ಮಂಗಳವಾರ, ಫೆಬ್ರವರಿ 7, 2023
27 °C

ಪುಸ್ತಕ ವಿಮರ್ಶೆ | ಬದುಕಿನ ಪೂರ್ಣತೆಗೆ ಹಂಬಲಿಸುವ ಕವಿತೆಗಳು

ನಿಂಗಪ್ಪ ಮುದೇನೂರು Updated:

ಅಕ್ಷರ ಗಾತ್ರ : | |

Prajavani

ಕೃತಿ: ನಿನಗಾಗಿ ಬರೆದ ಕವಿತೆಗಳು
ಲೇ: ಎಚ್‌.ಎಸ್‌. ಮುಕ್ತಾಯಕ್ಕ
ಪ್ರ: ಸಂಗಾತ ಪುಸ್ತಕ, ಗದಗ
ಸಂ: 9341757653

‘ನಾನು ಕಾಯುತ್ತೇನೆ ನಿನ್ನ ಎರಡು ಮಾತಿಗಾಗಿ, ನನ್ನ ತುಟಿಯಂಚಿನಲ್ಲಿ ಅರಳಬಹುದಾದ ಕಿರುನಗೆಗಾಗಿ, ಮತ್ತೆ ನೀನು ನನ್ನ ಹೆಸರ ಕರೆದಾಗ ಇಡೀ ಸೃಷ್ಟಿಯೇ ಒಂದುಕ್ಷಣ ನಿಂತು ಬಿಡುವ ಅನುಭೂತಿಗಾಗಿ’ ಬಹುಶಃ 12ನೇ ಶತಮಾನದ ಅಕ್ಕ ಈಗ ಬದುಕಿದ್ದರೆ ಹೀಗೇ ಬರೆಯುತ್ತಿದ್ದಳೇನೋ? ಅಲ್ಲಿ ಅಕ್ಕ ಇದ್ದರೆ ಇಲ್ಲಿ ಮುಕ್ತಾಯಕ್ಕ ಇರುವರು. ಅಲ್ಲಿ ಚನ್ನಮಲ್ಲಿಕಾರ್ಜುನನೊಂದಿಗೆ ಸಂವಾದಿಸಬಲ್ಲ ಮುಕ್ತ ಸ್ವಾತಂತ್ರವನ್ನು, ಸಂವಿಧಾನವನ್ನು ಪಡೆದವಳು ಅಕ್ಕ. ಇಂದು ಅಂಥದೇ ಸ್ವಾತಂತ್ರ, ಸಂವಿಧಾನವನ್ನು ಪಡೆದು ಹೆಣ್ಣೊಬ್ಬಳು ಬರೆಯಬಲ್ಲಳು. ಇಡೀ ಸೃಷ್ಟಿಯ ಒಂದು ಪೂರ್ಣತೆಯ ಅನುಭೂತಿಗಾಗಿ ಹಂಬಲಿಸಬಲ್ಲಳು ಎಂಬುವ ಸಂದೇಶವನ್ನು ‘ನಿನಗಾಗಿ ಬರೆದ ಕವಿತೆಗಳು’ ಸಂಕಲನ ನೀಡುತ್ತದೆ.

ಮುಕ್ತಾಯಕ್ಕ ಯಾರಿಗಾಗಿ ಈ ಕವಿತೆಗಳನ್ನು ಬರೆದಿರಬಹುದು ಎಂಬ ಪ್ರಶ್ನೆ ಓದುಗನಲ್ಲಿ ಮೂಡುವುದುಂಟು. ಕೂಡಿಹರಿದ ನದಿಯ ಭಾವ ಅಥವಾ ಕಡಲು ಸೇರಿದ ನದಿಯ ನಿಶ್ಚಲ ಮನಃಸ್ಥಿತಿ ಅಕ್ಕನಿಗೆ ಇರುವಂತೆ ಮುಕ್ತಾಯಕ್ಕ ಅವರೂ ಸಾಹೀರ್‌ನನ್ನು ಅಮೃತಾ ಪ್ರೀತಂಳನ್ನು ಎದೆಗವಚಿಕೊಂಡು ಹಾಡಿದ ತಾಯ ಕರುಣೆಯಂತಿದೆ ಈ ಸಂಕಲನ. ಅಕ್ಕನ ಸ್ವಗತದಂತಹ ಭಾವದ ಕವಿತೆಗಳು ಇಲ್ಲಿವೆ. ಪರಿವಿಡಿ ಇಲ್ಲದ, ಶೀರ್ಷಿಕೆಗಳಿಲ್ಲದ, ತಾನೇ ನುಡಿದ ಭಾವಕೋಶದ ಮಾತುಗಳಷ್ಟೇ ಇಲ್ಲಿ ಮೂಡಿನಿಂತಿವೆ. ಮೊದಲ ಪದ್ಯವೇ ಅಪೂರ್ವವಾದ ಬೆಳಕನ್ನು ಹೊಂದಿದೆ:

‘ನೀನು ದೂರವಿರುವೆ, ಆದರೂ ದೂರವೇನಿಲ್ಲ’
ಪದ್ಯವೂ ಮಾತು, ಕನಸು, ಕವಿತೆಯಿಂದ ಮನುಷ್ಯ ಹೃದಯಕ್ಕೆ ಹತ್ತಿರವಾಗಬಹುದು ಎನ್ನುವ ಸಂದೇಶವನ್ನು ಹೊತ್ತಿದೆ. ಯಾವುದೂ ಒಂಟಿಯಲ್ಲದ, ಜೊತೆ ಇರದಿದ್ದರೂ ಅಪೂರ್ವ ಸೆಳೆತದಲ್ಲಿರುವ ಅಂತಃಕರಣದ ಭಾವ ಈ ಪದ್ಯದ್ದು. ಮೌನವು ಹಾಡುತ್ತಿರುವ ರಾತ್ರಿ ಈ ಕವಯತ್ರಿಗೆ ಸುಂದರವಾಗಿ ಕಾಣುತ್ತದೆ. ಹಾಗೇ ಪ್ರೇಮ ನಿವೇದನೆಯ ಮೊದಲ ರಾತ್ರಿಯಲ್ಲಿ ಹೃದಯ ಸಂವೇದನೆಗೊಳಿಸುವ ಗಳಿಗೆಯೊಂದನ್ನು ಇಲ್ಲಿ ದನಿಯಾಗಿಸಿದೆ.

ಮುಕ್ತಾಯಕ್ಕ ಅವರ ಬರವಣಿಗೆ ಎಂದರೆ ಅದು ಒಂದು ಬಗೆಯ ಮುಕ್ತವಾದ ಛಂದಸ್ಸು. ಮನುಷ್ಯನ ಸುಖವನ್ನು, ದುಃಖವನ್ನು ಕಟ್ಟಿಕೊಡಲು ಈ ಪ್ರಪಂಚದಲ್ಲಿ ಇರುವುದು ಒಂದೇ – ಅದು ಕವಿತೆ ಎನ್ನುವ ಭಾವ ಅದರದು. ಹಗಲು ಮತ್ತು ರಾತ್ರಿ ಎರಡೂ ಅವರ ಕಾವ್ಯದಲ್ಲಿ ರೂಪಕಗಳಂತೆ ಬರುತ್ತವೆ. ರಾತ್ರಿ, ಮೌನವನ್ನು ಗರ್ಭೀಕರಿಸಿಕೊಂಡು ಹಾಡಿದರೆ, ಹಗಲು, ಮಾತನ್ನು ಎಳೆ ಬಿಸಿಲ ಕೋಲಿನ ಮೇಲೆ ಶಾವಿಗೆ ಬಿಟ್ಟು ಕುಳಿತುಕೊಂಡಂತೆ ಆ ಕಾವ್ಯ ಮೂಡಿನಿಂತಿದೆ. ಪುಟ್ಟ ಪುಟ್ಟ ತಾಣಗಳಲ್ಲಿ ನಿಂತು ದಣಿವಾರಿಸಿಕೊಂಡಂತೆ, ಮತ್ತೆ ಜೀವ ಚೈತನ್ಯ ಪಡೆದು ದಾರಿ ಸಾಗಿದಂತೆ ಇಲ್ಲಿನ ಕವಿತೆಗಳಿವೆ.

‘ಒಂದು ದಿನ ನೀನು ಸಮುದ್ರಕ್ಕೆ ನನ್ನನ್ನು ಪರಿಚಯಿಸಿದೆ’ ಎಂಬ ಕವಿತೆಯನ್ನು ನೋಡಿ. ಇದೇ ಕವಿತೆಯ ಕೊನೆಗೆ ಸಮುದ್ರವೇ ತನ್ನ ಮೀನು, ಚಿಪ್ಪು, ಮುತ್ತುಗಳನ್ನೆಲ್ಲ ಬಿಟ್ಟು ಇವರನ್ನ ಹಿಂಬಾಲಿಸುವ ಘನತೆ ಇದೆಯಲ್ಲ? ಇದೊಂದು ರೀತಿಯಲ್ಲಿ ಸಿದ್ಧಾರ್ಥ ರಾಜತ್ವ, ಅರಮನೆ, ಸುಖ ವೈಭವಗಳ ಬಿಟ್ಟು ತನ್ನ ಕನಸುಣಿಯಾದ ತಂದೆ ಶುದ್ಧೋಧನನಿಗೂ ಹೇಳದೆ ಏಕಾಂಗಿಯಾಗಿ ಕಾಡಿಗೆ ಹೋದುದನ್ನೂ ನೆನಪಿಸುತ್ತದೆ. ಕಡಲಿನ ಧ್ಯಾನದ ಜೊತೆ ನಕ್ಷತ್ರಗಳ ಮೇಲೆ ಕುಳಿತು ಸುಖ ದುಃಖದ ಮಾತುಗಳನ್ನು ಆಡುವುದಿರಲಿ ಪೂಜೆಗೆ, ಪ್ರಕೃತಿಗೆ, ಸುಂದರ ಸವಿ ಬೆಳಗಿಗೆ, ಬದುಕಿನ ಕವಿತೆಯಡೆಗೆ ಈ ಕವಿತೆಗಳ ಭಾವ ಆರ್ದ್ರವಾಗಿ ಒದಗಿನಿಂತಿದೆ. ಅಲ್ಲಿಗೇ ಇದು ಕೊನೆಯಾಗುವುದಿಲ್ಲ. ಮತ್ತೆ ಬಾಳಿಗೆ ವಸಂತವಾಗಿ ಬರುವ, ಹೊಸ ಕನಸಾಗಿ ಬರುವ, ರೆಂಬೆ ಕೊಂಬೆಗೆ ಹೂ ಹಣ್ಣು ಮುಡಿಸುವ ಚೈತನ್ಯಶೀಲ ಮನಃಸ್ಥಿತಿ ಇಲ್ಲಿನ ಕವಿತೆಗಳದಾಗಿದೆ.

ಸಹೃದಯ ಓದುಗರನ್ನು ಅರಳಿಸಿ ನಿಲ್ಲಿಸುವ, ಹೃದಯ ಸಂವಾದಕ್ಕೆ ಅಣಿಗೊಳಿಸುವ ಎಲ್ಲ ಕ್ಷಣಗಳು ಇಲ್ಲಿನ ಪದ್ಯಗಳಲ್ಲಿ ಹರಡಿಕೊಂಡಿವೆ. ‘ಯಾರು ಕಾಯುವರು ಮಿಲನದ ಗಳಿಗೆತನಕ. ನಾನು ಚುಕ್ಕಿಯಾಗಿ ಮಿನುಗಲುಬಹುದು ಅಲ್ಲಿಯತನಕ’ ಎನ್ನುವ ಸಾಲಿನಲ್ಲಿ ಯಾವ ವಿಶ್ರಾಂತಿಯನ್ನು ಬಯಸದ, ಸದಾ ಕ್ರಿಯಾಶೀಲತೆಯಲ್ಲಿ ಮಗ್ನವಾಗಿರುವ ಜೇಡನಂತೆ, ಗೀಜಗನ ಹಕ್ಕಿಯಂತೆ ಇಲ್ಲವೇ ಗಾಂಧಿ ತಾತನಂತೆ ಇಲ್ಲಿನ ಧ್ಯಾನವಿದೆ.

ಮುಕ್ತಾಯಕ್ಕ ಅವರಿಗೆ ಯಾವುದೇ ಬಂಧನಗಳಿಲ್ಲ. ಸಾಹಿರ್‌ನನ್ನು ಹೃದಯದಲ್ಲಿ ಕಾಪಿಟ್ಟು ಪ್ರೀತಿಸಿದ ಅಮೃತ ಪ್ರೀತಂಳಿಗೂ ಯಾವುದೇ ಬಂಧನಗಳಿಲ್ಲ. ದುಃಖ ಕಳೆದುಕೊಳ್ಳುವ ದಾರಿಯನ್ನು ಸ್ಪಷ್ಟವಾಗಿ ಈ ಮಾತೆಯರು ಕಂಡುಕೊಂಡಿದ್ದಾರೆ. ಇಂತಹ ಕವಿತೆಗಳನ್ನು ಓದುವಾಗ ಸ್ಪಷ್ಟವಾಗಿ ಕಾಣಿಸುವ ಒಂದು ಗುಣವೆಂದರೆ ಹೇಳುವ ಸಂಗತಿಯನ್ನು ನೇರವಾಗಿ ಹೇಳುವುದು. ತಾನು ಅನುಭವಿಸಿದ್ದನ್ನು ಪ್ರತೀ ಸಾಂಸ್ಕೃತಿಕಗೊಳಿಸಿ ಅವಳು ಮಾತನಾಡುವುದನ್ನು ಕೇಳಿ: ‘ನಾನು ದೂರವಿದ್ದರೇನು ನನ್ನನ್ನು ನೀನು ನಿನ್ನ ನೆನಪುಗಳಲ್ಲಿ ಹುಡುಕು/ಅಲ್ಲಿರುವೆ ನಿನ್ನ ಕನಸುಗಳಲ್ಲಿ ಇಣುಕುವೆ’ ಎನ್ನುತ್ತಾ ಎದೆ ಮಿಡಿತದ ಹಾಡಾಗುವ, ನಮ್ಮ ಸ್ಮರಣೆಗೆ ದಕ್ಕುವ ಇಂತಹ ಭೇದವಿರದ, ಲಿಂಗ ತಾರತಮ್ಯವಿರದ ಸೌಹಾರ್ದಯುತ ನೆಲೆ ನಿನಗಾಗಿ ಬರೆದ ಕವಿತೆಗಳಿಗೆ ದಕ್ಕಿದೆ.

ಎದೆಯಲ್ಲಿ ಗೂಡುಕಟ್ಟುವ ಹಕ್ಕಿಗಳ ಹಾಗೆ ಬಂದು ನಿಲ್ಲುವ ಇಲ್ಲಿನ ಕವಿತೆಗಳನ್ನು ಓದುತ್ತಾ, ಸವಿಯುತ್ತಾ ಹೋಗುವುದರಲ್ಲಿ ಒಂದು ಆನಂದವಿದೆ. ಹಕ್ಕಿಗಳು ಎಲ್ಲಿಂದಲೇ ಬರಲಿ, ಆದರೆ ತಾಯಿಯಾಗುವ, ಮರಿಗಳಿಗೆ ಗುಟುಕು ನೀಡುವ ಜೀವನ ವಿಧಾನ ಮಾತ್ರ ಒಂದೇ. ಕವಿತೆಯ ಬಾಳೂ ಹಕ್ಕಿಯಂತೆಯೇ. ಬೇಂದ್ರೆಯವರ ‘ಗರಿ’ ಕವಿತೆಗಳನ್ನು ಓದುವಾಗ ಈ ದಿಗಂತದ ಕಾಣ್ಕೆ ನಮಗೆ ಮನನವಾಗುತ್ತದೆ. ನೆಲ ಮುಗಿಲಿನ ಸಾಂಗತ್ಯ ನಮಗೆ ಅರ್ಥವಾಗುತ್ತದೆ. ಹಾಗೇ ಮುಕ್ತಾಯಕ್ಕ ಅವರ ಕವಿತೆಗಳ ಬಾಳು ಹಕ್ಕಿಯ ತೆರದಲ್ಲಿ ಇರುವಂತಹದ್ದು. ಎಂಥದೇ ವಿಷಾದವಿದ್ದರೂ ಈ ಕವಿತೆ ಬೆಚ್ಚಗಿನೆದೆಯ ಕಾವು ನೀಡುವ, ಸಾಂತ್ವನಗೊಳಿಸುವ ಅವ್ವನ ಸೆರಗಿನೊಡಲಿನ ಕಾಂತಿಯಂತೆ. ಇಂತಹ ಕವಿತೆಗಳನ್ನು ಮುಕ್ತಾಯಕ್ಕ ಕನ್ನಡ ಸಾಹಿತ್ಯಕ್ಕೆ ನೀಡುತ್ತಾ ಬಂದಿರುವರು. ಅವರ ಗಜಲ್‌ಗಳ ಸವಿಪಾಕವೊಂದು ಇಲ್ಲಿನ ಕವಿತೆಗಳಲ್ಲಿ ಮಡುಗಟ್ಟಿದೆ. ನಾನು ನೀನಾಗುವ, ನೀನು ನಾನಾಗುವ, ಕೊನೆಗೆ ಜೇನಾಗುವ ಸವಿ ಇಲ್ಲಿನದಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು