ಭಾನುವಾರ, ನವೆಂಬರ್ 27, 2022
27 °C

ಇಂಗ್ಲಿಷ್‌ನಲ್ಲಿ ಕನ್ನಡ ಅಭಿಜಾತ ಸಾಹಿತ್ಯ: ಹಂಪ ನಾಗರಾಜಯ್ಯ ಅವರ ಪುಸ್ತಕ

ಪುರುಷೋತ್ತಮ ಬಿಳಿಮಲೆ Updated:

ಅಕ್ಷರ ಗಾತ್ರ : | |

Spectrum of Classical Literature in Karnataka

ಐದು ಸಂಪುಟಗಳು

ಲೇ: ಹಂಪ ನಾಗರಾಜಯ್ಯ

ಪ್ರ: ಸಪ್ನಾ

ಒಟ್ಟು ಪುಟಗಳು: 1496

ಬೆಲೆ: ₹ 3000

ನಾಡಿನ ಹಿರಿಯ ಚಿಂತಕರಾದ ಡಾ. ಹಂಪ ನಾಗರಾಜಯ್ಯ ಅವರು ಅಪಾರ ಶ್ರಮವಹಿಸಿ ತಮ್ಮ ಇಳಿವಯಸ್ಸಿನಲ್ಲಿ ಸಿದ್ಧಪಡಿಸಿದ Spectrum of Classical Literature in Karnatakaದ ಐದು ಸಂಪುಟಗಳು ಕನ್ನಡ ಅಭಿಜಾತ ಸಾಹಿತ್ಯದ ಹಿರಿಮೆಯನ್ನು ಕನ್ನಡೇತರರಿಗೆ ಪರಿಚಯಿಸುವಲ್ಲಿ ಯಶಸ್ವಿಯಾಗಿವೆ. ಜಾಗತೀಕರಣದ ಇಂದಿನ ಸಂದರ್ಭದಲ್ಲಿ ಕನ್ನಡವನ್ನು ನಾವು ಹೀಗೆ ಪರಿಚಯಿಸದೇ ಹೋದರೆ ಕನ್ನಡಕ್ಕೆ ಉಳಿಗಾಲವಿಲ್ಲ.

ಇವತ್ತು ಉನ್ನತ ಶಿಕ್ಷಣದ ಅಂತರರಾಷ್ಟ್ರೀಕರಣವೂ (Internationalisation of higher education) ಜೋರಾಗಿ ನಡೆಯುತ್ತಿದೆ. ಪಠ್ಯಕ್ರಮಗಳನ್ನು ಎರಡೂ ದೇಶಗಳ ಶಿಕ್ಷಣ ಸಂಸ್ಥೆಗಳು ಜಂಟಿಯಾಗಿ ರೂಪಿಸುತ್ತಿವೆ. ಬಂಗಾಳಿ, ಮಲೆಯಾಳಿ ಮತ್ತು ತಮಿಳು ಭಾಷೆಗಳು ಅನುವಾದಗಳ ಮೂಲಕ ಈಗಾಗಲೇ ಹೊಸ ಸವಾಲುಗಳನ್ನು ಸ್ವೀಕರಿಸಿ, ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಲಗ್ಗೆ ಹಾಕಿವೆ. ಆದರೆ ಕನ್ನಡಕ್ಕೆ ಮಾತ್ರ ಅಂತ ಭಾಗ್ಯ ಇನ್ನೂ ಬಂದಿಲ್ಲ. ಅಂಥ ಸಂದರ್ಭದಲ್ಲಿ ಹಂಪನಾ ಅವರ ಅಭಿಜಾತ ಸಾಹಿತ್ಯ ಅನುವಾದದ Spectrum of Classical Literature in Karnatakaದ ಐದು ಸಂಪುಟಗಳಿಗೆ ಐತಿಹಾಸಿಕ ಮಹತ್ವವೂ ಇದೆ.

ಈ ಸಂಪುಟಗಳು ಕನ್ನಡ ಅಭಿಜಾತ ಸಾಹಿತ್ಯ ಪರಂಪರೆಗೆ ಸೇರಿದ ಮುಖ್ಯ ಕೃತಿಗಳನ್ನು ಮತ್ತು ಕವಿಗಳನ್ನು ಕನ್ನಡೇತರರಿಗೆ ಸೊಗಸಾಗಿ ಪರಿಚಯಿಸುವ ಉದ್ದೇಶವನ್ನು ಹೊಂದಿವೆ. ಹೀಗಾಗಿ ಈ ಸಂಪುಟಗಳು ಅಭಿಜಾತ ಸಾಹಿತ್ಯವನ್ನು ಬಹಳ ವಿಮರ್ಶಾತ್ಮಕವಾಗಿಯೇನೂ ನೋಡುವುದಿಲ್ಲ. ಬದಲಾಗಿ ಅವುಗಳನ್ನು ಓದಿದವರು ಕನ್ನಡದ ಕಡೆಗೆ ಆಕರ್ಷಿತರಾಗಿ ಮತ್ತಷ್ಟು ಕನ್ನಡವನ್ನು ಓದುವಂತೆ ಪ್ರೇರೇಪಿಸುತ್ತವೆ. ಹೀಗೆ ಮಾಡಬೇಕಾದ್ದು ಇಂದಿನ ಅಗತ್ಯವೂ ಹೌದು. ಈ ಧೋರಣೆಯಲ್ಲಿಯೇ ಐದೂ ಸಂಪುಟಗಳು ಸಿದ್ಧಗೊಂಡಿವೆ.

ಇದರ ಮೊದಲನೆಯ ಸಂಪುಟವು ಒಂಬತ್ತು ಮತ್ತು ಹತ್ತನೇ ಶತಮಾನದಲ್ಲಿದ್ದ ಪಂಪಪೂರ್ವ ಮತ್ತು ಪಂಪಯುಗದ ಕವಿಗಳನ್ನು ಪರಿಚಯಿಸುತ್ತದೆ. ಎರಡನೇ ಸಂಪುಟದಲ್ಲಿ ಪಂಪೋತ್ತರ ಯುಗದ ಒಟ್ಟು 14 ಕವಿಗಳನ್ನು ಪರಿಚಯಿಸಲಾಗಿದೆ. ಈ ಅವಧಿಯನ್ನು ‘ಪಂಪೋತ್ತರ ಯುಗ’ ಎಂದು ಕರೆಯಲಾಗಿದೆಯಾದರೂ ಪಂಪ ಯುಗದ ಅನೇಕ ಗುಣಗಳು ಈ ಕಾಲದಲ್ಲಿಯೂ ಮುಂದುವರೆದಿವೆ. ಮಾರ್ಗ ಸಂಪ್ರದಾಯಗಳಿಗೆ ನಿಷ್ಠೆ, ಚಂಪೂವಿನ ಬಳಕೆ,
ಲೌಕಿಕ -ಆಗಮಿಕ ಕಾವ್ಯರಚನೆ, ವೀರರಸ ಪ್ರಾಧಾನ್ಯ, ಆಶ್ರಯದಾತನನ್ನು ಕಾವ್ಯ ನಾಯಕನೊಡನೆ ಸಮೀಕರಿಸುವ ಪ್ರಕ್ರಿಯೆ ಇತ್ಯಾದಿ ಇಲ್ಲಿಯೂ ಮುಂದುವರೆದಿವೆ.

ಮೂರನೇ ಸಂಪುಟವು 11 ಮತ್ತು 12ನೇ ಶತಮಾನದ 13 ಕವಿಗಳನ್ನು ಪರಿಚಯಿಸುತ್ತದೆ. ಮೊದಲೆರಡು ಸಂಪುಟಗಳಲ್ಲಿ ಜೈನ ಕವಿಗಳೇ ಹೆಚ್ಚಿಗೆ ಇದ್ದರೆ ಈ ಸಂಪುಟದಲ್ಲಿ ಜೈನೇತರ ಕವಿಗಳೂ ಸೇರ್ಪಡೆಗೊಂಡು ಕನ್ನಡ ಕಾವ್ಯ ವಿಸ್ತರಿಸಿಕೊಂಡ ಒಂದು ಚಿತ್ರವೂ ದೊರೆಯುತ್ತದೆ. ನಾಲ್ಕನೇ ಸಂಪುಟದಲ್ಲಿ ಕರ್ನಾಟಕದವರಾಗಿ ಸಂಸ್ಕೃತ, ಪ್ರಾಕೃತ ಮತ್ತು ಅಪಭ್ರಂಶಗಳಲ್ಲಿ ಬರೆದ ಪೂಜ್ಯಪಾದ, ದುರ್ವಿನೀತ, ರವಿಕೀರ್ತಿ, ಭಟ್ಟಾಕಳಂಕ, ಜಿನಸೇನ ಮೊದಲಾದ 31 ಕವಿಗಳ ಪರಿಚಯವಿದೆ. ತಮ್ಮ ಪ್ರಖರ ಚಿಂತನೆಗಳಿಂದ ಭಾರತದಾದ್ಯಂತ ಜನಪ್ರಿಯರಾಗಿರುವ ಈ ಕವಿಗಳ ಬಗ್ಗೆ ಕನ್ನಡಿಗರಿಗೆ ತಿಳಿದಿರುವುದು ಬಹಳ ಕಡಿಮೆ. ಕಾರಣ ಈ ಸಂಪುಟವು ಕನ್ನಡದಲ್ಲಿ ಬಂದರೂ ಒಳ್ಳೆಯದೇ. ಕೊನೆಯದಾದ ಐದನೇ ಸಂಪುಟವು ಮುಖ್ಯವಾದ ಕೆಲವು ಶಾಸನ ಕವಿಗಳನ್ನೂ ಶಾಸನಗಳನ್ನೂ ಒಳಗೊಂಡಿದೆ.

ಪ್ರಸ್ತುತ ಸಂಪುಟಗಳಲ್ಲಿ ಕವಿ ಮತ್ತು ಕೃತಿಗಳನ್ನು ಪರಿಚಯಿಸುವಾಗ ಹಂಪನಾ ಅವರು ಸಾಹಿತ್ಯ ಚರಿತ್ರೆಯ ಮಾದರಿಗಳನ್ನೇ ಬಹುಮಟ್ಟಿಗೆ ಅನುಸರಿಸಿದ್ದಾರೆ. ಇದು ಕನ್ನಡೇತರ ಓದುಗರಿಗೆ ಬಹಳ ಉಪಯುಕ್ತ. ಈ ಮಾದರಿಯು ಒಳಗೊಳ್ಳುವ ಮುಖ್ಯ ಅಂಶಗಳೆಂದರೆ, ಕವಿಯ ಹೆಸರು, ಕಾಲ, ಬಿರುದುಗಳು, ಆಶ್ರಯದಾತ/ರು, ಮುಖ್ಯ ಕೃತಿಗಳು ಮತ್ತು ಕೃತಿಗಳ ಸಂಕ್ಷಿಪ್ತ ಪರಿಚಯ ಮಾಡುವುದು ಹಾಗೂ ಅವುಗಳ ಮಹತ್ವವನ್ನು ವಿವರಿಸಿ, ಕಾವ್ಯಗಳ ಕೆಲವು ಆಕರ್ಷಕ ಭಾಗಗಳ ಇಂಗ್ಲಿಷ್‌ ಅನುವಾದವನ್ನು ನೀಡುವುದು. ಇದರ ಜೊತೆಗೆ ಅಭಿಜಾತ ಪರಂಪರೆಯ ಬಗೆಗೆ ಆಳವಾದ ತಿಳಿವಳಿಕೆಯುಳ್ಳ ಹಂಪನಾ ಅವರು ಈ ವಿಷಯವಾಗಿ ಉಳಿದಿರುವ ಕೆಲವು ಅನುಮಾನಗಳನ್ನು ಪರಿಹರಿಸಿದ್ದಾರೆ, ತಪ್ಪು ಮಾಹಿತಿಗಳನ್ನು ಸರಿಮಾಡಿದ್ದಾರೆ ಮತ್ತು ಹೊಸ ಅಂಶಗಳನ್ನು ಸೇರಿಸಿದ್ದಾರೆ.

ಉದಾಹರಣೆಗೆ, ಕನ್ನಡ ಸಾಹಿತ್ಯ ಚರಿತ್ರಕಾರರು ಉಪೇಕ್ಷಿಸಿದ್ದ ಪಂಪನ ತಮ್ಮ ಜಿನವಲ್ಲಭನಿಗೆ ಹಂಪನಾ ವಿಶೇಷ ಸ್ಥಾನ ಕಲ್ಪಿಸಿಕೊಡುವುದನ್ನು ಗಮನಿಸಬೇಕು. ಹಾಗೆ ಸೇರಿಸಲು ಅವರು ಕೊಡುವ ಕಾರಣವೆಂದರೆ ಜಿನವಲ್ಲಭನು ಭಾಷಾ ಬಳಕೆಯಲ್ಲಿ ತೋರಿದ ಹೊಸತನ. ಸಾಮಾನ್ಯವಾಗಿ ಶಾಸನಗಳನ್ನು ಮೂರು ಭಾಷೆಗಳಲ್ಲಿ (ಸಂಸ್ಕೃತ, ಪ್ರಾಕೃತ ಮತ್ತು ಅಪಭ್ರಂಶ) ಬರೆಯುತ್ತಿದ್ದ ಕಾಲಘಟ್ಟದಲ್ಲಿ ಜಿನವಲ್ಲಭನು ಮೂರು ಭಾಷೆಗಳ ಸೂತ್ರವನ್ನು ಇರಿಸಿಕೊಂಡು ಕೂಡಾ ಸಂಸ್ಕೃತ, ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಶಾಸನ ಬರೆದ. ಶಾಸನ ಬರೆಯುವಾಗ, ಸ್ಥಳೀಯ ಭಾಷೆಗಳ ಬಳಕೆಯಲ್ಲಿ ಆಗಿರುವ ಈ ಬದಲಾವಣೆಯನ್ನು ಹಂಪನಾ ಗುರುತಿಸಿದ ಬಗೆ ವಿಶಿಷ್ಟವಾದುದು ಮತ್ತು ಮುಂದಿನ ಸಂಶೋಧನೆಗಳಿಗೆ ಪ್ರೇರಣೆ ನೀಡುವಂಥದ್ದು.

ಉಳಿದಂತೆ, ಹಿಂದೂ ಪುರಾಣಗಳನ್ನು ಮತ್ತು ಅಲ್ಲಿಯ ಕೆಲವು ಪಾತ್ರಗಳನ್ನು ಜೈನ ಕವಿಗಳು ಮಾರ್ಪಡಿಸಿಕೊಂಡ ರೀತಿಯನ್ನು ಹೊಸದಾಗಿ ನೋಡಲು ಈ ಸಂಪುಟಗಳು ನಮಗೆ ಪ್ರೇರಣೆ ನೀಡುತ್ತವೆ. ಸಂಸ್ಕೃತ ಮತ್ತು ಕನ್ನಡ ಪಠ್ಯಗಳ ನಡುವಣ ಸಂಬಂಧ, ಪ್ರಾಕೃತ ಮತ್ತು ಕನ್ನಡ ಪಠ್ಯಗಳ ಸಂಬಂಧ ಹಾಗೂ ಕನ್ನಡ ಪಠ್ಯಗಳ ಆಂತರಿಕ ಸಂಬಂಧಗಳ ಬಗ್ಗೆ ಮೇಲಿನ ಐದೂ ಸಂಪುಟಗಳು ವಿಶೇಷ ಒಳನೋಟಗಳನ್ನು ಕೊಡುತ್ತವೆ.

ಈ ಸಂಪುಟಗಳ ಮುಖ್ಯ ಉದ್ದೇಶವು ಅಭಿಜಾತ ಯುಗದ ಕವಿಕೃತಿಗಳನ್ನು ಇಂಗ್ಲಿಷಿಗೆ ಅನುವಾದ ಮಾಡುವುದರ ಜೊತೆಗೆ, ‘ನೋಡಿ, ಇವನೆಷ್ಟು ಸೊಗಸಾಗಿ ಬರೆದಿದ್ದಾನೆ!’ ಎಂದು ಹೇಳುತ್ತಾ ಸಹೃದಯರನ್ನು ಕನ್ನಡದ ಕೃತಿಗಳ ಕಡೆಗೆ ಸೆಳೆಯುವುದು. ಅದಕ್ಕಾಗಿ ಅವರು ಮೂಲ ಪಠ್ಯದ ಕೆಲವು ಅತ್ಯುತ್ತಮ ಪದ್ಯಗಳನ್ನೇ ಅನುವಾದಕ್ಕೆ ಆಯ್ದುಕೊಂಡಿದ್ದಾರೆ. ಇವು ಓದುಗರಿಗೆ ಕಾವ್ಯದ ಸೊಗಸನ್ನು ಬಿಡಿಸಿ ತೋರಿಸುವಲ್ಲಿ ಯಶಸ್ವಿಯಾಗಿವೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು