ಸೋಮವಾರ, ಮಾರ್ಚ್ 30, 2020
19 °C

ವ್ಯಕ್ತಿತ್ವ– ನಿಲುವು ರೂಪಿಸುವ ನಾಟ್ಯ

ವಾಣಿ ಸತೀಶ್ Updated:

ಅಕ್ಷರ ಗಾತ್ರ : | |

ನಂದಿಕೇಶ್ವರನು ತನ್ನ ಅಭಿನಯದರ್ಪಣದಲ್ಲಿ ರಂಗದ ಮೇಲೆ ಬರುವ ಒಂದು ಪಾತ್ರ- ನರ್ತಕಿ ಯಾವೆಲ್ಲಾ ಲಕ್ಷಣಗಳನ್ನು ಒಳಗೊಂಡಿರಬೇಕು ಎಂಬುದನ್ನು ಹೀಗೆ ಹೇಳುತ್ತಾನೆ; ಆತ ಅದನ್ನು ಪಾತ್ರಪ್ರಾಣ ಎಂದು ನಮೂದಿಸುತ್ತಾ ನರ್ತಕಿಯು ಚಟುವಟಿಕೆವುಳ್ಳವಳು, ಸ್ಥಿರವಾದ ನಿಲುವಿನಿಂದ ಕೂಡಿದವಳು, ಬುದ್ಧಿ ಶ್ರದ್ಧೆ ಸವಿಮಾತು ಉಳ್ಳವಳು, ಪ್ರಸನ್ನವದನೆಯು, ಪ್ರೌಢಳು, ಭಾವಗ್ರಹಣಳು, ಭಾವಪ್ರವೇಶದಲ್ಲಿ ಕುಶಲಳು ಮುಂತಾಗಿ ಅವನ ಪಟ್ಟಿ ಮುಂದುವರೆಯುತ್ತದೆ. ಅವನ ಪ್ರಕಾರ ಒಬ್ಬ ನರ್ತಕಿಯು ಅಥವಾ ಪಾತ್ರವು ರಂಗದ ಮೇಲೆ ಇದ್ದಷ್ಟು ಹೊತ್ತು ನಿರಾಯಾಸವಾಗಿ ಚಟುವಟಿಕೆಯಿಂದ ನರ್ತಿಸುತ್ತಾ ನೋಡುಗರಲ್ಲಿ ಆನಂದವನ್ನೂ ರಸಾನುಭೂತಿಯನ್ನೂ ಉಂಟುಮಾಡಬೇಕು ಎಂದು ಹೇಳುತ್ತಾನೆ.

ಇಲ್ಲಿ ನಟ, ನಟಿ, ಪಾತ್ರಗಳಾಗುವುದೆಂದರೆ ಒಟ್ಟು ವ್ಯಕ್ತಿತ್ವವಿಕಸನ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುವುದು ಎಂದೇ ಅರ್ಥ. ಇಂದು ಮಕ್ಕಳು ಹಲವಾರು ಶಾಸ್ತ್ರೀಯ ನೃತ್ಯಪ್ರಕಾರಗಳ ಕಲಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ. ಈ ಮಕ್ಕಳು ತಮ್ಮ ತರಬೇತಿಯ ಭಾಗವಾಗಿ ಅಭ್ಯಾಸ ಮಾಡಬೇಕಾದ ಈ ಎಲ್ಲ ಅಂಶಗಳು ದೈಹಿಕವಾಗಿಯಷ್ಟೆ ಅಲ್ಲದೆ ಮಕ್ಕಳ ಮನೋಲೋಕವೂ ಸೇರಿದಂತೆ ಒಟ್ಟಾರೆ ವ್ಯಕ್ತಿತ್ವ ವಿಕಸನವು ಆಗುವಲ್ಲಿ ಬಹು ಮುಖ್ಯ ಪಾತ್ರವಹಿಸುತ್ತದೆ. ಒಂದು ನೃತ್ಯ ಶಾಲೆ ಒಂದು ವ್ಯಕ್ತಿಯ ಮತ್ತು ಊರಿನ, ನಿಲುವನ್ನು ರೂಪಿಸುವಲ್ಲಿ ಹೇಗೆಲ್ಲಾ ಕಾರ್ಯ ನಿರ್ವಹಿಸಬಲ್ಲದು ಎಂದು ಯೋಚಿಸುತ್ತಿರುವಾಗ ಈ ಹಿಂದೆ ನಡೆದ ಘಟನೆಯೊಂದು ನೆನಪಿಗೆ ಬರುತ್ತಿದೆ...

ಅಂದು ನಮ್ಮ ತಿಪಟೂರಿನ ಶ್ರೀ ನಟರಾಜ ನೃತ್ಯ ಕಲಾ ಅಕಾಡೆಮಿಯ ಕಾರ್ಯಕ್ರಮ. ಅದೇ ಶಾಲೆಯಲ್ಲಿ ಕಲಿತು ಮದುವೆಯಾಗಿ ಗಂಡನ ಮನೆ ಸೇರಿದ್ದ ಹಿರಿಯ ವಿದ್ಯಾರ್ಥಿನಿ ಅಂದು ತಮ್ಮ ಪುಟ್ಟ ಮಕ್ಕಳೊಂದಿಗೆ ಬಂದಿದ್ದರು. ಗರಿಬಿಚ್ಚಿದ ಹಕ್ಕಿಯಂತೆ ನೆರೆದ ಪ್ರೇಕ್ಷಕರ ಮುಂದೆ ಸುಮಾರು ಇಪ್ಪತ್ತು ವರ್ಷಗಳಷ್ಟು ಹಿಂದಿನ ತಮ್ಮ ಬಾಲ್ಯದ ನೃತ್ಯ ಕಲಿಕೆಯ ನೆನಪುಗಳನ್ನು ಹೇಳಿಕೊಂಡದ್ದು ಹೀಗೆ:

‘ನಾನು ಚಿಕ್ಕವಳಿದ್ದಾಗ ಈ ಊರು ಇನ್ನೂ ಚಿಕ್ಕದಾಗಿತ್ತು. ನನ್ನ ಶಾಲಾ ದಿನಗಳಲ್ಲಿ ನನಗೆ ಕೂತಲ್ಲಿ ನಿಂತಲ್ಲಿ ನೃತ್ಯ ಮಾಡುವ ಹುಚ್ಚು ಹತ್ತಿತ್ತು. ನನ್ನ ಹುಚ್ಚನ್ನು ಕಂಡ ಪರಿಚಿತರೊಬ್ಬರು ನೃತ್ಯಶಾಲೆಗೆ ಸೇರುವಂತೆ ಸಲಹೆ
ನೀಡಿದರು. ಅದುವರೆಗೂ ನೃತ್ಯ ಶಾಲೆಯ ಪರಿಕಲ್ಪನೆಯೇ ಇಲ್ಲದಿದ್ದ ನನಗೆ ನಿಧಿ ಸಿಕ್ಕಿದಂತಾಗಿ ಗೆಳತಿಯೊಂದಿಗೆ ಶಾಲೆಯ ವಿಳಾಸ ಹಿಡಿದು ಓಡಿದೆ. ನನ್ನೂರು ನಾಲ್ಕಾರು ಕಿ.ಮೀ. ದೂರದ ಹಳ್ಳಿಯಾದ್ದರಿಂದ ಮನೆಯವರನ್ನು ಹಠ ಮಾಡಿ ಒಪ್ಪಿಸಬೇಕಾಯ್ತು. ನೃತ್ಯ ಶಾಲೆಗೆ ಊರಿನಿಂದ ಸೈಕಲ್ ತುಳಿಯುವುದರೊಂದಿಗೆ ನನ್ನ ನೃತ್ಯಾಭ್ಯಾಸ ಆರಂಭವಾಯಿತು. ಅಂದಿನಿಂದ ಆ ನೃತ್ಯ ಶಾಲೆಯೇ ಮನೆಯಾಗಿ ಗುರುವೇ ಅಮ್ಮನಾಗಿ ನನ್ನ ಹಿರಿಕಿರಿಯ ವಿದ್ಯಾರ್ಥಿಗಳೇ ಬಂಧು ಬಳಗವಾಗಿ ಬೆಸೆದುಕೊಂಡು ಹೈಸ್ಕೂಲು, ಕಾಲೇಜು, ಉನ್ನತ ಶಿಕ್ಷಣಗಳು ಹೇಗೆ ಮುಗಿದವು ಎಂಬುದು ಅರಿವಿಗೆ ಬರಲಿಲ್ಲ... ಓದಿನ ಜೊತೆ ಜೊತೆಗೇ ಕೂಡಿಕೊಂಡ ನರ್ತನ ಎಂದೂ ನಮಗೆ ಭಾರವೆನಿಸಲಿಲ್ಲ. ಆ ದಿನಗಳಲ್ಲೆ ನಾವು ಪ್ರದರ್ಶನಗಳ ಕಾರಣದಿಂದ ದೇಶದ ವಿವಿಧ ಸ್ಥಳಗಳನ್ನೂ, ಕಲಾಪ್ರಕಾರಗಳನ್ನೂ, ಹಲವು ಸಂಸ್ಕೃತಿಗಳ ಒಡನಾಟವನ್ನೂ ಪಡೆದದ್ದು. ಕೆಲವೊಮ್ಮೆ ಪ್ರದರ್ಶನಗಳನ್ನು ನೀಡಿ ನೇರವಾಗಿ ಬಂದು ಪರೀಕ್ಷೆಗಳನ್ನು ಬರೆದುದೂ ಉಂಟು. ನಾವೆಲ್ಲ ಆಂಟಿ ಎಂದೇ ಕರೆಯುತ್ತಿದ್ದ ನಮ್ಮ ಗುರುಗಳ ತಾಯ್ತನವನ್ನು ಮತ್ತು ಕಲಿಕೆಯಲ್ಲಿ ಹಿಂದೆ ಬೀಳದ ನಮ್ಮನ್ನು ತಂದೆ ತಾಯಿಗಳು ಪರಿಪೂರ್ಣವಾಗಿ ನಂಬಿದ್ದರು. ಈ ನಂಬಿಕೆಯೇ ಬದುಕಿನ ಬಗೆಗಿನ ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿ ಎಲ್ಲೂ ಎಡವದಂತೆ ಎಚ್ಚರವನ್ನೂ ನೀಡಿತ್ತು. ಅಂದು ಬರಿಯ ನೃತ್ಯ ಶಾಲೆ ಎಂದಷ್ಟೇ ಒಳಹೊಕ್ಕ ನಮಗೆ ನೃತ್ಯ ಬದುಕನ್ನು ಅರಿಯುವ ಒಂದು ಮಾಧ್ಯಮವೂ ಆಗಿ ಒದಗಿಬಂದಿದೆ. ಇಂದಿಗೂ ನನ್ನ ಪ್ರಜ್ಞೆಯನ್ನು, ವ್ಯಕ್ತಿತ್ವವನ್ನು ರೂಪಿಸುತ್ತಲೇ ಇದೆ. ಇದು ನನ್ನ ಅನುಭವವಷ್ಟೇ ಅಲ್ಲ, ಅಂದಿನ ನನ್ನ ಸಹ ನೃತ್ಯಾಭ್ಯಾಸಿಗಳ ಅನುಭವವೂ ಹೌದು. ಇದಕ್ಕಾಗಿ ನನ್ನ ಶಾಲೆಗೆ, ಆಂಟಿ ಎಂಬ ಅಮ್ಮನಿಗೆ, ನೃತ್ಯ ಕಲಿಸಿದ ಗುರುವಿಗೆ ನಾನು ಆಭಾರಿಯಾಗಿದ್ದೇನೆ’.

ಹೀಗೆ ಎದೆತುಂಬಿ ನುಡಿದ ಆ ಹಿರಿಯ ವಿದ್ಯಾರ್ಥಿನಿ ತನ್ನ ಕಣ್ಣ ಬಟ್ಟಲಿನಲ್ಲಿ ಕೂಡಿಕೊಂಡ ನೀರು ಹೊರಕ್ಕೆ ತುಳುಕದಂತೆ ಜಾಗ್ರತೆ ವಹಿಸಿ ವೇದಿಕೆಯಿಂದ ನಿರ್ಗಮಿಸಿದರು.

ಆಕೆಯ ಮಾತು ಮುಗಿದಾಗ ಪ್ರೇಕ್ಷಕರಾಗಿ ಕುಳಿತಿದ್ದ ಅದೇ ಶಾಲೆಯ ಮಕ್ಕಳ ಪೋಷಕರು ಆತ್ಮಾವಲೋಕನಕ್ಕೆ ಇಳಿದವರಂತಿದ್ದರು. ಆ ವಿದ್ಯಾರ್ಥಿನಿಯ ಮಾತುಗಳಲ್ಲಿ ವ್ಯಕ್ತವಾದಂತೆ ಅಂದು ವಿದ್ಯಾರ್ಥಿಗಳು ವಿದ್ಯೆಗಾಗಿ ಹಂಬಲಿಸಿ ಅವರವರ ಇತಿ ಮಿತಿಗಳಲ್ಲಿ ಒದಗಿ ಬಂದದ್ದನ್ನು ಶ್ರಮವಹಿಸಿ ದಕ್ಕಿಸಿಕೊಳ್ಳುತ್ತಿದ್ದರು. ಆದರೆ ಇಂದು ಎಲ್ಲವೂ ತಂದೆ ತಾಯಿಯರ ಅತಿಯಾದ ಕಾಳಜಿಗಳಿಂದ ನಿರಾಯಾಸವಾಗಿ ಒದಗಿ ಬರುತ್ತಿರುವುದರಿಂದ ಮಕ್ಕಳ ತೊಡಗಿಕೊಳ್ಳುವಿಕೆ ಮೇಲ್‌ ಸ್ತರದಲ್ಲೇ ಉಳಿದು ವಿದ್ಯೆಯ ಆಳ ಅರಿವಿಗೆ ಬರುತ್ತಿಲ್ಲ ಎಂಬ ಆತಂಕ ಒಂದು ಕಡೆಯಾದರೆ; ಮತ್ತೊಂದೆಡೆ ಆಶಾದಾಯಕವಾದ ಸಂಗತಿಯೆಂದರೆ ಹಲವು ಚಿಕ್ಕವಯಸ್ಸಿನ ತಾಯಂದಿರು ಮಕ್ಕಳಿಗೆ ಕಲಿಸುವಲ್ಲಿ ತಾವೇ ಕಲಿಯುತ್ತಿದ್ದೇವೆಯೇನೋ ಎಂಬಷ್ಟು ಉತ್ಸುಕರಾಗಿ ತಮ್ಮ ಬಾಲ್ಯದಲ್ಲಿ ಕಳೆದುಕೊಂಡಿರಬಹುದಾದ ಅವಕಾಶವನ್ನು ಇಲ್ಲಿ ಅರಸುತ್ತಿರುತ್ತಾರೆ. ಹೀಗೆ ತಾಯಂದಿರ ಮನೋಲೋಕದ ಕಲಿಕೆಯು ಮಕ್ಕಳ ಬಾಹ್ಯರೂಪದಲ್ಲಿ ವ್ಯಕ್ತವಾಗುತ್ತಿರುತ್ತದೆ. ಆರು ವರ್ಷಗಳಿಂದ ಪ್ರಾರಂಭವಾಗುವ ಈ ಮಕ್ಕಳ ಕಲಿಕೆ ಕೆಲವು ವರ್ಷಗಳವರೆಗೆ ನಡೆಯುತ್ತದೆಯಾದ್ದರಿಂದ ಈ ಮಕ್ಕಳು– ಅವರ ಪೋಷಕರು ನೃತ್ಯಶಾಲೆಯ ಭಾಗವಾಗಿಬಿಡುತ್ತಾರೆ. ಈ ಪ್ರಕ್ರಿಯೆಯಲ್ಲಿ ಕ್ರಮೇಣ ನೃತ್ಯ ಕಲಿಕೆಯು ವ್ಯಕ್ತಿತ್ವ ವಿಕಸನದಲ್ಲಿ ಯಾವೆಲ್ಲಾ ಆಯಾಮಗಳಲ್ಲಿ ನೆರವಾಗಬಲ್ಲದು ಎಂದು ಅರಿಯತೊಡಗುತ್ತಾರೆ.

ಇಂದು ಒದಗಿ ಬರುತ್ತಿರುವ ತಂತ್ರಜ್ಞಾನ ಅವಿಷ್ಕಾರಗಳ ವಾತಾವರಣವು ಮಕ್ಕಳ ನಡೆ ನುಡಿಗಳಲ್ಲಿ ಅಸಹಜತೆಯನ್ನು, ಕೃತಕತೆಯನ್ನು ಬೆಳೆಸುತ್ತಿರುವ ಈ ಹೊತ್ತಲ್ಲಿ; ಮಕ್ಕಳ ಸಹಜವಿಕಾಸಕ್ಕೆ ಕಲಾ ಪ್ರಕಾರಗಳ ಅಭ್ಯಾಸ ಅವಶ್ಯಕವಾಗಿದೆ. ವಯಸ್ಸು, ಕಾಲ ದೇಶ ಭಾಷೆ ಜಾತಿ ಜನಾಂಗಗಳನ್ನು ಮೀರಿ ಅನುಸಂಧಾನ ಮಾಡುವ ಇಂತಹ ಕಲಾಜಗತ್ತು ಮಕ್ಕಳ ಆಲೋಚನಾ ಕ್ರಮವನ್ನು ವಿಸ್ತರಿಸುತ್ತಾ ಅವರಲ್ಲಿ ವಿಶ್ವಮಾನವ ಪ್ರಜ್ಞೆಯನ್ನು ಬೆಳೆಸಬೇಕಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು