ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಜೈಪುರ ಸಾಹಿತ್ಯೋತ್ಸವ| 1990ರಿಂದ ಗೃಹಿಣಿಯರ ಆತ್ಮಹತ್ಯೆ ಹೆಚ್ಚಳ: ಕಳವಳ

ಜೈಪುರ ಸಾಹಿತ್ಯೋತ್ಸವದಲ್ಲಿ ಹೆಣ್ಣು ಮಕ್ಕಳಿಗೆ ಅಮ್ಮಂದಿರು ಹೇಳುವ ಸುಳ್ಳುಗಳ ಕುರಿತ ಗೋಷ್ಠಿ
Last Updated 23 ಜನವರಿ 2023, 19:31 IST
ಅಕ್ಷರ ಗಾತ್ರ

ಜೈಪುರ: ‘1990ರ ದಶಕದ ನಂತರ ಆತ್ಮಹತ್ಯೆ ಮಾಡಿಕೊಳ್ಳುವ ಮಹಿಳೆಯರ ಪ್ರಮಾಣದಲ್ಲಿ ದಿಢೀರನೆ ಏರಿಕೆ ಆಗತೊಡಗಿತು. ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೊ (ಎನ್‌ಸಿಆರ್‌ಬಿ) ಇದನ್ನು ಗೃಹಿಣಿಯರ ಅತ್ಮಹತ್ಯೆಯಲ್ಲಿನ ಹೆಚ್ಚಳ ಎಂದು ಹೇಳಿತು. ವಿವಾಹದ ನಂತರ ಭಾವನಾತ್ಮಕ ಕಾರಣಗಳಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುವವರು ಹೆಚ್ಚಾಗುತ್ತಿದ್ದಾರೆನ್ನುವ ಈ ವಿಷಯವೇ ಕಳವಳಕಾರಿ’ ಎಂದು ಲೇಖಕಿ ಹಾಗೂ ಅನುವಾದಕಿ ನೀಲಾಂಜನ ಭೌಮಿಕ್ ಮಾಹಿತಿ ನೀಡಿದರು.

‘ಲೈಸ್ ಅವರ್ ಮದರ್ ಟೋಲ್ಡ್ ಅಸ್: ಇಂಡಿಯನ್ ವುಮನ್ಸ್ ಬರ್ಡನ್’ ಎಂಬ ತಮ್ಮದೇ ಕೃತಿಯ ಶೀರ್ಷಿಕೆಯದ್ದೇ ಗೋಷ್ಠಿಯಲ್ಲಿ ಅವರು ಸೋಮವಾರ ಜೈಪುರ ಸಾಹಿತ್ಯೋತ್ಸವದಲ್ಲಿ ಮಾತನಾಡಿದರು.

‘ಭಾರತದಲ್ಲಿ ಶೇ 8ರಷ್ಟು ಮಹಿಳೆಯರು ಅಸಂಘಟಿತ ವಲಯಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಗೃಹಿಣಿ ಎಂಬ ಹಣೆಪಟ್ಟಿ ಅಂಟಿಸಿಕೊಂಡೇ ಕೃಷಿ ಕೆಲಸಗಳನ್ನೂ ಯಾವುದೇ ವೇತನವಿಲ್ಲದೆ ಮಾಡುವವರನ್ನು ಕಾಣಬಹುದು. ಇಂತಹ ಮಹಿಳೆಯರಿಗೆ ಕನಿಷ್ಠ ವೇತನ ದಕ್ಕಿಸಿಕೊಡುವ ಕೆಲಸಗಳು ಅಲ್ಲಲ್ಲಿ ಆಗುತ್ತಿವೆ. ಅದು ವ್ಯಾಪಕವಾಗಬೇಕು. ಆಸ್ತಿ ಹಕ್ಕಿನ ವಿಷಯದಲ್ಲೂ ಅರಿವು ಹೆಚ್ಚಾಗಬೇಕು ಎಂದು ಅವರು ಆಶಿಸಿದರು.

ರಾಜಸ್ಥಾನದ ಜೈಸಲ್ಮೇರ್‌, ಚಿತ್ತೋರಗಢ ಮೊದಲಾದ ಜಿಲ್ಲೆಗಳಲ್ಲಿ ನ್ಯಾಷನಲ್‌ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ (ಎನ್‌ಐಒಎಸ್) ಮೂಲಕ ಅನೇಕ ಹೆಣ್ಣುಮಕ್ಕಳಿಗೆ ಶಿಕ್ಷಣ ದಕ್ಕಿಸಿಕೊಡುವ ಪ್ರಯತ್ನ ನಡೆದಿದೆ. ಶಾಲೆ ಬಿಟ್ಟ ಹೆಣ್ಣುಮಕ್ಕಳನ್ನು ಇಂತಹ ಮುಕ್ತ ಶಾಲೆಗಳಲ್ಲಿ ಕಲಿಕೆಗೆ ಪ್ರೇರೇಪಿಸಲಾಗಿದೆ. ಶೇ 71ರಷ್ಟು ಹೆಣ್ಣುಮಕ್ಕಳು ಈ ಪ್ರಯತ್ನದಿಂದಾಗಿ ಹತ್ತು ಹಾಗೂ ಹನ್ನೆರಡನೇ ತರಗತಿಯಲ್ಲಿ ತೇರ್ಗಡೆ ಆಗಿದ್ದಾರೆ. ಇಂತಹ ಪ್ರಯತ್ನಗಳು ಹೆಚ್ಚಾಗಬೇಕಿದೆ ಎಂದು ಭಾರತದಲ್ಲಿನ ವಿಶ್ವಸಂಸ್ಥೆಯ ಉಪ ಪ್ರತಿನಿಧಿ ಕಾಂತಾ ಸಿಂಗ್ ವಿವರ ಒದಗಿಸಿದರು.

‘ಕೋವಿಡ್‌ ನಂತರ ಮನೆಯಿಂದಲೇ ಹೆಂಗಸರು ಕೆಲಸ ಮಾಡುವ ಅವಕಾಶವನ್ನು ಕೆಲವು ಸಂಸ್ಥೆಗಳು ಕಲ್ಪಿಸಿವೆ. ಇದರಿಂದ ಅನುಕೂಲವಾಗಿದೆ. ಆದರೆ, ಒಂದು ಕಡೆ ಕುಕ್ಕರ್ ಕೂಗುವಾಗ ಇನ್ನೊಂದು ಕಡೆ ಕೆಲಸದ ನಿಮಿತ್ತ ಅಂತರರಾಷ್ಟ್ರೀಯ ಕರೆ ಇರುತ್ತದೆ. ಅದೇ ಹೊತ್ತಿಗೆ ಕಾಲಿಂಗ್ ಬೆಲ್ ರಿಂಗಿಸಿದರೆ, ಬಂದವರು ಯಾರು ಎಂದು ನೋಡುವ ಕೆಲಸವನ್ನೂ ಹೆಣ್ಣೇ ಮಾಡುವ ಅನಿವಾರ್ಯವಿದೆ. ವೈಯಕ್ತಿಕವಾಗಿ ಮನೆಯಿಂದ ಹೊರಗೆ ಕಚೇರಿಯಲ್ಲಿ ಕೆಲಸ ಮಾಡುವುದೇ ನನಗೆ ಇಷ್ಟ’ ಎಂದು ಅವರು ಹೇಳಿದರು.

‘ನನ್ನ ತಾಯಿ ಪೊಲೀಸ್ ಇಲಾಖೆಯಲ್ಲಿದ್ದರು. ಆದರೂ ಅಪ್ಪ ಅವರನ್ನು ಅಂಕೆಯಲ್ಲಿ ಇಟ್ಟುಕೊಳ್ಳಲು ಯತ್ನಿಸುತ್ತಿದ್ದದು ನನಗೆ ಹೇವರಿಕೆ ತರಿಸುತ್ತಿತ್ತು. ನನ್ನ ಅಪ್ಪ ಒಳ್ಳೆಯವರಾದರೂ ಹೆಂಡತಿಯ ಮನಸ್ಸಿನ ಮೇಲೆ ಸವಾರಿ ಮಾಡುತ್ತಿರುವುದು ನನ್ನ ಪ್ರಕಾರ ಕ್ರೌರ್ಯ. ಸಂಬಂಧಿಕರೊಬ್ಬರ ಮನೆಗೆ ಹೋಗಿದ್ದಾಗ, ‘ಇಬ್ಬರೂ ಹೆಣ್ಣುಮಕ್ಕಳೇ ಆಗಿಬಿಟ್ಟರಲ್ಲ’ ಎಂದು ಬೇಸರದ ದನಿಯಲ್ಲಿ ಕೇಳಿದ್ದರು. ಗಂಡುಮಕ್ಕಳಿಗಿಂತ ನನ್ನ ಹೆಣ್ಣುಮಕ್ಕಳೇ ಹೆಚ್ಚು ಎಂದು ಆಗ ಅಪ್ಪ ಸಮರ್ಥಿಸಿಕೊಂಡಿದ್ದರು. ನನಗೆ ಇಂತಹ ಸಮರ್ಥನೆ ಆಗ ಖುಷಿ ಕೊಟ್ಟಿತ್ತಾದರೂ, ಹಾಗೆಲ್ಲ ಯಾಕೆ ಹೇಳಬೇಕು ಎಂದು ಈಗ ಅನಿಸುತ್ತದೆ. ಹೆಣ್ಣುಮಕ್ಕಳು ಗಂಡಿಗಿಂತ ಮಿಗಿಲು ಎಂದೋ, ಗಂಡೇ
ಹೆಣ್ಣಿಗಿಂತ ಮಿಗಿಲು ಎಂದೋ ಮಾತಿನ ವರಸೆಯಲ್ಲಿ ಹೇಳುವುದು ಕೂಡ ಎಷ್ಟೋ ಸಲ ಸುಳ್ಳೇ ಆಗಿರುತ್ತದೆ’ ಎಂದು ನೀಲಾಂಜನ ಅನುಭವವೊಂದನ್ನು ಹೇಳಿಕೊಂಡರು.

ಮದುವೆಯಾಗುವ ಒತ್ತಡ ತನ್ನ ಮೇಲೆ ಇದ್ದು, ಅದರಿಂದ ಹೊರಬರುವುದು ಹೇಗೆ ಎಂದು ಯುವತಿಯೊಬ್ಬಳು ಗೋಷ್ಠಿಯಲ್ಲಿ ಪ್ರಶ್ನಿಸಿದರು. ಈ ಕಾಲದಲ್ಲಿ ಮದುವೆ ಆಗುವುದು ಸಾಧನೆಯೇನೂ ಅಲ್ಲ ಎನ್ನುವುದನ್ನು ಮಾಡುವ ಕೆಲಸಗಳ ಮೂಲಕವೇ ಹೆಣ್ಣುಮಕ್ಕಳು ಸಾಬೀತುಪಡಿಸಬೇಕಷ್ಟೆ ಎಂದು ನೀಲಾಂಜನ ಉತ್ತರಿಸಿದರು.

1 ಲಕ್ಷಕ್ಕೂ ಹೆಚ್ಚು ಪುಸ್ತಕಗಳ ಮಾರಾಟ

ಜೈಪುರ ಸಾಹಿತ್ಯೋತ್ಸವದ 16ನೇ ಆವೃತ್ತಿಗೆ ಸೋಮವಾರ ತೆರೆಬಿತ್ತು. ಮೊದಲ ನಾಲ್ಕು ದಿನ ಪ್ರತಿಗಂಟೆಗೆ ಸರಾಸರಿ 12 ಸಾವಿರ ಜನರು ಉತ್ಸವಕ್ಕೆ ಭೇಟಿ ನೀಡಿದ್ದರು. ಐದನೇ ದಿನವೂ ಸೇರಿದಂತೆ ಸುಮಾರು 4.5 ಲಕ್ಷ ಜನ ಸಾಹಿತ್ಯೋತ್ಸವಕ್ಕೆ ಸಾಕ್ಷಿಯಾದರು ಎಂದು ಉತ್ಸವದ ಪ್ರೊಡ್ಯೂಸರ್ ಹಾಗೂ ಟೀಮ್‌ ವರ್ಕ್ ಆರ್ಟ್ಸ್‌ ಕಂಪನಿಯ ನಿರ್ದೇಶಕ ಸಂಜಯ್ ಕೆ. ರಾಯ್ ತಿಳಿಸಿದರು.

ನಾಲ್ಕು ದಿನಗಳ ಅವಧಿಯಲ್ಲೇ ಒಂದು ಲಕ್ಷ ಪುಸ್ತಕಗಳು ಮಾರಾಟವಾಗಿದ್ದವು. ಸುಮಾರು ಒಂದೂವರೆ ವರ್ಷದ ಅವಧಿಯಲ್ಲಿ ಯೋಜಿಸಿ ಜೈಪುರ ಸಾಹಿತ್ಯೋತ್ಸವವನ್ನು ಆಯೋಜಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

***

ಸಾಹಿತ್ಯೋತ್ಸವದಲ್ಲಿ ಸ್ವಯಂಸೇವಕರ ಕೆಲಸ ಶ್ಲಾಘನೀಯ. ಅವರ ನೆರವಿಂದಲೇ ಇಷ್ಟು ಅಚ್ಚುಕಟ್ಟಾಗಿ ಇದನ್ನು ಆಯೋಜಿಸುವುದು ಸಾಧ್ಯವಿದೆ.

– ಸುಧಾಮೂರ್ತಿ, ಲೇಖಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT