ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಕ್ಷಗಾನ ಸಂಗೀತಕ್ಕೆ ಕವಿತೆಗಳ ಅಳವಡಿಕೆಯಾಗಲಿ: ರವೀಂದ್ರ ಭಟ್ಟ ಆಶಯ

Last Updated 11 ಏಪ್ರಿಲ್ 2021, 16:37 IST
ಅಕ್ಷರ ಗಾತ್ರ

ಬೆಂಗಳೂರು: ‘ನಾಡಿನ ಹಲವು ಕವಿಗಳ ಕವಿತೆಗಳನ್ನು ಯಕ್ಷಗಾನ ಸಂಗೀತಕ್ಕೆ ಅಳವಡಿಸುವ ಪ್ರಯತ್ನ ಆಗಲಿ’ ಎಂದು ‘ಪ್ರಜಾವಾಣಿ’ಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ತಿಳಿಸಿದರು.

ಬೆಂಗಳೂರಿನ ಕಲಾ ಕದಂಬ ಆರ್ಟ್‌ ಸೆಂಟರ್‌, ಉಲ್ಲಾಳ ಉಪನಗರದ ವಿಶ್ವೇಶ್ವರ ಬಡಾವಣೆಯ 4ನೇ ವಿಭಾಗದಲ್ಲಿರುವ ಕಲಾಗುಡಿಯಲ್ಲಿ ಹಮ್ಮಿಕೊಂಡಿದ್ದ ‘ಗುಡಿ ನಡೆ’ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಶಿವರಾಮ ಕಾರಂತರ ಕಾಲದಿಂದಲೂ ಯಕ್ಷಗಾನದಲ್ಲಿ ಹೊಸ ಆವಿಷ್ಕಾರಗಳು ನಡೆಯುತ್ತಿವೆ. ಇದಕ್ಕೆ ವಿರೋಧವೂ ವ್ಯಕ್ತವಾಗುತ್ತಿದೆ. ಯಕ್ಷಗಾನದ ಚೌಕಟ್ಟಿನಲ್ಲೇ ಇದನ್ನು ಅಳವಡಿಸುವುದು ತಪ್ಪಲ್ಲ’ ಎಂದರು.

ಗೋಪಾಲಕೃಷ್ಣ ಅಡಿಗ ಶತಮಾನ ಪ್ರತಿಷ್ಠಾನದ ಮುಖ್ಯಸ್ಥ ಜಯರಾಮ ಅಡಿಗ ‘ಗೋಪಾಲಕೃಷ್ಣ ಅಡಿಗರು ಯಕ್ಷಗಾನ ಸೊಗಡಿನ ಹಲವು ಕವನಗಳನ್ನು ರಚಿಸಿದರು. ಆ ಮೂಲಕ ಸಮಾಜದ ಅಂಕುಡೊಂಕುಗಳನ್ನು ಎತ್ತಿ ತೋರಿಸಿದರು. ಯಕ್ಷಗಾನದ ಮೂಲಕ ಜಾಗೃತಿಯೂ ಸಾಧ್ಯ ಎಂಬುದನ್ನೂ ತೋರಿಸಿಕೊಟ್ಟರು’ ಎಂದು ತಿಳಿಸಿದರು.

ಹಿರಿಯ ಕಲಾವಿದ ಸೂರ್ಯನಾರಾಯಣ ‘ರಂಗಭೂಮಿಗೂ ಯಕ್ಷಗಾನಕ್ಕೂ ವಿಶಿಷ್ಟ ನಂಟಿದೆ. ಇವೆರಡು ಜನರ ಮನಮುಟ್ಟುವ ಕಲಾ ಮಾಧ್ಯಮಗಳು’ ಎಂದು ಹೇಳಿದರು.

ಕಾರ್ಯಕ್ರಮದ ಅಂಗವಾಗಿ ದೇವಿದಾಸರ ‘ಕರ್ಣ ಭೇದನ’ (ತಾಳಮದ್ದಲೆ) ಕಥಾನಕ ಪ್ರದರ್ಶನಗೊಂಡಿತು. ಕೃಷ್ಣ ಹಾಗೂ ಮದ್ದಲೆ ವಾದಕರಾಗಿ ಕಲಾವಿದ ಪ್ರದೀಪ ಸಾಮಗ ಗಮನಸೆಳೆದರು. ಪತ್ರಕರ್ತ ಅಂಬರೀಷ್‌ ಭಟ್, ಕರ್ಣನ ಅಸಹಾಯಕತೆ, ಆತನ ಮಿತ್ರತ್ವದ ಮಹತ್ವ ಸಾರಿದರು. ಸೂರ್ಯ ಪಾತ್ರಧಾರಿ ವಿದ್ವಾನ್‌ ಎ.ಪಿ.ಪಾಠಕ್‌, ಚಂಡೆಯನ್ನು ನುಡಿಸುತ್ತಲೇ ಆ ಪಾತ್ರಕ್ಕೆ ಜೀವತುಂಬಿದರು. ಭಾಗವತಿಕೆ ಹಾಗೂ ಕುಂತಿ ಪಾತ್ರಧಾರಿಯಾಗಿ ಸುಬ್ರಾಯ ಹೆಬ್ಬಾರ ಅವರು ತಮ್ಮ ಗಾಯನ ಮತ್ತು ಮಮತೆಯ ಮಾತುಗಳಿಂದ ನೆರೆದಿದ್ದವರನ್ನು ಮೂಕವಿಸ್ಮಿತರನ್ನಾಗಿಸಿದರು.

ಕಾರ್ಯಕ್ರಮದ ಸಂಯೋಜಕ ದೇವರಾಜ ಕರಬರ, ನಿರ್ದೇಶಕ ರಾಧಾಕೃಷ್ಣ ಉರಾಳ ಹಾಗೂ ಮುರಳೀಧರ ನಾವಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT