ಸೋಮವಾರ, ಜೂನ್ 1, 2020
27 °C

ಕಾಡುವ ಬರ್ಮೀ ಕಥೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಿಂದಿ ಭಾಷೆಯಲ್ಲಿರುವ 33 ಬರ್ಮೀ ಕಥೆಗಳನ್ನು ಲೇಖಕ ಲಕ್ಷ್ಮೀನಾರಾಯಣ ಅವರು, ಇವು ಕನ್ನಡದ ಕಥೆಗಳೇ ಎನಿಸುವಷ್ಟರ ಮಟ್ಟಿಗೆ ಇಲ್ಲಿನ ನೆಲಕ್ಕೆ ಒಗ್ಗುವಂತೆ ಮತ್ತು ಮೂಲಕ್ಕೆ ಧಕ್ಕೆಯಾಗದಂತೆ ಅನುವಾದಿಸಿದ್ದಾರೆ. 

ತೆಂ. ಫೆಮ್ಯಿಂನ ‘ತಿನ್ನಬಾರದ ಹಣ್ಣು’ ಕಥೆ ಕ್ಷೌರಿಕನೊಬ್ಬ ವೃತ್ತಿಬದಲಿಸಿ ಹೊಸ ವೃತ್ತಿ ಹಿಡಿದು ಅದರಲ್ಲಿ ಕಾಣುವ ಮನೋಕ್ಲೇಶ, ಪುರುಷಸ್ತುಪ್ತ ಕಾಮನೆಗಳನ್ನು ಜಯಿಸುವ ಮತ್ತು ಪ್ರಲೋಬನೆಗಳನ್ನು ಮೆಟ್ಟಿನಿಂತು ಜೀವನಮೌಲ್ಯಕ್ಕೆ ಅಂಟಿಕೊಳ್ಳುವುದನ್ನು ಸಾದರಪಡಿಸಿದೆ. ಹಾಗೆಯೇ ಇವರ ಇನ್ನೊಂದು ಕಥೆ ‘ಬಾಯಾರಿದ ದಡಗಳು’ ಕಥೆಯೂ ವಕೀಲನ ವೃತ್ತಿಧರ್ಮ ಮತ್ತು ಹೆಣ್ಣೊಬ್ಬಳ ಹೋರಾಟವನ್ನು ಅನಾವರಣಗೊಳಿಸುತ್ತದೆ. ವೃತ್ತಿಯಲ್ಲಿ ಹಣಕ್ಕಿಂತ ಕರುಣೆ, ಮಾನವೀಯತೆ ದೊಡ್ಡದು ಎನ್ನುವುದನ್ನು ವಕೀಲ ಸಾರಿದರೆ, ಬದುಕಿನಲ್ಲಿ ತ್ಯಾಗವೇ ದೊಡ್ಡದು ಎನ್ನುವುದನ್ನು ಮಹಿಳೆ ತೋರಿಸಿದ್ದಾಳೆ.

‘ತಣ್ಣನೆಯ ಲಾವ’ ಕಥೆಯಲ್ಲಿ ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದವರ ಬದುಕಿನ ತೊಳಲಾಟ, ಪ್ರೀತಿ ಉಳಿಸಿಕೊಳ್ಳಲು ಕೆಳಮಧ್ಯಮ ವರ್ಗದ ಯುವಕ ಕೋಛಿಪ್ಪೋ ಯೇಗುವ ಪರಿ, ಮನಸುಕೊಟ್ಟವನಿಗಾಗಿ ಬದುಕಿನ ಕೊನೆಯವರೆಗೂ ಕಾಯುವ ಒಬ್ಬಂಟಿ ಹೆಣ್ಣು ಮಾಸೈಚೀ ಅವಳ ಬದುಕು ಓದುಗರ ಮನಸನ್ನು ಗಾಢವಾಗಿ ತಟ್ಟುತ್ತದೆ.

ಜೆಯಾ ಅವರ ‘ಇಂಥದೇ ಒಂದು ಸಮಯ’ ಭಗ್ನ ಪ್ರೇಮಪ್ರಸಂಗವನ್ನು ಹೇಳುತ್ತಲೇ ಅಧ್ಯಾತ್ಮದಲ್ಲಿ ಕಾಣುವ ನೆಮ್ಮದಿಯ ಬದುಕಿನ ಆಯ್ಕೆಯನ್ನು ತೆರೆದಿಡುತ್ತದೆ. ಮಿಂಚೌ ಅವರ ‘ಆ ಚಿಕ್ಕ ಹೊಳೆಯ ಮಾತು’ ಕಥೆಯು ಶೋಷಣೆಗೆ ಗುರಿಯಾದ ಯುವತಿಯ ಸಂಘರ್ಷ ಬದುಕನ್ನು ತೆರೆದಿಟ್ಟಿದೆ. ದುರಂತಮಯವಾಗಿಯೇ ಕಥಾನಾಯಕಿಯ ಬದುಕು ಅಂತ್ಯಗೊಳ್ಳುತ್ತದೆ. ಸಾಮಾಜಿಕ ವೇದನೆಯ ಈ ಆಕ್ರಮ ಎಲ್ಲ ಕಾಲಕ್ಕೂ, ಎಲ್ಲ ದೇಶಕ್ಕೂ ಮುಂದುವರಿದೇ ಇದೆ. ಇದೊಂದು ಹೃದಯಸ್ಪರ್ಶಿ ಕಥೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಇದರಲ್ಲಿರುವ ಬಹುತೇಕ ಎಲ್ಲ ಕಥೆಗಳಲ್ಲಿ ಭಾರತೀಯತೆ ಹೋಲುವ ಬರ್ಮೀಯರ ಜೀವನದ ನೋಟಗಳು, ಯುವ ಪೀಳಿಗೆಯ ಕನಸುಗಳು, ಫ್ಯಾಷನ್‌ ಮೋಹ, ಈ ಮೋಹಕ್ಕೆ ಹೊಂದಿಕೊಳ್ಳಲಾಗದ ಹಳೆಗಾಲದ ಹಿರಿಕರ ಹಳಹಳಿಕೆಗಳು ಹೆಜ್ಜೆ ಹೆಜ್ಜೆಗೂ ಕಾಣಸಿಗುತ್ತವೆ. ಬರ್ಮಿಯರ ಬದುಕು, ಆಶೋತ್ತರ, ಭಾವನೆಗಳು, ಮೌಲ್ಯಗಳು ಭಾರತೀಯರಿಗೆ ಹೆಚ್ಚು ನಿಕಟವಾಗಿ ಹೋಲಿಕೆಯಾಗುವುದರಿಂದ ಇಲ್ಲಿನ ಕಥೆಗಳು ನಮ್ಮವೇ, ನಮ್ಮ ನಡುವಿನಲ್ಲಿ ಇಲ್ಲೇ ಎಲ್ಲೋ ನಡೆದಂತವೇ ಇವು, ಇನ್ನೂ ನಡೆಯುತ್ತಿರುವವೇ ಎನಿಸುತ್ತದೆ. ಫೆಮ್ಯಿಂ ಸೇರಿ 27 ಲೇಖಕರ ಶ್ರೇಷ್ಠ ಕಥೆಗಳನ್ನು ಕನ್ನಡದ ಓದುಗರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ದಕ್ಕಿಸಿಕೊಟ್ಟಿದೆ. ವ್ಯಾಕರಣ ದೋಷಗಳು ಪುಂಕಾನುಪುಂಕ ಉಳಿದುಕೊಂಡಿರುವುದು ಮಾತ್ರ ಈ ಕೃತಿಯಲ್ಲಿನ ಕೊರತೆಯಂತೆ ಕಾಣಿಸುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು