ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋಡಿ ಮಾಡಿದ ‘ಅಪೂರ್ವ’ ಗಾಯನ

Last Updated 22 ಜುಲೈ 2019, 19:34 IST
ಅಕ್ಷರ ಗಾತ್ರ

ಮೈಸೂರಿನಲ್ಲಿ ಉತ್ತರಾದಿ ಸಂಗೀತವನ್ನು ಕಲಿಸುವ ಜನಪ್ರಿಯ ಶಾಲೆ ‘ಸ್ವರ ಸಂಕುಲ’. ಸಂಗೀತವನ್ನು ಕಲಿಸುವುದರ ಜೊತೆಗೆ ಅದು ನಿಯತವಾಗಿ ಸಂಗೀತ ಕಛೇರಿಗಳನ್ನೂ ಏರ್ಪಡಿಸಿ, ವಿದ್ಯಾರ್ಥಿಗಳು ‘ಕೇಳ್ಮೆ’ಯನ್ನು ಬೆಳಸಿಕೊಳ್ಳಲೂ ಅವಕಾಶ ಮಾಡಿಕೊಡುತ್ತದೆ.

ವಾಸುದೇವಾಚಾರ್ಯ ಭವನದಲ್ಲಿ ಈಚೆಗೆ ಎರಡು ಉತ್ತರಾದೀ ಸಂಗೀತ ಗಾಯನ ಕಛೇರಿಯನ್ನು ಏರ್ಪಡಿಸಿತ್ತು. ಮೊದಲನೆಯದು ಮೈಸೂರಿನಲ್ಲೇ ನೆಲಸಿರುವ ವಿದುಷಿ ಶ್ರೀಮತಿ ದೇವಿ ಅವರದು. ಅವರು ಸತೀಶ್ ಭಟ್ ಮತ್ತು ಭೀಮಾಶಂಕರ್ ಬಿದನೂರರ ಹಾರ್ಮೋನಿಯಂ ಮತ್ತು ತಬಲಾದ ಸಾಥ್‌ನೊಂದಿಗೆ ಸುಮಾರು ಒಂದು ಗಂಟೆ ಹಾಡಿದ ನಂತರ ಮಹಾರಾಷ್ಟ್ರದ ವಿದುಷಿ ಅಪೂರ್ವ ಗೋಖಲೆಯವರು ವ್ಯಾಸಮೂರ್ತಿ ಕಟ್ಟಿ ಮತ್ತು ಉದಯರಾಜ್ ಕರ್ಪೂರರ ಹಾರ್ಮೋನಿಯಂ ಮತ್ತು ತಬಲಾಗಳ ಸಾಥ್‌ನೊಂದಿಗೆ ಹಾಡಿದರು.

ಶ್ರೀಮತಿ ದೇವಿಯವರು ಪ್ರವರ್ಧಮಾನಕ್ಕೆ ಬರುತ್ತಿರುವ ಪ್ರತಿಭಾವಂತ ಗಾಯಕಿ. ಉತ್ತಮ ಶಿಕ್ಷಣ ಮತ್ತು ಆಕರ್ಷಕ ಶಾರೀರವು ಅವರ ಗಾಯನಕ್ಕೆ ಇಂಬಾಗಿದೆ. ತಮಗೆ ಸಿಕ್ಕ ಸೀಮಿತ ಅವಧಿಯಲ್ಲಿ ಅವರು ಅಂದು ರಸಿಕರ ಗಮನ ಸೆಳೆಯುವಂತೆ ಹಾಡಿ ಮೆಚ್ಚುಗೆ ಗಳಿಸಿದರು. ರಾಗ್ ಭೀಂಪಲಾಸಿಯಲ್ಲಿ ‘ದೇವೋ ಬಲ ಮೋಹೆ’ ಎಂಬ ಏಕತಾಲ್‌ಗೆ ಅಳವಡಿಸಲಾಗಿದ್ದ ಬಂಧಿಷ್ ಅನ್ನು ವಿಲಂಬಿತ್‌ನಲ್ಲಿ ಪ್ರಸ್ತುತಪಡಿಸಿದರು. ‘ಸಖಿ ಶಾಮ್ ನ ಆಯೆ ಬಾಂಸುರಿಯಾ’ ಎಂಬ ಸಾಲು ಧೃತ್‌ನ ವೇಗಕ್ಕೆ ಹೊಂದಿಕೊಂಡು ಬಂದಿತು. ಅದರ ಜೊತೆಗೆ ‘ಮೈತೊ ಜಾ ಗಿಯಾ ಸ್ಯಾ’ ಎಂಬ ರಚನೆಯೂ ಸರ್‌ಗಮ್ ಮತ್ತು ಅಕಾರಗಳ ಜೊತೆ ಮಿಂಚಿನಂತೆ ಜೊತೆಗೂಡಿದವು. ಮುಂದೆ ತುಸುವೇ ಹಮೀರ್ ರಾಗವನ್ನು ಆಲಾಪಿಸಿ ಅದರಲ್ಲಿ ಲಯಬದ್ಧವಾಗಿದ್ದ (ಮಧ್ಯಲಯ ತೀನ್ ತಾಲ್) ‘ಜಾಗಿರೆ ಜಾಗಿ ಮೈತೊ ಲಾಗಿ’ ಎಂಬ ರಚನೆಯು ಕಿವಿಗೆ ಬಲು ಹಿತವನ್ನುಂಟುಮಾಡಿತ್ತು. ಒಂದು ನಿರ್ಗುಣಿ ಭಜನ್‌ನೊಂದಿಗೆ ತಮ್ಮ ಪ್ರಸ್ತುತಿಯನ್ನು ಶ್ರೀಮತಿಯವರು ಸಂಪನ್ನಗೊಳಿಸಿದರು. ಸತೀಶ್ ಭಟ್ ಮತ್ತು ಭೀಮಾಶಂಕರ ಬಿದನೂರರ ವಾದ್ಯ ಸಹಕಾರವು ಚೊಕ್ಕವಾಗಿತ್ತು.

ಅಪೂರ್ವ ಗೋಖಲೆಯವರು ಸಂಗೀತ ಕುಟುಂಬದಿಂದ ಬಂದವರು. ತಾತ ಪಂಡಿತ್ ಗಜಾನನರಾವ್ ಜೋಶಿ, ತಂದೆ ಮನೋಹರ ಜೋಶಿ ಮತ್ತು ದೊಡ್ಡಪ್ಪ ಮಧುಕರ್ ಜೋಶಿ, ಅತ್ತೆ ಡಾ.ಸುಚೇತಾ ಬಿಡಕರ್. ಹೀಗೆ ಸಂಗೀತ ಅವರ ಧಮನಿಯಲ್ಲಿ ಹರಿಯುತ್ತಿದೆ. ಈ ಎಲ್ಲ ಗಾಯಕರಲ್ಲದೆ ಇನ್ನೂ ಅನೇಕ ಗುರುಗಳ ಮಾರ್ಗದರ್ಶನವನ್ನೂ ಪಡೆದು, ಬಿರುಸಿನ ತಮ್ಮ ಸ್ವಂತ ಶೈಲಿಯೊಂದನ್ನು ರೂಢಿಸಿಕೊಂಡಿದ್ದಾರೆ. ರಾಗದ ಎಲ್ಲ ಸಾಧ್ಯತೆಗಳನ್ನು ಅದರ ಸೂಕ್ಷ್ಮತೆಗಳೊಂದಿಗೆ ಅತ್ಯುತ್ತಮವಾಗಿ ಅಭಿವ್ಯಕ್ತಿಸಬಲ್ಲ ಅವರು ಕೇಳುಗರನ್ನೂ ತಮ್ಮೊಡನೆಯೇ ಕರೆದೊಯ್ಯಬಲ್ಲ ಚತುರ ಗಾಯಕಿ. ಅವರ ಗಾಯನದ ಮುಖ್ಯ ಆಕರ್ಷಣೆಯೆಂದರೆ ಶಕ್ತಿಯುತ ಪ್ರಸ್ತುತಿ. ಇಂಪಿಗಿಂತ ಹೆಚ್ಚು ರಭಸವನ್ನು ಹೊರಸೂಸುವ ಕಂಠವು ಆತ್ಮವಿಶ್ವಾಸದೊಂದಿಗೆ ಭೋರ್ಗರೆಯುತ್ತಲೇ ಕೇಳುಗರನ್ನು ತನ್ನ ತೆಕ್ಕೆಯೊಳಗೆ ಎಳೆದುಕೊಳ್ಳುತ್ತದೆ. ಅಂದು ಅವರು ಕೊನೆಯತನಕ ಒಂದೇ ಉತ್ಸಾಹವನ್ನು ಉಳಿಸಿಕೊಂಡು ಹಾಡಿದ ಪರಿ ಅನನ್ಯ.

ರಾಗ್ ಗೌಡಮಲ್ಹಾರ್‌ದಿಂದ ತಮ್ಮ ಗಾಯನವನ್ನು ಆರಂಭಿಸಿದ ಅಪೂರ್ವ ಅವರಿಗೆ ಅಮೃತಾ ಶೆಣೈ ಮತ್ತು ಪ್ರಿಯಾಂಕ ಎಂಬ ಸಮರ್ಥ ಶಿಷ್ಯೆಯರು ಸಹಗಾಯನದಿಂದ ಸಂಗೀತಕ್ಕೆ ಮತ್ತಷ್ಟು ಪುಷ್ಟಿ ನೀಡಿದರು. ‘ಕಾಹೆಹೋ ಪ್ರೀತಮ್’ ಎಂಬ ತಿಲವಾಡ ತಾಳದಲ್ಲಿದ್ದ ರಚನೆಯನ್ನು ಅದೆಷ್ಟು ವೈವಿಧ್ಯಮಯವನ್ನಾಗಿಸಿದರೆಂದರೆ, ‘ಕಾಹೆಹೊ’ ಎಂದು ಸಮ್‌ಗೆ ಬಂದು ಸೇರುತ್ತಿದ್ದ ಬಿರುಸಿನ ಶೈಲಿಯೇ ಆಕರ್ಷಕವಾಗಿತ್ತು. ಧೃತ್‌ನ ಔಚಿತ್ಯಪೂರ್ಣ ಸಾಹಿತ್ಯ ‘ರುಮ್ ಝುಮ್ ಬರಸೆ’ ಎಂದು ಬಿರುಸಿನ ಸ್ವರಗಳ ಸುರಿಮಳೆಯನ್ನು ಕರೆಯಿತು.

ರಾಗ್ ರೈಸಕಾನಡದಲ್ಲಿ ‘ರೆ ತುಮ್ ಸಮಝಾ’ಎಂಬ ಸಾಲನ್ನು ಅದೆಷ್ಟು ತಲ್ಲೀನತೆಯಿಂದ ಹಾಡಿದರೆಂದರೆ ಕೇಳುಗರನ್ನು ಸಂಪೂರ್ಣವಾಗಿ ತಮ್ಮೆಡೆಗೆ ಸೆಳೆದಿಟ್ಟುಕೊಂಡಿದ್ದ ಗಾಯನ ಅದಾಗಿತ್ತು. ‘ಮನಮೋಹಲೀನೋ’ ಎಂಬ ಧೃತ್‌ನ ಭೋರ್ಗರೆತವೂ ಶಕ್ತಿಯುತ. ಮಧುಕೌಂಸ್ ಮತ್ತು ತಿಲಂಗ್ ರಾಗಗಳಲ್ಲಿ ಚುಟುಕಾಗಿ ಹಾಡಿ ಸುಂದರ ಭೈರವಿಯೊಂದಿಗೆ ತಮ್ಮ ಪ್ರಸ್ತುತಿಯನ್ನು ಮುಕ್ತಾಯಗೊಳಿಸಿದರು. ವ್ಯಾಸಮೂರ್ತಿ ಕಟ್ಟಿ ಮತ್ತು ಉದಯರಾಜ್ ಕರ್ಪೂರರ ಸಾಥ್ ಆ ಸಂಗೀತಕ್ಕೆ ಹೇಳಿ ಮಾಡಿಸಿದಂತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT