ಶನಿವಾರ, ಸೆಪ್ಟೆಂಬರ್ 24, 2022
21 °C

ಪುಸ್ತಕ ವಿಮರ್ಶೆ | ಕುರ್ಚಿ ಬಿಡದ ಮುಖ್ಯಮಂತ್ರಿಯ ಕಥೆ

ಅಭಿಲಾಷ್‌ ಪಿ.ಎಸ್‌. Updated:

ಅಕ್ಷರ ಗಾತ್ರ : | |

Prajavani

ನರಸಪ್ಪ ಉರೂಫ್‌ ನರಸೇಗೌಡ ಉರೂಫ್‌ ಹೊನ್ನಸಂದ್ರ ನರಸಿಂಹಯ್ಯ ಚಂದ್ರಶೇಖರ ಎಂದರೆ ಯಾರು ಎಂದು ನಿಮಗೆ ಗೊತ್ತೇ? ಹೀಗೆಂದರೆ ತಕ್ಷಣ ಯಾರಿಗೂ ಇವರ ಪರಿಚಯ ಸಿಗದು. ಇದು ಕರುನಾಡಿಗೆ ಕಳೆದ ನಾಲ್ಕು ದಶಕಗಳಿಂದ ನಿರಂತರವಾಗಿ ‘ಮುಖ್ಯಮಂತ್ರಿ’ಯಾಗಿರುವವರ ಮೂಲ ಹೆಸರು. ಕರ್ನಾಟಕದ ಜನರಿಗೆ ‘ಮುಖ್ಯಮಂತ್ರಿ’ ಚಂದ್ರು ಎಂದೇ ಇವರು ಪರಿಚಿತರು. 

1980ರ ಡಿಸೆಂಬರ್‌ 4ರಂದು, ತಮ್ಮ 27ನೇ ವಯಸ್ಸಿಗೆ ‘ಮುಖ್ಯಮಂತ್ರಿ’ಯಾಗಿ ಗದ್ದುಗೆ ಏರಿದ ಇವರು ಇಂದಿಗೂ ಆ ಕುರ್ಚಿ ಬಿಟ್ಟು ಕೆಳಗಿಳಿದಿಲ್ಲ! ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಹೊನ್ನಸಂದ್ರ ಗ್ರಾಮದಲ್ಲಿ ಹುಟ್ಟಿದ ಹೊನ್ನಸಂದ್ರ ಚಂದ್ರಶೇಖರ, ಈ ಮಟ್ಟದಲ್ಲಿ ‘ಮುಖ್ಯಮಂತ್ರಿ ಚಂದ್ರು’ವಾಗಿ ಹೇಗೆ ಬೆಳೆದರು ಎಂಬ ಕಥೆಯೇ ಈ ಕೃತಿ. ಹೌದು, ಈ ಹೊತ್ತಿಗೆ ಚಂದ್ರು ಅವರ ಜೀವನ ಕಥನ.

ಈ ಬಣ್ಣದ ಬದುಕನ್ನು ಚಂದ್ರು ಅವರು ದಾಖಲಿಸಿದ್ದು ಲಾಕ್‌ಡೌನ್‌ ಸಂದರ್ಭದಲ್ಲಿ. ಆತ್ಮಕಥೆಯ ಚೌಕಟ್ಟಿನಂತೆ ಬಾಲ್ಯ, ಕಾಲೇಜು ಜೀವನದಿಂದಲೇ ತಮ್ಮ ಬದುಕಿನ ಹೆಜ್ಜೆಗಳನ್ನು ದಾಖಲಿಸುತ್ತಾ ಹೊರಟಿದ್ದಾರೆ ಅವರು. ಪ್ರಸ್ತುತ ಮಾತಿನಲ್ಲಿ ಇರುವ ತುಂಟತನ ಬಾಲ್ಯ ಹಾಗೂ ಹದಿಹರೆಯದಲ್ಲಿ ತಮ್ಮ ನಡವಳಿಕೆಯಲ್ಲೂ ಇತ್ತು ಎನ್ನುವುದನ್ನು ಚಂದ್ರು ಅವರು ಇಲ್ಲಿ ಹಲವು ಘಟನೆಗಳ ಮೂಲಕ ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ. ಪುಟ ತಿರುವಿದಂತೆ ರಂಗಾನುಭವವೂ ಬಿಚ್ಚಿಕೊಳ್ಳುತ್ತದೆ. 

ರಂಗಾನುಭವದ ಬಳಿಕ ಬರುವ ಅಧ್ಯಾಯ ಓದುಗರಲ್ಲಿ ಹೆಚ್ಚಿನ ಕುತೂಹಲ ಮೂಡಿಸುತ್ತದೆ. ಅದೇ ಆಕಸ್ಮಿಕವಾಗಿ ಮುಖ್ಯಮಂತ್ರಿಯಾದ ಎಚ್‌.ಎನ್‌.ಚಂದ್ರಶೇಖರ ಕಥೆ. ಕಲಾಗಂಗೋತ್ರಿಯ ವೇದಿಕೆಯಲ್ಲಿ ತಾವು ಆಕಸ್ಮಿಕವಾಗಿ ಮುಖ್ಯಮಂತ್ರಿಯಾದ ಘಟನೆ, ಮುಖ್ಯಮಂತ್ರಿ ನಾಟಕದ ದಾಖಲೆ, ನಾಟಕ ಪ್ರದರ್ಶನದ ವೇಳೆ ನಡೆದ ಸ್ವಾರಸ್ಯಕರ ಘಟನೆಗಳನ್ನು ಬಹಳ ವಿಸ್ತೃತವಾಗಿ ಚಂದ್ರು ಅವರು ದಾಖಲಿಸಿದ್ದಾರೆ. ವರನಟ ಡಾ.ರಾಜ್‌ಕುಮಾರ್‌ ಅವರಿಗೆ ಮುಖ್ಯಮಂತ್ರಿ ನಾಟಕ ಅರ್ಥವಾಗದೇ ಇದ್ದಿರುವುದನ್ನೂ, ಇದನ್ನು ಸ್ವತಃ ರಾಜ್‌ಕುಮಾರ್‌, ಚಂದ್ರು ಅವರ ಬಳಿ ಹೇಳಿಕೊಂಡಿದ್ದನ್ನು ಅವರು ದಾಖಲಿಸಿದ್ದಾರೆ. 

ಚಂದ್ರು ಅವರ ರಂಗಪಯಣ ಎಷ್ಟು ಸ್ವಾರಸ್ಯಕರ, ಆಸಕ್ತಿದಾಯಕವಾಗಿದೆಯೋ ಅವರ ರಾಜಕೀಯ ಜೀವನ ಕಥೆಯೂ ಅಷ್ಟೇ. ಲೋಕಸಭೆ ಚುನಾವಣೆಯಲ್ಲಿ ಸೋತ ದಿನ ಪತ್ನಿ ಪದ್ಮಾ ಸಿಹಿ ಅಡುಗೆ ಮಾಡಿದ ಘಟನೆ, ಅದರ ಹಿಂದಿನ ವೃತ್ತಾಂತ, ಆಕಸ್ಮಿಕವಾಗಿ ‘ಮುಖ್ಯಮಂತ್ರಿ’ ಪಟ್ಟ ಒಲಿದಂತೆ ಆಕಸ್ಮಿಕವಾಗಿ ಬಂದ ವಿಧಾನಸಭೆ ಟಿಕೆಟ್‌, ಸಾವಿನ ಭಯ ಹುಟ್ಟಿಸಿದ್ದ ಯಡಿಯೂರಪ್ಪ ಅವರ ಜೊತೆಗಿನ ಹೆಲಿಕಾಪ್ಟರ್‌ ಪಯಣ ಹೀಗೆ ತಮ್ಮ ಸ್ಮೃತಿಪಟಲದಲ್ಲಿರುವ ಎಲ್ಲ ಘಟನೆಗಳನ್ನು ಚಂದ್ರು ಅವರಿಲ್ಲಿ ದಾಖಲಿಸಿದ್ದಾರೆ. ಶೂಟಿಂಗ್‌ ವೇಳೆ ನಡೆದ ಅವಘಡದಲ್ಲಿ ಒಂದು ಕಣ್ಣಿನ ದೃಷ್ಟಿಯನ್ನು ಕಳೆದುಕೊಂಡ ವೃತ್ತಾಂತವನ್ನೂ ಬರೆದಿದ್ದಾರೆ.  

ಈ ಕೃತಿಯಲ್ಲಿ ಚಂದ್ರು ಅವರ ಬಾಲ್ಯ, ಕಾಲೇಜು ಜೀವನ, ರಂಗಾನುಭವ, ಮುಖ್ಯಮಂತ್ರಿ ಪಟ್ಟ ಸಿಕ್ಕಿದ ಘಳಿಗೆ, ಸಿನಿಮಾ ಬದುಕು, ರಾಜಕೀಯ ಕ್ಷೇತ್ರದಲ್ಲಿನ ಹೆಜ್ಜೆಗಳ ಜೊತೆಗೆ ಸಂಸಾರಿಯ ಸ್ವಗತವೂ ಇದೆ. ಇಡೀ ಕೃತಿ ಕೇವಲ ಆತ್ಮಕಥೆಯಾಗದೆ, ತಮ್ಮ ಕಲಾಗಂಗೋತ್ರಿ ತಂಡದ ಹೆಜ್ಜೆಗಳು, ಇದರ ರೂವಾರಿ ಬಿ.ವಿ.ರಾಜಾರಾಂ ಒಡನಾಟವೂ ಇಲ್ಲಿ ದಾಖಲಾಗಿರುವುದು ವಿಶೇಷ. ಓದಿ ಅನುಭವಿಸುವಂತಹ ಹೂರಣದಿಂದ ಈ ಕೃತಿ ತುಂಬಿದೆ. ಚಂದ್ರು ಅವರ ಹಲವು ಆಯಾಮಗಳನ್ನು ಓದುಗರು ಇಲ್ಲಿ ತಿಳಿದುಕೊಳ್ಳಬಹುದು. ಬರವಣಿಗೆಯೂ ಓದಿನ ಓಘಕ್ಕೆ ಪೂರಕವಾಗಿರುವಂತೆ ಸರಳವಾಗಿದೆ.

***

ಕೃತಿ: ರಂಗವನದ ‘ಚಂದ್ರ’ತಾರೆ
ಡಾ.ಮುಖ್ಯಮಂತ್ರಿ ಚಂದ್ರು ಜೀವನ ಕಥನ
ಪ್ರ: ಕವಿತಾ ಪ್ರಕಾಶನ, ಮೈಸೂರು
ಸಂ: 9880105526

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು