ಬುಧವಾರ, ಫೆಬ್ರವರಿ 8, 2023
18 °C

ಮೊದಲ ಓದು | ಬೇಸಾಯದ ಬರಹಗಳಲ್ಲಿ ಮಣ್ಣಿನ ಘಮಲು

ಪ್ರಜಾವಾಣಿ ವಿಶೇಷ Updated:

ಅಕ್ಷರ ಗಾತ್ರ : | |

Prajavani

ಈ ಕೃತಿಯನ್ನು ಕೈಗೆತ್ತಿಕೊಂಡು ಪುಟ ತಿರುವಿದರೆ ಹಲವು ಬೆಳೆ ಬೆಳೆಯುವ ತೋಟ, ಗದ್ದೆಗಳಲ್ಲಿ ರೈತನೊಬ್ಬನ ಜೊತೆ ಚರ್ಚಿಸುತ್ತಾ, ಸ್ವಾರಸ್ಯಕರ ಘಟನೆಗಳನ್ನು ಕೇಳುತ್ತಾ ಸುತ್ತಾಡಿಬಂದ ಅನುಭವ.

ನೀರಿನಿಂದ ಪ್ರಾರಂಭವಾಗಿ ರೈತರ ಆತ್ಮಹತ್ಯೆ, ಸಾವಯವ ಕೃಷಿ, ಹಸಿರುಬೇಲಿ, ಕೃಷಿಯಲ್ಲಿನ ಕೆಲವು ಬೇಡವುಗಳು, ವಿಶಿಷ್ಟ ಬೇಸಾಯ ಪದ್ಧತಿಗಳು, ಕೃಷಿಕರ ಅನುಭವಗಳು ಹಾಗೂ ಅವರ ಪುಟ್ಟ ಸಂದರ್ಶನಗಳು... ಹೀಗೆ ಕೃಷಿಯಲ್ಲಿರುವ ವೈವಿಧ್ಯವನ್ನೇ ಇಲ್ಲಿನ ಬರಹಗಳಲ್ಲೂ ಕಾಣಬಹುದು. ಪ್ರಸ್ತುತ ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿರುವ ಕೃಷ್ಣಮೂರ್ತಿ ಬಿಳಿಗೆರೆಯವರು ಸಾವಯವ ಕೃಷಿ ಮತ್ತು ಮಳೆನೀರಿನ ಚಳವಳಿಗಳಲ್ಲಿ ಕ್ರಿಯಾಶೀಲರಾಗಿರುವವರು. ಮಕ್ಕಳ ನಾಟಕಗಳು, ಮಕ್ಕಳ ಕಥೆ, ಹಾಡುಗಳ ಸಾಹಿತ್ಯಕೃಷಿಯಲ್ಲಿ ತೊಡಗಿದ್ದ ಇವರು ಕೆಲ ಕೃಷಿ ಸಾಹಿತ್ಯಕ್ಕೂ ಲೇಖನಿ ಹಿಡಿದಿದ್ದಾರೆ. ಮಣ್ಣಿನ ಜೊತೆಗಿನ ನಂಟು ಇವರನ್ನು ಹೊಲ–ಗದ್ದೆ–ತೋಟಗಳಲ್ಲಿ ಸುತ್ತಾಡಿಸಿದೆ. 

ಕೃತಿಯ ಆರಂಭದಲ್ಲಿ ಪ್ರಸ್ತುತ ಜಾಗತಿಕವಾಗಿ ಚರ್ಚೆಯಲ್ಲಿರುವ ನೀರಿನ ಕೊರತೆಯ ನಾನಾ ಮಗ್ಗಲುಗಳನ್ನು ಅವರು ಅನಾವರಣಗೊಳಿಸುತ್ತಾ ಸಾಗಿದ್ದಾರೆ. ಉಳುವವನ ಕೈಯಲ್ಲಿರುವ ಭೂಮಿ ಹವ್ಯಾಸಿ ಕೃಷಿಕರ, ಕ್ಷಣಕಾಲದ ಹಸಿರು ಪ್ರೀತಿ ಹೊತ್ತವರ ಕೈಸೇರುತ್ತಿರುವುದ ಅಪಾಯವನ್ನೂ ಸೂಕ್ಷ್ಮವಾಗಿ ಬಿಳಿಗೆರೆಯವರು ಇಲ್ಲಿ ಉಲ್ಲೇಖಿಸಿದ್ದಾರೆ. ‘ಕಾವೇರಿಯ ಸಾವಿಗೆ...’ ಅಧ್ಯಾಯದಲ್ಲಿ ಲೇಖಕರು ಮುಂದಿಟ್ಟಿರುವ ಒಳನೋಟ ಗಂಭೀರವಾಗಿ ಚಿಂತಿಸಬೇಕಾದ ವಿಷಯ. ‘ಕೋತಿ ಹಿಡಿಸಿದ ಕತೆ’ಯಲ್ಲಿ ಕೋತಿಗಳ ಸ್ವಾರಸ್ಯಕರ ಗುಂಪುಗಾರಿಕೆಯನ್ನು ಅವರು ವರ್ಣಿಸಿದ್ದಾರೆ. ಬರಹಗಳಲ್ಲಿ ಆಪ್ತತೆ ಇದೆ.

ಕೃಷಿ ಸಾಹಿತ್ಯದಲ್ಲಿ ಇದೊಂದು ಉಲ್ಲೇಖಾರ್ಹ ಕೃತಿ. ಸುಸ್ಥಿರ ಕೃಷಿ ಪಯಣಕ್ಕೆ ಹೆಜ್ಜೆ ಇಡಲು ಇಚ್ಚಿಸುವವರಿಗೆ ಪಠ್ಯದಂತಿರುವ ಈ ಕೃತಿ, ಕೃಷಿ ಆಸಕ್ತರಿಗೂ ಮಣ್ಣಿನ ಪರಿಮಳ ನೀಡಿದೆ.

ಕೃತಿ: ಮಣ್ಣು ಕಥನ

ಲೇ: ಕೃಷ್ಣಮೂರ್ತಿ ಬಿಳಿಗೆರೆ

ಪ್ರ: ನಮ್ಮ ಪ್ರಕಾಶನ, ಬಿಳಿಗೆರೆ

ಸಂ: 9481490975

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು