ಭಾನುವಾರ, 4 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕದ ಒಳನೋಟ: ನಾಗ ಎಚ್ ಹುಬ್ಳಿ ಅವರ ಕುಲಚಿಹ್ನೆಯ ರಹಸ್ಯ ಪುಸ್ತಕ

Last Updated 12 ಮಾರ್ಚ್ 2023, 0:15 IST
ಅಕ್ಷರ ಗಾತ್ರ

‘ಕುಲಚಿಹ್ನೆ ಎನ್ನುವುದು ತಮ್ಮನ್ನು ಪರಸ್ಪರರಿಂದ ಪ್ರತ್ಯೇಕಿಸಿಕೊಳ್ಳುವ ಸಲುವಾಗಿ ಮಾನವ ಪಂಗಡಗಳು ಮಾಡಿದ ಆರಂಭಿಕ ಪ್ರಯತ್ನಗಳಿಂದ ಹುಟ್ಟಿಕೊಂಡದ್ದಾಗಿದೆ’ ಎನ್ನುವ ಊಹೆಯೇ ‘ಕುಲಚಿಹ್ನೆಯ ರಹಸ್ಯ’ ಕೃತಿಯ ವಾಸ್ತವಕೇಂದ್ರಿತ ನೆಲೆ. ಪ್ರತ್ಯೇಕಗೊಂಡ ಮಾನವ ಸಮುದಾಯಗಳು ಬುಡಕಟ್ಟು ಸಂಸ್ಕೃತಿಯ ಐಡೆಂಟಿಟಿಯ ಗುಣಲಕ್ಷಣಗಳಾಗಿದ್ದವು ಎಂಬುವ ತಿಳಿವಳಿಕೆಯೇ ಈ ಅಧ್ಯಯನದ ಮುಖ್ಯ ಆಶಯ.

ಪ್ರಕೃತಿಯ ಮರ, ಗಿಡ, ಪ್ರಾಣಿ, ಪಕ್ಷಿಗಳ ಹೆಸರುಗಳೊಂದಿಗೆ ಬೆರೆತಿರುವ ಸಾವಿರಾರು ಅಡ್ಡಹೆಸರುಗಳೇ ಸಾಕು, ಈ ಅಧ್ಯಯನದ ಮಹತ್ವ ಅರಿಯಲು. ಭಾಷಾ ವಿಜ್ಞಾನವು ಅನುಸರಿಸಬೇಕಾದ ಇನ್ನೊಂದು ಭಾಷಾ ಸಂರಚನೆಯ ಆವರಣವನ್ನು ಈ ಕೃತಿ ಸೃಷ್ಟಿಸಿ ನಿಂತಿದೆ. ಭಾಷೆಯ ಹುಟ್ಟು, ಬೆಳವಣಿಗೆ, ಅದರ ತಾತ್ವಿಕ ವಿಚಾರಗಳಿಗಿಂತ ಭಾಷೆಯನ್ನು ರೂಪಿಸಿದ ಸಮುದಾಯಗಳ ಸಾಂಸ್ಕೃತಿಕ ವಿನ್ಯಾಸಗಳನ್ನು ಕಟ್ಟಿಕೊಳ್ಳುವಲ್ಲಿ ಇದು ನೆರವಿಗೆ ಬರುತ್ತದೆ.

ಮ್ಯಾಕ್ಸ್ ಮುಲ್ಲರ್ ಮತ್ತು ಡಾ.ಪಿಕ್ಲರ್ ಅವರು ನಿರ್ವಚಿಸಿರುವ ಪಂಗಡಗಳ ಹೆಸರಿನ ಚರ್ಚೆಯನ್ನು ಎತ್ತಿಕೊಂಡ ಆಂಡ್ರ್ಯೂ ಲಾಂಗ್ ಇಡೀ ಗ್ರಂಥದಲ್ಲಿ ಹೊವಿಟ್‌ನ ವಿಚಾರಗಳನ್ನು ಸಮರ್ಥನೆಗೆ ಎಂಬಂತೆ ತಂದುಕೊಳ್ಳುತ್ತಾರೆ. ವ್ಯಕ್ತಿಗೆ ವೈಯಕ್ತಿಕ ಹೆಸರಿದ್ದರೂ ಮಾಟ ಮಾಂತ್ರಿಕತೆಯ ಅತಿಮಾನುಷ ಭಯದಿಂದ ಅವನು ತನ್ನ ಹೆಸರನ್ನೇ ಅಮಾನತ್ತಿನಲ್ಲಿರಿಸಿರುವ ರಹಸ್ಯ ಸ್ಥಿತಿಯನ್ನು, ಹಾಗೆಯೇ ರೋಮ್ ನಗರದ ಹೆಸರನ್ನೇ ರಹಸ್ಯವಾಗಿರಿಸಿದ ಒಳಗುಟ್ಟನ್ನು ಇಲ್ಲಿ ನೆನಪಿಸಿದ್ದಾರೆ. ಪರಿಸರ ತನ್ನನ್ನು ತಾನು ರಕ್ಷಿಸಿಕೊಳ್ಳುವ ಎಲ್ಲ ಅತೀಂದ್ರಿಯ ಶಕ್ತಿಗಳನ್ನೂ ಹೊಂದಿರಬಲ್ಲದು ಎಂಬುವ ತಿಳಿವಳಿಕೆ ಆದಿಮ ಮಾನವನಿಗೆ ತಿಳಿದಿತ್ತು ಎನ್ನುವ ವಿಚಾರ ಇಲ್ಲಿ ಸ್ಪಷ್ಟ.

ಸ್ಕಾಟಿಷ್‌ನ ಕವಿ, ಪತ್ರಕರ್ತ, ಇತಿಹಾಸಕಾರ, ಮಾನವಶಾಸ್ತ್ರಜ್ಞ ಆಂಡ್ರ್ಯೂ ಲಾಂಗ್‌ನಂತಹ ವಿದ್ವಾಂಸ ಜಗತ್ತಿನ ಅಲ್ಲಲ್ಲಿನ ಆದಿಮ ಬದುಕಿನ ಮೂಲ ಬೇರುಗಳನ್ನು ಶೋಧಿಸುವ ಪ್ರಯತ್ನದಲ್ಲಿ ಯಶ ಕಂಡಮೇಲೆ ನಮ್ಮ ಕುತೂಹಲಗಳು ಇನ್ನಷ್ಟು ಹೆಚ್ಚಾದವು. ಮಾನವಶಾಸ್ತ್ರಕ್ಕೆ ಇವನಂತೆ ಜೀವತೇಯ್ದ ಹಲವು ವಿದ್ವಾಂಸರು ನಮಗೆ ಕಾಣಸಿಗುವರು. ಇಲ್ಲಿಯೂ ಅಂಥವರ ವಿಚಾರಗಳಿವೆ. ಆಸ್ಟ್ರೇಲಿಯಾ, ಇಂಗ್ಲೆಂಡ್, ಅಮೆರಿಕದ ಬುಡಕಟ್ಟುಗಳನ್ನು ಕೇಂದ್ರೀಕರಿಸಿದ ಅಧ್ಯಯನ, ಚರ್ಚೆಗಳು ಪ್ರಮುಖವಾಗಿ ಈ ಕೃತಿಯಲ್ಲಿವೆ. ಈ ವಿಚಾರ ಜಾಗತಿಕವಾಗಿ ಒಂದೇ ಆಗಿರಲು ಕಾರಣ ಬುಡಕಟ್ಟುಗಳಲ್ಲಿರುವ ಆದಿಮ ವಿಚಾರದ ಏಕಸ್ವಾಮ್ಯ.

ಕುಲಚಿಹ್ನೆಗಳ ಉಗಮ, ಸಮಾಜದ ಉಗಮ ಈ ಪ್ರಕ್ರಿಯೆಯ ಮುಖ್ಯ ಒಳನೋಟಗಳನ್ನೂ ಈ ಕೃತಿ ನೀಡುತ್ತದೆ. ಇಲ್ಲಿ ಹೊವಿಟ್ ಶೋಧನೆಯ ವಿಚಾರಗಳನ್ನು ಚರ್ಚೆಗೆ ಎತ್ತಿಕೊಳ್ಳಲಾಗಿದೆ. ದಂತ ಕಥೆಗಳು, ಪೂರ್ವಜರನ್ನು ಪವಿತ್ರವೆಂದು ಭಾವಿಸಿ ಆರಾಧಿಸುವ ವಿವರಗಳು, ಅವರ ಆತ್ಮದ ವಿಚಾರಗಳ ಕುರಿತು ಜೆ.ಜೆ. ಪ್ರೇಜರ್ ಹಾಗೂ ಮ್ಯಾನ್ ಅವರ ವಿಚಾರ ಸರಣಿಯೂ ಚರ್ಚೆಯಲ್ಲಿದೆ. ಊಹೆ ತರ್ಕಗಳಿಲ್ಲಿ ಶೋಧದ ವಿಧಾನಗಳಾಗಿರುವುದನ್ನು ಕಾಣಬಹುದು. ಸ್ವಜಾತಿ ಗೋತ್ರ ವಿವಾಹ ಆನಂತರ ವಿಜಾತಿ ಗೋತ್ರ ವಿವಾಹವಾಗಿ ಮಾರ್ಪಟ್ಟಿದ್ದರ ಕುತೂಹಲಕರ ಅಂಶಗಳಿವೆ. ಒಂದೇ ಆದ ಗುಂಪು, ಬಿಂದು ರೂಪಗಳಲ್ಲಿ ರಕ್ತ ಸಂಬಂಧಗಳನ್ನು ಕಲ್ಪಿಸಿಕೊಂಡಿದ್ದರ ಸಾಮುದಾಯಿಕ ರಾಜಕಾರಣವನ್ನು ಲೇಖಕರಿಲ್ಲಿ ವಿವರಿಸಿರುವರು.

ಹೊವಿಟ್ ಮತ್ತು ಸ್ಪನ್ಸರ್ ಇಬ್ಬರ ಅಭಿಪ್ರಾಯಗಳನ್ನು ಚರ್ಚೆಗೆ ಇರಿಸಿಕೊಳ್ಳಲಾಗಿದೆ. ವಿವಾಹವನ್ನು ಕ್ರಮಬದ್ಧಗೊಳಿಸಿದ ಅರುಂಟಾ ಸಮಾಜದ ಬಗ್ಗೆ ಇಲ್ಲಿ ಮಾತುಗಳಿವೆ. ಹಿಂದಿನ ವಿವಾಹ ಪದ್ಧತಿಗಳ ಮಾದರಿಗಳು ಸಜಾತಿಗಿಂತ ವಿಜಾತಿ ಸಂಬಂಧಗಳು ಹೆಚ್ಚು ಗಟ್ಟಿಗೊಂಡಿರುವ ಸಂಗತಿಗಳ ಹಿಂದೆ ಈ ಬಗೆಯ ಆಲೋಚನೆಗಳು ಸಮರ್ಥನೆಗಳಿಗೆ ಸಿಗುತ್ತವೆ.

ಪುರುಷ ಮತ್ತು ಮಹಿಳೆಯರ ಸಹಜೀವನ, ಪುರುಷರ ಬೇಟೆ ಪದ್ಧತಿ, ಪತ್ನಿಯರಿಗೆ ಅವರು ಆಹಾರವನ್ನು ಒದಗಿಸುತ್ತಿದ್ದ ರೀತಿ, ತಮಗೆ ಜನಿಸಿಲ್ಲದ ಮಕ್ಕಳನ್ನೂ ತಮ್ಮ ಮಕ್ಕಳೆಂದು ಭಾವಿಸಿ ಅವರನ್ನು ಸಾಕುತ್ತಿದ್ದ ಬಗೆ ಎಲ್ಲ ಸಂಗತಿಗಳು ಆದಿಮ ಜನಾಂಗದ ಸಾಂಘಿಕ ಪ್ರೇಮವನ್ನು ತಿಳಿಸುತ್ತವೆ. ಬುಡಕಟ್ಟುಗಳಲ್ಲಿನ ವಿವಾಹ ಪದ್ಧತಿಯನ್ನು ಅಧ್ಯಯನಿಸಬೇಕಾದವರು ಇಲ್ಲಿನ ವಿಚಾರವನ್ನು ಮೂಲವಾಗಿಟ್ಟುಕೊಂಡು ತಮ್ಮ ಚಿಂತನೆಯನ್ನು ಬೆಳೆಸಬಹುದು.

ಡಾರ್ವಿನ್ನನ ಮೂಲ ಸಿದ್ಧಾಂತ, ನೈಸರ್ಗಿಕ ವಸ್ತುಗಳ ಹೆಸರುಗಳಿಂದ ಮಾನವರ ಗುರುತಿಸುವಿಕೆ, ಕುಲಚಿಹ್ನೆ, ಬಾಂಧವ್ಯ, ನಂಬಿಕೆ, ಚಿತ್ರಲಿಪಿಗೂ ಕುಲಚಿಹ್ನೆಗೂ ಇರುವ ಸಂಬಂಧ, ರಕ್ತಸಂಬಂಧದ ವಿವರ, ಬಾಹ್ಯಗೋತ್ರಗಳ ಪರಸ್ಪರ ವಿವಾಹದ ವಿಷಯ, ಹೆಸರುಗಳ ಪ್ರಭಾವ,
ಉಪನಾಮಗಳಲ್ಲಿ ಕುಲಚಿಹ್ನೆಗಳ ಬಳಕೆ, ಧಾರ್ಮಿಕ ಅಂಶ, ದಂತಕಥೆ, ಪವಿತ್ರ ಕಾನೂನುಗಳು ಬುಡಕಟ್ಟುಗಳಲ್ಲಿ ಏರ್ಪಟ್ಚ ಬಗೆ... ಹೀಗೆ ಇಲ್ಲಿ ಕುತೂಹಲಕರ ಚರ್ಚೆಗಳಿವೆ.

ಆಂಡ್ರ್ಯೂ ಲಾಂಗ್ ತಮ್ಮ ‘ಸೋಷಿಯಲ್ ಒರಿಜಿನ್ಸ್’ ಕೃತಿಯ ಚರ್ಚೆಯನ್ನು ಇಲ್ಲಿ ಬೆಳೆಸಿರುವುದು ವಿಶೇಷ. ನಾಮವಿಜ್ಞಾನವನ್ನು ಬೋಧಿಸುವ ಸಾಹಿತ್ಯದ ಮತ್ತು ಭಾಷಾವಿಜ್ಞಾನದ ಮೇಷ್ಟ್ರುಗಳು ಇಂತಹ ಅಪರೂಪದ ಮಾನವಶಾಸ್ತ್ರದ ಕೃತಿಯ ಮೂಲ ನೆರವನ್ನು ಪಡೆಯಬೇಕು. ಇಲ್ಲವಾದರೆ ನಮ್ಮ ಮೇಲ್ಪದರಿನ ಜ್ಞಾನ ಈ ಕ್ಷೇತ್ರವನ್ನು ಪಾರ್ಶ್ವಗಟ್ಟಿಸುತ್ತದೆ.

ಉಪಪಂಗಡಗಳ ಕುರಿತು ಹೊಸದಾಗಿ ಅಧ್ಯಯನ ಮಾಡಬೇಕೆಂದವರಿಗೂ ಈ ಕೃತಿ ಮಹತ್ವದ ಆಕರವೆನಿಸಿದೆ. ಕಾಲಾಂತರ ತಾಯಾಳಿಕೆಯ ಮಾತೃಮೂಲದ ಕುಟುಂಬ ಪದ್ಧತಿ ಮರೆಯಾಗಿ ಗಂಡಾಳಿಕೆಯ ಪಿತೃಮೂಲದ ಕುಟುಂಬ ಪದ್ಧತಿಯಾಗಿ ನಿರ್ಮಾಣಗೊಂಡದ್ದರ ‘ಯಜಮಾನಿ ಸಂಸ್ಕೃತಿ’ಯ ಚಹರೆಗಳು ಇಲ್ಲಿ ಇಡುಕಿರಿದಿವೆ. ಕುಟುಂಬ, ಸಮುದಾಯ, ವೈವಾಹಿಕ ವರ್ಗಗಳ ಕುರಿತು ಅಧ್ಯಯನಿಸಬೇಕಿದ್ದ ನಮ್ಮ ಭಾಷಾವಿಜ್ಞಾನ ಎಡವಿದ್ದೆಲ್ಲಿ ಎನ್ನುವ ಚರ್ಚೆಯನ್ನು ಈ ಕೃತಿ ಹುಟ್ಟು ಹಾಕುವಂತಿದೆ. ಕುಲಚಿಹ್ನೆಯ ಪದ್ಧತಿ, ಅದರ ಬೆಳವಣಿಗೆಯ ಕುರಿತಾದ ಫ್ರೇಜರ್‌ನ ಸಿದ್ಧಾಂತವನ್ನು ವಿಶೇಷವಾಗಿ ಪರಿಶೀಲಿಸಿ ಒಪ್ಪಲಾಗಿದೆ.

ಕುಲಚಿಹ್ನೆಗಳ ರಹಸ್ಯದ ಅಧ್ಯಯನದಲ್ಲಿ ಆಂಡ್ರ್ಯೂ ಲಾಂಗ್‌ ಅನುಭವಿಸಿದ ತೊಂದರೆ ಮತ್ತು ಅದನ್ನು ಸವಾಲಾಗಿ ಸ್ವೀಕರಿಸಿ ನಿರಂತರ ಅಧ್ಯಯನದಲ್ಲಿ ಕಾಣಿಸಿದ ಅತ್ಯಂತ ಮಹತ್ವದ ಶೋಧದ ಫಲಿತವಿದು. ಅವರೇ ತಮ್ಮ ಈ ಗ್ರಂಥದ ಪೀಠಿಕಾ ಬರಹದಲ್ಲಿ ಹೇಳಿರುವಂತೆ ‘ಕುಲಚಿಹ್ನೆಯ ರಹಸ್ಯ’ದ ಈ ಪುಸ್ತಕವು 1902ರಲ್ಲಿ ಬಂದ ತಮ್ಮ ‘ಸೋಷಿಯಲ್ ಒರಿಜಿನ್ಸ್’ ಮತ್ತು ‘ಪ್ರೈಮಲ್ ಲಾ’ ಪುಸ್ತಕಗಳ ಮುಂದುವರಿಕೆಯಾಗಿದೆ. ಈ ಮೂರೂ ಕೃತಿಗಳ ಸಾಪೇಕ್ಷತಮ ಸಮಗ್ರ ಓದು ಮಾತ್ರ ಆಂಡ್ರ್ಯೂ ಲಾಂಗ್‌ನ ಮಾನವಶಾಸ್ತ್ರೀಯ ಅಧ್ಯಯನದ ಬಹುಮುಖ್ಯ ಆವರಣವನ್ನು ಗಟ್ಟಿಯಾದ ನಮ್ಮ ಕಕ್ಷೆಯಲ್ಲಿರಿಸಬಲ್ಲದು. ಕನ್ನಡಕ್ಕೆ ಈ ಅನುವಾದಗಳ ಅಗತ್ಯವಿದೆ. ನಾಗ ಎಚ್.ಹುಬ್ಳಿ ಅವರಂತಹ ಶ್ರದ್ಧಾವಂತ, ಆದಿಮ ಬದುಕನ್ನು ಕಂಡುಂಡ ಪ್ರಾಧ್ಯಾಪಕ ಮಾತ್ರ ಇಂತಹ ಮಹತ್ವದ ಕಾರ್ಯ ಮಾಡಬಲ್ಲರು. ‘ಕುಲಚಿಹ್ನೆಯ ರಹಸ್ಯ’ದಂತಹ ಮಹತ್ವದ ಕನ್ನಡಾನುವಾದಗಳಿಂದ ಖಂಡಿತ ನಮ್ಮ ಬಹುತ್ವದ ಬೇರುಗಳಂತೂ ಗಟ್ಟಿಗೊಳ್ಳಬಲ್ಲವು.

ಕೃತಿ: ಕುಲಚಿಹ್ನೆಯ ರಹಸ್ಯ

ಲೇ: ಆಂಡ್ರ್ಯೂ ಲಾಂಗ್‌

ಕನ್ನಡಕ್ಕೆ: ನಾಗ ಎಚ್‌. ಹುಬ್ಳಿ

ಪ್ರ: ಸುವ್ವಿ ಪಬ್ಲಿಕೇಷನ್ಸ್‌

ಸಂ: 9620083614

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT