ಬುಧವಾರ, ಆಗಸ್ಟ್ 10, 2022
24 °C

ಯಾರನ್ನೂ ನೋಯಿಸಬಯಸದ ನೈತಿಕ ಹಂಬಲವುಳ್ಳ ಹಕ್ಕಿ ನೋಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೆನಪಿನ ಹಕ್ಕಿಯ ಹಾರಲು ಬಿಟ್ಟು

ನೆನಪಿನ ಹಕ್ಕಿಯ ಹಾರಲು ಬಿಟ್ಟು

ಲೇ: ಮೂಡ್ನಾಕೂಡು ಚಿನ್ನಸ್ವಾಮಿ

ಪ್ರ: ಅಂಕಿತ ಪುಸ್ತಕ, ಬೆಂಗಳೂರು,

ದೂ: 080–2661 7100

***

ಕವಿ ಮೂಡ್ನಾಕೂಡು ಚಿನ್ನಸ್ವಾಮಿ ಕನ್ನಡದ ಈ ಹೊತ್ತಿನ ಮುಖ್ಯ ಕವಿಗಳಲ್ಲೊಬ್ಬರು. ಗಡಿನಾಡು ಚಾಮರಾಜನಗರ ಜಿಲ್ಲೆಯವರಾದ ಅವರು, ಹುಟ್ಟಿನ ಕಾರಣದಿಂದಲೂ ಅಂಚಿನ ಸಮುದಾಯಕ್ಕೆ ಸೇರಿದವರು. ಆದರೆ, ಶಿಕ್ಷಣ ಹಾಗೂ ಸಾಹಿತ್ಯದ ಮೂಲಕ ಸಾಮಾಜಿಕ ಚೌಕಟ್ಟುಗಳನ್ನು ಮೀರುತ್ತಲೇ ಹೋಗಿರುವ ಅವರು, ಕವಿಯಾಗಿ ಕನ್ನಡದ ಆಕಾಶವನ್ನೇ ತಮ್ಮ ಸೃಜನಶೀಲತೆಯ ಭಿತ್ತಿಯಾಗಿಸಿಕೊಂಡವರು. ವಿಸ್ತಾರವನ್ನು ಒಳಗೊಳ್ಳುವ ಈ ಹಂಬಲ ಅವರ ‘ನೆನಪಿನ ಹಕ್ಕಿಯ ಹಾರಲು ಬಿಟ್ಟು’ ಆತ್ಮಕಥೆಯ ಶೀರ್ಷಿಕೆಯಲ್ಲೂ ಕಾಣಿಸಿಕೊಂಡಿದೆ.

ಸಹೃದಯರಿಗೆ ಅಷ್ಟಾಗಿ ಪರಿಚಯವಿರದ ಲೋಕವೊಂದನ್ನು ಎದುರಿಗಿಡುವ ಮೂಲಕ ಬೆಚ್ಚಿ ಬೀಳಿಸುವುದು ದಲಿತ ಆ‌ತ್ಮಕಥೆಗಳ ಸಾಮಾನ್ಯ ಲಕ್ಷಣಗಳಲ್ಲೊಂದು. ಆ ಕಾರಣದಿಂದಾಗಿಯೇ, ದಲಿತ ಆತ್ಮಕಥನ ಎನ್ನುವುದು ವ್ಯಕ್ತಿಯೊಬ್ಬನ ಬದುಕಿನ ತವಕತಲ್ಲಣವಷ್ಟೇ ಆಗಿರದೆ, ಸಮುದಾಯದ ಕಥನವೂ ಆಗಿರುತ್ತದೆ. ಈ ಕಥನಗಳು ಸಮುದಾಯದ ಹೊರಗಿನ ಓದುಗನನ್ನು ಬೆಚ್ಚಿಬೀಳಿಸುವುದು ಮಾತ್ರವಲ್ಲ; ಆ ಓದುಗ ತನ್ನ ಸಾಮಾಜಿಕ ಬದುಕನ್ನು ಪರಿಶೀಲಿಸಿಕೊಳ್ಳಲು ಕನ್ನಡಿಯೂ ಆಗುತ್ತವೆ. ಮೂಡ್ನಾಕೂಡು ಅವರ ಆತ್ಮಕಥೆಯಲ್ಲಿ ಕೂಡ ದಲಿತಲೋಕವೊಂದಿದೆ. ಆದರೆ, ಅವರ ಕೃತಿಯಲ್ಲಿನ ಲೋಕದರ್ಶನ ಓದುಗರನ್ನು ವಿಷಣ್ಣರಾಗಿಸುವುದಿಲ್ಲ, ದಿಗ್ಭ್ರಮೆಗೊಳಿಸುವುದಿಲ್ಲ. ಇದಕ್ಕೆ ಕಾರಣ ಲೇಖಕರು ತಮ್ಮ ಬದುಕನ್ನು ನಿರೂಪಿಸಿರುವಾಗ ಸಾಧಿಸಿರುವ ಅಂತರ ಹಾಗೂ ಭಾವಸಂಯಮ. ಓದುಗ ಭಾವಾವೇಶಕ್ಕೆ ಒಳಗಾಗದೆ ಒಂದು ಅಂತರದಿಂದ ಕೃತಿಯನ್ನು ನೋಡಲು ಸಾಧ್ಯವಾಗುವಂತಹ ಬರವಣಿಗೆ ಕೃತಿಯಲ್ಲಿದೆ.

ಘಟನೆಗಳ ಮೂಲಕ ಬದುಕಿನ ಕಥೆಯನ್ನು ಕಟ್ಟಿಕೊಡುವಾಗ ಕೆಲವೊಮ್ಮೆ ಲೇಖಕರು ತಮ್ಮ ಕಥೆಗಳನ್ನೇ ಉಲ್ಲೇಖಿಸುತ್ತಾರೆ. ಪ್ರಾಸಂಗಿಕವಾಗಿ ಕವಿತೆಗಳೂ ಬರುತ್ತವೆ. ರೇಖಾಚಿತ್ರಗಳೂ ಪುಸ್ತಕದಲ್ಲಿವೆ. ಇವೆಲ್ಲವೂ ಸುಡುಕೆಂಡ ಆಗಿರಬಹುದಾದ ಕಥನಕ್ಕೆ ರಮ್ಯ ಆವರಣವೊಂದನ್ನು ತೊಡಿಸಿಬಿಟ್ಟಿವೆ.

ಎಸ್‌.ಸಿ. ಸರ್ಟಿಫಿಕೇಟ್‌ ಕೊಟ್ಟು ಉದ್ಯೋಗ ಪಡೆಯಲು ನಿರಾಕರಿಸುತ್ತ, ‘ಥೂ, ಬ್ಯಾಡಿ, ಕೆಲ್ಸ ಸಿಕ್ದೆ ಇದ್ರೂ ಪರವಾಗಿಲ್ಲ, ಹಾಗಂತ ಹೇಳ್ಕೊಳ್ಳೋದ್‌ ಬ್ಯಾಡ’ ಎನ್ನುವ ಹುಡುಗ ಮೂಡ್ನಾಕೂಡು ಅವರಿಗೆ ‘ಸ್ವಾಭಿಮಾನ ಧನ’ನಂತೆ ಕಾಣಿಸುತ್ತಾನೆ. ‘ಇತರರನ್ನು ನೋಯಿಸದಿರುವುದು’ ನೈತಿಕಬಲದ ಲಕ್ಷಣಗಳಲ್ಲೊಂದು ಎನ್ನುವುದು ಅವರ ನಂಬಿಕೆ. ಅಕ್ಕಪಕ್ಕವೇ ಇರುವ ಕಲಿತವರ ಜಾತಿಭೇದದ ಘಟನೆಗಳನ್ನು ದಾಖಲಿಸುವ ಉಮೇದು ಅವರಿಗಿಲ್ಲ. ಜಾತಿಯ ಐಡೆಂಟಿಟಿಯನ್ನು ಮೀರಿದ ಸಾಧ್ಯತೆಗಳು ತಮ್ಮ ಬದುಕು ಹಾಗೂ ವ್ಯಕ್ತಿತ್ವಕ್ಕೆ ಇರುವುದನ್ನು ಹೇಳಿಕೊಳ್ಳುವುದು ಅವರಿಗೆ ಮುಖ್ಯವಾದಂತಿದೆ. ಆ ಕಾರಣದಿಂದಲೇ ಖಾಸಗಿ ಸಂಗತಿಗಳಿಗಿಂತಲೂ ಸಾಂಸ್ಕೃತಿಕ ಲೋಕದೊಂದಿಗಿನ ಲೇಖಕರ ಒಡನಾಟ, ಉದ್ಯೋಗಕ್ಷೇತ್ರದಲ್ಲಿನ ಸಾಧನೆ, ಬೌದ್ಧಧರ್ಮದ ನಂಟು, ವಿದೇಶಿ ಪ್ರವಾಸಗಳ ವಿವರಗಳು ಕೃತಿಯಲ್ಲಿ ಕಿಕ್ಕಿರಿದಿವೆ.

ಹಾರುವ ಹಕ್ಕಿ ತನ್ನ ಗೂಡು ಹಾಗೂ ಆ ಗೂಡಿನ ನೆಲೆಯಾದ ಮರವನ್ನೇ ಪ್ರಧಾನವಾಗಿ ನೋಡುತ್ತದೆಂದು ಹೇಳಲಾಗದು. ಮುಗಿಲಿನಿಂದ ಅದು ಕಾಣುವ ನೋಟ ಮೋಹಕವಾಗಿ ಇರಬಹುದು; ಆದರೆ, ಆ ನೋಟದ ಮೂಲಕ ಹಕ್ಕಿಯ ರೆಕ್ಕೆಗಳಿಗೆ ಕಸುವು ತುಂಬಿಕೊಟ್ಟ ಜೀವದ್ರವ್ಯವನ್ನು ಅಥವಾ ಮಣ್ಣಿನ ಸೊಗಡನ್ನು ಅರಿಯುವುದು ಸಾಧ್ಯವಿಲ್ಲ. ಮೂಡ್ನಾಕೂಡು ಅವರ ನೆನಪುಗಳ ಹಕ್ಕಿಯ ನೋಟವೂ ಅಷ್ಟೇ – ವ್ಯಕ್ತಿ ಹಾಗೂ ಸಮುದಾಯ ಕೇಂದ್ರಿತ ಆಗಿರುವುದಕ್ಕಿಂತಲೂ ಮಿಗಿಲಾಗಿ, ವ್ಯಕ್ತಿಯನ್ನು ಆವರಿಸಿಕೊಂಡ ಸಾಂಸ್ಕೃತಿಕ ಜಗತ್ತಿನ ನೋಟವನ್ನೇ ಮುಖ್ಯವಾಗಿಸಿಕೊಂಡಿದೆ. ಹಾಗಾಗಿ, ದಲಿತ ಜಗತ್ತಿನ ವಿವರಗಳನ್ನು, ದಲಿತ ಅಸ್ಮಿತೆಯ ಬದುಕನ್ನು ಕಾಣಲು ಬಯಸುವ ಓದುಗರಿಗೆ ಈ ಕೃತಿಯಲ್ಲಿ ಕವಿಯೊಬ್ಬ ಕಾಣಿಸುತ್ತಾನೆಯೇ ಹೊರತು, ಸಾಮಾಜಿಕ ತರತಮಗಳೊಂದಿಗೆ ಸಂಘರ್ಷಕ್ಕಿಳಿದ ವ್ಯಕ್ತಿಯಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು