ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಳಸಿಂಗರಾಚಾರ್ಯರ ‘ಪ್ರಥಮ ಚಿಕಿತ್ಸೆ’

Last Updated 20 ಜುಲೈ 2019, 19:30 IST
ಅಕ್ಷರ ಗಾತ್ರ

ದೇವಶಿಖಾಮಣಿ ಅಳಸಿಂಗರಾಚಾರ್ಯರ ಈ ‘ಅಪಾಯ ಸಂಭವಗಳಲ್ಲಿ ಪ್ರಥಮ ಚಿಕಿತ್ಸೆ’ ಕೃತಿಯು ಆನರಬಲ್ ಡಾಕ್ಟರ್ ಯು. ರಾಮರಾವ್ ಅವರಿಂದ 1914ರಲ್ಲಿ ರಚಿತವಾದ Outlines of First Aid ಎನ್ನುವ ಇಂಗ್ಲಿಷ್ ಕೃತಿಯ ಕನ್ನಡದ ಭಾಷಾಂತರ. ಇದರ ಮೊದಲನೆಯ ಆವೃತ್ತಿಯು 1916 ಜನವರಿ 1ರಂದು ಪ್ರಕಟವಾಯಿತು. ಈ ಕೃತಿಯನ್ನು ದೇವಶಿಖಾಮಣಿ ಅವರು ಕೃಷ್ಣರಾಜ ಒಡೆಯರ್ ಅವರ ಅನುಮತಿಯೊಂದಿಗೆ ಅವರಿಗೆ ಜಿತಜನಮನೋsನುರಾಗಃ | ಸಿತಕೀರ್ತಿಲತಾವಿತಾನಿತಾಶಾನ್ತಃ || ಯಸ್ಸಕಲವಿದನಘಸ್ಸ್ವಯಂ | ಐನ್ದ್ರ್ಯಾಜಯತು ಶ್ರಿಯಾಸಕೃಷ್ಣೇನ್ದ್ರಃ || ಎಂಬ ಸಂಸ್ಕೃತ ಶ್ಲೋಕದೊಂದಿಗೆ ಅರ್ಪಿಸಿರುತ್ತಾರೆ.

ಡಾಕ್ಟರ್ ಯು. ರಾಮರಾವ್ ಅವರನ್ನು ಕುರಿತಾಗಲೀ ಅವರು ಎರಡು ಕೃತಿಗಳ ಹೊರತುಪಡಿಸಿ ಇತರ ಕೃತಿಗಳನ್ನು ರಚಿಸಿದ್ದಾರೆಯೇ ಇಲ್ಲವೆ ಎನ್ನುವುದರ ಕುರಿತಾಗಲೀ ಏನೂ ಮಾಹಿತಿಗಳು ದೊರೆತಿಲ್ಲ. ಇನ್ನು ಅಳಸಿಂಗರಾಚಾರ್ಯರ ವಿಷಯಕ್ಕೆ ಬಂದರೆ ಕನ್ನಡ ಸಾಹಿತ್ಯದ ನವೋದಯಪೂರ್ವ ಕಾಲಘಟ್ಟದಲ್ಲಿ ಮೂವರು ಅಳಸಿಂಗರಾಚಾರ್ಯರು ಇದ್ದಾರೆ. ಎಂ.ಡಿ.ಅಳಸಿಂಗರಾಚಾರ್ಯರು ಮಕ್ಕಳ ಸಾಹಿತ್ಯದಲ್ಲಿ ಸೇವೆ ಸಲ್ಲಿಸಿದವರು. ಪುಸ್ತಕಂ ಅಳಸಿಂಗರಾಚಾರ್ಯರು ‘ಕರ್ಣಾಟಕ ಭಾಷಾಭೂಷಣಕ್ಕೆ ಟೀಕೆ’ ಹಾಗೂ ‘ಚಾಣಕ್ಯತಂತ್ರ ಚಮತ್ಕಾರ’ ಮುಂತಾದ ಕೃತಿಗಳನ್ನು ರಚಿಸಿದವರು.

ಪ್ರಸ್ತುತ ದೇವಶಿಖಾಮಣಿ ಅಳಸಿಂಗರಾಚಾರ್ಯರು (ಜನನ: 18-04-1877 ಮರಣ: 5-12-1940) ಮೈಸೂರು ಸಂಸ್ಥಾನದ ಮೇಲುಕೋಟೆಯ ಪ್ರಸಿದ್ಧ ವಿದ್ವಾಂಸರ ವಂಶದಲ್ಲಿ ಜನಿಸಿದವರು. ಆರಂಭದಲ್ಲಿ ಮೈಸೂರಿನ ಮರಿಮಲ್ಲಪ್ಪನವರ ಹೈಸ್ಕೂಲಿನಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಅವರು ನಂತರ ಮದರಾಸಿನ ಕ್ರಿಸ್ಚಿಯನ್ ಕಾಲೇಜು (19 ವರ್ಷ), ಪ್ರೆಸಿಡೆನ್ಸಿ ಕಾಲೇಜು (11 ವರ್ಷ) ಹಾಗೂ ಕ್ವೀನ್ ಮೇರೀಸ್ ಕಾಲೇಜುಗಳಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕೆಲಸ ಮಾಡಿ 1932ರಲ್ಲಿ ಮದರಾಸು ವಿಶ್ವವಿದ್ಯಾನಿಲಯದ ಕನ್ನಡ ಅಭ್ಯಾಸ ಕ್ರಮ ಸಮಿತಿಯ ಸಭಾಸದರಾಗಿದ್ದರು.

ಅಳಸಿಂಗರಾಚಾರ್ಯರ ಎರಡು ವಿಶೇಷಗಳನ್ನು ಇಲ್ಲಿ ಉಲ್ಲೇಖಿಸಬೇಕು. ಮೊದಲನೆಯದಾಗಿ ಇವರು ಸ್ವಾಮಿ ವಿವೇಕಾನಂದರಿಗೆ ಧರ್ಮಪ್ರಚಾರಕ್ಕಾಗಿ ಅಮೆರಿಕ ಪ್ರವಾಸ ಮಾಡಲು ತಮ್ಮ ಕೈಲಾದಷ್ಟು ದ್ರವ್ಯಸಹಾಯ ಮಾಡಿದುದು. ಎರಡನೆಯದಾಗಿ, ಇವರು ತಮ್ಮ ಆರಂಭದ ದೆಸೆಯಲ್ಲಿ ಕುಕ್ಕುರುಗಾಲಲ್ಲಿ ಕುಳಿತು ಓಲೆಗರಿ ಹಾಗೂ ಕಂಠದಿಂದ ಕೊರೆಯುತ್ತಿದ್ದು, ಕಾಲಕ್ರಮೇಣ ಕಾಗದ ಲೇಖನಿಗಳ ಲೇಖ್ಯಸಾಮಗ್ರಿಗೆ ಮಾರ್ಪಾಡು ಮಾಡಿಕೊಂಡವರು. ಈ ಸಂಗತಿಯನ್ನು ನನಗೆ ದಿವಂಗತ ಬಿ.ಜಿ.ಎಲ್.ಸ್ವಾಮಿಯವರು ತಿಳಿಸಿದ್ದರು.

ಪ್ರಥಮ ಚಿಕಿತ್ಸೆ ಕೃತಿಯ 1916ರಲ್ಲಿ ಪ್ರಕಟಗೊಂಡ ಮೊದಲನೆಯ ಆವೃತ್ತಿಯು ಅತ್ಯಂತ ಕಿರಿದಾದ ಪುಸ್ತಕವಾಗಿದ್ದು ಅದರಲ್ಲಿ 512 ಪುಟಗಳಿವೆ. ಇದರ ಐದನೆಯ ಆವೃತ್ತಿಯಲ್ಲಿ 250 ಪುಟಗಳಿದ್ದು, ಅದರ ಕ್ರಯ 12 ಆಣೆ. ಈ ಆವೃತ್ತಿಯ ಕೊನೆಯಲ್ಲಿ ಡಾಕ್ಟರ್ ಯು. ರಾಮರಾಯರ First Aid during Child Birth ಎನ್ನುವ ಆರು ಆಣೆಗಳ ಬೆಲೆಯ ಮತ್ತೊಂದು ಪುಸ್ತಕದ ಜಾಹೀರಾತನ್ನು ನೀಡಲಾಗಿದೆ. ಕಿರು ಮಧ್ಯಮ ಆಕಾರದ 228 ಪುಟಗಳ ಈ ಪುಸ್ತಕದ ಏಳನೆಯ ಆವೃತ್ತಿಯ ಎರಡು ಸಾವಿರ ಪ್ರತಿಗಳು 1950ರಲ್ಲಿ ಮದರಾಸಿನ ಆಂಟಿಸೆಪ್ಟಿಕ್ ಮುದ್ರಾಶಾಲೆಯಲ್ಲಿ ಮುದ್ರಿಸಲ್ಪಟ್ಟು ಇದರ ಕ್ರಯವು ಒಂದು ರೂಪಾಯಿ ಆಗಿದೆ.

ಪ್ರಥಮಚಿಕಿತ್ಸೆ ಪುಸ್ತಕದ ಮೊದಲ ಆವೃತ್ತಿಯ ಮುನ್ನುಡಿ ರೂಪದ ವಿಜ್ಞಾಪನೆಯನ್ನು ಮೂಲ ಲೇಖಕರಾದ ಯು. ರಾಮರಾವ್ ಅವರೇ ಬರೆದಿರುತ್ತಾರೆ. ಅವರು ವಿಜ್ಞಾಪನೆಯಲ್ಲಿ ಪುಸ್ತಕ ಬರೆಯಲು ಹೀಗೆ ಕಾರಣ ನೀಡಿರುತ್ತಾರೆ: ‘ಕಳೆದ 1914ನೇ ಸೆಪ್ಟೆಂಬರ್ ತಿಂಗಳಲ್ಲಿ ಮದ್ರಾಸಿನಲ್ಲಿ ಅನೇಕ ಡಾಕ್ಟರುಗಳ ಸಮ್ಮೇಳನವೊಂದು ನಡೆದಾಗ, ಇಲ್ಲಿನ ಗವರ್ನರ್‌ರಾದ ಘನತೆಯನ್ನು ಹೊಂದಿದ ಲಾರ್ಡ್ ಪೆಂಟ್‍ಲೆಂಡ್ ದೊರೆಗಳವರು ವೈದ್ಯಶಾಸ್ತ್ರಜ್ಞರು ಇಲ್ಲಿನ ಪುರುಷರಿಗೂ, ಸ್ತ್ರೀಯರಿಗೂ ಪ್ರಥಮಚಿಕಿತ್ಸೆಯ ವಿಷಯದಲ್ಲಿ ಶಿಕ್ಷಣವನ್ನು ಕೊಡುತ್ತ ಬಂದರೆ, ಇಂತಹ ಯುದ್ಧಕಾಲಗಳಲ್ಲಿ ಮಾತ್ರವಲ್ಲದೆ, ಇತರ ಕಾಲಗಳಲ್ಲಿಯೂ ಜನಸಾಮಾನ್ಯಕ್ಕೆ ಬಹಳ ಉಪಯೋಗವುಂಟೆಂಬ ಅಭಿಪ್ರಾಯವನ್ನು ಸೂಚಿಸಿದರು.

‘ಅಮೋಘವಾದ ಈ ಸೂಚನೆಯನ್ನನುಸರಿಸಿ ನಾನು, ಮೊದಲು ಈ ಪ್ರಥಮ ಚಿಕಿತ್ಸೆಯ ವಿಷಯದಲ್ಲಿ ಉಪನ್ಯಾಸ ಮಾಡತೊಡಗಿ, ಆಗ ಸಂಗ್ರಹಿಸಿದ ವಿಷಯಗಳೆಲ್ಲವನ್ನೂ ಒಂದು ಸಣ್ಣ ಪುಸ್ತಕವನ್ನಾಗಿ ಮಾಡಿಟ್ಟರೆ, ಇಲ್ಲಿನ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಪೊಲೀಸ್, ರೈಲ್ವೆ, ಮುಂತಾದ ಬೇರೆ ಇಲಾಖೆಗಳಲ್ಲಿ ಇದೇ ಕಾರ್ಯದಲ್ಲಿರುವ ‘ಆಂಬುಲೆನ್ಸ್‌’ ವಿದ್ಯಾರ್ಥಿಗಳಿಗೂ, ಇನ್ನೂ ಜನಸಾಮಾನ್ಯಕ್ಕೂ ಉಪಯೋಗಪಡುವುದೆಂಬ ಉದ್ದೇಶದಿಂದ ಈ ಪುಸ್ತಕವನ್ನು ಹೊರಕ್ಕೆ ತಂದೆನು.’

ಚಿತ್ರ: ಗುರು ನಾವಳ್ಳಿ
ಚಿತ್ರ: ಗುರು ನಾವಳ್ಳಿ

ತಮ್ಮ ಕೃತಿಯನ್ನು ಶುದ್ಧವಾದ ಮತ್ತು ಸುಲಭವಾದ ಕನ್ನಡ ಭಾಷೆಗೆ ಪರಿವರ್ತಿಸುವ ಕಾರ್ಯವನ್ನು ಕೈಗೊಂಡುದಕ್ಕಾಗಿ ರಾಮರಾವ್ ಅವರು ದೇವಶಿಖಾಮಣಿ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಿರುತ್ತಾರೆ. ಈ ಪುಸ್ತಕದಲ್ಲಿ ಒಟ್ಟು ಹತ್ತು ಅಧ್ಯಾಯಗಳಿದ್ದು ಅವು ಇಂತಿವೆ : ಮನುಷ್ಯನ ಶರೀರ ರಚನೆ. ಗಾಯದ ಕಟ್ಟುಗಳು(Bandages), ರಕ್ತಸ್ರಾವಗಳು (Haemorrhage), ಮೂಳೆ ಮುರಿಯುವುದು ಅಥವಾ ಅಸ್ಥಿಭಂಗಗಳು (Fractures), ಶ್ವಾಸಾಂಗಗಳ ಮತ್ತು ವಿಷಸಂಬಂಧವಾದ ಅಪಾಯಗಳು (Breathing and poisoning), ನಾಡೀಸನ್ನಿವೇಶಗಳು (Nervous System), ಉರಿ ತಗುಲುವುದು, ಗಾಯ, ಕಡಿತ ಮುಂತಾದುವು Burns, Wounds and Bites etc.), ನೊಂದವರನ್ನು ಬೇರೆಡೆಗೆ ಸಾಗಿಸುವ ಕ್ರಮಗಳು (Removal of the Injured or Sick), ನೊಂದವರನ್ನು ಮಲಗಿಸುವ ಸ್ಥಳ, ಉಡುಪು, ಹಾಸಿಗೆಯ ಸೌಕರ್ಯಗಳು (Preparation of Bedroom in cases of Accidents and Emergencies), ವಿಷಾನಿಲಗಳು (Poison Gases).

ಕೃತಿಕಾರರು ಇಂಗ್ಲಿಷ್‌ ಶಬ್ದಗಳಿಗೆ ಪರ್ಯಾಯವಾಗಿ ಬಳಸಿರುವ ಕನ್ನಡ ಶಬ್ದಗಳು ಎಷ್ಟು ಸೂಕ್ತ ಹಾಗೂ ಸಮಂಜಸವಾಗಿವೆ ಎನ್ನುವುದನ್ನು ಗಮನಿಸಿ. ಇದರ ಜೊತೆಗೆ ಈ ಕೃತಿಯಲ್ಲಿ ಪ್ರಥಮ ಚಿಕಿತ್ಸೆಯ ಒಂದುನೂರಾ ಹತ್ತು ರೀತಿಯ ಚಿತ್ರಪಟಗಳನ್ನು ನೀಡಿರುವುದು ಪ್ರಥಮ ಚಿಕಿತ್ಸೆಕಾರರಿಗೆ, ರೋಗಿಗಳಿಗೆ ತುಂಬಾ ಉಪಯುಕ್ತವಾಗಿದೆ. ಇವರ ನಿರೂಪಣಾಕ್ರಮ ಮತ್ತು ವಿಷಯದ ನಿಖರ ತಿಳಿವಳಿಕೆಯ ನಿದರ್ಶನಕ್ಕಾಗಿ ಆರನೆಯ ಅಧ್ಯಾಯದ ನಾಡೀ ಸನ್ನಿವೇಶಗಳು ಶೀರ್ಷಿಕೆಯ ಪ್ರಜ್ಞೆ ತಪ್ಪುವುದು (Insensibility or Unconciousness) ವಿಷಯವನ್ನು ಗಮನಿಸಬಹುದು: ‘ಅನೇಕ ವಿಧದ ವ್ಯಾಧಿಗಳಲ್ಲಿಯೂ ಆಕಸ್ಮಿಕವಾಗಿ ಬಂದೊದಗಿದ ಕೆಲವು ಅಪಾಯಗಳಲ್ಲಿಯೂ, ಒಡನೆಯೇ ಮನುಷ್ಯನಿಗೆ ಪ್ರಜ್ಞೆ ತಪ್ಪಿಹೋಗುವುದುಂಟು. ಮಿದುಳಿನ ಬಲವು ತಪ್ಪಿ ಅದರ ಕೆಲಸವು ನಿಂತು ಹೋಗುವುದೇ ಪ್ರಜ್ಞೆ ತಪ್ಪುವುದಕ್ಕೆ ಕಾರಣವು. ಈ ಬುದ್ಧಿಭ್ರಮಣವು ಸ್ವಲ್ಪಕಾಲ ಮಾತ್ರವಿದ್ದು ನಿಂತುಹೋದರೂ ಹೋಗಬಹುದು. ಇಲ್ಲವೇ ದೀರ್ಘಕಾಲದವರೆಗೆ ಎಳೆದರೂ ಎಳೆಯಬಹುದು. ಇದರಿಂದಲೇ ಮರಣವೂ ಉಂಟಾಗಬಹುದು.

ಪ್ರಜ್ಞೆ ತಪ್ಪುವುದಕ್ಕೆ ಈ ಕೆಳಗೆ ಕಂಡ ಅನೇಕ ಕಾರಣಗಳುಂಟು: 1. ಮಿದುಳು ಅದಿರುವುದು (Concussion) 2. ಒತ್ತುವುದು (Compression) 3. ಮಿದುಳಿನಲ್ಲಿರುವ ರಕ್ತನಾಳವು ಒಡೆಯುವುದು. ಕ್ಷಿಪ್ರಸನ್ನಿ (Apoplexy) 4. ಅಪಸ್ಮಾರ (Epilepsy) 5. ಸೂತಿಕವಾಯು (Hysteria) 6. ಬಹಳ ಬಲಹೀನತೆ. (Fainting) 7. ಬಾಲ್ಯದಲ್ಲಿ ಬರುವ ಸೆಳವು (Infantile Convulsions) 8. ರಾವು ಬಡಿಯುವುದು ಅಥವಾ ಆಕಸ್ಮಿಕವಾದ ಕಳವಳ (Shock) 9. ಧಾತುಸ್ತಂಭ (Collapse) 10. ಬಹಳ ಬಿಸಿಲಿನಿಂದಲೂ, ಸೆಕೆಯಿಂದಲೂ ಉಂಟಾಗುವ ನಂಜು (Sun Stroke and Heat Stroke) 11. ಶ್ವಾಸಬಂಧನ (Asphyxia) 12. ವಿದ್ಯುಚ್ಛಕ್ತಿಯ ಮತ್ತು ಸಿಡಿಲಿನ ಬಡಿತಗಳು (Shock from electricity and Lightning). ಕೃತಿಕಾರರು ಎಷ್ಟು ಸಮಂಜಸವಾದ ಕನ್ನಡ ಪರ್ಯಾಯ ಪದಗಳನ್ನು ನೀಡಿದ್ದಾರೆಂಬುದನ್ನು ವಾಚಕರ ಗಮನಕ್ಕೆ ತರುವುದಕ್ಕಾಗಿ ಇಲ್ಲಿ ಆವರಣಗಳಲ್ಲಿ ಇಂಗ್ಲಿಷ್ ಮೂಲ ಶಬ್ದಗಳನ್ನು ನೀಡಲಾಗಿದೆ.

ಕೃತಿಯ ಕೊನೆಯೊಳಗೆ ಪ್ರಥಮ ಚಿಕಿತ್ಸೆಗೆ ಸಂಬಂಧಿಸಿದ ಇಂಗ್ಲಿಷ್ ಪಾರಿಭಾಷಿಕ ಪದಗಳಿಗೆ ಪರ್ಯಾಯವಾಗಿ ನೀಡಿರುವ ಪದಗಳು ಕನ್ನಡ ಶಬ್ದಕೋಶದ ಬೆಳವಣಿಗೆಯ ದೃಷ್ಟಿಯಿಂದ ಉಪಯುಕ್ತವಾಗಿರುವುದಲ್ಲದೆ, ಅಲ್ಲಿಯೇ ಅವುಗಳ ವಿವರಣ ಸೂಚಿಯೂ ಆಗಿದ್ದು ಪುಸ್ತಕದೊಳಗಿನ ದಿಕ್ಸೂಚಿಯೂ ಆಗಿರುವುದು ಇದರ ವಿಶೇಷ. Lockjaw ಎನ್ನುವ ಇಂಗ್ಲಿಷ್ ಶಬ್ದಕ್ಕೆ ‘ಹಲ್ಲುಗದಿ’, ಧನುರ್ವಾಯು ಎಂಬುದು ಪರ್ಯಾಯ ಪಾರಿಭಾಷಿಕ ಪದ. ಅದರ ಬಗ್ಗೆ ವಿವರಣೆ 99ನೆಯ ಪುಟದಲ್ಲಿದೆ ಎನ್ನುವುದರ ಸೂಚನೆ ಇದೆ. ಇಂತಹ ಸುಮಾರು ಒಂದು ಸಾವಿರ ಶಬ್ದಗಳಿಗೆ ಉಪಯುಕ್ತ ಸೂಚಿಯಿದೆ. ಅಪಾಯ ಸಂಭವಗಳಲ್ಲಿ ಅನುಸರಿಸಬೇಕಾದ ಪ್ರಥಮ ಚಿಕಿತ್ಸೆಯನ್ನು ಪಾಲಿಸಲು ಆ ಕಾಲಘಟ್ಟದ ಕನ್ನಡಿಗರಿಗೆ ಈ ಕೃತಿ ಒಂದು ಕೈಪಿಡಿಯಾಗಿದ್ದುದನ್ನು ಅದರ ಬಹುಮುದ್ರಣಗಳು ಸೂಚಿಸುತ್ತವೆ. ಕನ್ನಡದಲ್ಲಿ ವಿಜ್ಞಾನ ಕೋಶ ರಚನೆ ಮಾಡುವವರು ಈ ಕೃತಿಯನ್ನು ಧಾರಾಳವಾಗಿ ಬಳಸಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT