ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪಾವಳಿ ವಿಶೇಷಾಂಕಗಳ ರಾಶಿಯಲ್ಲಿ...

Last Updated 21 ನವೆಂಬರ್ 2020, 19:30 IST
ಅಕ್ಷರ ಗಾತ್ರ

ಪ್ರತಿವರ್ಷದಂತೆ ಈ ಸಲವೂ ಐದು ದೀಪಾವಳಿ ಸಂಚಿಕೆಗಳನ್ನು ಕೊಂಡುಕೊಂಡೆ. ಮುಂದಿಟ್ಟುಕೊಂಡ ಐದೂ ವಿಶೇಷಾಂಕಗಳು ‘ನನ್ನನ್ನು ಮೊದಲೆತ್ತಿಕೊ’ ಎಂದು ಪಿಳಿ ಪಿಳಿ ಕಣ್ಣುಬಿಟ್ಟು ಕೇಳಿದಂತೆ ಅನ್ನಿಸಿತು. ಒಮ್ಮೆ ಎಲ್ಲ ಮುಖಪುಟಗಳ ಮೇಲೆ ಕಣ್ಣಾಡಿಸಿದೆ. ಯಥಾಪ್ರಕಾರ ಕೆಲವದರ ಮೇಲೆ ರೂಪದರ್ಶಿಗಳು ಹಾಜರಾಗಿದ್ದರು... ನಕ್ಕೆ. ದೇವದೇವತೆಗಳುಳ್ಳ ಮುಖಪುಟದ ಚಿತ್ರಗಳು ಕಣ್ಣಿಗೆ ಅಭ್ಯಾಸವಾದದ್ದರಿಂದ ನೋಡುವುದನ್ನು ಬಿಟ್ಟು ಕಣ್ಣು ಮುನ್ನಡೆದವು. ಆದರೆ, ಒಂದು ಮುಖಪುಟದ ಮೇಲೆ ದೃಷ್ಟಿ ನಿಂತುಕೊಂಡಿತು. ‘ಇದು ಬೇರೆ ಥರದ ಮುಖಪುಟ ಇದೆಯಲ್ಲ?’ ಎಂದು ಗೊಣಗಿಕೊಂಡೆ.

ವಿಭಿನ್ನ ಕಲೆಗಾರಿಕೆಯಲ್ಲಿ ಹೊರಹೊಮ್ಮಿದ ರಾಮಸೀತೆ ಮತ್ತು ಅನಿಷ್ಟದ ಬಂಗಾರದ ಜಿಂಕೆಯ ಚಿತ್ರವು ಅದಾಗಿತ್ತು. ಆ ಬಳಿಕ ‘ಅಗಣಿತ ರಾಮ’ ಎಂಬ ಶಿರೋನಾಮೆಯನ್ನು ಓದಿಕೊಂಡೆ. ಹೊಸದೆನ್ನಿಸಿತು. ಕುತೂಹಲದಿಂದ ಒಳಪುಟಗಳನ್ನು ತಿರುವಿದೆ. ಹಳೆಯದಕ್ಕಿಂತ ಅತಿ ಹಳೆಯದಾದ ರಾಮಚರಿತೆಯನ್ನು ವಿಭಿನ್ನ ಮಾಧ್ಯಮಗಳಲ್ಲಿ, ವಿಭಿನ್ನ ದೃಷ್ಟಿಕೋನಗಳಲ್ಲಿ ಅಳವಡಿಸಿದ್ದನ್ನು ನೋಡಿದಾಗ ಕೆಲೆಡೊಸ್ಕೊಪಿನಲ್ಲಿ ಕಂಡ ಬಗೆ ಬಗೆಯ ಚಿತ್ತಾರಗಳಂತೆ ಅವು ಕಂಡದ್ದರಿಂದ ಸೋಜಿಗಗೊಂಡೆ! ‘ಇಂಥ ಹೊಸತನವನ್ನು ಎಲ್ಲ ವಿಶೇಷಾಂಕಗಳಲ್ಲಿ ದಶಕದ ಹಿಂದೆಯೇ ನಾನು ಬಯಸಿದ್ದೆನಲ್ಲ’ ಎಂದು ನನ್ನ ಒಳದನಿಯೊಂದು ನುಡಿಯಿತು. ಪ್ರಜಾವಾಣಿಯ ದೀಪಾವಳಿಯ ವಿಶೇಷಾಂಕ 2020ನ್ನು ರೂಪಿಸಿದ ಸಿಬ್ಬಂದಿ ವರ್ಗಕ್ಕೆ ಅಭಿನಂದನೆಗಳು.

ದೀಪಾವಳಿ, ಸಂಕ್ರಾಂತಿ, ಯುಗಾದಿ ವಿಶೇಷಾಂಕಗಳು ಭಾರತೀಯ ಋತುಮಾನದ ಪರಿವರ್ತನೆಗಳನ್ನು ಅನುಸರಿಸಿ ರೂಪಿತವಾದ ಲೇಖನಗಳ ಹೊಸ ಹೊಸ ಬಾಗಿಲುಗಳನ್ನು ತೆರೆದಿಡುವ ರೀತಿ ಕುತೂಹಲಕಾರಿ. ಇವೆಲ್ಲ ವಿಶೇಷಾಂಕಗಳು ಓದುಗರಿಗೆ ಅಮೂಲ್ಯ ಕಾಣಿಕೆಗಳಂತೆ ಇರುತ್ತವೆ. ಆದರೆ, ಕೊಂಡೋದುವ ಓದುಗರೆಷ್ಟು ಎಂದು ನೆನೆದರೆ ತುಸು ನಿರಾಸೆಯೇ ಕಾದಿರುತ್ತದೆ. ನೆರೆ ಪ್ರಾಂತವಾದ ಮಹಾರಾಷ್ಟ್ರದಲ್ಲಿ ನೂರಕ್ಕೂ ಮಿಕ್ಕಿದ ಸಂಖ್ಯೆಯಲ್ಲಿ ದೀಪಾವಳಿ ಸಂಚಿಕೆಗಳು ಪ್ರಕಟವಾಗುತ್ತವೆ ಎಂಬ ಸುದ್ದಿಯನ್ನು ನೀವು ನಂಬುತ್ತೀರಾ? ಸಂಖ್ಯಾಬಲದ ಮೇಲೆ ಮರಾಠಿ ಪತ್ರಿಕೆಗಳನ್ನು ನಾನಿಲ್ಲಿ ಎತ್ತಿ ಕಟ್ಟುತ್ತಿಲ್ಲ. ಆದರೆ ಮಹಾರಾಷ್ಟ್ರಿಗರ ಪರಿಶ್ರಮ, ಲವಲವಿಕೆ ಮತ್ತು ಅಲ್ಲಿನ ಓದುಗರ ಕುತೂಹಲಕ್ಕಾಗಿ ನನಗೆ ಬೆರಗೆನ್ನಿಸುತ್ತದೆ.

ಅಷ್ಟಿಷ್ಟು ಮರಾಠಿ ಓದಿಕೊಳ್ಳಬಲ್ಲ ನಾನು ಪ್ರತಿವರ್ಷ ಎರಡು ದೀಪಾವಳಿ ವಿಶೇಷಾಂಕಗಳನ್ನು ತರಿಸಿಕೊಂಡು ಅದರಲ್ಲಿಯ ವಿಷಯ ವಿನ್ಯಾಸಗಳನ್ನು ಮತ್ತು ಬರಹಗಾರರ ಸಂಖ್ಯೆಯನ್ನು ಪರಿಗಣಿಸುತ್ತ ಅಲ್ಲಿಯ ಓದುಗ ವರ್ಗವನ್ನು ‘ಪುಣ್ಯವಂತರು’ ಎಂದು ಅಂದುಕೊಳ್ಳುತ್ತೇನೆ. ತಿಂಗಳೊಪ್ಪತ್ತಿನಲ್ಲಿ ಓದಿ ಮುಗಿಸಿದ ನಮ್ಮ ಕನ್ನಡದ ನಾಲ್ಕೈದು ವಿಶೇಷಾಂಕಗಳನ್ನು ನನ್ನ ಸ್ನೇಹಿತರನ್ನು ಕರೆಕರೆದು ಓದಿಸ ಹಚ್ಚುತ್ತೇನೆ. ಅವರು ಓದುತ್ತಾರೋ ಬಿಡುತ್ತಾರೋ ಎಂದು ನಾನು ಪರಿತಪಿಸುವುದಿಲ್ಲ.

ಹಲವಾರು ಅಭಿರುಚಿಗಳನ್ನು ಗಮನದಲ್ಲಿಟ್ಟುಕೊಂಡೇ ವಿಶೇಷಾಂಕಗಳು ರೂಪುಗೊಳ್ಳುತ್ತವೆ ಎಂಬುದು ನನ್ನ ಗ್ರಹಿಕೆ. ಜ್ಞಾನ, ಚಿಂತನ, ಕಲ್ಪನ, ರಂಜಕತೆಗಳೊಂದಿಗೆ ವಿಧವಿಧದ ಓದುಗರನ್ನು ವಿಶೇಷಾಂಕಗಳು ಓಲೈಸಲು ಯತ್ನಿಸುತ್ತವೆ. ಬರಬರುತ್ತ ಜಾಹೀರಾತುಗಳ ದಟ್ಟಣೆ ಹೆಚ್ಚಾಗಿ ಕತೆ, ಕವಿತೆ, ಲೇಖನ ಮತ್ತು ಚಿತ್ರಗಳು ಕುತ್ತುಸಿರು ಬಿಡುತ್ತಿದ್ದಂತೆ ನನಗೆ ತೋರುತ್ತದೆ. ಓದುಗರಿಗೂ ತುಂಬ ಕಿರಿಕಿರಿಯಾಗುತ್ತದೆ. ವರ್ಷದಿಂದ ವರ್ಷಕ್ಕೆ ಸಿನೆಮಾ ಮಾಹಿತಿಗಾಗಿ ಮೀಸಲಿಟ್ಟ ಪುಟಗಳು ಹೆಚ್ಚಾಗುತ್ತಲೇ ನಡೆದಿವೆ. ನಟ ನಟಿಯರ ವಿಭಿನ್ನ ಭಂಗಿಗಳಲ್ಲಿ ತೆರೆದ ಫೋಟೊ ಚಿತ್ರಗಳು, ಅವರ ಸ್ವಭಾವ, ನಟನೆ, ಜೀವನ ಚರಿತ್ರೆಗಳ ಮಾಹಿತಿಗಳು ಸಿನೆಮಾ ಪ್ರಿಯರನ್ನು ಸಂತೃಪ್ತಗೊಳಿಸುತ್ತಿರಬಹುದು. ಬದಲಾಗಿ ವಿಶ್ವದ ಉತ್ತಮ ಚಿತ್ರಗಳ ಬಗೆಗೆ, ಶ್ರೇಷ್ಠ ಚಿತ್ರಕತೆಗಳ ಲೇಖಕರ ಬಗ್ಗೆ ಮತ್ತು ದಿಗ್ದರ್ಶಕರ ಬಗ್ಗೆ ಮಾಹಿತಿ ಸಿಕ್ಕರೆ ನನ್ನಂತವರಿಗೆ ಸಮಾಧಾನವಾದೀತು.

ಪ್ರತಿವರ್ಷ ಹೊಸ ಬರಹಗಾರರನ್ನು ಪ್ರೋತ್ಸಾಹಿಸಲು ಏರ್ಪಡಿಸಲಾಗುವ ಕತೆ, ಕವಿತೆ, ಪ್ರಬಂಧ ಸ್ಪರ್ಧೆಗಳ ಬಗೆಗೆ ನನ್ನಲ್ಲಿ ತುಂಬ ಮೆಚ್ಚುಗೆ ಇದೆ. ಇವು ನಿರಂತರವಾಗಿ ಎಲ್ಲ ವಿಶೇಷಾಂಕಗಳಲ್ಲೂ ಮುಂದುವರಿಯಬೇಕು. ಇನ್ನು ವರ್ಷ ಭವಿಷ್ಯದ ಪುಟಗಳನ್ನು ಓದದೆ ಮುಂದೆ ಸಾಗಿ ವಿಶೇಷಾಂಕದ ಓದಿಗೆ ಗುಡ್‍ಬೈ ಹೇಳುತ್ತೇನೆ.

ಕಳೆದ ಕೆಲ ದಶಕಗಳಿಂದ ವಿಶೇಷಾಂಕಗಳು ಪ್ರಕಟವಾಗುತ್ತಲೇ ಬಂದಿವೆ. ಇವುಗಳಲ್ಲಿ ಮುಂದಿನ ದಿನಗಳಲ್ಲಿ ಹೊಸ ಹೊಸ ಪ್ರಯೋಗಗಳು ಆಗಬೇಕೆಂದು ನಾನು ಬಯಸುತ್ತೇನೆ. ಹರಿಯುವ ನದಿಯು ಹೊಸ ನೀರನ್ನು ತನ್ನ ಹರಹಿಗೆ ಸ್ವಾಗತಿಸುತ್ತದೆ; ವೃಕ್ಷಗಳು ಚೈತ್ರದಲ್ಲಿ ಹೊಸ ಚಿಗುರುಗಳನ್ನು ಕರೆಯುತ್ತವೆ. ವಿಶೇಷಾಂಕಗಳು ವಿಷಯಕೇಂದ್ರಿತ ಸಂಶೋಧನಾತ್ಮಕ ಲೇಖನ, ಚಿತ್ರ, ಇತ್ಯಾದಿ ಮಾಧ್ಯಮಗಳ ಮೂಲಕ ವಿಷಯವನ್ನು ಅರಳಿಸಿಕೊಳ್ಳುವ ಪ್ರಕ್ರಿಯೆಯು ಒಂದು ಹೊಸ ಹೆಜ್ಜೆ ಆಗಬಲ್ಲದು. ಹುಡುಕಿದಷ್ಟೂ ಹೊಸ ಹಾದಿಗಳು ತೆರೆದುಕೊಳ್ಳುತ್ತವೆ ಮತ್ತು ಹೊಸ ಪ್ರಯೋಗಗಳು ಓದುಗರ ಕುತೂಹಲವನ್ನು ಹೆಚ್ಚಿಸಿ ಓದುಗರ ಸಂಖ್ಯೆಯನ್ನು ಅಧಿಕಗೊಳಿಸುತ್ತವೆ ಎಂದು ನಾನು ಪರಿಭಾವಿಸುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT