಕವಿತೆಯನ್ನು ತೆಗೆದುಕೊಳ್ಳಬಹುದು. ವಿವಾಹ ವಿಚ್ಛೇದನಗೊಳ್ಳುವವರನ್ನು ಈ ಕವಿತೆ ಅಭಿನಂದಿಸುತ್ತದೆ. ಆದರೆ, ಅದು ವ್ಯಂಗ್ಯದ ಧಾಟಿಯಲ್ಲಿ! ‘ಇಂದಿನ ಸಿನಿಮಾಗಳಂತೆ ಇಂದಿನ ಮದುವೆ ಕೂಡ. ಅದೊಂದು ತಾತ್ಕಾಲಿಕ ಪ್ರಯೋಗ’ ಎನ್ನುವ ಸಾಲುಗಳಲ್ಲಿ ವರ್ತಮಾನದ ವ್ಯಂಗ್ಯವೇ ಕಾಣುವುದಲ್ಲವೆ? ಪ್ರೀತಿ–ಪ್ರೇಮದ ನಡುವೆ ಕನ್ನಡದ ಕನವರಿಕೆ ಇದೆ. ಕೃಷ್ಣನೂ ಮುದ್ದು ಗೋವಿಂದನಾಗಿ ಬಂದು ಹೋಗುತ್ತಾನೆ.

ಡಬ್ಲ್ಯು.ಬಿ.ಯೇಟ್ಸ್‌, ಜಾನ್‌ ಡನ್‌, ಕ್ಲಾರಿಬೆಲ್‌ ಅಲೆಗ್ರಿಯ, ರಾಬರ್ಟ್‌ ಫ್ರಾಸ್ಟ್‌, ಎಮಿಲಿ ಡಿಕಿನ್ಸನ್‌, ಡಿಲಾನ್‌ ಥಾಮಸ್‌ ಅವರ ಕಾವ್ಯವನ್ನು ಕನ್ನಡಕ್ಕೆ ತಂದಿರುವ ಬಿಆರ್‌ಎಲ್‌ ‘ಅನುವಾದ’ ವಿಭಾಗದಲ್ಲಿ ಅವುಗಳನ್ನು ಕೊಟ್ಟಿದ್ದಾರೆ. ಅವರ ಮತ್ತೊಂದು ಕಾವ್ಯ ಗುಣವಾದ ತುಂಟತನ ಇಲ್ಲಿನ ಕವನಗಳಿಗೆ ತಾಜಾತನವನ್ನು ತುಂಬಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT