ಸೋಮವಾರ, ಸೆಪ್ಟೆಂಬರ್ 27, 2021
21 °C

ಪುಸ್ತಕ ವಿಮರ್ಶೆ: ಲಿಂಗಪರಿವರ್ತಿತ ವ್ಯಕ್ತಿಯ ವಿದ್ವತ್‌ ಪ್ರಪಂಚ

ಎಚ್. ದಂಡಪ್ಪ Updated:

ಅಕ್ಷರ ಗಾತ್ರ : | |

Prajavani

ಮಾನವಿ ಬಂದೋಪಾಧ್ಯಾಯ ಅವರ ‘A Gift of Goddess Lakshmi’ ಎಂಬ ಆತ್ಮಕತೆಯನ್ನು ‘ಗಂಡು ಜೀವ ಹೆಣ್ಣು ಭಾವ’ ಎಂಬ ಶೀರ್ಷಿಕೆಯಡಿಯಲ್ಲಿ ಬಿ.ಎಸ್. ಜಯಪ್ರಕಾಶ ನಾರಾಯಣ ಅವರು ಕನ್ನಡಕ್ಕೆ ತಂದಿದ್ದಾರೆ. ಮಾನವಿಯವರು ಗಂಡಾಗಿ ಹುಟ್ಟಿ ಹೆಣ್ಣಿನ ಭಾವಗಳನ್ನು ಹೊತ್ತು ಅವಮಾನ, ನೋವು, ಹಿಂಸೆ, ಕಷ್ಟ ಎದುರಿಸಿ ಸಿದ್ಧಿಸಿಕೊಂಡ ಆತ್ಮವಿಕಾಸ ಮತ್ತು ಮಾಡಿದ ಸಾಧನೆಯ ಸ್ವರೂಪವನ್ನು ಹನ್ನೊಂದು ಅಧ್ಯಾಯಗಳಲ್ಲಿ ಅನಾವರಣಗೊಳಿಸಿದ್ದಾರೆ.

ಗಂಡು-ಹೆಣ್ಣು ಎಂಬುದು ಪ್ರಕೃತಿಸಹಜ ಲಿಂಗ ವ್ಯತ್ಯಾಸಗಳಷ್ಟೆ. ಇದು ಮಾನವ ಕುಲದ ಸಂತಾನದ ಮುಂದುವರಿಕೆಗಾಗಿ ಪ್ರಕೃತಿಯೇ ನಿರ್ಮಾಣ ಮಾಡಿರುವ ಜೈವಿಕ ವ್ಯತ್ಯಾಸ. ಅದನ್ನು ಬಿಟ್ಟರೆ ಹೆಣ್ಣು ಮತ್ತು ಗಂಡು ಇಬ್ಬರೂ ಅಪೂರ್ಣರೇ.
ಸಾಮರ್ಥ್ಯ, ಬುದ್ಧಿವಂತಿಕೆ, ಜ್ಞಾನ ಎಲ್ಲದರಲ್ಲೂ ಇಬ್ಬರೂ ಸಮಾನರು. ಆದರೆ, ನಮ್ಮ ಸಾಮಾಜಿಕ ವ್ಯವಸ್ಥೆ ಮೇಲು ಕೀಳಿನ ಭಾವನೆಗಳನ್ನು ಉಂಟು ಮಾಡಿದೆ.

ಕೆಲವು ಜೀವಜಂತುಗಳಲ್ಲಿ ಗಂಡುಗಳು ಇಲ್ಲದೆಯೂ ಸಂತಾನೋತ್ಪತ್ತಿ ಸಾಧ್ಯವಾಗಿರುವುದನ್ನು ವಿಜ್ಞಾನಿಗಳು ಸಂಶೋಧನೆ ಮಾಡಿದ್ದಾರೆ. ಹಾಗೇನಾದರೂ ಮಾನವ ಕುಲದಲ್ಲಿ ಸಾಧ್ಯವಾದರೆ ಪುರುಷನ ಅಗತ್ಯವೇ ಇಲ್ಲ. ಸಂತಾನೋತ್ಪತ್ತಿ ಉದ್ದೇಶಬಿಟ್ಟರೆ ಗಂಡು ಮತ್ತು ಹೆಣ್ಣಿನ ಮಧ್ಯೆ ಭೇದ ಇಲ್ಲವೇ ಇಲ್ಲ ಎಂಬುದು ಜೀವಶಾಸ್ತ್ರಜ್ಞರ ಅಭಿಪ್ರಾಯ. ಆದ್ದರಿಂದ ಸಂತಾನೋತ್ಪತ್ತಿ ಸಾಮರ್ಥ್ಯವಿಲ್ಲದ ಟ್ರಾನ್ಸ್‌ಜೆಂಡರ್‌ಗಳ ಬಗ್ಗೆ ಅನಾರೋಗ್ಯಕರ ನಿಲುವುಗಳು ಬೇಕಾಗಿಲ್ಲ.

ಸಿಮೋನ್ ದ ಬುವಾ ಹೇಳುವಂತೆ, ‘One is not born, but rather becomes a woman’ ಸ್ತ್ರೀಯಾಗಿ ಯಾರೂ ಹುಟ್ಟಿರುವುದಿಲ್ಲ, ಆಗುತ್ತಾರಷ್ಟೆ. ಈ ಮಾತನ್ನು ಟ್ರಾನ್ಸ್‌ಜೆಂಡರ್ ವ್ಯಕ್ತಿಗಳಿಗೂ ಅನ್ವಯಿಸಿಕೊಳ್ಳಬಹುದು. ಸ್ತ್ರೀ ಮತ್ತು ಪುರುಷರು ಸಾಮಾಜಿಕವಾಗಿ ರೂಪುಗೊಳ್ಳುತ್ತಾರೆ. ಟ್ರಾನ್ಸ್‌ಜೆಂಡರ್‌ಗಳ ವಿಷಯದಲ್ಲಿಯೂ ಈ ರೂಪುಗೊಳ್ಳುವಿಕೆಯನ್ನು ಒಪ್ಪಿಕೊಳ್ಳಬೇಕು. ಆಗ ಅವರೂ ಮನುಷ್ಯರು ಎಂಬುದನ್ನು ಒಪ್ಪಿದಂತಾಗುತ್ತದೆ. ಆದರೆ, ಈ ಸಮಾಜ ಸ್ತ್ರೀಯರನ್ನೇ ಸಮಾನರು ಎಂದು ಒಪ್ಪುತ್ತಿಲ್ಲ. ಇನ್ನು ಟ್ರಾನ್ಸ್‌ಜೆಂಡರ್‌ಗಳ ಪಾಡೇನು? ಇಂತಹ ಪಾಡು ಮತ್ತು ಹಾಡನ್ನು ‘ಗಂಡು ಜೀವ ಹೆಣ್ಣು ಭಾವ’ ಎಂಬ ಕಥನ ನಿರೂಪಿಸುತ್ತದೆ.

ಆರ್ಥಿಕವಾಗಿ ಸಬಲವಾಗಿರುವ ಕುಟುಂಬದಲ್ಲಿ ಇಬ್ಬರು ಅಕ್ಕಂದಿರ ನಂತರ ಹುಟ್ಟಿದ ಸೋಮನಾಥ ಬಂದೋಪಾಧ್ಯಾಯನೆಂಬ ಹುಡುಗ, ಶಾಲಾ–ಕಾಲೇಜು ಮತ್ತು ತನ್ನ ಸುತ್ತಮುತ್ತಲ ಪರಿಸರದಲ್ಲಿ ‘ಹೆಣ್ಣಿನಂತೆ ವರ್ತಿಸುತ್ತಿದ್ದಾನೆ’ ಎಂಬ ಕಾರಣದಿಂದ ಅವಮಾನಕ್ಕೆ ಒಳಗಾಗುತ್ತಾನೆ. ತಂದೆ, ತಾಯಿ, ಅಕ್ಕಂದಿರು ನೊಂದುಕೊಳ್ಳುತ್ತಾರೆ. ಆದರೆ, ಸೋಮನಾಥನಿಗೆ ತಾನು ಹೆಣ್ಣಾಗಬೇಕು, ತನ್ನದೇ ಆದ ಸಂಸಾರ ಇರಬೇಕು ಎಂಬ ಭಾವ ಮನಸ್ಸಿನಲ್ಲಿ ಬೇರೂರಿ ಬೆಳೆಯುತ್ತಾ ಹೋಗುತ್ತದೆ. ಹಲವಾರು ಸ್ನೇಹಿತರು ಲೈಂಗಿಕವಾಗಿ ಬಳಸಿಕೊಂಡು ನಂತರ ಬಿಟ್ಟು ಹೋಗುತ್ತಾರೆ. ಆದರೆ, ಸೋಮನಾಥ ಹಟದಿಂದ ಆತ್ಮವಿಶ್ವಾಸದಿಂದ ಓದುತ್ತಾರೆ. ಬಂಗಾಳಿ ಸಾಹಿತ್ಯದಲ್ಲಿ ಎಂ.ಎ., ಎಂ.ಫಿಲ್., ಪಿಎಚ್.ಡಿ. ಪದವಿಗಳನ್ನು ಗಳಿಸಿ ಕಾಲೇಜಿನಲ್ಲಿ ಅಧ್ಯಾಪಕರಾಗುತ್ತಾರೆ. ನಂತರ ಪ್ರಿನ್ಸಿಪಾಲರಾಗಿ, ಲೇಖಕರಾಗಿ ‘ಅಬೋ ಮಾನವ್’ ಎಂಬ ನಿಯತಕಾಲಿಕ ನಡೆಸುತ್ತಾ ಅನೇಕ ಸೆಮಿನಾರುಗಳಲ್ಲಿ ಭಾಗವಹಿಸುತ್ತಾ ಸಾಂಸ್ಕೃತಿಕವಾಗಿ ತಮ್ಮ ಸಾಧನೆಯನ್ನು ಮಾಡುತ್ತಾರೆ.

ಭಾರತದಲ್ಲಿ ಮೊತ್ತಮೊದಲ ಬಾರಿಗೆ, ‘ಲಿಂಗ ಪರಿವರ್ತನೆ’ ಮಾಡಿಸಿಕೊಂಡ ವ್ಯಕ್ತಿಯೊಬ್ಬರು ಪ್ರಿನ್ಸಿಪಾಲರಾಗಿ ವಿದ್ವತ್ತನ್ನು ಗಳಿಸಿಕೊಂಡು ಸಭೆ ಸಮಾರಂಭಗಳಲ್ಲಿ ಭಾಗವಹಿಸುವುದು ಸಾಧಾರಣ ಮಾತಲ್ಲ. ಆದರೆ, ಆಹ್ವಾನ ನೀಡಿದವರೇ ಮುಸಿ ಮುಸಿ ನಗುತ್ತಾ ವ್ಯಂಗ್ಯ, ಅಣಕ ಮಾಡುತ್ತಾ ತಮಾಷೆಯ ವಸ್ತುವೆಂದು ಭಾವಿಸಿದ್ದರಿಂದ ಉಂಟಾದ ಅವಮಾನ, ನೋವು, ಆಘಾತಗಳನ್ನು ಅದುಮಿಟ್ಟುಕೊಂಡು ಮಾನವಿಯವರು ಸಾಧನೆಯ ಹಾದಿಯಲ್ಲಿ ಮುನ್ನಡೆದಿದ್ದಾರೆ.

ಸೋಮನಾಥ ಬಂದೋಪಾಧ್ಯಾಯ ಎಂಬ ಹೆಸರು ಮಾನವಿ ಬಂದೋಪಾಧ್ಯಾಯ ಎಂದು ಬದಲಾದಾಗ ಕೆಲವು ಪ್ರಮಾಣಪತ್ರಗಳು ಸೋಮನಾಥ ಎಂಬ ಹೆಸರಿನಲ್ಲಿಯೇ ಇರುತ್ತವೆ. ಅದು ಅವರ ಪದೋನ್ನತಿಗೆ ಅನನುಕೂಲವನ್ನು ಉಂಟು ಮಾಡುತ್ತದೆ. ಸರ್ಕಾರವು ಇವರ ಮನವಿಯನ್ನು ಪುರಸ್ಕರಿಸುವುದಿಲ್ಲ. ಆದರೆ, ಮಮತಾ ಬ್ಯಾನರ್ಜಿಯವರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗ ಇವರ ನೆರವಿಗೆ ನಿಲ್ಲುತ್ತದೆ. ಆ ಎಲ್ಲ ವಿವರಗಳನ್ನು ಮಾನವಿಯವರು ಹಂಚಿಕೊಂಡಿದ್ದಾರೆ.

ಲಿಂಗ ಪರಿವರ್ತನೆಗಾಗಿ ಮಾಡಿಸುವ ಶಸ್ತ್ರಚಿಕಿತ್ಸೆ ತುಂಬಾ ಕಠಿಣವಾದದ್ದು. ಅದೊಂದು ದೀರ್ಘವಾದ ಪ್ರಕ್ರಿಯೆ, ಅದನ್ನು ಮಾಡಿಸಿಕೊಳ್ಳಲು ಎಂಟೆದೆ ಬೇಕು. ಮನೋವಿಶ್ಲೇಷಕರು, ಮನಃಶಾಸ್ತ್ರಜ್ಞರು, ಮನೋವಿಜ್ಞಾನಿಗಳು, ಹಾರ್ಮೋನ್ ತಜ್ಞರು, ಪ್ಲಾಸ್ಟಿಕ್ ಸರ್ಜರಿ ತಜ್ಞರು ಎಲ್ಲರ ಸಮಾಲೋಚನೆಯಿಂದ ನಡೆಯಬೇಕು. ಈ ಕುರಿತು ‘ನನ್ನ ಮೇಲೆ ನನಗೇ ಅನುಮಾನ’ ಎಂಬ ಅಧ್ಯಾಯದಲ್ಲಿ ವಿವರಗಳಿವೆ.

ಮಾನವಿ ಅವರ ಸಾಮಾಜಿಕ ಹೋರಾಟ, ಅವರು ಬರೆದ ಪುಸ್ತಕಗಳು ಅನೇಕ ಟ್ರಾನ್ಸ್‌ಜೆಂಡರ್‌ಗಳಿಗೆ ಮಾರ್ಗದರ್ಶಕವಾಗಿವೆ. ಲಿಂಗಪರಿವರ್ತಿತರೂ ಮನುಷ್ಯರು, ಅವರಿಗೂ ಭಾವನೆಗಳಿವೆ. ಎಲ್ಲರಿಗೂ ಸಮಾನವಾಗಿ ಬದುಕುವ ಹಕ್ಕುಗಳಿವೆ ಎಂಬ ಅರಿವನ್ನು ಮೂಡಿಸಲು ಅವರು ಯತ್ನಿಸಿದ್ದಾರೆ.

‘ಗಂಡು ಜೀವ ಹೆಣ್ಣು ಭಾವ’ದ ತಳಮಳಗಳು ಕೃತಿಯುದ್ದಕ್ಕೂ ಹರಳುಗಟ್ಟಿವೆ. ಎಲ್ಲ ಸವಾಲುಗಳನ್ನು ಮೆಟ್ಟಿನಿಲ್ಲುವ ಮಾನವಿ ಅವರ ಕಥೆ ಲೈಂಗಿಕ ಅಲ್ಪಸಂಖ್ಯಾತರಿಗೆ ಮಾತ್ರವಲ್ಲದೆ ಎಲ್ಲರಿಗೂ ಪ್ರೇರಣೆದಾಯಕವಾಗಿದೆ. ‘ಟ್ರಾನ್ಸ್‌ಜೆಂಡರ್‌ಗಳ ಪಾಲಿಗೆ ನಿಜವಾದ ಅರ್ಥದಲ್ಲಿ ಸ್ವಾತಂತ್ರ್ಯದ ಬಾಗಿಲನ್ನು ತೆರೆದಿದ್ದೇ ನೀವು’ ಎಂದು ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಹಲವರು ಮಾನವಿಯವರ ಬಳಿ ಹೇಳಿಕೊಳ್ಳುತ್ತಾರಂತೆ. ಅಷ್ಟರಮಟ್ಟಿಗೆ ಅವರ ಹೋರಾಟ ಯಶಸ್ವಿಯಾಗಿದೆ ಕೂಡ. ಮನಕಲಕುವಂತಹ ವಿವರಗಳಿಂದ ಕೂಡಿರುವ ಈ ಕೃತಿಯನ್ನು ಜಯಪ್ರಕಾಶ ನಾರಾಯಣ ಅವರು ತಿಳಿಯಾದ ಕನ್ನಡದಲ್ಲಿ ಅನುವಾದಿಸಿದ್ದಾರೆ. v

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು