ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪು–ಬಿಳುಪು ಕಲ್ಪನೆಯ ಮಿತಿ

Last Updated 4 ಜುಲೈ 2020, 19:31 IST
ಅಕ್ಷರ ಗಾತ್ರ

ಒಟ್ಟು 9 ಕಥೆಗಳ ಸಂಕಲನವಿದು. ಇಲ್ಲಿರುವ ಕಥೆಗಳನ್ನು ಓದಿದಾಗ, ಕನ್ನಡದ ಹೊಸ ತಲೆಮಾರಿನ ಕಥೆಗಾರರ ಕೃಷಿಯ ಬಗ್ಗೆ ಭರವಸೆ ಕಳೆದುಕೊಳ್ಳಬೇಕಿಲ್ಲ ಎಂದನ್ನಿಸುವುದು ನಿಜ. ಆದರೆ ಸಿದ್ಧ ಮಾದರಿಗಳನ್ನು ಮೀರುವ, ಸಿನಿಮಾ ಕಥೆಗಳ ಪ್ರಭಾವದಿಂದ ಹೊರಬರುವ ಹಾದಿ ಕಷ್ಟದ್ದಿದೆ ಎನ್ನುವುದೂ ಗೊತ್ತಾಗುತ್ತದೆ.

ಇಲ್ಲಿರುವ ಕಥೆಗಳಲ್ಲಿ ಹೆಚ್ಚು ಭರವಸೆ ಮೂಡಿಸುವ ಕಥೆ ‘ಮುಳಿಹುಲ್ಲಿನ ಮೂಲೆ ಅಂಗಡಿ’. ಅದಕ್ಕೆ ಕಾರಣ ಭಾಷೆಯ ಚಿತ್ರಕ ಶಕ್ತಿ ಮತ್ತು ಕಥನ ಕ್ರಮದ ನಾಟಕೀಯ ಅಂತ್ಯ. ಮದುವೆಯಾಗಿ, ನಗರದ ಮೊಹಲ್ಲಾದ ಗಲ್ಲಿ ಮನೆಯಿಂದ ಕುಗ್ರಾಮವೊಂದರ ಹೋಟೆಲ್‌ ಮನೆಯೊಂದಕ್ಕೆ ತೆರಳುವ ಹೆಣ್ಣೊಬ್ಬಳು ಅಲ್ಲಿ ಅನುಭವಿಸುವ ಒಬ್ಬಂಟಿತನ ಮತ್ತು ಜೀವನ ಶೈಲಿಗೆ ಒಗ್ಗಿಕೊಳ್ಳುವ ಕಷ್ಟಗಳು ಇಲ್ಲಿ ಕಥೆಯಾಗಿದೆ. ಸುಳ್ಳು ಹೇಳುವುದು ‘ಹರಾಂ’ (ನಿಷಿದ್ಧ) ಎನ್ನುವುದು ಧರ್ಮದ ಕಟ್ಟಳೆಯಾಗಿ ಕಾಡಿದರೂ, ಅದು ಬಿಡುಗಡೆಯ ಹಾದಿಯೂ ಆದಾಗ ಕಥಾನಾಯಕಿ ವಹಿಸುವ ಧೈರ್ಯ ಕಥೆಯ ಒಟ್ಟಂದಕ್ಕೆ ಹೊಸ ಆಯಾಮವೊಂದನ್ನು
ನೀಡುತ್ತದೆ.

ಕಥಾನಾಯಕಿಯ ಸುತ್ತವೇ ಎಲ್ಲ ಗಮನ ಕೇಂದ್ರೀಕೃತವಾಗುವಾಗ ಇನ್ನಿತರ ಮುಖ್ಯ ಪಾತ್ರಗಳನ್ನು ತೀರಾ ಬದಿಗೆ ನಿಲ್ಲಿಸುವುದು ಸರಿಯಲ್ಲ ಎನ್ನಿಸಿದರೂ, ಈ ಕಥೆ ಸಂಕಲನದ ಅತಿಮುಖ್ಯ ಕಥೆ ಎನ್ನಬಹುದು.

ಧರ್ಮ, ಅರ್ಥ, ಕಾಮಗಳ ನಡುವೆ ಇಲ್ಲಿನ ಹಲವು ಕಥೆಗಳು ಜೀಕುತ್ತವೆ. ಕಥಾಲೋಕಕ್ಕೆ ಹೊಸದಾಗಿ ಕಣ್ಣುಬಿಡುವ ಹೊತ್ತಿನಲ್ಲಿ ದಾಟಿ ಬರಬೇಕಾದ ಅನಿವಾರ್ಯ ಘಟ್ಟವೇ ಅದು. ‘ಮಣ್ಣು ಸೇರದ ಬೀಜ’ ಕಥೆಯಲ್ಲಿಯೂ ಸನ್ನಿವೇಶದ ಚಿತ್ರಕಶಕ್ತಿ ಗಮನ ಸೆಳೆಯುತ್ತದೆ. ಅಪ್ಪ ಶವವಾಗಿ ಮಲಗಿದ್ದಾನೆ; ಅನ್ಯಜಾತಿಯ ಹುಡುಗಿಯನ್ನು ಪ್ರೇಮಿಸಿ ಮದುವೆಯಾದ ತಪ್ಪಿಗೆ ಮನೆಯಿಂದ ಹೊರತಳ್ಳಲ್ಪಟ್ಟ ಮಗ, ಅಪ್ಪನ ಮುಖವನ್ನು ಕೊನೆಯದಾಗಿ ನೋಡಲು ಮನೆಗೆ ಬರುತ್ತಾನೆ. ಅಪಾರ ಸಾಧ್ಯತೆಗಳನ್ನು ಹೊಮ್ಮಿಸುವ ನಾಟಕೀಯ ಕಥನ ಸಂದರ್ಭವಿದು. ಆದರೆ ಫ್ಲ್ಯಾಷ್‌ಬ್ಯಾಕ್‌ನ ಹಿಂಭಾರ ಹೆಚ್ಚಾಗಿ ಕಥೆಯ ಮುಂದಣ ದಾರಿ ಮಸುಕಾಗುತ್ತದೆ. ಹಾಗಿದ್ದೂ ಸಂಕಲನಕ್ಕೆ ತೂಕ ತಂದುಕೊಟ್ಟಿರುವ ಕಥೆಗಳಲ್ಲಿ ಇದೂ ಒಂದು.

ಕಥೆಗಾರನ ಅನುಭವ ಮತ್ತು ಕಲ್ಪನೆಗಳ ಹದವಾದ ಸಮ್ಮಿಲನ ಕಥೆಗಳಿಗೆ ಹೊಸ ಹೊಳಹುಗಳನ್ನು ಒದಗಿಸಬೇಕು. ಇಲ್ಲಿನ ಇತರ ಕಥೆಗಳಲ್ಲಿ ಈ ಸಮ್ಮಿಲನ ಇನ್ನೂ ಹದಕ್ಕೆ ಬಂದಿಲ್ಲ ಎನ್ನುವುದು ಎದ್ದು ಕಾಣಿಸುತ್ತದೆ. ಬದುಕು ಕೇವಲ ಕಪ್ಪು–ಬಿಳುಪುಗಳ ಭಾವವಲ್ಲ; ಅದನ್ನು ಅದರೆಲ್ಲ ಬಣ್ಣಗಳೊಂದಿಗೆ ಭಾಷೆಯಲ್ಲಿ ಬಸಿಯುವುದಕ್ಕೆ ತಾಳ್ಮೆಯೂ ಬೇಕು. ಹಲವು ಕಥೆಗಳಲ್ಲಿ ಅದರ ಕೊರತೆ ಕಾಣಿಸುತ್ತದೆ. ಹಿಂದೂ–ಮುಸ್ಲಿಂ ಜಗಳದ ಹಿನ್ನೆಲೆಯ ಕಥೆಯೆಂದರೆ ಅದು ಕೇವಲ ಅತಿಭಾವುಕತೆಯ ನಾಟಕ ಮಾತ್ರವಲ್ಲ, ಅದರ ಹಿಂದೆ ಇಡೀ ಸಮಾಜದ ಸಮಾಜೋ–ಆರ್ಥಿಕ ಸಂವೇದನೆಯ ಕರ್ಷಕಗಳು ಇರುತ್ತವೆ. ಇಲ್ಲಿ ಕಥೆಗಾರನ ಮುಗ್ಧತೆ ಮತ್ತು ಕಥೆ ಬರೆಯುವ ಒತ್ತಡ ಎರಡೂ ಕಥೆಗಳ ಕಾಲಿಗೆ ಕಟ್ಟಿದ ಭಾರದಂತಿದೆ. ಆದರೆ ಕೊಡಗಿನ ಮಲಾಮೆ ಮಾತೃಭಾಷೆಯ ಮುಸ್ತಾಫ ಅವರು, ಮುಸ್ಲಿಂ ಬದುಕಿನ ಹಿನ್ನೆಲೆಯಲ್ಲಿ ಅಲ್ಲಿನ ಸಂಸ್ಕೃತಿಜನ್ಯ ಶಬ್ದಗಳನ್ನೇ ಬಳಸುವುದು ಗಮನ ಸೆಳೆಯುತ್ತದೆ. ಆ ಪರಿಸರದ ಪ್ರಭಾವ ಹಲವು ಕಥೆಗಳಲ್ಲಿ ಚಿತ್ರಕಶಕ್ತಿಗೆ ಬಲ ತುಂಬುತ್ತದೆ.

ಭಾಷೆಯಲ್ಲಿ ರಮ್ಯತೆಯನ್ನು ಅಮಲಾಗಿಸುವುದಕ್ಕಿಂತ ಟಾನಿಕ್‌ ಆಗಿಸುವುದು ಮುಖ್ಯ. ಇದೇ ಪರಿಸರದಿಂದ ಬಂದು ಕನ್ನಡದ ಹೆಸರಾಂತ ಕಥೆಗಾರರಲ್ಲಿ ಒಬ್ಬರಾದ ಅಬ್ದುಲ್ ರಶೀದ್‌ ಅವರ ‘....ಎಲಿಪೆಟ್ಟರು ಎನ್ನುವ ಜಂತು’ ಕಥೆ ಇಲ್ಲಿ ನೆನಪಾಗುತ್ತದೆ. ರಮ್ಯ ಭಾಷೆ ಹೇಗೆ ಸೃಜನಶೀಲತೆಯ ಬೆರಗನ್ನೂ ಮೂಡಿಸಬಲ್ಲದು ಎನ್ನುವುದನ್ನು ಮುಸ್ತಾಫ ಹೆಚ್ಚು ಮುತುವರ್ಜಿಯಿಂದ ಗಮನಿಸಬೇಕಿದೆ. ವಿಭಿನ್ನ ನೆಲೆಯಲ್ಲಿ ಹರಡಿಕೊಳ್ಳುವ ಇಲ್ಲಿನ ಕಥೆಗಳ ವೈವಿಧ್ಯತೆಗೆ ಮನ್ನಣೆಯೋ ಎಂಬಂತೆ ಈ ಸಂಕಲನಕ್ಕೆ 2020ನೇ ಸಾಲಿನ ‘ಈ ಹೊತ್ತಿಗೆ’ ಕಥಾ ಪ್ರಶಸ್ತಿಯೂ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಭರವಸೆಯಿಂದ ಕಾಯಬಹುದಾದ ಕಥೆಗಳ ಬೀಜಗಳಂತೂ ಈ ಸಂಕಲನದಲ್ಲಿ ಕುಡಿಯೊಡೆದಿವೆ ಎನ್ನಲಡ್ಡಿಯಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT