ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪುಸ್ತಕ ಮೊದಲ ಓದು: ಜಿಪಿ ರಾಜರತ್ನಂ ಅವರ ಅಮೃತಮಹೋತ್ಸವಕ್ಕೆ ‘ಅಶೋಕಚಕ್ರ ಧ್ವಜ’

Published : 20 ಆಗಸ್ಟ್ 2022, 23:45 IST
ಫಾಲೋ ಮಾಡಿ
Comments

ಬರವಣಿಗೆ ಮತ್ತು ಸಾಹಿತ್ಯ ಪರಿಚಾರಿಕೆಯ ಮೂಲಕ ಕನ್ನಡ ಜಗತ್ತಿಗೆ ಗಣನೀಯ ಕೊಡುಗೆ ನೀಡಿದವರು ಜಿ.‍ಪಿ. ರಾಜರತ್ನಂ. ದೇಶದ ಉದ್ದಗಲವನ್ನೂ ರಾಷ್ಟ್ರಧ್ವಜದ ಬಣ್ಣಗಳು ಆವರಿಸಿಕೊಂಡಿರುವ ‘ಅಮೃತ ಮಹೋತ್ಸವ’ದ ಸಂದರ್ಭದಲ್ಲಿ, ರಾಜರತ್ನಂ ಅವರ ‘ಸ್ವತಂತ್ರ ಭಾರತದ ಅಶೋಕಚಕ್ರ ಧ್ವಜ’ ಕೃತಿಯನ್ನು ಬಳ್ಳಾರಿಯ ‘ಲೋಹಿಯಾ ಪ್ರಕಾಶನ’ ಮರುಮುದ್ರಿಸಿದೆ. ಈ ಮೂಲಕ, ಸ್ವಾತಂತ್ರ್ಯ ಸಂಭ್ರಮವನ್ನು ತಾತ್ವಿಕವಾಗಿ ಕಟ್ಟಿಕೊಡುವ ಕೆಲಸವನ್ನು ಮಾಡಿದೆ.

ಕನ್ನಡದ ‘ಮೇಷ್ಟ್ರು ಪರಂಪರೆ’ಯಲ್ಲಿ ರಾಜರತ್ನಂ ಅವರದು ಮೊದಲ ಪಂಕ್ತಿಯ ಹೆಸರು. ಅಶೋಕಚಕ್ರ ಧ್ವಜ ಕೃತಿ ರಚನೆಯ ಹಿನ್ನೆಲೆಯಲ್ಲಿ ರಾಷ್ಟ್ರಧ್ವಜ–ಲಾಂಛನಗಳ ಕುರಿತು ಜನಸಾಮಾನ್ಯರಿಗೆ ಅರಿವು ಮೂಡಿಸುವ ಅವರ ಪ್ರಯತ್ನದಲ್ಲೂ ‘ಮೇಷ್ಟ್ರುಪ್ರಜ್ಞೆ’ಯನ್ನು ಕಾಣಬಹುದು.

ರಾಷ್ಟ್ರಧ್ವಜ ಮತ್ತು ರಾಷ್ಟ್ರಲಾಂಛನಗಳ ಹಿನ್ನೆಲೆಯಲ್ಲಿನ ಆಶಯಗಳನ್ನು ಜನಸಾಮಾನ್ಯರಿಗೆ ಮನದಟ್ಟು ಮಾಡಿಸುವುದು ಈ ಕೃತಿಯ ಉದ್ದೇಶ. ಇದಿಷ್ಟೇ ಆಗಿದ್ದರೆ, ಈ ಪುಸ್ತಕ ಶೈಕ್ಷಣಿಕ ವಿವರಗಳ ಕೈಪಿಡಿಯಾಗಿ ಉಳಿಯುತ್ತಿತ್ತು. ರಾಷ್ಟ್ರಧ್ವಜ–ಲಾಂಛನಗಳ ಆಶಯಗಳನ್ನು ವಿವರಿಸುವ ನೆಪದಲ್ಲಿ, ಭಾರತದ ಬಹುತ್ವವನ್ನು ಸೂತ್ರರೂಪದಲ್ಲಿ ಹಿಡಿದಿಟ್ಟಿರುವ ಸಂಗತಿಗಳು ಯಾವುವು ಎನ್ನುವುದರ ವಿಶ್ಲೇಷಣೆ ಕೃತಿಯ ಮಹತ್ವವನ್ನು ಹೆಚ್ಚಿಸಿದೆ. ಆ ವಿಶ್ಲೇಷಣೆ, ಸಮಾಜದ ಬಗ್ಗೆ ಅಪಾರ ಕಾಳಜಿಯುಳ್ಳ ಮೇಷ್ಟ್ರೊಬ್ಬರು ತಮ್ಮ ಮಕ್ಕಳಿಗೆ ಹೇಳಿರುವ ಪ್ರೇಮದ ಪಾಠದಂತಿದೆ.

ರಾಜರತ್ನಂ ಕಣ್ಣಿಗೆ ಸ್ವತಂತ್ರ ಭಾರತ ‘ಬುದ್ಧ ಭಾರತ’ವಾಗಿ ಹಾಗೂ ಬುದ್ಧ ತತ್ತ್ವಗಳನ್ನು ಜನಜೀವನದ ಭಾಗವಾಗಿಸಲು ಶ್ರಮಿಸಿದ ಅಶೋಕ ಚಕ್ರವರ್ತಿಯ ಭಾರತವಾಗಿ ಕಂಡಿದೆ. ಶೋಕವಿಲ್ಲದ ಸಮಾಜವನ್ನು ರೂಪಿಸುವ ಹಂಬಲದ ಅಶೋಕನ ಆಶಯಗಳು ರಾಷ್ಟ್ರಧ್ವಜ ಮತ್ತು ಲಾಂಛನದಲ್ಲಿ ಅನುರಣಿಸುತ್ತಿರುವುದನ್ನು ರಾಜರತ್ನಂ ವಿವರವಾಗಿ ಚಿತ್ರಿಸಿದ್ದಾರೆ.ರಾಜರತ್ನಂ ಅವರ ಬರವಣಿಗೆಯಷ್ಟೇ ಪುಸ್ತಕದಲ್ಲಿ ಬಳಸಿಕೊಂಡಿರುವ ರೇಖಾಚಿತ್ರಗಳೂ ಚೆಲುವಾಗಿವೆ.

‘ಸ್ವತಂತ್ರ ಭಾರತದ ಅಶೋಕಚಕ್ರ ಧ್ವಜ’ ಕೃತಿ ಓದುಗರಿಗೆ ರಾಷ್ಟ್ರಧ್ವಜ–ಲಾಂಛನದ ಬಗ್ಗೆ ಅಭಿಮಾನ ಹಾಗೂ ಅರಿವು ಮೂಡಿಸುವ ಕೆಲಸವನ್ನಷ್ಟೇ ಮಾಡುವುದಿಲ್ಲ; ಬಹುತ್ವ ಭಾರತದ ಸೌಂದರ್ಯ ಹಾಗೂ ಸ್ವತಂತ್ರ ಭಾರತದ ಮನೋಧರ್ಮ ಯಾವುದಾಗಿರಬೇಕು ಎನ್ನುವುದನ್ನು ಮನದಟ್ಟು ಮಾಡಿಸುತ್ತದೆ. ಸ್ವತಂತ್ರ ಭಾರತಕ್ಕೆ ಎಪ್ಪತ್ತೈದು ವರ್ಷಗಳು ತುಂಬಿರುವ ಸಂದರ್ಭದಲ್ಲಿ, ‘ಅಮೃತ ಮಹೋತ್ಸವ’ ಪಯಣವನ್ನು ಪರಿಶೀಲಿಸುವುದು ಹೇಗೆ ಎನ್ನುವ ವಿಮರ್ಶಾತ್ಮಕ ನೋಟವೂ ಈ ಕೃತಿಯಿಂದ ದೊರೆಯುತ್ತದೆ. ರಾಷ್ಟ್ರೀಯ ಲಾಂಛನಗಳ ಆಶಯಗಳಿಗೆ ವಿರುದ್ಧವಾದ ಪರಿಕಲ್ಪನೆಯೊಂದು ದೇಶಪ್ರೇಮದ ಹೆಸರಿನಲ್ಲಿ ರೂಪುಗೊಂಡಿದೆಯೇ ಎನ್ನುವುದರ ಅವಲೋಕನಕ್ಕೂ ಕೃತಿ ಒತ್ತಾಯಿಸುತ್ತದೆ.

1948ರ ಜುಲೈ 22ರಂದು ಮೊದಲ ಆವೃತ್ತಿಯಾಗಿ ಪ್ರಕಟಣೆಗೊಂಡ ಕೃತಿ ಈಗ ಎಪ್ಪತ್ತೈದು ವರ್ಷಗಳ ನಂತರ ಸಹೃದಯರಿಗೆ ತಲುಪಿಸುವ ಕೆಲಸವನ್ನು ಲೋಹಿಯಾ ಪ್ರಕಾಶನ ಮಾಡಿದೆ. ಅಶೋಕಚಕ್ರ ಧ್ವಜ ಕೃತಿಯ ಬಗ್ಗೆ ‘ಪ್ರಜಾವಾಣಿ’ಯಲ್ಲಿ ಇತ್ತೀಚೆಗೆ ಬರಹವೊಂದು ಪ್ರಕಟವಾಗಿತ್ತು. ಆ ಬರಹವನ್ನು ಓದಿ, ಪುಸ್ತಕ ಹುಡುಕಿ ಓದಿರುವ ‘ಲೋಹಿಯಾ ಪ್ರಕಾಶನ’ದ ಚನ್ನಬಸವಣ್ಣ, ಈ ಪುಸ್ತಕ ಕನ್ನಡದ ಈ ತಲೆಮಾರಿಗೆ ಅಗತ್ಯವೆಂದು ಮನಗಂಡು ಮರುಮುದ್ರಿಸಿದ್ದಾರೆ. ಅಮೃತ ಮಹೋತ್ಸವ ಸಂದರ್ಭದಲ್ಲಿದು ಕನ್ನಡದ ಓದುಗರಿಗೆ, ವಿಶೇಷವಾಗಿ ವಿದ್ಯಾರ್ಥಿಗಳಿಗೆ ದೊರೆತಿರುವ ಉಡುಗೊರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT