ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಒಳನೋಟ: ನಗರ ಪರಿಸರದ ತಲ್ಲಣಗಳು

Last Updated 1 ಏಪ್ರಿಲ್ 2023, 19:30 IST
ಅಕ್ಷರ ಗಾತ್ರ

ದಯಾನಂದ ಅವರ ‘ಬುದ್ಧನ ಕಿವಿ’ ಸಂಕಲನದಲ್ಲಿ ಹನ್ನೊಂದು ಕತೆಗಳಿವೆ. ಆಧುನಿಕ ಕನ್ನಡ ಸಣ್ಣ ಕತೆಗಳ ಇತಿಹಾಸವನ್ನು ಗಮನಿಸಿದರೆ ಹಳ್ಳಿಯ ಬದುಕನ್ನು ಹೆಚ್ಚಾಗಿ ವಸ್ತುವಾಗಿಸಿಕೊಂಡಿರುವುದನ್ನು ಗಮನಿಸಬಹುದು. ಜಾತಿ/ವರ್ಗದ ಸಮಸ್ಯೆಗಳನ್ನು ವಸ್ತುವಾಗಿಸಿಕೊಂಡಾಗಲಂತೂ ಹಳ್ಳಿಗಳ ಚಿತ್ರಣವೇ ಹೆಚ್ಚು. ನವ್ಯದ ಕಾಲಘಟ್ಟದಲ್ಲಿ ಕೆಲವು ಕತೆಗಾರರನ್ನು ಬಿಟ್ಟರೆ ಉಳಿದವರು ನಗರಕೇಂದ್ರಿತ ಕತೆಗಳನ್ನು ಬರೆಯಲಿಲ್ಲ. ಆದರೆ ದಯಾನಂದ ಅವರ ಕತೆಗಳು ನಗರ ಕೇಂದ್ರಿತವಾಗಿರುವುದು ವಿಶೇಷ.

ಆಧುನಿಕ ನಾಗರಿಕತೆಯ ಪರಿಸರ ಇಲ್ಲಿನ ಕತೆಗಳಲ್ಲಿದೆ. ಬಾರ್, ಪಬ್, ಹೋಟೆಲ್, ಕ್ಲಬ್, ವೈವಿಧ್ಯಮಯ ವಸ್ತುಗಳು, ಅತಿಯಾದ ಚಟುವಟಿಕೆಯ ಜೀವನಶೈಲಿ ಇವೆಲ್ಲ ನಗರದ ಬದುಕಿನಲ್ಲಿ ಹಾಸುಹೊಕ್ಕಾಗಿದ್ದು ಯಾವುದೇ ತಾರತಮ್ಯಗಳು ಮೇಲುನೋಟಕ್ಕೆ ಕಾಣುವುದಿಲ್ಲ. ಆದರೆ, ಸಾಮಾಜಿಕ ಸ್ತರ ವಿನ್ಯಾಸ, ಆರ್ಥಿಕ ಅಸಮಾನತೆಯ ವರ್ಗವಿನ್ಯಾಸ, ಜಾತಿಯ ತಾರತಮ್ಯ, ಅದರಿಂದ ಉಂಟಾಗುವ ಅವಮಾನ ನೋವು, ಹಿಂಸೆ ಇರುತ್ತವೆ. ನಗರದಲ್ಲಿನ ಈ ತಾರತಮ್ಯಗಳು, ‌ಇದರಿಂದ ಉಂಟಾಗುವ ಪರಿಣಾಮಗಳು ಮುಂತಾದ ನೆಲೆಗಳ ಶೋಧ ಈ ಕತೆಗಳಲ್ಲಿದೆ.

ಮಧ್ಯಮ ಮತ್ತು ಕೆಳವರ್ಗದ ನೆಲೆಗಳ ಶೋಧವೂ ಇಲ್ಲಿದ್ದು ಅವರ ಬದುಕು, ಅವರ ಮಾನಸಿಕ ಸ್ಥಿತಿಗತಿಗಳ ಸ್ವರೂಪವನ್ನು ಕಟ್ಟಿಕೊಟ್ಟರುವ ವಿಧಾನವು, ಓದುಗನ ಗಮನ ಸೆಳೆದು ಚಿಂತನೆಗೆ ತೊಡಗಿಸುತ್ತದೆ. ಕೆಲವು ಕತೆಗಳಲ್ಲಿ ಜಾತಿಯ/ವರ್ಗದ ನೆಲೆಗಳು ನೇರವಾಗಿ ನಿರೂಪಿತಗೊಂಡರೆ ಕೆಲವು ಕತೆಗಳಲ್ಲಿ ನಿರೂಪಣೆಯಲ್ಲಿಯೇ ತಾರತಮ್ಯವು ಒಳಧ್ವನಿಯಾಗಿ ಹರಿಯುತ್ತದೆ.

ಅನುಭವಕ್ಕೆ ಸಂಬಂಧಿಸಿದ ಎಲ್ಲಾ ವಿವರಗಳು ಕತೆಯಲ್ಲಿ ಒಳಗೊಳ್ಳಬೇಕೆಂಬ ಕತೆಗಾರರ ಉದ್ದೇಶದಿಂದ ಹಲವಾರು ದೃಷ್ಟಿಕೋನಗಳು ಇಲ್ಲಿನ ಕತೆಗಳಲ್ಲಿ ಇದ್ದರೂ ಅವು ಜಾಳು ಜಾಳಾಗಿ ನಿರೂಪಣೆಗೊಂಡಿಲ್ಲ. ಅವೆಲ್ಲವೂ ಪರಿಣಾಮದಲ್ಲಿ ಏಕತ್ರಗೊಂಡು ಕಲಾತ್ಮಕವಾಗಿ ಮೂಡಿರುವುದು ಕತೆಗಾರರ ಸಾಧನೆ. ನೇರವಾದ, ಶಕ್ತಿಪೂರ್ಣವಾದ ಬರವಣಿಗೆಯ ಕ್ರಮದಿಂದಾಗಿ ಈ ಕತೆಗಳಲ್ಲಿ ವ್ಯಕ್ತವಾಗುವ ವಿಚಾರಗಳು ಓದುಗನನ್ನು ಬೆರಗುಗೊಳಿಸುತ್ತವೆ. ನಿದರ್ಶನಕ್ಕಾಗಿ ಸರ್ವೈವಲ್ ಬೆನಿಫಿಟ್, ತ್ರೀ ಪಾಯಿಂಟ್ ಫೈವ್, ಬೈಬಲ್ ಬಂಪ್ ಕತೆಗಳನ್ನು ನೋಡಬಹುದು. ಇಲ್ಲಿನ ಕತೆಗಳ ಆಕೃತಿ ಸೂಕ್ಷ್ಮವಾಗಿದೆ. ಸುವೇಗವಾದ ಬರವಣಿಗೆಯ ಕ್ರಮ ಇಲ್ಲಿನ ಕತೆಗಳಲ್ಲಿ ಎದ್ದು ಕಾಣುವ ಅಂಶ. ಘಟನೆಯ ನಂತರ ಘಟನೆಯನ್ನು ಅನುಸರಿಸಿಕೊಂಡು ಹೋಗುತ್ತಾ ಆ ಘಟನೆಯ ಅಂತರಂಗದಲ್ಲಿಯೇ ಮನಸ್ಸಿನ ಪದರುಗಳು ಬಿಚ್ಚಿಕೊಳ್ಳುತ್ತವೆ. ಸಮಾಜ, ಸಾಹಿತ್ಯ ಕೃತಿಯೊಂದರಲ್ಲಿ ಮೈತಳೆದಿರಬೇಕಾದ ರಾಜಕೀಯದ ಸ್ವರೂಪ, ಆರ್ಥಿಕತೆ, ಇಂದಿನ ಜಾಗತಿಕ ಸ್ಥಿತಿ, ಸಾಹಿತ್ಯದ ಹೊಸ ಹೊಸ ಪ್ರಯೋಗಗಳು - ಇವೆಲ್ಲವನ್ನೂ ಕೂಡಿಸುವಂತೆ ಲೇಖಕ ಬರೆಯಬೇಕಾಗುತ್ತದೆ. ಬೈಬಲ್ ಬಂಪ್‌ನಂತಹ ಕತೆಗಳಲ್ಲಿ ಅಂತರಂಗ ಶೋಧವಿದ್ದರೆ ವಾಟ್ಸ್ ಇನ್ ಎ ನೇಮ್ ಎಂಬ ಕತೆಯಲ್ಲಿ ಅಂತರಂಗ ಬಹಿರಂಗ ಶೋಧಗಳೆರಡೂ ಇವೆ. ಈ ಕತೆಗಳು ಸಮಗ್ರತೆಯ ಕಡೆಗೆ, ಬಂಧ ಸೌಷ್ಟವದ ಕಡೆಗೆ ಪ್ರಬಂಧ ಧ್ವನಿಯ ಕಡೆಗೆ ಸಾಗಿ ಅನುಭವ ಸರಳಗೊಳ್ಳಲು‌ ಅವಕಾಶವನ್ನೇ ಕೊಟ್ಟಿಲ್ಲವೆಂಬುದು ಗಮನಾರ್ಹ.

ಸಮಕಾಲೀನತೆಯ ತವಕ ತಲ್ಲಣಗಳನ್ನು ಕತೆಯಲ್ಲಿ ಹಿಡಿದಿಡುವಾಗ ಕತೆಯ ಬಂಧಕ್ಕೆ, ಅದರ ಸಾರ್ವತ್ರಿಕ ಗುಣಕ್ಕೆ ಭಂಗವುಂಟಾಗಿಲ್ಲ ಎನ್ನುವುದೇ ಇಲ್ಲಿನ ಕತೆಗಳನ್ನು ಕಟ್ಟುವಿಕೆಯಲ್ಲಿರುವ ಶಕ್ತಿ. ವಾಟ್ಸ್ ಇನ್ ಎ ನೇಮ್ ಕತೆಯಲ್ಲಿ ತನ್ನ ಹೆಸರಿನಲ್ಲಿಯೇ ಜಾತಿ ಇರುವುದನ್ನು ಕಂಡು ಅಸಹನೆಯನ್ನು ವ್ಯಕ್ತಪಡಿಸುವ ನಾಗರಿಕ ಸಮಾಜವನ್ನು ಕಂಡ ಯುವಕ ಕುಸಿಯುತ್ತಾನೆ. ಕೊನೆಗೆ ಹೆಸರನ್ನು ಬದಲಾಯಿಸಿಕೊಂಡು ಬೇರೊಂದು ಕೆಲಸಕ್ಕೆ ಸೇರಿಕೊಳ್ಳುತ್ತಾನೆ. ‘ಎಜುಕೇಷನ್, ಎಕಾನಮಿಕಲ್ ಸ್ಟೇಟಸ್, ಇಂಟರ್‌ ಕ್ಯಾಸ್ಟ್‌ ಮ್ಯಾರೇಜ್ ಇಂಟೆಲೆಕ್ಚುವಾಲಿಟಿ, ಯಾವೂ ನಮ್ಮ ಅವಮಾನವನ್ನು ಕಡಿಮೆ ಮಾಡೋಕೆ ಆಗಿಲ್ಲ ಸರ್’ ಎಂದು ಹೇಳುವ ಅವನ ಮಾತು ಓದುಗರನ್ನು ಮೌನವಾಗಿ ತಟ್ಟುತ್ತದೆ. ಇದು ಕತೆಯು ಯಶಸ್ಸನ್ನು ಸಾಧಿಸಬೇಕಾದ ಒಂದು ಕ್ರಮ.

ಬದುಕಿನಲ್ಲಿರುವ ನೋವು ಅವಮಾನಗಳನ್ನು ಸಹಿಸುವ ಮತ್ತು ಅದರಿಂದ ಹೊರಬರುವ ದಾರಿಗಳನ್ನು ಹುಡುಕುವ, ಪ್ರಯತ್ನ ಇಲ್ಲಿನ ಕತೆಗಳಲ್ಲಿ ಇದೆ. ವೈಚಾರಿಕತೆಯನ್ನು ಅದರ ಪಾಡಿಗೆ ಬಿಟ್ಟು ಆಕರ್ಷಕವಾಗಿ ಕತೆ ಹೇಳುವ ಮತ್ತು ಅದನ್ನು ಅಷ್ಟೇ ಆಕರ್ಷಕವಾಗಿ ಓದುಗನಿಗೆ ತಲುಪಿಸುವ ಕಡೆ ಇಲ್ಲಿನ ಕತೆಗಳ ನಿರೂಪಣೆ ಇದೆ. ದೀರ್ಘವಾದ ವಿವರಣೆ ಇಲ್ಲಿನ ಕತೆಗಳಲ್ಲಿ ಇಲ್ಲದಿರುವುದರಿಂದ ಕಲಾತ್ಮಕತೆಯ ಅಂಶಗಳು ಒಳಗೊಳ್ಳಲು ಸಾಧ್ಯವಾಗಿದೆ. ಇಲ್ಲಿನ ಕತೆಗಳು ಭಾವಗೀತೆಯಂತೆ ಚಿಕ್ಕದಾಗಿರಲು ಇದೂ ಒಂದು ಕಾರಣ. ಭಾವಗೀತೆಯ ಸಂಕ್ಷಿಪ್ತತೆ, ತೀವ್ರತೆ, ಸೂಕ್ಷ್ಮತೆಗಳ ಮೂಲಕ ದಯಾನಂದ ಅವರು ಮಾನವೀಯ ಮೌಲ್ಯಗಳ ಹುಡುಕಾಟಕ್ಕಾಗಿ ವಿಶಿಷ್ಟವಾದ ಭಾಷೆಯನ್ನು ಬಳಸಿದ್ದಾರೆ.

ಬುದ್ಧನ ಕಿವಿ

ಲೇ:ದಯಾನಂದ

ಪ್ರ: ಅಲೆ ಕ್ರಿಯೇಟಿವ್ಸ್

ಸಂ: 9945065060

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT