ಗುರುವಾರ , ಆಗಸ್ಟ್ 18, 2022
23 °C

‘ಸ್ವಿಸ್‌ನಲ್ಲಿ ನೃತ್ಯ ದೀಕ್ಷೆ ಪಡೆದವಳು ನಾನು...’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಭಾರತೀಯ ಸಾಂಸ್ಕೃತಿಕ ಸಿರಿವಂತಿಕೆಯನ್ನು ಜಗತ್ತಿಗೆ ಪರಿಚಯಿಸಿದ ಕಲಾ ಪರಂಪರೆಯಲ್ಲಿ ನೃತ್ಯ ಕಲಾವಿದೆ ಅಮಲಾ ಶಂಕರ್‌ ಅವರದು ಬಹುದೊಡ್ಡ ಹೆಸರು. ಶತಾಯುಷಿಯಾಗಿದ್ದ ಈ ಕಲಾವಿದೆ ಕಳೆದ ವಾರವಷ್ಟೇ ಅಗಲಿದ್ದಾರೆ. ಕೆಲಕಾಲ ಕೋಲ್ಕತ್ತದಲ್ಲಿ ವಾಸವಿದ್ದ ಲೇಖಕಿ ಜ್ಯೋತ್ಸ್ನಾ ಕಾಮತ್‌ ಅವರು ಅಮಲಾ ದೀದಿಯವರನ್ನು 2–3 ಬಾರಿ ಭೇಟಿ ಮಾಡಿದ್ದರು. ಆ ಸಂದರ್ಭದಲ್ಲೆಲ್ಲ ಸಂದರ್ಶನದ ಅಧಿಕೃತ ಚೌಕಟ್ಟಿನೊಳಗೆ ಮಾತುಕತೆ ನಡೆಯದಿದ್ದರೂ ಜ್ಯೋತ್ಸ್ನಾ ಅವರು, ಅಮಲಾ ಅವರಿಗೆ ಕೆಲವು ಪ್ರಶ್ನೆಗಳನ್ನು ಹಾಕಿ, ಉತ್ತರಗಳನ್ನು ಟಿಪ್ಪಣಿ ಮಾಡಿಕೊಂಡಿದ್ದರು. ಆ ಮಹಾನ್‌ ಕಲಾವಿದೆಯ ನಿರ್ಗಮನದ ಈ ಹೊತ್ತಿನಲ್ಲಿ ಅಂದಿನ ಟಿಪ್ಪಣಿಗಳೇ ಇಲ್ಲಿ ಈ ಸಂದರ್ಶನದ ರೂಪ ತಾಳಿವೆ...   

ಜಗತ್ತಿನ ಮಹಾನ್‌ ನೃತ್ಯ ಕಲಾವಿದೆಯಾಗಿ ಬೆಳೆದವರು ನೀವು. ನಿಮಗೆ ನೃತ್ಯದಲ್ಲಿ ಅಷ್ಟೊಂದು ಆಸಕ್ತಿ ಮೂಡಿದ್ದು ಹೇಗೆ ದೀದಿ?

ನನ್ನ ತಂದೆ ಅಕ್ಷಯಕುಮಾರ್‌ ನಂದಿ. ಅವರೊಬ್ಬ ವ್ಯಾಪಾರಸ್ಥರಾಗಿದ್ದರು. ನಾನು ಹನ್ನೊಂದು ವರ್ಷದವಳಿದ್ದಾಗ ಯುರೋಪ್‌ ಪ್ರವಾಸಕ್ಕೆ ತಮ್ಮೊಂದಿಗೆ ನನ್ನನ್ನೂ ಕರೆದೊಯ್ದಿದ್ದರು. ನಮ್ಮ ಪ್ಯಾರಿಸ್‍ ವಾಸದಲ್ಲಿ ಉದಯ ಶಂಕರರ ನೃತ್ಯ ತಂಡದ ಪರಿಚಯವಾಯಿತು. ಅವರ ತಂಡದಲ್ಲಿ ವಿಷ್ಣುದಾಸ ಶಿರಾಲಿ, ದಿನಕರ ಅಮ್ಮೆಂಬಳ (ಇಬ್ಬರೂ ಕರ್ನಾಟಕದವರು) ಇದ್ದರು. ಸಿತಾರ್‌ ವಾದಕ ರವಿಶಂಕರ್ ಅವರೂ ಇದ್ದರು. ನನ್ನ ತಂದೆಯವರಿಗೆ ಸಂಗೀತ-ನೃತ್ಯದ ಒಲವು ತುಂಬ ಜಾಸ್ತಿ. ಹೀಗಾಗಿ ಪ್ಯಾರಿಸ್‌ನಲ್ಲಿ ಉದಯ‌ ಶಂಕರ್‌ ಅವರ ಹಲವು ಪ್ರಯೋಗಗಳನ್ನು ನೋಡಿದೆವು.

ಪೂರ್ವಯೋಜನೆಯಂತೆ ಸ್ವಿಟ್ಸರ್ಲೆಂಡಿನಲ್ಲಿ ನನ್ನ ಶಿಕ್ಷಣದ ವ್ಯವಸ್ಥೆ ಆಗಿತ್ತು. ಅಲ್ಲಿ ಸೇರ್ಪಡೆಯಾದ ಕೆಲದಿನಗಳಲ್ಲಿಯೇ ಉದಯ‌ ಶಂಕರ್‌ ಅವರ ತಂಡವೂ ಬಂದು ಇಳಿಯಿತು. ಏಕೋ ಏನೋ ಅವರ ಸಂಗೀತ ನೃತ್ಯ ಪ್ರಯೋಗಗಳ ಸಮ್ಮೋಹಿನಿಗೆ ಒಳಗಾದೆ. ಅವರ ಕುಟುಂಬದ ಪರಿಚಯವೂ ಆಯಿತು. ಮಗನ ಜೊತೆಗೇ ಇರುತ್ತಿದ್ದ ಉದಯ‌ ಶಂಕರ್‌ ಅವರ ತಾಯಿ ನನ್ನನ್ನು ತುಂಬಾ ಹಚ್ಚಿಕೊಂಡರು. ನೃತ್ಯ ತರಬೇತಿಗಳನ್ನು ಹೆಚ್ಚು ಆಸ್ಥೆಯಿಂದ ಗಮನಿಸುತ್ತ ನಾನು ಯುರೋಪಿಗೆ ಹೋದ ಉದ್ದೇಶವನ್ನೇ ಮರೆತುಬಿಟ್ಟೆ! ನನ್ನ ಆಸಕ್ತಿಯನ್ನು ಗಮನಿಸಿದ ಉದಯ‌ ಶಂಕರರು ಒಂದುದಿನ, ನೃತ್ಯ ಕಲಿಯುವ ಮನಸ್ಸಿದೆಯೇ ಎಂದು ಕೇಳಿದರು. ಹಿಂದೆಮುಂದೆ ಯೋಚಿಸದೇ ಹೌದೆಂದೆ. ನನಗೆ ವಿಲಾಯತಿ ಶಿಕ್ಷಣ ಕೊಡಿಸಬೇಕೆಂದಿದ್ದ ತಂದೆಯವರಿಗೆ ಆದ ನಿರಾಸೆ ಎಷ್ಟಿತ್ತೋ ನಾನರಿಯೆ.

ನೃತ್ಯ ಕಲಾ ಜಗತ್ತಿನಲ್ಲಿ ಸಾಧನೆಯ ಮೇರು ಪರ್ವತವನ್ನೇ ಏರಿ ನಿಲ್ಲಲು ಸಾಧ್ಯವಾಗಿದ್ದು ಹೇಗೆ?

 ಉದಯ‌ ಶಂಕರ್‌ ಅವರಲ್ಲಿ ಶಿಷ್ಯತ್ವ ಪಡೆದ ಮೇಲೆ ನೃತ್ಯವೇ ನನ್ನ ಕಲಿಕೆ, ಆರಾಧನೆ, ಅಷ್ಟೇ ಏಕೆ? ಜೀವದುಸಿರಾಗಿ ಪರಿಣಮಿಸಿತು. ದುಡ್ಡಿನ ಕೊರತೆಯೆಂದರೆ ಏನು ಎಂಬುದನ್ನು ಅರಿಯದಾಕೆಗೆ ಅದು ಗೌಣವಾಗಿಯೇ ಕಾಣತೊಡಗಿತು! ಪ್ರಸಿದ್ಧಿ–ಪ್ರಚಾರಗಳ ಮಹತ್ವ ಅರಿಯುವ ವಯಸ್ಸು ಆದಾಗಿರಲಿಲ್ಲ. ನೃತ್ಯದಲ್ಲಿ ಬಣ್ಣಿಸಲಾಗದ ತಲ್ಲೀನತೆ ಅನುಭವಿಸತೊಡಗಿದೆ. ಬರುಬರುತ್ತ ಅದರ ತರಬೇತಿಯಲ್ಲಿ ಪೂರ್ಣತಃ ನನ್ನನ್ನು ಅರ್ಪಿಸಿಕೊಂಡೆ. ಕಲೆಗಾಗಿಯೇ ತಮ್ಮನ್ನು ಅರ್ಪಿಸಿಕೊಂಡ, ವಯಸ್ಸಿನಲ್ಲಿ ಸಾಕಷ್ಟು ಹಿರಿಯರೂ ಆಗಿದ್ದ ನಾಟ್ಯಾಚಾರ್ಯರ ಮನೆಯ ಒಬ್ಬ ಸದಸ್ಯಳಂತೆ ಆಗಿಹೋಗಿದ್ದೆ. ಅವರ ಧರ್ಮಪತ್ನಿಯೂ ಆಗುವ ಯೋಗ ಮುಂದೆ ಘಟಿಸಿತು. ಮುಂದಿನ ಎಲ್ಲವೂ ದೈವದತ್ತವಾಗಿ ತಂತಾನೇ ಒಲಿದುಬಂತು.

ಬ್ಯಾಲೆ ನೃತ್ಯದಲ್ಲೂ ಸಿದ್ಧಿಯನ್ನು ಪಡೆದವರು ನೀವು. ಅದನ್ನು ನೀವು ಕಲಿತಿದ್ದು ಎಲ್ಲಿ?

ಕಾರ್ಯಕ್ರಮ ನೀಡಲು ನಾನು ಹಲವು ದೇಶಗಳನ್ನು ಸುತ್ತಿದ್ದೇನೆ. ಹಾಗೆಯೇ ರಷ್ಯಾಕ್ಕೂ ಹೋಗಿದ್ದೆ. ಹಾಗೆ ಹೋದಾಗ ಬೊಲ್‍ಶೊಯ್ ಮತ್ತು ಕಿರೋವ್‌ಗಳಲ್ಲಿ (ಆಗಿನ ಸೋವಿಯತ್ ರಷ್ಯಾದ ಪ್ರಸಿದ್ಧ ನಾಟ್ಯಮಂದಿರಗಳು) ನಾನು ಬ್ಯಾಲೆ ಕಲಿತೆ. ಅಲ್ಲದೆ, ಇನ್ನೂ ಎರಡು ಜನಪದ ನೃತ್ಯ ಪ್ರಕಾರಗಳನ್ನೂ ಕಲಿಯುವ ಯೋಗ ಕೂಡ ನನಗೆ ಅಲ್ಲಿ ಸಿಕ್ಕಿತು.

ನಿಮ್ಮ ಪ್ರದರ್ಶನಗಳ ಅನುಭವಗಳ ಕುರಿತು ಹೇಳಿ ದೀದಿ...

ವಿದೇಶಗಳಿಗೆ ವರ್ಷಕ್ಕೆ ಎರಡು ಬಾರಿ ಹೋಗುವಂತಾದರೆ ಹೆಚ್ಚು. ದೇಶದಲ್ಲಿಯೇ ಆಗೀಗ ಆಮಂತ್ರಣ ಬರುವುದು ಇದೆ. ನನಗೆ ಫ್ಯಾಕ್ಟರಿಗಳ ಚಟುವಟಿಕೆ, ಚಿಕ್ಕದೊಡ್ಡ ಮೆಷಿನರಿ, ಗಣಿಗಾರಿಕೆಯಂತಹ ದೃಶ್ಯಗಳ ನಾದ-ನಿನಾದ, ತಾಳಬದ್ಧ ಸದ್ದು, ನೆಳಲು-ಬೆಳಕಿನೊಂದಿಗೆ ನೃತ್ಯಸಂಯೋಜನೆ ಮಾಡುವುದು ತುಂಬಾ ಇಷ್ಟ. ಆದರೆ, ಇಂಥ ಅವಕಾಶಗಳೇ ಇಲ್ಲ. ಈಗ ದುರ್ಗಾಪುರಕ್ಕೆ ಹೋಗಬೇಕಾಗಿದೆ. ತುಲಸಿ ರಾಮಾಯಣದ ಘಟನೆಯ ಪ್ರದರ್ಶನವನ್ನು ಸೂಚಿಸಿದ್ದಾರೆ. ಎಲ್ಲರಿಗೂ ಪಾರಂಪರಿಕ ಕಥೆಗಳೇ ಹೆಚ್ಚಾಗಿ ಬೇಕು.

ಈಗಿನ ಮಕ್ಕಳು ನೃತ್ಯದ ಅಭ್ಯಾಸವನ್ನು ಹೇಗೆ ಮಾಡುತ್ತವೆ? ಅವರಲ್ಲಿ ಕಲಿಕೆಯ ಆಸಕ್ತಿ ಇದೆಯೇ?


ಅಮಲಾ ಶಂಕರ್.... ಯೌವನದ ದಿನಗಳಲ್ಲಿ

ತುಂಬಾ ಸುಧಾರಿಸಿದ ತಾಯ್ತಂದೆಗಳ ಮಕ್ಕಳಿಗೆ ಪಾಠಹೇಳುವುದು ಕಷ್ಟ. ಅವರಿಗೆ ಬಂಗಾಲಿ ಭಾಷೆ ಬರುವುದಿಲ್ಲ. ಈ ಭಾಷೆಯ ಕಾಗುಣಿತದ ಪರಿಚಯವೇ ಅವರಿಗಿಲ್ಲ. ಪಾಠಗಳ ಹೆಸರುಗಳೂ ಅರ್ಥ ಆಗುವುದಿಲ್ಲ. ನನ್ನ ವ್ಯಥೆಯೆಂದರೆ ದೊಡ್ಡ ಹುದ್ದೆಯಲ್ಲಿರುವ, ಪಾಶ್ಚಾತ್ಯ ಜೀವನ ರೂಢಿಸಿಕೊಂಡ ಈ ಪಾಲಕರ ಮಕ್ಕಳು ತಮ್ಮದೇ ಭಾಷೆ, ನೆರೆ ರಾಜ್ಯಗಳ ಭಾಷೆ, ರೀತಿ-ರಿವಾಜು ಸಾಂಘಿಕ ಜೀವನ, ಗ್ರಾಮೀಣ ನೋಟ, ಪಶು-ಪಕ್ಷಿ, ಒಟ್ಟಾರೆ ನಿಸರ್ಗ ಸಾನ್ನಿಧ್ಯದಿಂದ ವಂಚಿತರಾಗಿದ್ದಾರೆ. ಈ ಮಹಾನಗರಗಳಲ್ಲಿ ಫ್ಲ್ಯಾಟ್ ಜೀವನ ಸಾಮಾನ್ಯವಷ್ಟೆ? ಭಿನ್ನಭಾಷೆ ಜನಾಂಗದವರು ಅಕ್ಕ-ಪಕ್ಕದಲ್ಲೇ ವಾಸಿಸುತ್ತಿದ್ದರೂ ಅವರ ರೀತಿ-ರಿವಾಜುಗಳ ಪರಿಚಯ ಮಕ್ಕಳಿಗಿರುವುದಿಲ್ಲ. ಇಂಗ್ಲಿಷ್ ಮಾಧ್ಯಮ ಶಾಲೆಯೊಂದೇ ಅವರ ಯಾವತ್ತೂ ಚಟುವಟಿಕೆಗಳ ಸ್ಥಾನ.

ಸೃಜನಶೀಲತೆಗೆ ಪ್ರಾಧಾನ್ಯವಿರುವ ನೃತ್ಯಕಲೆಗೆ ಜ್ಞಾನವೂ ಬೇಕು. ಬರೀ ಯಾಂತ್ರಿಕವಾಗಿ ಕೈ, ಕಾಲು-ಕಣ್ಣುಗಳ ಚಲನೆ ಕಲಿಸಿದರೆ ಸಾಕಾಗದು. ನೃತ್ಯದ ಅಭ್ಯಾಸಕ್ಕೆ ಏಕಾಗ್ರತೆ ಬೇಕು. ಸಹನೆ ಬೇಕು. ದೈಹಿಕ ತ್ರಾಣದೊಂದಿಗೆ ಸ್ಮರಣಶಕ್ತಿ, ಕಲ್ಪನಾಶಕ್ತಿಗಳನ್ನು ಬೆಳೆಸಲೂ ನೃತ್ಯದ ಏಕಾಗ್ರತೆ ಸಹಾಯ ಮಾಡುತ್ತದೆ. ಅದರಿಂದ ಇತರ ರಂಗಗಳಲ್ಲೂ ಯಶಸ್ಸು ಸಾಧಿಸಲು ಸಾಧ್ಯವಿದೆ.

ನಮ್ಮ ಪ್ರಾಚೀನ ನೃತ್ಯ ಪರಂಪರೆಗೆ ಭವಿಷ್ಯವುಂಟೇ ?

ಈ ಪ್ರಶ್ನೆ ನನ್ನನ್ನೂ ಕಾಡಿದ್ದಿದೆ. ಹಿಂದಿನ ರಾಜಾಶ್ರಯ ತಪ್ಪಿದ ಬಳಿಕ, ಸರ್ಕಾರದ ನಿರ್ಲಕ್ಷ್ಯದಲ್ಲಿ ಲಲಿತಕಲೆಗಳು ಬೆಳೆಯಬೇಕಾದದ್ದು, ಮಧ್ಯಮ ವರ್ಗದವರ ಒಲವು, ಪ್ರೋತ್ಸಾಹದಿಂದ ಮಾತ್ರ. ಆದರೆ, ಅವರೂ ಇತ್ತೀಚೆಗೆ ಪಾಶ್ಚಾತ್ಯ ಸಂಗೀತ, ನೃತ್ಯ ವಾದ್ಯ-ವಾದನಗಳತ್ತ ಆಕರ್ಷಿತರಾಗುತ್ತಿದ್ದಾರೆ. ನಮಗೆಲ್ಲ ಬ್ಯಾಲೆ ರೂಪ ಇಷ್ಟವಾದರೂ, ಪಾಶ್ಚಾತ್ಯ ವಾದ್ಯವೃಂದಗಳು ತುಂಬ ಖುಷಿಕೊಡುವಂತಿದ್ದರೂ, ಈ ನೆಲದ ಅಂಶಗಳನ್ನು ಉಳಿಸಿಕೊಂಡು, ಹೊಸದನ್ನು ಹೊಂದಿಸಿಕೊಳ್ಳುವ ಪ್ರಾಯೋಗಿಕ ಮನೋಧರ್ಮ ಬೇಕು. ಈಗ ಭರದಿಂದ ಬದಲಾಗುತ್ತಿರುವ ಪಾಶ್ಚಾತ್ಯ ಪ್ರಭಾಛಾಯೆಯ ರಾಜಕಾರಣ, ನಮ್ಮ ಸಾಂಸ್ಕೃತಿಕ ಜೀವನದ ಮೇಲೆ ಹೆಚ್ಚೆಚ್ಚು ಪ್ರಭಾವ ಬೀರಲಾರಂಭಿಸಿದೆ. ಧಾರಾಳ ನೆರವು ಇಲ್ಲದಿದ್ದರೆ ಈ ಕಲೆಗಳು ಕ್ರಮೇಣ ಮಣ್ಣುಗೂಡುವ ಸಾಧ್ಯತೆಯಿದೆ. 

ಕೋಲ್ಕತ್ತದ ಆ ನೃತ್ಯಕೂಟದಲ್ಲಿ (ಸಂದರ್ಶಕಿಯ ಕೆಲ ಟಿಪ್ಪಣಿಗಳು)

ಪಾಶ್ಚಾತ್ಯ ಜಗತ್ತಿಗೆ ಭಾರತೀಯ ನೃತ್ಯಪರಂಪರೆಯ ಭವ್ಯತೆಯನ್ನು ಪ್ರತ್ಯಕ್ಷರೂಪದಲ್ಲಿ ಮಾಡಿಕೊಟ್ಟ ಹಿರಿಮೆ ನಟವರರೆಂದು ಖ್ಯಾತಿ ಪಡೆದಿದ್ದ ಉದಯ ಶಂಕರ್‌ ಅವರದು (1900-1977). ಸಿತಾರ್‌ ಮಾಂತ್ರಿಕ, ಭಾರತರತ್ನ ರವಿಶಂಕರ್‌ ಅವರ ಹಿರಿಯ ಸೋದರ ಅವರು. ಸರ್ಕಾರದ ಎಳ್ಳಷ್ಟೂ ಧನಸಹಾಯ ಲಭ್ಯವಿಲ್ಲದ ಸಮಯದಲ್ಲಿ ಭಾರತೀಯ ಕಲಾವಿದರ ತಂಡ ಕಟ್ಟಿಕೊಂಡು, ಯುರೋಪಿನ ಚಿಕ್ಕದೊಡ್ಡ ದೇಶಗಳಲ್ಲಿ ಸಂಚರಿಸುತ್ತಾ ಭಾರತೀಯ ನೃತ್ಯದ ಜೊತೆಗೆ, ಸಂಗೀತದ ಪ್ರಾಚೀನತೆ ಮತ್ತು ಅಷ್ಟಿಷ್ಟು ಸ್ಥಿತವೈಭವದ, ಪ್ರಾಯೋಗಿಕ ಪಾಠಗಳನ್ನೂ ಕೊಡಮಾಡಿದವರು ಉದಯ ಶಂಕರರು.

ತಮ್ಮ ಜೀವಿತದ ಕೊನೆಯ ವರ್ಷಗಳಲ್ಲಿ ಕೋಲ್ಕತ್ತದಲ್ಲಿ ಕಲಾಶಾಲೆಯೊಂದನ್ನು ಅವರು ಸ್ಥಾಪಿಸಿದರು. ಆ ಕಲಾಶಾಲೆಯನ್ನು ಮುಂದೆ ನಡೆಸಿದವರು ಉದಯ ಶಂಕರ್‌ ಅವರ ಪತ್ನಿ ಅಮಲಾ ಅವರು. ಅವರೂ ಮಹಾನ್‌ ಕಲಾವಿದೆ. ‘ಕಲ್ಪನಾ’ ಚಿತ್ರದಲ್ಲಿ ಅದ್ಭುತವಾಗಿ ನಟಿಸಿದವರು. ಉದಯ ಶಂಕರ್‌ ಅವರು ಮಾಡಿದ ನೃತ್ಯ ಸಂಯೋಜನೆಯಲ್ಲಿ ರಾಧೆಯಾಗಿ, ಸೀತೆಯಾಗಿ, ಪೌರಾಣಿಕ ಪಾತ್ರಗಳಾಗಿ ಅಮಲಾ ದೀದಿಯ ನೃತ್ಯವೈಭವ ಅದ್ಭುತ. ಈ ಅಪರೂಪದ ಕಲಾವಿದೆಯನ್ನು ಭೇಟಿಯಾಗಲು ಹೋದಾಗ ನನಗೋ ಪರಮಾಶ್ಚರ್ಯ. ಇಳಿವಯಸ್ಸಿಗೆ ಹತ್ತಿರವಾಗಿದ್ದರೂ ದೀದಿ, ಸತತ ನೃತ್ಯಾಭ್ಯಾಸದಿಂದ ಸುಂದರ ಅಂಗಸೌಷ್ಟವ ಹೊಂದಿದ್ದರು. ಬಣ್ಣಕಂದು ಇದ್ದರೂ ಲಕ್ಷಣವಾಗಿದ್ದರು. ಆಭರಣರಹಿತರಾಗಿ ಸಾದಾ ಉಡುಪಿನಲ್ಲಿದ್ದೂ ಕಳೆಕಳೆಯಾಗಿದ್ದರು. ಧೀರ, ಗಂಭೀರ, ಆತ್ಮವಿಶ್ವಾಸ ತುಂಬಿ ತುಳುಕುವ ಮುಖಭಾವ.

ವಿದೇಶಗಳಿಂದ ಬಂದ ಕಲಾಪ್ರಿಯರ ಮುಂದೆ ಪ್ರದರ್ಶನವೊಂದು ಅವರ ಕಲಾಶಾಲೆಯಲ್ಲಿ ನಡೆಯಲಿತ್ತು. ನೃತ್ಯ ಪ್ರದರ್ಶನ ಕೊಡಬಂದ ಯುವತಿಯರೆಲ್ಲ ಬಸಂತಾ ಬಣ್ಣದ ಸೀರೆ-ರವಿಕೆ, ಮ್ಯಾಚಿಂಗ್ ಹೂವು, ಆಭರಣಗಳನ್ನು ತೊಟ್ಟು ಗೆಜ್ಜೆ ಕಟ್ಟಿಕೊಂಡು ನೃತ್ಯ ಪ್ರಯೋಗದ ಸಿದ್ಧತೆಗೆ ತೊಡಗಿದರು. ಯುವಕರು ವೀರಗಚ್ಚೆಯ ಉಡುಪಿನಲ್ಲಿದ್ದರು. ಪ್ರಯೋಗ ಮುಗಿದ ಮೇಲೆ ಅಮಲಾ ಅವರನ್ನು ಮಾತನಾಡಿಸಿ ಹೃದಯವನ್ನು ತುಂಬಿಕೊಂಡೆ, ಅಲ್ಲಿ ನಡೆದಿದ್ದ ಪ್ರಯೋಗದಿಂದ ಕಣ್ಣುಗಳನ್ನೂ ತುಂಬಿಕೊಂಡೆ. ಹೊಟ್ಟೆ ತುಂಬಿಸಲು ಬಂಗಾಲಿ ಮಿಠಾಯಿ, ಚಹಾ ಸಹ ಕಾದಿತ್ತು.

***

ನಾನು ಪತ್ರಿಕೆಯವರಿಗೆ ಬಹಳ ಹೆದರುತ್ತೇನೆ. ಯಾವುದೋ ವಿಷಯವನ್ನು ನಮ್ಮ ಬಾಯಿಂದ ಹೊರಡಿಸಿ, ಬಳಿಕ ತಮಗೆ ಬೇಕಿದ್ದ ರೀತಿಯಲ್ಲಿ ಅದನ್ನು ತಿರುಚಿ, ಸತ್ಯದಿಂದ ದೂರವಿದ್ದುದನ್ನೇ ಪ್ರಕಟಿಸುತ್ತಾರೆ.

- ಅಮಲಾ ಶಂಕರ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು