ಮಂಗಳವಾರ, ಆಗಸ್ಟ್ 16, 2022
28 °C

ಮೊದಲ ಓದು: ಕಾದಂಬರಿಯ ‘ಮೊಗಸಾಲೆ’ಯಲ್ಲಿ ಕಂಡ ಎರಡು ಹೊಸ ‘ಬಿಂಬ’ಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಡಾ.ನಾ. ಮೊಗಸಾಲೆ ಅವರ ಎರಡು ಕಾದಂಬರಿಗಳು ಬಿಡುಗಡೆಯಾಗಿವೆ. ತಮ್ಮ ವಸ್ತು, ಸನ್ನಿವೇಶ, ಪ್ರಸ್ತುತಿಯ ಕಾರಣಕ್ಕೆ ಎರಡೂ ಕಾದಂಬರಿಗಳು ಓದುಗರ ಗಮನ ಸೆಳೆದಿವೆ.

ನೀರಿನೊಳಗಿನ ಮಂಜು (ಕಾದಂಬರಿ): ಒಬ್ಬ ಉಪನ್ಯಾಸಕ, ಕುಟುಂಬ, ಸ್ನೇಹ, ಒಂದಿಷ್ಟು ಔದಾರ್ಯ, ಬೆಸೆಯುವ ಸಂಬಂಧ, ಕಥೆಯೊಳಗೆ ಬರುವ ಉಪಕಥೆ... ಹೀಗೆ ಕುತೂಹಲದಿಂದ ಓದಿಸಿಕೊಳ್ಳುತ್ತಾ ಹೋಗಿ ಕೊನೆಗೆ ರಾಯರು, ಸರೋಜಾ ಮತ್ತು ಜಯಂತಿ ಕಾಡುವ ಪಾತ್ರಗಳಾಗಿ ತಲೆಯಲ್ಲಿ ಉಳಿದುಬಿಡುತ್ತಾರೆ. ಗಂಡು, ಹೆಣ್ಣಿನ ನಡುವೆ ವಯಸ್ಸು ಮೀರಿದರೂ ದೀರ್ಘಾವಧಿಯ ಸಂಬಂಧವೊಂದು ಬೇರೆ ಭಾವಕ್ಕೆ ಬದಲಾಗುವುದು (ಗಂಡು ಚಿತ್ತಸ್ವಾಸ್ಥ್ಯ ಕಳೆದುಕೊಳ್ಳುವ ಸ್ಥಿತಿ, ಹೆಣ್ಣು ಸ್ಥಿತಪ್ರಜ್ಞಳಾಗುವ ಪರಿ), ವ್ಯಕ್ತಿಗಳ ಸಂಬಂಧಗಳ ನಡುವೆಯೇ ಬಿರುಕಾಗುವುದು ಮತ್ತು ಅಂತಹ ಸನ್ನಿವೇಶಗಳಿಗೆ ಊಹಾತೀತ ತಿರುವು ಮತ್ತು ಅಂತ್ಯಗಳು ಸೋಜಿಗ ಮೂಡಿಸುತ್ತವೆ.  

ಚಿಂತಕರಿಗೆ ಎದುರಾಗುವ ಸಮಾಜದ ಸವಾಲುಗಳು, ಬೆದರಿಕೆಗಳು ಅಲ್ಲದೆ, ಸಾಂಸ್ಥಿಕ ವ್ಯವಸ್ಥೆ, ಲೈಂಗಿಕತೆ, ಕಾನೂನು ಇಂಥ ವಿಷಯಗಳನ್ನು ಸಾಕಷ್ಟು ಚರ್ಚಿಸುತ್ತಾ ಹೋಗುವ ಕಾದಂಬರಿ, ಅಲ್ಲಲ್ಲಿ ಬೋಧಕನ ಸ್ಥಾನವನ್ನೂ ಅಲಂಕರಿಸಿಬಿಡುತ್ತದೆ. ಸಂಬಂಧಗಳ ಕುರಿತ ಚರ್ಚೆಗಳು ಹೊಸ ಹೊಳಹುಗಳಿಗೆ ಕಾರಣವಾಗುತ್ತವೆ.

ಇದ್ದೂ ಇಲ್ಲದ್ದು (ಕಾದಂಬರಿ): ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬಗಳು ಪರಿಸ್ಥಿತಿಯ ವೈರುಧ್ಯದಲ್ಲಿ ಸಿಲುಕಿ ‘ಇದೆ’, ‘ಇಲ್ಲ’ ಎಂಬ ಜಿಜ್ಞಾಸೆಯಲ್ಲೇ ಕಳೆದುಹೋಗುವ ಕಥೆಯಿದು. ಒಂದು ಕುಟುಂಬಕ್ಕೆ ಮಗ, ಸಂಬಂಧ ಅನ್ನುವುದಕ್ಕಿಂತಲೂ ದೇವರು ಮತ್ತು ಅವನ ಪೂಜೆಯೇ ಮೇಲು. ಇನ್ನೊಂದು ಕುಟುಂಬಕ್ಕೆ ದೇವರು ಅನ್ನುವವನೊಬ್ಬನನ್ನು ಪೂಜಿಸಿಯೂ ಸಂಕಷ್ಟಗಳೇ ಮುತ್ತಿಕೊಳ್ಳುವುದಾದರೆ ದೇವರೇ ಬೇಡ ಅನ್ನುವ ಹತಾಶೆ, ಆಕ್ರೋಶ.

ಕಾದಂಬರಿಯಲ್ಲಿ ಬರುವ ದೇವರಮನೆ ಊರೇ ಒಂದು ಪಾತ್ರ. ಮೇಲೆ ಹೇಳಿದ ತಾಕಲಾಟಗಳ ಮೂಲಕ ನಂಬಿಕೆಗಳ ಪುನರ್‌ವಿಮರ್ಶೆ ಮಾಡಲಾಗಿದೆ. ಜೊತೆಗೆ ಶಿಥಿಲವಾಗುತ್ತಿರುವ ನಂಬಿಕೆಗಳು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೃಷಿ ಕಸುಬು ಆತಂಕಕಾರಿಯಾಗಿರುವುದು, ಮಠಗಳು – ಭೂಮಿ– ಗೇಣಿ– ಒಕ್ಕಲುತನಗಳ ವ್ಯಾವಹಾರಿಕತೆ ಎಲ್ಲವನ್ನೂ ಚರ್ಚಿಸುತ್ತಲೇ ಹೋಗಿದೆ ಈ ಕಾದಂಬರಿ. ಒಂದೆರಡು ದಶಕಗಳ ಹಿಂದಿನ ಬದುಕನ್ನು ನಿರ್ದಿಷ್ಟ ಸಮುದಾಯವೊಂದರ ಕನ್ನಡಿಯಲ್ಲಿಟ್ಟು ತೋರಿಸಿದೆ ಈ ಕೃತಿ. ಫ್ಲ್ಯಾಷ್‌ ಬ್ಯಾಕ್‌ ರೂಪದ ನಿರೂಪಣೆಯಿದೆ.

ಕೃತಿ: ಇದ್ದೂ ಇಲ್ಲದ್ದು

ಲೇ: ಡಾ.ನಾ.ಮೊಗಸಾಲೆ

ಪ್ರ: ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ

ಸಂ: 9448110034 

ಕೃತಿ: ನೀರಿನೊಳಗಿನ ಮಂಜು

ಲೇ: ಡಾ.ನಾ.ಮೊಗಸಾಲೆ

ಪ್ರ: ಅಂಕಿತ ಪುಸ್ತಕ, ಬೆಂಗಳೂರು

ಸಂ: 080 26617100

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು