ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಭಾವ ತೀವ್ರತೆ, ವಸ್ತು ವೈವಿಧ್ಯದ ಕಥಾ ಜಗತ್ತು

Last Updated 27 ಆಗಸ್ಟ್ 2022, 19:30 IST
ಅಕ್ಷರ ಗಾತ್ರ

ನೀಲಕುರಿಂಜಿ

ಲೇ: ದಾದಾಪೀರ್‌ ಜೈಮನ್‌

ಪ್ರ: ವೈಷ್ಣವಿ ಪ್ರಕಾಶನ

ಸಂ: 9620170027

ಕನ್ನಡ ಸಾಹಿತ್ಯದಲ್ಲೀಗ ಮುಕ್ತಛಂದಸ್ಸಿನ ಕಾಲ. ಇದೇ ಭರತವಾಕ್ಯಕ್ಕೆ ಇನ್ನೆರಡು ವಿಶೇಷಣಗಳನ್ನು ಸೇರಿಸಬಹುದಾದರೆ ಇದು ಯುವೋತ್ಸಾಹದ ಮತ್ತು ಗದ್ಯದ ಸೊಬಗಿಗೆ ಮಾರುಹೋದ ಯುಗಧರ್ಮ. ಈ ತಾರುಣ್ಯದ ಕಸುವು, ಕಥೆ, ಕಾದಂಬರಿ ಮತ್ತು ಅನುವಾದ ಕ್ಷೇತ್ರಗಳಲ್ಲಿ ಎದ್ದು ಕಾಣುತ್ತಿದೆ. ಕಳೆದ ದಶಕಗಳ ಸಾಹಿತ್ಯಕ್ಕೂ, ವರ್ತಮಾನದ ಸಾಹಿತ್ಯಕ್ಕೂ ಇರುವ ಬಹುಮುಖ್ಯ ವ್ಯತ್ಯಾಸವೆಂದರೆ ಈಗಿನ ತಲೆಮಾರು ಬೌದ್ಧಿಕತೆ ಹೇರುವ ಸಿದ್ಧಾಂತಗಳ ಕೃತಕ ಭಾರದಿಂದ, ನಿರೀಕ್ಷಿತ ತಾರ್ಕಿಕ ಅಂತ್ಯಗಳಿಂದ ದೂರ ಸರಿದು ಹೆಚ್ಚು ವಸ್ತುನಿಷ್ಠತೆಗೆ, ಅಭಿವ್ಯಕ್ತಿಯ ಪ್ರಾಮಾಣಿಕತೆಗೆ ಒತ್ತು ನೀಡುತ್ತಿರುವುದು.

ಹಾಗೆಂದು, ಈ ಬರಹಗಾರರಿಗೆ ವಿಶಾಲನೆಲೆಯಲ್ಲಿ ರಾಜಕೀಯ ನಂಬಿಕೆ-ಬದ್ಧತೆ, ಬದಲಾವಣೆಯ ಕಾತರ-ಕನಸು ಭವಿಷ್ಯದ ಕುರಿತು ಭರವಸೆ, ತರತಮಗಳಿಂದ ಮುಕ್ತವಾದ ಸಮಾಜದ ಆಶೋತ್ತರಗಳು ಇಲ್ಲವೆಂದಲ್ಲ. ಆದರೆ, ಅವನ್ನು ಸಾಹಿತ್ಯದಲ್ಲಿ ಪ್ರತಿಬಿಂಬಿಸುವಾಗ ದಶಕಗಳ ಹಿಂದೆ ಕಾಣುತ್ತಿದ್ದ ಆವೇಶ, ಉದ್ವೇಗ ಮತ್ತು ಆಳದ ಗಹನ ಸಮಸ್ಯೆಗಳಿಗೆ ತಾಕ್ಷಣಿಕ ನಿರ್ಣಯ ಕೈಗೊಳ್ಳುವ ಆತುರತೆ ಮರೆಯಾಗಿ ಹೆಚ್ಚು ಸಹಜವೂ, ಸಾವಯವವೂ ಆದ ತೋಡಿಕೊಳ್ಳುವ ವಿಧಾನವನ್ನು ಹುಡುಕುತ್ತಿರುವಂತೆ ಕಾಣುತ್ತಿದೆ.

ಈ ಬಗೆಯ ಹೊಸ ಗದ್ಯ ಸಾಹಿತ್ಯವನ್ನು ಸೃಷ್ಟಿಸುತ್ತಿರುವವರಲ್ಲಿ ದಾದಾಪೀರ್ ಜೈಮನ್‌ ಒಬ್ಬರು. ಅವರದು ಮೃದು ಮತ್ತು ನವಿರು ಧೋರಣೆ. ಆ ಮೂಲಕವೇ ತಮ್ಮ ಕಥೆ, ಕವಿತೆ ಹಾಗೂ ಅನುವಾದಗಳಲ್ಲಿ ಜೈಮನ್‌ ಸ್ವಂತಿಕೆಯನ್ನು ಕಂಡುಕೊಳ್ಳಲು ಹವಣಿಸುತ್ತಿದ್ದಾರೆ. ತಮ್ಮ ಕಥೆಗಾಗಿ ಅವರು ಆಯ್ದುಕೊಳ್ಳುವ ವಸ್ತು, ಒಟ್ಟಾರೆ ಕಟ್ಟೋಣದಲ್ಲಿ ಸಾಧಿಸುತ್ತಿರುವ ಪರಿಣತಿ, ಬದುಕಿನ ಕುರಿತು ರೂಢಿಸಿಕೊಳ್ಳುತ್ತಿರುವ ಹದವಾದ ದೃಷ್ಟಿಕೋನ ಮತ್ತು ಆಯಾ ಕಥೆಗಳಲ್ಲಿ ಸಾಧಿಸುತ್ತಿರುವ ಕೊಂಚ ಮಾತ್ರದ ಪಕ್ವತೆಗಳು ಇಂತಹ ಮಾತುಗಳನ್ನು ಬರೆಯಲು ಪ್ರೇರೇಪಿಸುತ್ತಿವೆ.

‘ನೀಲ ಕುರಿಂಜಿ’ ಜೈಮನ್‌‍ರ ಮೊದಲ ಕಥಾ ಸಂಕಲನ. ಕೆಲವು ಕಥೆಗಳು ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿವೆ ಎಂಬ ವಿಶೇಷಣವೂ ಈ ಸಂಕಲನಕ್ಕಿದೆ. ಈ ಸಂಕಲನವು ತನ್ನ ವಸ್ತು-ವಿಷಯ ವೈವಿಧ್ಯ, ಸಂಯಮಪೂರ್ಣ ನಿರೂಪಣೆ, ತಾರ್ಕಿಕವಾಗಿಯಲ್ಲದೆ ಆ ಕ್ಷಣಕ್ಕಷ್ಟೇ ಮುಗಿದು ಓದುಗನಲ್ಲಿ ಬೆಳೆಯಬಹುದಾದ ಅಂತ್ಯಗಳು ತಟ್ಟನೆ ಗಮನ ಸೆಳೆಯುತ್ತವೆ. ತಮ್ಮ ಸಮುದಾಯದ ಬದುಕಿನಾಚೆಗೂ ಬದುಕಿದೆ ಮತ್ತು ಅಂತಹ ಅನುಭವಗಳಿಗೆ ತಾನು ನಿರಂತರವಾಗಿ ತೆರೆದುಕೊಳ್ಳುತ್ತಿದ್ದೇನೆ ಎಂಬ ಎಚ್ಚರವು ಕಥಾವಸ್ತು ವೈವಿಧ್ಯವನ್ನು ನಿರ್ಧರಿಸಿವೆ. ಪಾತ್ರಗಳನ್ನು ಜತನದಿಂದ ಕಟ್ಟುವಾಗ ಪೂರ್ವಗ್ರಹಗಳಿಂದ ಮುಕ್ತವಾಗಿ ಅವನ್ನು ಮನುಷ್ಯ ಗೊಂಬೆಗಳು ಎಂಬಂತೆ ನೋಡುವುದು ಕೂಡ ಗಮನಾರ್ಹ ಅಂಶವೇ.

ಸಂಕಲನದ ಕಥೆಗಳನ್ನು ವಿಶಾಲವಾಗಿ ಎರಡು ನೆಲೆಗಳಲ್ಲಿ ನೋಡಬಹುದು. ಸಣ್ಣಪುಟ್ಟ ಊರುಗಳಲ್ಲಿನ ಬದುಕಿನ ಸಂಕಟಗಳನ್ನು ದಿಟ್ಟತನದಿಂದ ಎದುರಿಸುತ್ತ ಓದುಗರ ಮನಸ್ಸನ್ನು ತೇವಗೊಳಿಸಬಲ್ಲ ಪಾತ್ರಗಳಿರುವ ಕಥೆಗಳದ್ದು ಒಂದು ಬಗೆ. ನಗರದ ಸಂಕೀರ್ಣ ಬದುಕಿನ ಸಂಕೀರ್ಣ ಅನುಭವಗಳಲ್ಲಿ ನೋಯುತ್ತ-ಬೇಯುತ್ತ ಓದುಗರನ್ನು ಕಾಡಬಲ್ಲ ಕಥೆಗಳದ್ದು ಇನ್ನೊಂದು ಬಗೆ. ಇಂತಹ ವರ್ಗೀಕರಣ ಕೂಡ ಓದಿನ ಅನುಕೂಲಕ್ಕಾಗಿ, ಕಥೆಗಳನ್ನು ಇನ್ನಷ್ಟು ಸೂಕ್ಷ್ಮವಾಗಿ ಗಮನಿಸಲೆಂದು ಮಾಡಿಕೊಂಡಿರುವುದಷ್ಟೆ.

ತೇರು, ಟೋಕನ್ ನಂಬರ್, ಆವರಣ, ಕೊನೆ ಮಳೆ, ನೀಲ ಕುರಿಂಜಿ ಕಥೆಗಳನ್ನು ಮೊದಲ ಬಗೆಯ ನಿರೂಪಣೆಗಳಿಗೆ ಸೇರಿಸಿದರೆ; ಎಲ್ಲೋ ಯೆಲ್ಲೋ, ಪೇಟೆ ಸಮುದ್ರದ ದಾರಿ, ಜಾಲಗಾರ, ತೀರದ ಒಲವಿನ ಒಂಟಿ ಹಾಡು ಕಥೆಗಳನ್ನು ಎರಡನೆಯ ಮಾದರಿಗೆ ಸೇರಿಸಬಹುದು. ಮೊದಲ ಬಗೆಯ ಕಥೆಗಳಲ್ಲಿ ಪ್ರಕಟಗೊಳ್ಳುವ ಅನುಭವ, ಆರ್ದ್ರತೆ, ಬದುಕಿನ ಸಂಕೀರ್ಣತೆಗಳ ಸ್ವರೂಪ ಒಂದು ಬಗೆಯದ್ದಾದರೆ, ಎರಡನೆ ಬಗೆಯ ಕಥೆಗಳಲ್ಲಿ ಕಾಣಸಿಕ್ಕುವ ಬದುಕು, ತಲ್ಲಣ, ಆಘಾತಗಳ ಸ್ವರೂಪ ಇನ್ನೊಂದು ರೀತಿಯದು.

ತೇರು, ಟೋಕನ್ ನಂಬರ್, ನೀಲ ಕುರಿಂಜಿ, ಕೊನೆಯ ಮಳೆ ರೀತಿಯ ಕಥೆಗಳು ಮುನ್ನೆಲೆಗೆ ತರುತ್ತಿರುವುದು ಬಡ ಕುಟುಂಬಗಳ ಅಸ್ತಿತ್ವದ ಹೋರಾಟ, ಅವರ ಕ್ಷಣಿಕ ಸುಖ, ಸೂಕ್ಷ್ಮವಾಗಿ ಬೆಸೆದಿರುವ ಸಂಬಂಧದ ಎಳೆ, ಅಂತಃಕರಣ ಮತ್ತು ಬಿಟ್ಟು ಕೊಡದ ಘನತೆಗಳು ಒಳಗೇ ಪ್ರವಹಿಸುವ ತಣ್ಣಗಿನ ನೀರಿನ ಅನುಭವ ನೀಡುವಂಥವು. ಓದುಗನನ್ನು ಕ್ಷಣಕಾಲ ಗಂಟಲು ಒತ್ತಿ ಬರುವಂತೆ ಮಾಡುಬಲ್ಲ ಭಾವುಕತೆಯನ್ನು ಹೊಂದಿರುವಂಥವು.

ಎಲ್ಲೋ ಯೆಲ್ಲೋ, ಆವರಣದಂತಹ ಕಥೆಗಳು ಸಂಬಂಧಗಳ ಜಟಿಲತೆ, ಬದುಕು ಮನುಷ್ಯನಿಗೆ ನಿಜವಾದ ಆಯ್ಕೆಗಳನ್ನು ನೀಡುತ್ತದೆಯೇ, ಬದುಕು ನೀಡುವುದನ್ನು ಸ್ವೀಕರಿಸುವುದೇ ಮನುಷ್ಯ ಆಯ್ಕೆ ಎಂದು ಪರಿಗಣಿಸುತ್ತಾನೆಯೇ? ಆಯಾ ಕ್ಷಣದಲ್ಲಿ ಪಡೆಯುವ ತಾತ್ಕಾಲಿಕ ಬಿಡುಗಡೆಯೇ ಬದುಕನ್ನು ನಡೆಸುವ ಶಕ್ತಿಯೇ? ಎಂಬಂಥ ಪ್ರಶ್ನೆಗಳನ್ನು ಎತ್ತುತ್ತವೆ.

ಪೇಟೆ ಸಮುದ್ರದ ದಾರಿ, ಜಾಲಗಾರ ಕಥೆಗಳು ನಗರ ಬದುಕಿನ ಸಂಕೀರ್ಣತೆ, ಭ್ರಮೆ ಮತ್ತು ವಾಸ್ತವಗಳೇನಾಗಿರಬಹುದು ಎಂದು ಶೋಧಿಸಲು ಯತ್ನಿಸುತ್ತವೆ. ಪೇಟೆ ಸಮುದ್ರದ ದಾರಿ ಕಥೆಯು ಬದುಕಿನ ಅಮೂರ್ತತೆ, ಅಸಂಗತತೆ, ಚೆದುರಿ ಚೆಲ್ಲಾಪಿಲ್ಲಿಯಾದ ತುಣುಕುಗಳನ್ನು ಜೋಡಿಸಿ ಕಥೆ ಅಥವಾ ಅರ್ಥಪೂರ್ಣ ಬದುಕನ್ನಾಗಿಸಲು ಪ್ರಯತ್ನಿಸಿದರೆ, ತನ್ನ ಮಹತ್ವಾಕಾಂಕ್ಷೆಯಿಂದ ಗಮನ ಸೆಳೆಯುವ ಜಾಲಗಾರ ಕಥೆ ಸಂಬಂಧದ ಅರ್ಥಪೂರ್ಣತೆಯನ್ನು ಅರಿತುಕೊಳ್ಳಲು ಹಾತೊರೆಯುತ್ತದೆ. ಇವೆರಡೂ ಕಥೆಗಳ ಪ್ರಯೋಗಶೀಲತೆ, ಶೈಲಿ ಮತ್ತು ಸಂಕೀರ್ಣ ವಸ್ತು ನಿರ್ವಹಣೆ ಗಮನಾರ್ಹ. ಆಧುನಿಕ ಅರ್ಥನೀತಿಯ ಕೂಸಾದ ಜಾಲ ಮಾರುಕಟ್ಟೆ ಎಂಬ ಪರಿಕಲ್ಪನೆಯನ್ನು ನಿರುದ್ವಿಗ್ನವಾಗಿ ಬಿಚ್ಚಿಡುವ ಮತ್ತು ಮನುಷ್ಯರನ್ನು ಕೊನೆಮೊದಲು ಇಲ್ಲದ ಸರಪಳಿಯ ಸರಕುಗಳಾಗಿ ಪರಿವರ್ತಿಸುವ ಲೋಕದ ಅನುಭವವನ್ನು ಈ ಕಥೆ ಮನನೀಯವಾಗಿ ಮುಖಾಮುಖಿಯಾಗಿಸುತ್ತದೆ. ಕನ್ನಡ ಕಥನಕ್ಕೆ ಸೇರಿಕೊಳ್ಳುತ್ತಿರುವ ಹೊಸ ವಸ್ತುಗಳಲ್ಲಿ ಇದು ಕೂಡ ಒಂದು. ಕಥಾ ವಿವರಗಳ ನಿಖರತೆ ಕಥೆಯ ಗುಣಮಟ್ಟವನ್ನು ಹೆಚ್ಚಿಸಲು ಸಹಕಾರಿಯಾಗಿವೆ.

–ದಾದಾಪೀರ್‌ ಜೈಮನ್‌
–ದಾದಾಪೀರ್‌ ಜೈಮನ್‌

ಕೆಲವು ಕಥೆಗಳನ್ನು ಆವರಿಸಿರುವ ಕಾತರ, ಅನಾಥಪ್ರಜ್ಞೆ, ದುಃಖ, ಅಸಹಾಯಕತೆ, ವಿಷಾದ ಮತ್ತು ದುರಂತಗಳು ಮನ ಕಲಕುವಂಥವು. ತಾವು ಜನ್ಮದತ್ತವಾಗಿ ಪಡೆದ ವಿಶಿಷ್ಟ ದೇಹ ಸಂವೇದನೆಯಿಂದಾಗಿ ಪಾಪಪ್ರಜ್ಞೆಯಿಂದ ನರಳುವ, ಸಾಮಾಜಿಕ ತಿರಸ್ಕಾರಕ್ಕೆ ಒಳಗಾಗುವ ಮನುಷ್ಯಲೋಕದ ಭಯಾನಕ ಹೋರಾಟವನ್ನು ನಿರೂಪಿಸುವಂಥವು. ಇತ್ತೀಚಿನ ದಿನಮಾನದಲ್ಲಿ ದೇಹವಿಶಿಷ್ಟ ಸಂವೇದನೆಯ ಕಥೆಗಳು ಕನ್ನಡ ಸಾಹಿತ್ಯದಲ್ಲಿ ಮೊದಲಿಗಿಂತ ಹೆಚ್ಚು ಸ್ಫುಟವಾಗಿ ಕಾಣಿಸಿಕೊಳ್ಳುತ್ತಿವೆ. ಇದಕ್ಕೆ ಜಾಗತಿಕ ಮತ್ತು ದೇಶಿಯ ನೆಲೆಯಲ್ಲಿ ಬದಲಾಗುತ್ತಿರುವ ಮನುಷ್ಯ ನಂಬಿಕೆ-ನಡವಳಿಕೆ, ಕಾನೂನು-ನ್ಯಾಯಾಲಯದ ತೀರ್ಪು ಪ್ರಕ್ರಿಯೆ ಇತ್ಯಾದಿಗಳು ಕಾರಣವಾಗಿವೆ. ಅದೇನೆ ಇರಲಿ, ಆ ಮೂಲಕ ವಿಶಿಷ್ಟ ದೈಹಿಕ ಕಾಮ ಸಂವೇದನೆಯಂತಹ ವಿಷಯಗಳು ಸಾಹಿತ್ಯವನ್ನು ಪ್ರವೇಶಿಸುತ್ತಿವೆ.

ಜೈಮನ್‌‍ರಿಗೆ ಇಲ್ಲಿನ ಕೆಲವು ಕಥೆಗಳಲ್ಲಿ ಇನ್ನೂ ಕಲಾತ್ಮಕ ಪರಿಣತಿ, ಪಕ್ವತೆ ಸಾಧಿಸುವ ಅವಕಾಶಗಳಿದ್ದರೂ ಹಲವೊಮ್ಮೆ ಅವಸರದ ಬೆನ್ನು ಸವಾರಿ ಮಾಡಿರುವುದು ಗೋಚರಿಸುತ್ತದೆ. ಇದು, ಈ ಕಾಲದ ಲೇಖಕರು ಎದುರಿಸುತ್ತಿರುವ ಸಂಕೀರ್ಣ ಬಿಕ್ಕಟ್ಟಾಗಿದೆ. ಹೊರಗಿನ ಒತ್ತಡ, ಜನಪ್ರಿಯ ಸಂಸ್ಕೃತಿಯ ಸಿದ್ಧಮಾದರಿ ಹುಟ್ಟು ಹಾಕುತ್ತಿರುವ ಬಿಗುಪಿನ ಪರಿಸರ ತರುಣ ಬರಹಗಾರರನ್ನು ಇಕ್ಕಟ್ಟಿನಲ್ಲಿ ಸಿಕ್ಕಿಸುತ್ತಿರುವಂತೆ ಕಾಣುತ್ತದೆ. ಇಲ್ಲಿ ಬರೆದಿರುವ ಮಾತುಗಳ ಹೊರತಾಗಿಯೂ ಜೈಮನ್‌ ಅವರ ‘ನೀಲ ಕುರಿಂಜಿ’ ಸಂಕಲನದ ಕಥೆಗಳು ತಮ್ಮ ವ್ಯಕ್ತಿವಿಶಿಷ್ಟ ಸಂವೇದನೆಯನ್ನು, ತಮ್ಮ ಸಮುದಾಯದ ಸುಖದುಃಖಗಳನ್ನು ನಿರುದ್ವಿಗ್ನವಾಗಿ, ಆದಷ್ಟು ಪಕ್ವತೆಯಿಂದ ಕಥನಕ್ಕೆ ಒಗ್ಗಿಸುತ್ತಿರುವ ಅಂಶವೇ ಅತ್ಯಂತ ಮಹತ್ವದ್ದಾಗಿದೆ. ಈ ಅಂಶವೇ ಅವರನ್ನು ಅಪಾರವಾದ ಭರವಸೆಯ ಲೇಖಕರನ್ನಾಗಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT