ಭಾನುವಾರ, ನವೆಂಬರ್ 1, 2020
20 °C

ಋಷ್ಯಶೃಂಗನ ಮೋಹ ಮೋಹರ

ಎ.ಪಿ. ಅಶ್ವಿನ್ ಕುಮಾರ್ Updated:

ಅಕ್ಷರ ಗಾತ್ರ : | |

Prajavani

ಹರೀಶ ಹಾಗಲವಾಡಿಯವರ ‘ಋಷ್ಯಶೃಂಗ’ ಕನ್ನಡಕ್ಕೆ ಒಂದು ಹೊಸ ರೀತಿಯ ಕನ್ಫೆಶನಲ್ ಕಾದಂಬರಿ. ಹರೀಶರ ಈ ಹಿಂದಿನ ಕಾದಂಬರಿ ‘ನ್ಯಾಸ’ವೂ ಇದೇ ಜಾಡಿನಲ್ಲಿದ್ದ ಕಾದಂಬರಿಯೇ. ಆದರೆ, ಇವೆರಡರ ನಡುವೆ ಅವರ ಹುಡುಕಾಟದ ಜರೂರುಗಳು ಬದಲಾಗಿವೆ. ‘ನ್ಯಾಸ’ ಒಂದು ರೀತಿಯಲ್ಲಿ ತನ್ನ ಕಥಾವಸ್ತುವನ್ನು ಹಲ್ಲಿನ ಹತ್ತಿರಕ್ಕೆ ಕಚ್ಚಿ ಹಿಡಿದುಕೊಂಡಿದ್ದ ಕತೆ. ‘ಋಷ್ಯಶೃಂಗ’ ಅಂತಹ ಬಿಗಿಯ ಅವುಡನ್ನು ಸಡಿಲಿಸಿ ಕತೆಯ ಲೀಲೆಗೆ, ಲೋಲುಪತೆಗೆ ತನ್ನನ್ನೇ ಬಿಟ್ಟುಕೊಂಡಿರುವಂಥ ಕಾದಂಬರಿ.

ಈ ಕಾದಂಬರಿಯ ವಸ್ತು, ಕಥಾನಾಯಕ ಹಳ್ಳಿಯನ್ನು ತೊರೆದು, ಬೆಂಗಳೂರನ್ನು ಸೇರಿ, ಇಲ್ಲಿನ ಆಧುನಿಕ ಬದುಕಿನೊಂದಿಗೆ ಮುಖಾಮುಖಿಯಾಗುವ ಮತ್ತು ಉದ್ಯೋಗದಲ್ಲಿ, ಹಲವಾರು ಸ್ನೇಹ-ಸಂಬಂಧಗಳಲ್ಲಿ, ವಿಚಿತ್ರ ರೀತಿಯ ಒಲವುಗಳ ಮತ್ತು ಲೈಂಗಿಕ ಸ್ವೇಚ್ಛೆಯ ಹೊಯ್ದಾಟದಲ್ಲಿ ಚೆಲ್ಲಿಕೊಂಡು ನಡೆಸುವ ಬದುಕು. ಆದರೆ, ಅದಷ್ಟೇ ಅಲ್ಲ. ಇವನ ಬದುಕಿನ ವ್ಯಾಖ್ಯಾನಕಾರನೂ ಇವನೇ ಆದ್ದರಿಂದ ಮತ್ತು ಇವನೇ ತನ್ನ ಕತೆಯನ್ನು ನಮಗೆ ಹೇಳುತ್ತಿರುವುದರಿಂದ, ಇಂತಹ ಚೆಲ್ಲಿದ ಬದುಕನ್ನು ಆಯ್ದು ಸಂಚಯಿಸುವ, ಇದಕ್ಕೊಂದು ಕಥನದ ರೂಪವನ್ನು ಕೊಡುವ, ಇದರಲ್ಲೆಲ್ಲಾ ಪಡೆದದ್ದೇನು, ಕಳೆದದ್ದೇನು ಎಂದು ತೂಗಿ ನೋಡುವವನೂ ಇವನೇ.

ಇದೊಂದು ರೀತಿಯಲ್ಲಿ ಶ್ವೇತಾಶ್ವತರದ ದ್ವಾಸುಪರ್ಣಾ ಕತೆಯ ರೀತಿ. ಮರದ ಮೇಲೆ ಕುಳಿತು ಹಣ್ಣು ತಿನ್ನುವ ಹಕ್ಕಿ ಮತ್ತು ಅದರ ಅನುಭವವನ್ನು ತೂಗಿನೋಡುವ ಇನ್ನೊಂದು ಹಕ್ಕಿ. ಆದರೆ, ಒಂದೇ ವ್ಯತ್ಯಾಸವೆಂದರೆ, ಈ ಕಾದಂಬರಿಯಲ್ಲಿ ಈ ಎರಡೂ ಹಕ್ಕಿಗಳ ನಡುವೆ ಇರುವುದು ಜ್ಞಾನದ ಸಂಬಂಧವಲ್ಲ. ಅಧ್ಯಾಸದ ಸಂಬಂಧ. ಹಣ್ಣಿನ ರುಚಿ ಅನುಭವಿಸುವ ಹಕ್ಕಿಗೆ ಆ ರುಚಿಯ ಪರವಶತೆಯ ಆಚೆಗೆ ತಿಳಿವಿಲ್ಲ. ಆ ಅನುಭವವನ್ನೇ ತೂಗಿನೋಡುತ್ತಿರುವ ಹಕ್ಕಿಗೆ ತನಗಿಲ್ಲದ ರುಚಿಯ ಅಭಾವದ ಆಚೆಗೆ ಕಾಣುತ್ತಿಲ್ಲ. ರಾತ್ರಿಯ ಸಮುದ್ರದಲ್ಲಿ ಒಂದನ್ನೊಂದು ದಾಟುವ ದೋಣಿಗಳಂತೆ. ಅವಕ್ಕೆ ಪರಸ್ಪರರ ಪರಿವೆಯೇ ಇಲ್ಲ. ಹರೀಶರ ಕಥಾಶಕ್ತಿ ಇರುವುದು ಇಂತಹ ಸಂದಿಗ್ಧಗಳ ಕುರಿತು ಬಹಳ ಜೋಕೆಯಿಂದ, ಅವಧಾನದಿಂದ ಬರೆಯುವುದರಲ್ಲಿ. ಅವರು ತಮ್ಮ ಕಾದಂಬರಿಯನ್ನು ಮೆಟಾ-ಸಟೈರ್ ಎಂದು ಕರೆದಿದ್ದಾರೆ. ಅದರರ್ಥ ತಾನು ಹೇಳುತ್ತಾ ಕಟ್ಟುತ್ತಿರುವ ಕತೆಯನ್ನೇ ವ್ಯಾಖ್ಯಾನಿಸುತ್ತಾ ಒಡೆಯುವ ವಿಡಂಬನೆಯ ಕ್ರಮ.

ಹರೀಶರ ಕಾದಂಬರಿಗಳಲ್ಲಿ ಭಾರತೀಯ ಆಧ್ಯಾತ್ಮಿಕ ಚಿಂತನೆಯ ಕ್ರಮದಲ್ಲಿ ನಮ್ಮ ಸಾಮಾಜಿಕ ಬದುಕನ್ನು ನೋಡುವ ಉದ್ಯಮ ಮತ್ತೆಮತ್ತೆ ಕಾಣುತ್ತದೆ. ಆಧುನಿಕ ಪಾಶ್ಚಿಮಾತ್ಯ ಕಾದಂಬರಿಯಲ್ಲಿ ಸೈಕೊಅನಲಿಸಿಸ್ ಮತ್ತು ಅಸ್ತಿತ್ವವಾದಿ ಚಿಂತನೆಯ ಕ್ರಮದಲ್ಲಿ ಬದುಕನ್ನು ನೋಡುವ, ಅದರ ಅರ್ಥ ವ್ಯಾಖ್ಯಾನವನ್ನು ಮಾಡುವ ಒಂದು ಪರಂಪರೆ ಬೆಳೆದಿದೆ. ಅದರಲ್ಲಿ ಎರಡು ಮುಖ್ಯ ವಿಚಾರಗಳನ್ನು ಗುರುತಿಸಬೇಕು. ಒಂದು, ನಮ್ಮ ಕಾಮನೆಗಳ ಆಳವು ನಮಗೇ ದಕ್ಕದಂಥದ್ದು. ಹಾಗಾಗಿ, ನಮ್ಮ ಜೀವನದ ಎಡರುತೊಡರುಗಳ ರಹಸ್ಯವನ್ನು ಭೇದಿಸಬೇಕೆಂದರೆ ಪ್ರಾಚೀನ ಗ್ರೀಕರ ರೀತಿಯಲ್ಲಿ ನಮ್ಮ ಕ್ಯಾರೆಕ್ಟರ್ ಅಥವಾ ಚಾರಿತ್ರ್ಯವನ್ನು ಶೋಧಿಸುವುದಲ್ಲ. ಬದಲಾಗಿ, ನಮ್ಮ ಗುಪ್ತ ಕಾಮನೆಗಳ ಪ್ರಭಾವ ಗುರುತಿಸಬೇಕು. ಇದು ಸೈಕೊಅನಲಿಟಿಕ್ ಪರಂಪರೆಯ ಕ್ರಮ.

ಅದೇ ಅಸ್ತಿತ್ವವಾದಿ ಕ್ರಮದಲ್ಲಿ ಬದುಕನ್ನು ರೂಪಿಸುವ ಜವಾಬ್ದಾರಿ, ಅಂದರೆ, ನಮ್ಮ ಬದುಕಿನಲ್ಲಿ ನಡೆಯುವ ಘಟನೆಗಳಾಚೆಗೆ, ಅದಕ್ಕೆ ನಾವು ಪ್ರತಿಕ್ರಿಯಿಸುವ ರೀತಿ ಮತ್ತು ಅಂತಹ ಪ್ರತಿಕ್ರಿಯೆಗೆ ಇರಬೇಕಾದ ಜವಾಬ್ದಾರಿಗಳೇನು ಎಂದು ಶೋಧಿಸುವುದು ಮುಖ್ಯ. ಇಂತಹ ಹಲವು ಪ್ರಯೋಗಗಳು ಕನ್ನಡದಲ್ಲೂ ಇವೆ. ಆದರೆ, ಹೆಚ್ಚಾಗಿ ಆಗದೇ ಇದ್ದದ್ದು ಮತ್ತು ಹರೀಶರ ನಿಜವಾದ ಸಾಧನೆ ಇರುವುದು, ಕಾದಂಬರಿಯನ್ನು ಆಧ್ಯಾತ್ಮಿಕ ಶೋಧನೆಯ ಸಾಧನವಾಗಿ ಹೇಗೆ ಬಳಸಬಹುದು ಎನ್ನುವ ಹುಡುಕಾಟದಲ್ಲಿ. ಇದರರ್ಥ ಅವರು ಯಾವುದೋ ನಿರ್ದಿಷ್ಟ ಆಧ್ಯಾತ್ಮಿಕ ತತ್ವವನ್ನೋ ಅಥವಾ ಚಿಂತನೆಯನ್ನೋ ಒಂದು ರೀತಿಯ ಪ್ರಾಕ್ಸಿ ಆಗಿ ಕಾದಂಬರಿಯಲ್ಲಿ ಶೋಧಿಸುತ್ತಿದ್ದಾರೆ ಎಂದಲ್ಲ.

‘ನ್ಯಾಸ’ ಮತ್ತು ‘ಋಷ್ಯಶೃಂಗ’ ಭಾರತೀಯ ಪರಂಪರೆಗಳು ಮನುಷ್ಯ ಜೀವಿತದ ಬಗ್ಗೆ ನಡೆಸಿದ ಚಿಂತನೆಯ ಕ್ರಮದಲ್ಲಿಯೇ ಸಾಗಲು ಹವಣಿಸುವ ಎರಡು ಕಾದಂಬರಿಗಳು. ಅಂದರೆ, ಮನುಷ್ಯನ ಕಾಮನೆಗಳ ಸ್ಟ್ರಕ್ಚರ್ ಯಾವ ರೀತಿಯದ್ದು, ನಮ್ಮ ಕುರಿತೇ ನಮಗಿರುವ ಜ್ಞಾನ ಯಾವ ರೀತಿಯದ್ದು, ಅದಕ್ಕೆ ಎಡರುಗಳೇನು ಮತ್ತು ನಮ್ಮ ವಾಸನೆಗಳು, ಅದರ ಸ್ಮೃತಿಗಳು ಯಾವ ರೀತಿಯಲ್ಲಿ ನಮ್ಮನ್ನು ಬಂಧಿಸುತ್ತವೆ ಇವೇ ಮುಂತಾದ ಪ್ರಶ್ನೆಗಳು. ಈ ಪ್ರಯಾಣದಲ್ಲಿ ನಮ್ಮ ಸಾಮಾಜಿಕ ಜೀವನದ ನಿರ್ದಿಷ್ಟ ಚಾರಿತ್ರಿಕ ಸಾಧ್ಯತೆಗಳು ಯಾವ ರೀತಿಯ ಪ್ರಭಾವವನ್ನು ಬೀರುತ್ತವೆ ಎನ್ನುವುದೂ ಇಲ್ಲಿನ ಇನ್ನೊಂದು ಹುಡುಕಾಟ. ಉದಾಹರಣೆಗೆ, ಮನುಷ್ಯನ ನಿರಂತರ ಸಮಸ್ಯೆಯಾದ ಕಾಮದ ಕುರಿತಾದ ಒಲವು ಮತ್ತು ತಿರಸ್ಕಾರ, ಅದು ಇಂಟರ್ನೆಟ್ ಮತ್ತು ನಗರೀಕರಣದ ಯುಗದಲ್ಲಿ ಯಾವ ಹೊಸ ಮಜಲಿಗೆ ತಿರುಗುತ್ತದೆ?

ಸ್ತ್ರೀಯರಿಂದ ದೂರವಿರುವ ಪುರಾಣದ ಋಷ್ಯಶೃಂಗ, ಒಂದು ರೀತಿಯಲ್ಲಿ ಅನುಭವಕ್ಕೆ ಹೊರತಾದ್ದು ಹೇಗೆ ಅನುಭವಕ್ಕೆ ಮಾರಕವೂ ಆಗಬಹುದು ಎನ್ನುವುದಕ್ಕೆ ಉದಾಹರಣೆ. ಅದೇ ಈ ಕಾದಂಬರಿಯ ಋಷ್ಯಶೃಂಗ, ಸ್ತ್ರೀಯರೊಡನೆ ಹಲವು ಸಂಕೀರ್ಣ ಸಂಬಂಧ ಅನುಭವಗಳಲ್ಲಿ ಬೆಳೆದುಬಂದವನು, ನಮ್ಮ ಅನುಭವಕ್ಕೆ ದಕ್ಕಿದ ವಸ್ತುವೂ ಹೇಗೆ ನಮ್ಮ ಅನುಭವವನ್ನೇ ವಿಕೃತಗೊಳಿಸಬಹುದು ಎನ್ನುವುದಕ್ಕೆ ಉದಾಹರಣೆ. ಇಂತಹ ಸಾಧ್ಯತೆಗಳನ್ನು ನಾವೆಲ್ಲಾ ನೋಡಿದ್ದೇವೆ.

ಪಾಶ್ಚಿಮಾತ್ಯ ಆಧುನಿಕ ಸಂಗೀತದ ಬಗ್ಗೆ ಅಸಹ್ಯ ಪಡುವವರು ಒಬ್ಬರು ಭಾರತೀಯ ಶಾಸ್ತ್ರೀಯ ಸಂಗೀತದ ರಾಗ ತಾಳದ ಲೆಕ್ಕಾಚಾರದಲ್ಲೇ ಕಳೆದುಹೋದವರು. ಇನ್ನೊಬ್ಬರು ಪಾಶ್ಚಿಮಾತ್ಯ ಜನಪ್ರಿಯ ಸಂಗೀತವನ್ನು ಇಷ್ಟಪಡುವವರು ಅದರಲ್ಲೇ ಮುಳುಗಿ ಅದೊಂದು ವ್ಯಸನದ ಮಟ್ಟಕ್ಕಿಂತ ಬೇರೆಯಾಗಿ ಅನುಭವಿಸಲು ಬಾರದೇ ಹೋದವರು. ಹಣದ ಅಭಾವದಿಂದ ತಮ್ಮ ಸಾಧ್ಯತೆಗಳೇ ಮೊಟಕಾದವರು ಅಥವಾ ಹಣವೇ ಗುರುವಾಗಿ ಅದರಲ್ಲೇ ಬಿದ್ದುಹೋದವರು. ಎಲ್ಲಕ್ಕಿಂತ ಮುಖ್ಯವಾಗಿ ತಿಳಿವಳಿಕೆ ಬೆಳೆಸಿಕೊಳ್ಳದೇ ಪಶುಗಳ ಮಟ್ಟದಲ್ಲಿ ಉಳಿದವರು. ಮತ್ತು ತಿಳಿವಳಿಕೆಯನ್ನು ವಸ್ತುವಿಚಿತ್ರಗಳ ಸಂಚಯ ಎಂದುಕೊಂಡು ಮೋಸಹೋದವರು. ಇವೆಲ್ಲಾ ದಕ್ಕದ ವಸ್ತುಗಳಿಂದಲೂ ಮತ್ತು ದಕ್ಕಿದ ವಸ್ತುಗಳಿಂದಲೂ ಹೇಗೆ ಅಧ್ಯಾಸ ಉಂಟಾಗಬಹುದು ಎನ್ನುವುದಕ್ಕೆ ಮಾದರಿಗಳು.

ಇದರ ಆಚೆಗೆ ಹೊಸದಕ್ಕೆ, ಹೊರಗಿನದಕ್ಕೆ ತೆರೆದುಕೊಂಡಿರುವ, ಆದರೆ, ಅದು ನಮ್ಮ ಅನುಭವದ ಮುಕ್ತ ಸಾಧ್ಯತೆಗಳನ್ನು ಮೊಟಕುಗೊಳಿಸದಂತೆ ಎಚ್ಚರವಾಗಿರುವ ಮಾದರಿಯೂ ಒಂದಿದೆ. ‘ಋಷ್ಯಶೃಂಗ’ ಅನುಭವದ ಆ ಸೀಮೆಯ ಹುಡುಕಾಟದಲ್ಲಿದೆ.

***

ಋಷ್ಯಶೃಂಗ

ಲೇ: ಹರೀಶ ಹಾಗಲವಾಡಿ

ಪ್ರ: ಛಂದ ಪುಸ್ತಕ

9844422782

ಪುಟಗಳು: 136, ಬೆಲೆ: ₹ 125

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.