ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಂಡಿತ್ಯದ ಆಡಂಬರವಿಲ್ಲದ ರಾಮಕಥೆ

Last Updated 14 ನವೆಂಬರ್ 2020, 19:31 IST
ಅಕ್ಷರ ಗಾತ್ರ

ಶ್ರೀ ಆನಂದರಾಮಾಯಣಂ
ಅನುವಾದ
: ಬೇಲದಕೆರೆ ಸೂರ್ಯನಾರಾಯಣಶಾಸ್ತ್ರಿ
ಪ್ರ: ಪಟ್ಟಣಗೆರೆ ರಂಗನಾಥಶಾಸ್ತ್ರಿ ಕೃಷ್ಣವೇಣಮ್ಮ ಮೆಮೊರಿಯಲ್ ಟ್ರಸ್ಟ್, ಹೆಡತಲೆ ಗ್ರಾಮ, ನಂಜನಗೂಡು ತಾಲ್ಲೂಕು, ಮೈಸೂರು ಜಿಲ್ಲೆ-571 312.
ಮೊ- 99459 39436.

ಸುಮಾರು 70 ವರ್ಷಗಳಷ್ಟು ಹಿಂದೆ (1947-51) ಜಯಚಾಮರಾಜೇಂದ್ರ ಒಡೆಯರ್‌ ಗ್ರಂಥಮಾಲೆಯಲ್ಲಿ ಪ್ರಕಟವಾಗಿದ್ದ ‘ಶ್ರೀ ಆನಂದರಾಮಾಯಣಂ’ ಕೃತಿಯ ಹಲವು ಬಿಡಿ ಸಂಪುಟಗಳನ್ನು ಇದೀಗ ಒಂದೇ ಪುಸ್ತಕವಾಗಿ ಮರುಮುದ್ರಣ ಮಾಡಲಾಗಿದೆ. ಈ ಪುಸ್ತಕದ ಹೆಸರಲ್ಲಿ ‘ಶ್ರೀಮದಾದಿಕವಿ ವಾಲ್ಮೀಕಿ ವಿರಚಿತಂ’ ಎಂಬ ಉಲ್ಲೇಖವಿದೆ. ಆದರೆ ಈ ಮಾತನ್ನು ಮುನ್ನುಡಿಯಲ್ಲಿಯೇ ಅನುವಾದಕರಾದ ಬೇಲದಕೆರೆ ಸೂರ್ಯನಾರಾಯಣಶಾಸ್ತ್ರಿ (1896-1980) ನಿರಾಕರಿಸುತ್ತಾರೆ.

‘ಈ ಆನಂದರಾಮಾಯಣವು ವಾಲ್ಮೀಕಿಯಿಂದ ರಚಿತವಾದುದೆಂದು ಹೇಳಲ್ಪಟ್ಟಿದ್ದರೂ ಶ್ರೀಮದ್ರಾಮಾಯಣವನ್ನು ವಾಲ್ಮೀಕಿ ರಚಿತವೆಂದು ಭಾವಿಸಿಕೊಂಡು ನೋಡಿದರೆ ಇವೆರಡರ ಶೈಲಿ, ಧಾಟಿ, ಕವಿತೆಯ ಸರಳತೆಗಳಲ್ಲಿ ಅಜಗಜಾಂತರವಿದ್ದು, ಈ ಆನಂದರಾಮಾಯಣವು ಬೇರೆಯವರಿಂದ ರಚಿವಾಗಿರಬಹುದು ಎನ್ನಿಸುತ್ತದೆ’ ಎಂಬುದು ಅವರು ಆಳವಾದ ಅಧ್ಯಯನದಿಂದ ಕಂಡುಕೊಂಡ ಸತ್ಯ. ಈ ಮಾತಿನಲ್ಲಿರುವ ‘ಭಾವಿಸಿಕೊಂಡು’ ಎಂಬ ಪದವೇ ಶಾಸ್ತ್ರಿಗಳ ಅಧ್ಯಯನ ಶ್ರದ್ಧೆಯ ದ್ಯೋತಕ ಎನಿಸುತ್ತದೆ.

‘ವಾಲ್ಮೀಕಿ ಎನ್ನುವ ವ್ಯಕ್ತಿಯೊಬ್ಬನಿದ್ದ, ಅವನೇ ಮೂಲ ರಾಮಾಯಣ ರಚಿಸಿದ್ದ’ ಎಂದು ಹಲವರಂತೆ ಅವರು ಇದಮಿತ್ಥಂ ಎಂದು ಹೇಳುವುದಿಲ್ಲ. ಬದಲಿಗೆ ‘ಈ ಬಗ್ಗೆ ನಾನು ಇನ್ನಷ್ಟು ತಿಳಿಯಬೇಕಿದೆ’ ಎಂಬ ವಿದ್ವತ್ ವಿನಯವನ್ನು 'ಭಾವಿಸಿಕೊಂಡು' ಎನ್ನುವ ಪದ ಬಳಕೆಯಿಂದ ಪ್ರದರ್ಶಿಸುತ್ತಾರೆ.

ಸಾರಕಾಂಡ, ಯಾತ್ರಾಕಾಂಡ, ಯಾಗಕಾಂಡ, ವಿಲಾಸಕಾಂಡ, ಜನ್ಮಕಾಂಡ, ವಿವಾಹಕಾಂಡ, ರಾಜ್ಯಕಾಂಡ, ಮನೋಹರಕಾಂಡ ಮತ್ತು ಪೂರ್ಣಕಾಂಡಗಳೆಂಬ ಒಂಬತ್ತು ಭಾಗಗಳಲ್ಲಿ109 ಸರ್ಗಗಳು, 12,252 ಶ್ಲೋಕಗಳ ಮೂಲಕ ಈ ಕೃತಿಯು ರಾಮಾಯಣದ ಕಥೆಯನ್ನು ಕಟ್ಟಿಕೊಡುತ್ತದೆ. ವಾಲ್ಮೀಕಿ ರಾಮಾಯಣದ ಅರ್ಧದಷ್ಟಿರುವ ಕೃತಿಯಲ್ಲಿ ಕಥಾ ನಿರೂಪಣೆಗೆ ಶಿವ-ಪಾರ್ವತಿಯರ ಸಂವಾದದ ತಂತ್ರ ಬಳಕೆಯಾಗಿದೆ.

ವಾಲ್ಮೀಕಿ ರಾಮಾಯಣದಲ್ಲಿರುವ ಮತ್ತು ಅಲ್ಲಿ ಉಲ್ಲೇಖವೇ ಆಗದಿರುವ ಹಲವು ಪ್ರಸಂಗಗಳು, ವಿವರಣೆಗಳು, ಕಥೆಗಳು ಇಲ್ಲಿವೆ. ತನ್ನ ಕಾಲದಲ್ಲಿ ಪ್ರಚಲಿತದಲ್ಲಿದ್ದ ಹತ್ತಾರು ರಾಮಾಯಣಗಳನ್ನು ಈ ಕವಿಯು ಹೊಸ ಕಣ್ಣಿನಲ್ಲಿ ನೋಡಲು ಯತ್ನಿಸಿರುವುದೂ ಎದ್ದು ಕಾಣುತ್ತದೆ. ರಾಮಕಥೆಯ ಹಲವು ಘಟನೆಗಳ ತಿಥಿಗಳ ಉಲ್ಲೇಖದ ಜೊತೆಗೆ, ಅಂಥ ಸಂದರ್ಭಗಳಲ್ಲಿ ಮುಖ್ಯವ್ಯಕ್ತಿಗಳ ವಯಸ್ಸು ಎಷ್ಟಾಗಿತ್ತು ಎಂಬ ವಿವರಗಳಿರುವುದು ಉಲ್ಲೇಖನೀಯ ವಿಚಾರ.

ರಾಮನ ಬಾಲಲೀಲೆಯ ಮನೋಜ್ಞ ನಿರೂಪಣೆ ಈ ಕೃತಿಯ ಮತ್ತೊಂದು ಗಮನಾರ್ಹ ಅಂಶ. ಪ್ರಸ್ತಾಪವಾಗಿರುವ ಕೃಷ್ಣನ ಬಾಲಲೀಲೆಗಳ ಛಾಯೆಗಳೂ ಈ ವಿವರಣೆಗಳಲ್ಲಿ ಗೋಚರಿಸುತ್ತವೆ. ಶ್ರೀರಾಮರಕ್ಷಾಸ್ತೋತ್ರ, ಶ್ರೀರಾಮವರ್ಣಮಾಲಾಸ್ತೋತ್ರ, ಅಗಸ್ತ್ಯಮುನಿಯ ರಾಮಸ್ತುತಿ ಸೇರಿದಂತೆ ಇಂದಿಗೂ ಪ್ರಚಲಿತದಲ್ಲಿರುವ ಹಲವು ಶ್ಲೋಕಗಳು ಇಲ್ಲಿವೆ.ಇಂದಿಗೂ ಮನೆಗಳಲ್ಲಿ ಪಾರಾಯಣ ಮಾಡುವ ಇಂಥ ಶ್ಲೋಕಗಳಿಗೆಮೂಲಕ್ಕೆ ನಿಷ್ಠವಾದ ಅರ್ಥ ತಿಳಿಯಬೇಕು ಎಂದುಕೊಳ್ಳುವವರಿಗೂ ಈ ಕೃತಿ ಉತ್ತಮ ಆಕರ.

ರಾಮನ ಸ್ವಭಾವ, ದಿನಚರಿ, ರಾಜ್ಯಪರಿಪಾಲನೆ, ದಾಂಪತ್ಯ, ಪುತ್ರವಾತ್ಸಲ್ಯ ಹೀಗೆ ರಾಮಾವತಾರವನ್ನು ಕವಿ ಮನದಣಿಯೆ ಹೊಗಳುತ್ತಾನೆ. ಆದರೆ ಇದೇ ಭರದಲ್ಲಿ ‘ರಾಮನು ತನ್ನ ರಾಜ್ಯದ ಜನರಿಗೆ ನಗಬಾರದು ಎಂದು ಶಾಸನ ಮಾಡಿದ್ದ. ಬ್ರಹ್ಮನೇ ಬಂದು ಅವನಿಗೆ ಜನರ ಕಷ್ಟ ಮನಗಾಣಿಸಬೇಕಾಯಿತು’ ಎಂಬ ಕಥೆಯೊಂದನ್ನು ಪಠ್ಯದ ಭಾಗವಾಗಿಸಿ, ತನ್ನ ದೇವರನ್ನು ಹಾಸ್ಯಾಸ್ಪದ ಎನಿಸುವ ಸಂದಿಗ್ಧಸ್ಥಿತಿಗೆ ನೂಕಿಬಿಡುತ್ತಾನೆ.

ಈ ಕೃತಿಯ ಅನುವಾದಕರಾದ ಸೂರ್ಯನಾರಾಯಣಶಾಸ್ತ್ರಿಗಳು ಸ್ವತಃ ಕನ್ನಡ ಪಂಡಿತರಾಗಿದ್ದವರು.ಅವರದು ಪಾಂಡಿತ್ಯದ ಆಡಂಬರವಿಲ್ಲದ ಸರಳ ಶೈಲಿ, ಮೂಲದ ಅರ್ಥಕ್ಕೆ, ಕವಿಯ ಭಾವಕ್ಕೆ ಲೋಪವಾಗಬಾರದು ಎಂಬ ಎಚ್ಚರ. ಪ್ರತಿಯೊಂದು ಸರ್ಗದ ಸಾರಾಂಶವನ್ನೂ ಸಂಗ್ರಹಿಸಿಕೊಟ್ಟು ಜಿಜ್ಞಾಸುಗಳಿಗೆ ದೊಡ್ಡ ಉಪಕಾರವನ್ನೇ ಮಾಡಿದ್ದಾರೆ.

ಕೃತಿಗೆ ಬರೆದಿರುವ ನಲ್ನುಡಿಯಲ್ಲಿ ಶತಾವಧಾನಿ ಗಣೇಶ್ ಅವರು ಹಲವು ದೇಶಗಳ ಸಂಸ್ಕೃತಿಗಳ ಮೇಲೆ ರಾಮಾಯಣ ಪರಂಪರೆಯ ಪ್ರಭಾವದ ಬಗ್ಗೆ ಇಣುಕುನೋಟ ನೀಡಿದ್ದಾರೆ. ಆಡುಮಾತಿನಲ್ಲಿ ಪ್ರಚಲಿತದಲ್ಲಿದ್ದ ಜಾನಪದ ರಾಮಾಯಣಗಳನ್ನು ಗ್ರಂಥಸ್ಥ ರಾಮಾಯಣಗಳಿಗೆ ಮುಖಾಮುಖಿಯಾಗಿಸಿ, ಆ ಮೂಲಕ ರಾಮಾಯಣ ಸಾಗರವನ್ನು ಮಥಿಸಿದರೆ ಎಂಥ ಅಮೃತ ಸಿಗಬಹುದು ಎಂಬುದನ್ನು ಓದುಗರಿಗೆ ಮನಗಾಣಿಸಲು ಯತ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT