ಶನಿವಾರ, ಸೆಪ್ಟೆಂಬರ್ 19, 2020
25 °C

‘ಛೌ ನೃತ್ಯದಲ್ಲಿ ವೀರ ರಸವೇ ಪ್ರಧಾನ’

ಸಂದರ್ಶನ: ಪೃಥ್ವಿರಾಜ್‌ Updated:

ಅಕ್ಷರ ಗಾತ್ರ : | |

Deccan Herald

ತಮಿಳುನಾಡಿನ ಭರತನಾಟ್ಯಂ, ಕೇರಳದ ಕಥಕ್ಕಳಿ, ಕರ್ನಾಟಕದ ಯಕ್ಷಗಾನದಂತೆ, ಬಂಗಾಳದ ಪುರುಲಿಯಾ ‘ಛೌ’ ನೃತ್ಯ ಕಲೆಯೂ ವಿಶಿಷ್ಟವಾದುದು. ಈ ನೃತ್ಯ ಕಲೆಯನ್ನು ದೇಶ–ವಿದೇಶಗಳಿಗೆ ಪರಿಚಯಿಸುವ ಕಾಯಕದಲ್ಲಿ ನಿರತರಾಗಿರುವ ಪುರುಲಿಯಾ ಛೌ ನೃತ್ಯ ಕಲಾವಿದ ಬಿರೇನ್ ಕಾಳಿಂದಿ ಈಚೆಗೆ ‘ಮೆಟ್ರೊ’ದೊಂದಿಗೆ ಮಾತನಾಡಿದರು.

ಛೌ ನೃತ್ಯ ಹೇಗಿರುತ್ತದೆ?

ರಾಮಾಯಣ, ಮಹಾಭಾರತ ಮತ್ತು ಪುರಾಣಗಳ ಪ್ರಮುಖ ಕಥೆಗಳನ್ನು ಗಾಯನ, ನೃತ್ಯದ ಮೂಲಕ ಕಣ್ಣಿಗೆ ಕಟ್ಟಿಕೊಡುವಂತೆ ಪ್ರಸ್ತುತ ಪಡಿಸುವುದೇ ಛೌ ನೃತ್ಯ. ಇದು ಜನಪದ ನೃತ್ಯ ಕಲೆ, ಇಲ್ಲಿ ವೀರ ರಸವೇ ಪ್ರಧಾನ. ದಕ್ಷ, ಹಿರಣ್ಯ ಕಶ್ಯಪ, ಮಹಿಷಾಸುರ, ರಾವಣಾಸುರ, ತಾರಕಾಸುರ, ಅಭಿಮನ್ಯು ಹೀಗೆ ಪುರಾಣಗಳಲ್ಲಿರುವ ವೀರ ಪಾತ್ರಗಳೇ ಮೂಖ್ಯ ಭೂಮಿಕೆಯನ್ನು ಪೋಷಿಸುತ್ತವೆ. ಇದು ಯುದ್ಧಕಲೆಗೆ ಪ್ರತಿಬಿಂಬದಂತೆ ಇರುತ್ತದೆ. ಯಕ್ಷಗಾನ, ಕಥಕ್ಕಳಿ ನೃತ್ಯ ಕಲಾವಿದರು ಮುಖಕ್ಕೆ ಬಣ್ಣ ಹಚ್ಚಿಕೊಳ್ಳುತ್ತಾರೆ. ಆದರೆ ಛೌ ನೃತ್ಯದಲ್ಲಿ ಪಾತ್ರಕ್ಕೆ ತಕ್ಕಂತೆ ಬಣ್ಣ ಹಚ್ಚಿಕೊಳ್ಳುವ ಅವಶ್ಯಕತೆ ಇಲ್ಲ. ಸರಿಹೊಂದುವಂತಹ ಉಡುಪನ್ನು ಮೊದಲೇ ಸಿದ್ಧಪಡಿಸಲಾಗಿರುತ್ತದೆ, ಅವನ್ನು ಧರಿಸಿದರೆ ಸಾಕು. ಈ ಉಡುಪು ಪಾತ್ರಕ್ಕೆ ತಕ್ಕಂತೆ 5ರಿಂದ 10 ಕೆ.ಜಿವರೆಗೆ ತೂಕ ಇರುತ್ತದೆ. ಯಕ್ಷಗಾನದಲ್ಲಿ ಇರುವಂತೆ ಹಿಮ್ಮೇಳವೂ ಇರುತ್ತದೆ. ಅದಕ್ಕೆ ತಕ್ಕಂತೆ ಮುಮ್ಮೇಳದಲ್ಲಿರುವ ಕಲಾವಿದರು ಹಾಡುತ್ತಾ, ಕುಣಿಯುತ್ತಾ ಆರ್ಭಟಿಸುತ್ತಾರೆ. 

ಈ ಕಲೆ ಬಂಗಾಳಕ್ಕೆ ಮಾತ್ರ ಸೀಮಿತವೆ?

ಇಲ್ಲ. ಬಂಗಾಳವೂ ಸೇರಿದಂತೆ, ಜಾರ್ಖಂಡ್ ಮತ್ತು ಒಡಿಶಾದ ಕಲಾಭಿಮಾನಿಗಳಿಗೆ ಇದರ ಬಗ್ಗೆ ಚೆನ್ನಾಗಿ ಗೊತ್ತಿದೆ. ಆಯಾ ರಾಜ್ಯದ ಸಂಸ್ಕೃತಿ ಪ್ರತಿಬಿಂಬಿಸುವಂತೆ ಸ್ವಲ್ಪ ವ್ಯತ್ಯಾಸಗಳಿರುತ್ತವೆ. ಬಂಗಾಳದಲ್ಲಿ ಪುರುಲಿಯಾ ಛೌ ಎನ್ನುತ್ತಾರೆ. ಜಾರ್ಖಂಡ್‌ನಲ್ಲಿ ಸೆರೈಕೆಲ್ಲಾ ಛೌ ಎನ್ನುತ್ತಾರೆ. ಒಡಿಶಾದಲ್ಲಿ ಮಯೂರ್‌ಬಂಜ್ ಛೌ ಎನ್ನುತ್ತಾರೆ.

lಈ ಕಲೆಯ ಕಡೆಗೆ ಆಕರ್ಷಿತರಾಗಿದ್ದು ಹೇಗೆ?

ಆಕರ್ಷಣೆ ಏನಿಲ್ಲ, ನನ್ನ ರಕ್ತದಲ್ಲೇ ಇದೆ. ನಮ್ಮ ತಾತ, ನಮ್ಮ ತಂದೆ ಸೇರಿದಂತೆ ನಮ್ಮ ಕುಟುಂಬದ ಹಲವರು ಛೌ ನೃತ್ಯ ಕಲಾವಿದರು. ಅವರು ಇದನ್ನು ಪ್ರವೃತ್ತಿಯನ್ನಾಗಿಸಿಕೊಂಡಿದ್ದರು. ನಾನು ಚಿಕ್ಕಂದಿನಿಂದಲೇ ಛೌ ನೃತ್ಯವನ್ನು ನೋಡುತ್ತಾ ಬೆಳೆದಿದ್ದೇನೆ. ಹತ್ತು ವರ್ಷಗಳಿಂದ ವೇದಿಕೆ ಮೇಲೆ ಪ್ರಸ್ತುತ ಪಡಿಸುತ್ತಿದ್ದೇನೆ.

ಈವರೆಗೆ ಎಲ್ಲೆಲ್ಲಿ ಕಾರ್ಯಕ್ರಮ ನೀಡಿದ್ದೀರಿ?

ನಮ್ಮ ದೇಶದ ಹಲವು ನಗರಗಳಷ್ಟೇ ಅಲ್ಲ, ಫ್ರಾನ್ಸ್, ಸ್ವಿಟ್ಜರ್ಲೆಂಡ್, ಜರ್ಮನಿ, ಜಪಾನ್, ಥಾಯ್ಲೆಂಡ್, ಚೀನಾ, ದಕ್ಷಿಣ ಕೊರಿಯಾ, ಅಮೆರಿಕ ಸೇರಿದಂತೆ ಈವರೆಗೆ 18 ದೇಶಗಳಿಗೆ ಈ ಕಲೆಯನ್ನು ನಮ್ಮ ತಂಡ ಪರಿಚಯಿಸಿದೆ. 

ಬೆಂಗಳೂರಿನಲ್ಲಿ ಕಾರ್ಯಕ್ರಮ ನೀಡುತ್ತಿರುವುದು ಇದೇ ಮೊದಲೇ?

ಹೌದು. ಇಷ್ಟು ದಿನಕ್ಕೆ ಬೆಂಗಳೂರಿನಲ್ಲಿ ಕಾರ್ಯಕ್ರಮ ನೀಡುವ ಅವಕಾಶ ಒದಗಿ ಬಂತು. ಅವಕಾಶ ಮಾಡಿಕೊಟ್ಟ ಆನಂದಧ್ವನಿ ಸಂಸ್ಥೆಯವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಇಲ್ಲಿ ನಡೆದ ಕೆಲವು ಪ್ರಮುಖ ಸಂಗೀತ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ನೋಡಿದ್ದೇನೆ. ಇಲ್ಲಿನವರು ಕಲಾವಿದರಿಗೆ ತುಂಬಾ ಗೌರವ ಕೊಡುತ್ತಾರೆ. ಇದಕ್ಕಿಂತ ಹೆಚ್ಚಾಗಿ ನಾವು ಏನೂ ಬಯಸುವುದಿಲ್ಲ. ಇಲ್ಲಿನ ವಾತವರಣವಂತೂ ಅದ್ಭುತ.

ಕಥಕ್ಕಳಿಯೊಂದಿಗೆ ಜುಗಲ್‌ಬಂದಿ ಹೇಗಿತ್ತು?

ಈ ರೀತಿಯ ವಿಶಿಷ್ಟ ಜುಗಲ್‌ಬಂದಿ ನೀಡುತ್ತಿರುವುದು ಎರಡನೇ ಸಲ. ಈ ಹಿಂದೆ ಹಿಮಾಚಲ ಪ್ರದೇಶದಲ್ಲಿ ಒಮ್ಮೆ ಕಥಕ್ಕಳಿ–ಛೌ ನೃತ್ಯದ ಜುಗಲ್‌ಬಂದಿಯಲ್ಲಿ ಭಾಗಿಯಾಗಿದ್ದೆ. ಕಥಕ್ಕಳಿ ಸಾಂಪ್ರದಾಯಿಕ ಕಲೆಯಾದರೆ, ಛೌ ಜನಪದ ನೃತ್ಯ ಹೀಗಾಗಿ ಪ್ರೇಕ್ಷಕರಿಗೆ ವಿಶಿಷ್ಟ ಎನಿಸುತ್ತದೆ. ವಿಶೇಷವೆಂದರೆ ಎರಡೂ ಭಿನ್ನ ನೃತ್ಯಗಳಾದರೂ ಕೆಲವು ಸಾಮ್ಯತೆಗಳಿವೆ. ಈ ಜುಗಲ್‌ಬಂದಿ ಶಿವ ಪುರಾಣದಲ್ಲಿ ಬರುವ ದಕ್ಷಯಜ್ಞ ಕಥೆಯನ್ನಾಧರಿಸಿತ್ತು.

ಛೌ ನೃತ್ಯಕ್ಕೆ ಪ್ರೋತ್ಸಾಹ ಹೇಗಿದೆ?

ಹಿಂದೆ ಹಳ್ಳಿಗಳಿಗೆ ಮಾತ್ರ ಸೀಮಿತವಾಗಿದ್ದ ಈ ನೃತ್ಯ ಈಗ ನಗರ ಪ್ರದೇಶಗಳಿಗೂ ವಿಸ್ತರಿಸಿದೆ. ಕಲೆ ಉಳಿಯಬೇಕೆಂದರೆ ಸರ್ಕಾರದ ಪ್ರೋತ್ಸಾಹ ಅಗತ್ಯ. ಪಶ್ಚಿಮ ಬಂಗಾಳ ಸರ್ಕಾರ ಈ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಂಡಿದೆ. ಕಲಿಯಲು ಇಚ್ಛಿಸುವವರಿಗೆ ಶಿಷ್ಯವೇತನ ನೀಡಿ ಆರ್ಥಿಕ ಸಹಾಯ ಮಾಡುತ್ತಿದೆ. ನಾವು ಕೂಡ ‘ಬಾಂಗ್ಲಾನಾಟಕ್‌.ಕಾಂ’ ಎಂಬ ಸಂಸ್ಥೆ ಮೂಲಕ ಬಂಗಾಳದ ಕಲೆಗಳನ್ನು ಉಳಿಸಿ, ಬೆಳೆಸುವ ಕೆಲಸ ಮಾಡುತ್ತಿದ್ದೇವೆ. ಈವರೆಗೆ ಸುಮಾರು 250 ವಿದ್ಯಾರ್ಥಿಗಳಿಗೆ ಛೌ ತರಬೇತಿ ನೀಡಿದ್ದೇನೆ. ಈ ಹಿಂದೆ ವರ್ಷಕ್ಕೆ ಒಂದು ಕಾರ್ಯಕ್ರಮ ನೀಡುತ್ತಿದ್ದೆ. ಈಗ ತಿಂಗಳಲ್ಲಿ 15 ಕಾರ್ಯಕ್ರಮ ನೀಡುತ್ತಿದ್ದೇನೆ. ಇನ್ನು ಚೈತ್ರ, ವೈಶಾಖ, ಜೈಷ್ಠ ಮಾಸಗಳಲ್ಲಿ ವಿಶೇಷ ಸಂಗೀತ ಉತ್ಸವ ನಡೆಯುತ್ತವೆ. ಇಂತಹ ಸಂದರ್ಭದಲ್ಲಿ ನಿತ್ಯ ಕಾರ್ಯಕ್ರಮವಿರುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು