ಭಾನುವಾರ, ಜೂನ್ 20, 2021
20 °C

ಅವಲೋಕನ: ಸಮಾಜದ ವಿವೇಕದಲ್ಲಿ ವಿಜ್ಞಾನ ಹರಡಿದ ಬೆಳಕು

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ಆಧುನಿಕ ವಿಜ್ಞಾನ ಐತಿಹಾಸಿಕ ಮತ್ತು ಸಾಮಾಜಿಕ ಸಮೀಕ್ಷೆ

ಮೂಲ ಇಂಗ್ಲಿಷ್‌: ಬಿ. ವಿ. ಸುಬ್ಬರಾಯಪ್ಪ

ಕನ್ನಡಕ್ಕೆ: ಲಕ್ಷ್ಮೀಕಾಂತ ಹೆಗಡೆ

ಪ್ರಕಾಶನ: ಶ್ರೀ ಅರೊಬಿಂದೋ ಕಪಾಲಿಶಾಸ್ತ್ರಿ ಇನ್‌ಸ್ಟಿಟ್ಯೂಟ್‌ ಆಫ್‌ ವೇದಿಕ್‌ ಕಲ್ಚರ್‌

ನಂ. 63, 13ನೇ ಮೇನ್‌, 4ನೇ ಬ್ಲಾಕ್‌, ಜಯನಗರ, ಬೆಂಗಳೂರು – 560 011

ನಮ್ಮ ಕಾಲವನ್ನು ವಿಜ್ಞಾನಯುಗ ಎಂದು ಕರೆಯುವುದು ವಾಡಿಕೆ. ಕೊರೊನಾ ವೈರಸ್‌ನಿಂದ ಜಗತ್ತಿನಾದ್ಯಂತ ಎದುರಾಗಿರುವ ತೊಂದರೆಗಳು ನಮ್ಮ ಹಲವು ಲೋಪ–ದೋಷಗಳನ್ನು ಎತ್ತಿತೋರಿಸಿವೆ. ನೇರವಾಗಿ ವೈರಸ್‌ನಿಂದಲೇ ಉಂಟಾಗಿರುವ ಸಮಸ್ಯೆಗಳು ಎಷ್ಟು, ಸಮಸ್ಯೆಯನ್ನು ನಿರ್ವಹಿಸುವಲ್ಲಿ ವ್ಯಷ್ಟಿಸ್ತರದಲ್ಲಿಯೂ ಸಮಷ್ಟಿಸ್ತರದಲ್ಲಿಯೂ ಉಂಟಾದ ವಿಫಲತೆಯ ಕಾರಣದಿಂದ ಸೃಷ್ಟಿಯಾದ ಸಮಸ್ಯೆಗಳು ಎಷ್ಟು – ಎಂಬುದನ್ನು ಆಲೋಚಿಸಬೇಕಾಗುತ್ತದೆ. ಎರಡನೆಯ ಕಾರಣದಿಂದಲೇ ಹೆಚ್ಚು ಅನಾಹುತಗಳು ನಡೆದಿರುವುದು ಸ್ಪಷ್ಟವಾಗುತ್ತದೆ. ಹಾಗಾದರೆ ಸಮಸ್ಯೆಯನ್ನು ಎದುರಿಸುವಲ್ಲಿ ವಿಜ್ಞಾನಯುಗದ ಸಮಾಜ ಸೋಲುತ್ತಿರುವುದಾದರೂ ಏಕೆಂದು ಚಿಂತಿಸಬೇಕಾಗುತ್ತದೆ. ವಿಜ್ಞಾನಕ್ಕೂ ವಿಜ್ಞಾನಶಿಕ್ಷಣಕ್ಕೂ ಸಮಾಜಕ್ಕೂ ಸಾವಯವ ಸಂಬಂಧ ಬಲವಾಗಿಲ್ಲವೆಂಬ ಸಂಶಯವೊಂದು ಇಲ್ಲಿ ಸುಳಿಯದಿರದು. ಎಂದರೆ, ವಿಜ್ಞಾನ ಎಂಬುದು ಇನ್ನೂ ನಮ್ಮ ಜೀವನದ ಭಾಗವಾಗಿಲ್ಲ ಎಂದೇ ಹೇಳಬೇಕಾಗುತ್ತದೆ. ಇದಕ್ಕೆ ಕಾರಣಗಳೇನು? ಈ ಹಿನ್ನೆಲೆಯಲ್ಲಿ ಬಿ. ವಿ. ಸುಬ್ಬರಾಯಪ್ಪ ಅವರ ‘ಮಾಡರ್ನ್‌ ಸೈನ್ಸ್: ಎ ಹಿಸ್ಟಾರಿಕಲ್‌ ಅಂಡ್‌ ಸೋಷಿಯಲ್‌ ಪರ್ಸ್‌ಪೆಕ್ಟಿವ್‌‘ನಂಥ ಪುಸ್ತಕಗಳು ನಮ್ಮ ಆಲೋಚನೆಗೆ ಪುಷ್ಟಿಯನ್ನು ನೀಡಬಲ್ಲವು. ಈಚೆಗಷ್ಟೆ ಲಕ್ಷ್ಮೀಕಾಂತ ಹೆಗಡೆ ಅವರು ಈ ಕೃತಿಯನ್ನು ’ಆಧುನಿಕ ವಿಜ್ಞಾನ: ಐತಿಹಾಸಿಕ ಮತ್ತು ಸಾಮಾಜಿಕ ಸಮೀಕ್ಷೆ’ ಎಂದು ಕನ್ನಡಕ್ಕೆ ಅನುವಾದಿಸಿದ್ದಾರೆ.

ಮೂಲ ಕೃತಿಕಾರರಾದ ಬಿ. ವಿ. ಸುಬ್ಬರಾಯಪ್ಪ ಕಳೆದ ವರ್ಷವಷ್ಟೆ ನಮ್ಮನ್ನು ಅಗಲಿದ್ದಾರೆ; ಅವರು ರಸಾಯನ ವಿಜ್ಞಾನ ತಜ್ಞರಾಗಿದ್ದರು. ವಿಜ್ಞಾನದ ಇತಿಹಾಸಕಾರರಾಗಿ, ವಿಜ್ಞಾನತತ್ತ್ವಚಿಂತಕರಾಗಿ ಹಲವು ಗ್ರಂಥಗಳನ್ನು ರಚಿಸಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರನ್ನು ಸಂಪಾದಿಸಿದ್ದರು.

ಮೂಲಕೃತಿಗೆ ಮುನ್ನುಡಿಯನ್ನು ಬರೆದಿರುವ ಖ್ಯಾತ ವಿಜ್ಞಾನಿ ಬಿ. ವಿ. ಶ್ರೀಕಂಠನ್‌ ಅವರ ಮಾತುಗಳು ಈ ಕೃತಿಯ ಹೂರಣವನ್ನೂ ಮಹತ್ವವನ್ನೂ ನಿರೂಪಿಸುತ್ತಿವೆ:

‘ಈ ಹಿಂದೆ ಬಾಳಿ ಅಳಿದುಹೋದ ಬೇರೆ ಬೇರೆ ನಾಗರಿಕತೆಗಳ ಕಾಲಘಟ್ಟಗಳ ಉದ್ದಕ್ಕೂ. ಅವುಗಳಲ್ಲಿ ಪ್ರತಿಯೊಂದೂ ತನ್ನ ಅಳಿಸಲಾರದ ಕುರುಹುಗಳನ್ನು ಹಿಂದೆ ಬಿಟ್ಟುಹೋದುದರ ಮತ್ತು ಘಟಿಸಿದ ಸಂಗತಿಗಳ ಹಿನ್ನೆಲೆಯಲ್ಲಿ, ಆಧುನಿಕ ವಿಜ್ಞಾನ ಬೆಳೆದು ಬಂದ ರೀತಿಯನ್ನು ಈ ಪುಸ್ತಕವು ಜಾಡು ಹಿಡಿದು ಗುರುತಿಸುತ್ತದೆ. ಇದೊಂದು ಸಮಗ್ರ ದೃಷ್ಟಿಯ ಕೃತಿ. ಇದು ಆಧುನಿಕ ವಿಜ್ಞಾನದ ಸದ್ಯದ ಸ್ಥಾನವನ್ನು ಪ್ರಸ್ತುತಪಡಿಸುವುದಲ್ಲದೆ, ಇದಕ್ಕೆ ಸಂಬಂಧಿಸಿದ ಇನ್ನೂ ಅನೇಕ ವಿಷಯಗಳನ್ನು ಮುಂದಿಡುತ್ತದೆ. ವಿಶೇಷತಃ ಪದವಿಪೂರ್ವ ವರ್ಗಗಳಿಗೆ ಪಠ್ಯಪುಸ್ತಕವಾಗಿ ಗೊತ್ತುಪಡಿಸಲು ಸೂಕ್ತವಾದುದಾಗಿದೆ.‘

ಕೃತಿಯ ವಿಷಯ ಎಂಟು ಅಧ್ಯಾಯಗಳಲ್ಲಿ ಹರಡಿದೆ: ವಿಶ್ವದಲ್ಲಿ ಮಾನವ: ಒಂದು ಮುನ್ನೊಟ; ಆಧುನಿಕ ಪೂರ್ವ ವಿಜ್ಞಾನ; ಆಧುನಿಕ ವಿಜ್ಞಾನ: ಅದರ ಉಗಮ ಹಾಗೂ ಮುನ್ನಡೆ; ಆಧುನಿಕ ವಿಜ್ಞಾನದ ಲಕ್ಷಣಗಳು ಹಾಗೂ ಇತಿಮಿತಿಗಳು; ಮೌಲ್ಯಗಳು, ವಿಜ್ಞಾನ ಮತ್ತು ಧರ್ಮ; ಮಾನವತಾವಾದ ಮತ್ತು ವಿಜ್ಞಾನ; ಭಾರತದಲ್ಲಿ ಆಧುನಿಕ ವಿಜ್ಞಾನ: ಅದರ ಆಗಮನ ಹಾಗೂ ಆದ್ಯಪ್ರವರ್ತಕರು; ಭಾರತದ ಸಂದರ್ಭದಲ್ಲಿ ಜಾಗತೀಕರಣ ಮತ್ತು ಪರಂಪರೆ – ಈ ಶೀರ್ಷಿಕೆಗಳೇ ಕೃತಿಯ ವಿಷಯವಿಸ್ತಾರವನ್ನು ಹೇಳುವಂತಿವೆ.

ಪ್ರತಿ ಅಧ್ಯಾಯದಲ್ಲಿಯೂ ಕೃತಿಕಾರರ ವಿಸ್ತಾರವಾದ ಓದಿನ ಪರಿಚಯವಾಗುತ್ತದೆ. ವಿಜ್ಞಾನದ ಉಗಮಕಾಲದಿಂದ ಹಿಡಿದು ಇಂದಿನವರೆಗೂ ಹೇಗೆ ವಿಜ್ಞಾನದ ಬೆಳವಣಿಗೆ ಮತ್ತು ಸಮಾಜ ಒಂದಕ್ಕೊಂದು ಪೂರಕವೂ ಮಾರಕವೂ ಆಗುತ್ತಬಂದಿದೆ ಎನ್ನುವ ಪ್ರತಿಪಾದನೆ ಸಂಗ್ರಹವಾಗಿ, ಆದರೆ ಸಮರ್ಥವಾಗಿ ಮೂಡಿದೆ. ‘ಧರ್ಮರಹಿತ ವಿಜ್ಞಾನವೂ ಕುಂಟು; ವಿಜ್ಞಾನರಹಿತ ಧರ್ಮವು ಕುರುಡು’ ಎಂಬ ಐನ್‌ಸ್ಟೀನ್‌ ಅವರ ಮಾತಿನ ಹಿನ್ನೆಲೆಯಲ್ಲಿ ನಡೆದಿರುವ ಚರ್ಚೆಗಳು ನಮ್ಮ ಸದ್ಯದ ಪರಿಸ್ಥಿತಿಯಲ್ಲಿ ಮನನಯೋಗ್ಯವಾಗಿವೆ. ಕೃತಿಯಲ್ಲಿ ಭಾರತೀಯ ವಿಜ್ಞಾನ ಪರಂಪರೆಗೆ ಹೆಚ್ಚಿನ ಸ್ಥಳಾವಕಾಶವನ್ನು ನೀಡಿರುವುದು ಕೂಡ ಗಮನಾರ್ಹ. ಪ್ರಾಚೀನ ಭಾರತೀಯ ವಿಜ್ಞಾನ ಪರಂಪರೆಯ ಜೊತೆಗೆ ಆಧುನಿಕ ವಿಜ್ಞಾನದ ಬೆಳವಣಿಗೆಯ ದಿಕ್ಕು–ದೆಸೆಗಳನ್ನೂ ಗುರುತಿಸಲಾಗಿದೆ. ಭಾರತದಲ್ಲಿ ಸಮಾಜದ ಸುಶಿಕ್ಷಿತ ವರ್ಗವೂ ವಿಜ್ಞಾನ–ತಂತ್ರಜ್ಞಾನದ ಬೆಳವಣಿಗೆಗಳ ಕಡೆಗೆ ವಿಮುಖವಾಗಿದೆ – ಎಂಬ ಮುನ್ನುಡಿಕಾರರ ಮಾತು ಇಂದಿನ ಸಂದರ್ಭದಲ್ಲಿ ಪ್ರಪಂಚದಾದ್ಯಂತ ಎಲ್ಲ ಸಮಾಜಕ್ಕೂ ಅನ್ವಯಿಸಬಹುದೆನ್ನಿ!

ಲಕ್ಷ್ಮೀಕಾಂತ ಹೆಗಡೆ ಅವರ ಅನುವಾದ ಸಮರ್ಥವಾಗಿದೆ; ಅಲ್ಲಲ್ಲಿ ಕೆಲವು ವಾಕ್ಯಗಳನ್ನು ಕನ್ನಡದ ಸಹಜತೆಗೆ ಇನ್ನಷ್ಟು ಒಗ್ಗಿಸಬಹುದಿತ್ತು ಎನಿಸುತ್ತದೆ.  ಹಲವು ಪಾರಿಭಾಷಿಕ ಪದಗಳ ಮೂಲರೂಪವನ್ನು ಕೊಟ್ಟಿರುವುದು ಅನುಕೂಲಕರವಾಗಿದೆ. ಮುದ್ರಣದೋಷಗಳು ಇಲ್ಲವೇ ಇಲ್ಲ ಎನ್ನುವಷ್ಟು ಪುಸ್ತಕ ಅಚ್ಚುಕಟ್ಟಾಗಿದೆ. ಕೃತಿಕಾರರ ಮತ್ತು ಅನುವಾದಕರ ಸಿದ್ಧತೆ– ಪರಿಶ್ರಮ ಕೃತಿಯ ಉದ್ದಕ್ಕೂ ಕಾಣುತ್ತವೆ. ಇಂಥ ಕೃತಿಗಳ ಅವಶ್ಯಕತೆಯ ಬಗ್ಗೆ ಈ ಕೃತಿಯಲ್ಲೇ ಬಂದಿರುವ ಈ ಮಾತುಗಳು ದಿಕ್ಸೂಚಿಯಂತಿವೆ:

‘ನರಳುತ್ತಿರುವ ಇಂದಿನ ಜಗತ್ತಿಗೆ ವಿಜ್ಞಾನ, ಧರ್ಮಗಳೆರಡೂ ಅಗತ್ಯ. ವಿಜ್ಞಾನವು ತನ್ನ ವಿನಾಶಕ ಸಾಮರ್ಥ್ಯವನ್ನು ಕಳಚಿಹಾಕಿದ ತಾರ್ಕಿಕ ಅನ್ವೇಷಣೆಯಾಗಿ; ಮತ್ತು ಧರ್ಮವು ತನ್ನ ಕುರುಡು ಮೂಢನಂಬಿಕೆ ಮತ್ತು ಭೀಭತ್ಸ ಆಚರಣೆಗಳನ್ನು ತೆಗೆದುಹಾಕಿ, ತನ್ನ ಮಾನವೀಯ ಮೌಲ್ಯಗಳೊಂದಿಗೆ.’

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು