ಸೋಮವಾರ, ಮಾರ್ಚ್ 30, 2020
19 °C

ಪುಟಾಣಿ ಏಕಪಾತ್ರಾಭಿನಯ ಪ್ರೀತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಏಕಪಾತ್ರಾಭಿನಯವೆಂದರೆ ಒಬ್ಬನೇ ವ್ಯಕ್ತಿ ವೇದಿಕೆಯ ಮೇಲೆ ಇಡೀ ಪ್ರಸಂಗವನ್ನು ನಿರ್ವಹಿಸಬೇಕಾಗುತ್ತದೆ. ಕೆಲವೊಮ್ಮೆ ಪ್ರಸಂಗವನ್ನು ಒಂದು ಪಾತ್ರ ಅಥವಾ ಎರಡು ಪಾತ್ರಗಳ ಮೂಲಕ ಪ್ರಸ್ತುತಪಡಿಸಬೇಕಾಗುತ್ತದೆ. ಇದಕ್ಕೆ ನೆನಪಿನ ಶಕ್ತಿ, ನಟನೆ, ಆಂಗಿಕ ಅಭಿನಯ ಅಗತ್ಯ. ಮಲ್ಲೇಶ್ವರದ ಪುಟಾಣಿ ಭ್ರಮರಾ ಸಂಜೀವ ಶೆಟ್ಟರ್‌ ಏಕಪಾತ್ರಾಭಿನಯ ಹಾಗೂ ಕಥೆ ಹೇಳುವ ಸ್ಪರ್ಧೆಗಳಲ್ಲಿ ಈಗಾಗಲೇ ಅನೇಕ ಪ್ರಶಸ್ತಿಗಳನ್ನು ಗಿಟ್ಟಿಸಿಕೊಂಡು ಮೆಚ್ಚುಗೆಗೆ ಪಾತ್ರವಾಗಿದ್ದಾಳೆ.

ಭ್ರಮರಾ ಮಲ್ಲೇಶ್ವರದ ಎಂ.ಇ.ಎಸ್‌ ಕಿಶೋರ ಕೇಂದ್ರದಲ್ಲಿ 4ನೇ ತರಗತಿ ಓದುತ್ತಿದ್ದಾಳೆ. ಮೂರು ವರ್ಷದವಳಿದ್ದಾಗಲೇ ಭ್ರಮರಾ ಏಕಪಾತ್ರಾಭಿನಯದಲ್ಲಿ ತೊಡಗಿಸಿಕೊಂಡಿದ್ದಾಳೆ. ಆದರೆ ಇದಕ್ಕಾಗಿ ಯಾವುದೇ ತರಬೇತಿ ಪಡೆದುಕೊಂಡಿಲ್ಲ. ಅಮ್ಮ ಜಯಲಕ್ಷ್ಮಿ ಶೆಟ್ಟರ್‌ ಅವರೇ ಮಗಳಿಗೆ ಮಾರ್ಗದರ್ಶನ, ಸಲಹೆ ನೀಡುತ್ತಾರೆ. ‘ಮಗಳ ನೆನಪಿನ ಶಕ್ತಿ ಅದ್ಭುತ. ಒಂದು ಬಾರಿ ನೊಡಿದ್ದನ್ನು, ಹೇಳಿದ್ದನ್ನು ಸರಿಯಾಗಿ ಗ್ರಹಿಸಿಕೊಳ್ಳುತ್ತಾಳೆ. ಏಕಪಾತ್ರಾಭಿನಯಕ್ಕೆ ಮೊದಲು ಅವಳೇ ಪಾತ್ರ, ಕಥೆ ಬಗ್ಗೆ ಅರ್ಥ ಮಾಡಿಕೊಂಡು ಕಲಿಯುತ್ತಾಳೆ. ನಾವು ಅವಳ ಮೇಲೆ ಎಂದಿಗೂ ಒತ್ತಡ ಹಾಕುವುದಿಲ್ಲ’ ಎಂದು ಮಗಳ ಬಗ್ಗೆ ಹೆಮ್ಮೆ ಪಡುತ್ತಾರೆ ತಂದೆ ಸಂಜೀವ್‌ ಶೆಟ್ಟರ್‌. 

ನಗರದ ಅನೇಕ ಸಂಘ– ಸಂಸ್ಥೆಗಳು ಏರ್ಪಡಿಸಿದ ಏಕಪಾತ್ರಾಭಿನಯ ಮತ್ತು ಕಥಾಸ್ಪರ್ಧೆಗಳಲ್ಲಿ ಭ್ರಮರಾ ಭಾಗವಹಿಸಿ ಪ್ರಥಮ ಸ್ಥಾನಗಳನ್ನು ಪಡೆದುಕೊಂಡಿದ್ದಾಳೆ. ಶಿಕ್ಷಣ ಇಲಾಖೆ ಪ್ರತಿವರ್ಷ ನಡೆಸುವ ಮಕ್ಕಳ ಸ್ಪರ್ಧೆಗಳಲ್ಲಿ ಕಳೆದ ಮೂರು ವರ್ಷಗಳಿಂದ ಭ್ರಮರಾಳಿಗೇ ಪ್ರಥಮ ಸ್ಥಾನ. ಕಿತ್ತೂರು ರಾಣಿ ಚೆನ್ನಮ್ಮ ಜಯಂತ್ಯೋತ್ಸವದಲ್ಲಿ ಭ್ರಮರಾ ವೀರ ಮಾತೆ ಕಿತ್ತೂರು ರಾಣಿ  ಚೆನ್ನಮ್ಮ ವೇಷವನ್ನು ಧರಿಸಿ ಉತ್ಸವದಲ್ಲಿ ಭಾಗವಹಿಸಿದ್ದಳು. ಇಲ್ಲಿ ಅವರ ವೇಷ ಹಾಗೂ ಪ್ರತಿಭೆಯನ್ನು ಮೆಚ್ಚಿ, ಕಿತ್ತೂರು ರಾಣಿ ಚೆನ್ನಮ್ಮ ಖಡ್ಗವನ್ನು ಉಡುಗೊರೆಯಾಗಿ ಪಡೆದುಕೊಂಡಿದ್ದಳು. ಇದಲ್ಲದೇ  ಗೀತಾ ಗೋವಿಂದ ಸಂಸ್ಕೃತ ಸಂಘ 2016ರಲ್ಲಿ ಆಯೋಜಿಸಿದ ಏಕಪಾತ್ರಾಭಿನಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, 2017ರಲ್ಲಿ ರಾಮನ ಭಕ್ತೆ ಶಬರಿ ಪಾತ್ರಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ. 

ತಾಯಿ ಭುವನೇಶ್ವರಿ ಪಾತ್ರ, ಹಳ್ಳಿ ಹುಡುಗಿ, ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ, ಶೂರ್ಪನಖಿ, ಜಗಜ್ಯೋತಿ ಬಸವೇಶ್ವರ ಪಾತ್ರ ಸೇರಿದಂತೆ ದೇಶಭಕ್ತರು, ಸ್ವಾತಂತ್ರ್ಯ ಹೋರಾಟಗಾರರು, ಪೌರಾಣಿಕ ಪಾತ್ರಗಳನ್ನೂ ನಿರ್ವಹಿಸಿ ಮೆಚ್ಚುಗೆ ಪಡೆದಿದ್ದಾಳೆ. ಕಥೆ ಹೇಳುವುದು ಮತ್ತು ಕಂಠಪಾಠ, ಆಶುಭಾಷಣ ಸ್ಪರ್ಧೆಗಳಲ್ಲಿ ಭಾಗವಹಿಸಿ ವಲಯ, ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಗಳಿಸಿರುತ್ತಾಳೆ ಈ ಪುಟಾಣಿ. ಶಾಲಾ ಚಟುವಟಿಕೆ, ಪಠ್ಯ ವಿಷಯಗಳು ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಮುಂದಿದ್ದಾಳೆ ಎಂದು ಸಂಜೀವ್‌ ಶೆಟ್ಟರ್‌ ಖುಷಿ ವ್ಯಕ್ತಪಡಿಸುತ್ತಾರೆ. 

ಭ್ರಮರಾ ಕಳೆದ ವರ್ಷ ಮಕ್ಕಳ ದಿನಾಚರಣೆಯಂದು 91.1 ರೇಡಿಯೋ ಸಿಟಿಯಲ್ಲಿ ಒಂದು ದಿನದ ರೇಡಿಯೋ ಜಾಕಿಯಾಗಿಯೂ ಕಾರ್ಯನಿರ್ವಹಿಸಿದ್ದಳು. ಈಗಾಗಲೇ ಈ ಪುಟಾಣಿ ಪ್ರತಿಭೆಯನ್ನು ಮೆಚ್ಚಿ ಅನೇಕ ಪ್ರಶಸ್ತಿ, ಪುರಸ್ಕಾರಗಳು ಸಂದಿವೆ. ಬಸವೇಶ್ವರ ನಗರದ ಮಾಸ್ಟರ್‌ ಕಿಡ್ಸ್‌ ಭ್ರಮರಾಳಿಗೆ ‘ಕಿತ್ತೂರು ರಾಣಿ ಚೆನ್ನಮ್ಮ’ ಎಂಬ ಬಿರುದನ್ನು ಕೊಟ್ಟು ಸನ್ಮಾನಿಸಿದ್ದಾರೆ. ಪತ್ರಕರ್ತರ ಸಂಘದಿಂದ ‘ಸಿದ್ದಯ್ಯ ಪುರಾಣಿಕ್‌ ಪ್ರಶಸ್ತಿ’ಯೂ ಭ್ರಮರಾಳಿಗೆ ದೊರಕಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)