ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಡು ಹಳೆಯದಾದರೇನು...

ಜನಪದ ಗಾಯಕ ಗೋ.ನಾ.ಸ್ವಾಮಿ ಸಂದರ್ಶನ
Last Updated 6 ಮೇ 2019, 20:16 IST
ಅಕ್ಷರ ಗಾತ್ರ

ಪಾಶ್ಚಿಮಾತ್ಯ, ಸಿನಿಮಾ ಹಾಡುಗಳ ಅಬ್ಬರದಲ್ಲಿ ಜನಪದ ಹಾಡುಗಳು ಸೊರಗಿವೆಯೇ? ಮೂಲ ದಾಟಿಯಲ್ಲಿ ವ್ಯತ್ಯಾಸವಾಗಿದೆಯೇ?

ಪಾಶ್ಚಿಮಾತ್ಯ ಮತ್ತು ಸಿನಿಮಾ ಹಾಡುಗಳ ಅಬ್ಬರದಲ್ಲಿ ಮೂಲ ಜನಪದ ಹಾಡುಗಳು ಸೊರಗಿರುವುದು ನಿಜ. ಇದಕ್ಕೆ ಕಾರಣ ಜನರ ಮನಸ್ಥಿತಿ ಬದಲಾವಣೆಯಾಗಿರುವುದು. ಹಾಗಾಗಿಜನಪದ ಹಾಡುಗಳನ್ನು ಆಲಿಸುವ ಮನಸುಗಳ ಸಂಖ್ಯೆ ಸ್ವಲ್ಪ ಕಡಿಮೆಯಾಗಿರಬಹುದು. ಜನಪದವನ್ನು ಆಧರಿಸಿಯೇ ಭಾಷೆಯೊಂದರ ಸಾಹಿತ್ಯ ರಚನೆಯಾಗಿರುವುದು. ಭಾರತೀಯ ಸಮಾಜದ ಬೆಳವಣಿಗೆಯ ಓಘದಲ್ಲಿ ಜನಪದ ಹಾಡುಗಳು ಖಂಡಿತವಾಗಿಯೂ ಬದಲಾಗಿಲ್ಲ. ಆದರೆ ಪರಿಕರಗಳು ಬದಲಾಗಿ ಬೇರೆ ಆಯಾಮವನ್ನು ಪಡೆದುಕೊಂಡಿವೆ ಅಷ್ಟೆ. ಜನಪದ ಹಾಡುಗಳಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ ಎಂಬುದು ಸ್ಪಷ್ಟ.

ಜನಪದ ಗಾಯಕರು ಎಂದರೆ ಅಸಡ್ಡೆ ಇದೆಯೇ?

ಖಂಡಿತವಾಗಿ, ರಾಜ್ಯದಲ್ಲಿ ಜನಪದ ಹಾಡುಗಾರರನ್ನು ಅಸಡ್ಡೆ ಮಾಡಲಾಗುತ್ತಿದೆ. ಶಾಸ್ತ್ರೀಯ ಮತ್ತು ಸಿನಿಮಾ ಹಾಡುಗಾರರಿಗೆ ಇಂದು ಯಾವ ಮಟ್ಟದಲ್ಲಿ ಪ್ರಚಾರ ನೀಡಲಾಗುತ್ತಿದೆ ಎಂಬುದನ್ನು ನೀವು ಗಮನಿಸಿರಬಹುದು! ಮಾಧ್ಯಮಗಳು ಸಿನಿಮಾ ಹಾಡುಗಾರರಿಗೆ ಕೊಡುತ್ತಿರುವ ಪ್ರಚಾರವೇ ಇದಕ್ಕೆ ಸಾಕ್ಷಿಯಾಗಿದೆ. ಮೂಲ ಜನಪದ ಗಾಯಕರಿಗೆ ಮುಖ್ಯವಾಹಿನಿಯಲ್ಲಿ ಮಾನ್ಯತೆ ಸಿಗುತ್ತಿಲ್ಲ, ಈ ಬಗ್ಗೆ ಮಾಧ್ಯಮಗಳೂ ಗಮನಹರಿಸುತ್ತಿಲ್ಲ.

ಬೆಂಗಳೂರಿನಲ್ಲಿ ಜನಪದ ಹಾಡುಗಳಿಗೆ ಬೇಡಿಕೆ ಇದೆಯಾ? ಇಲ್ಲಿ ನೀವು ಒಂದು ವರ್ಷದಲ್ಲಿ ಎಷ್ಟು ಕಾರ್ಯಕ್ರಮಗಳನ್ನು ನಡೆಸಿಕೊಡುತ್ತೀರಾ?

ಅಲ್ಲಲ್ಲಿ ಕೆಲವು ಖಾಸಗಿ ಕಾರ್ಯಕ್ರಮಗಳು ಮತ್ತು ಸ್ವಲ್ಪ ಭಾಗ ಸರ್ಕಾರಿ ಕಾರ್ಯಕ್ರಮಗಳಲ್ಲಿ ಮಾತ್ರ ಜನಪದ ಹಾಡುಗಳಿಗೆ ಬೇಡಿಕೆ ಇದೆ. ನನ್ನ ಪ್ರಕಾರ ಶೇ 20 ರಷ್ಟು ಬೇಡಿಕೆ ಇರಬಹುದೇನೋ! ಉಳಿದಂತೆ ಎಲ್ಲಾ ಸಿನಿಮಾ ಹಾಡುಗಳೇ ಆವರಿಸಿಕೊಂಡಿವೆ. ಸರ್ಕಾರಿ ಕಾರ್ಯಕ್ರಮಗಳಲ್ಲೂ ಭಾವಗೀತೆಗಳಿಗೆ ಹೆಚ್ಚಿನ ಬೇಡಿಕೆ ಇದ್ದೂ ಜನಪದ ಹಾಡುಗಳ ಬೇಡಿಕೆ ತೀರಾ ಕಡಿಮೆ. ಉದಾಹರಣೆಗೆ ಒಂದು ಕಾರ್ಯಕ್ರಮದಲ್ಲಿಕಾಲು ಭಾಗ ಜನಪದ ಮತ್ತು ಭಾವಗೀತೆಗಳನ್ನು ಹಾಡಿಸಿದರೆ, ಮುಕ್ಕಾಲು ಭಾಗ ಸಿನಿಮಾ ಹಾಡುಗಳನ್ನೇ ಹಾಡಿಸಲಾಗುತ್ತಿದೆ.

ಜನಪದ ಹಾಡುಗಳಲ್ಲಿ ಅಪಭ್ರಂಶ ಹೆಚ್ಚಾಗುತ್ತಿದೆಯೇ?

ಹೌದು, ಕೆಲವರು ಹಣಕ್ಕಾಗಿ ಮೂಲ ಜನಪದ ಹಾಡುಗಳನ್ನು ಅಪಭ್ರಂಶ ಮಾಡಿ ಸಿನಿಮಾ ದಾಟಿಯಲ್ಲಿ ಹಾಡುತ್ತಿದ್ದಾರೆ. ಇಂತಹ ಅಪಭ್ರಂಶ ಹಾಡುಗಳನ್ನು ಸಿ.ಡಿ (ಧ್ವನಿಸುರಳಿ) ಮಾಡಿ ಬಿಡುಗಡೆ ಮಾಡುತ್ತಿದ್ದಾರೆ. ದುಡ್ಡಿನ ಆಸೆಗಾಗಿ ಜನಪದ ಹಾಡುಗಳನ್ನು ಕಗ್ಗೊಲೆ ಮಾಡಲಾಗುತ್ತಿದೆ. ಇನ್ನು ಕೆಲವರು ಅಶ್ಲೀಲ ಹಾಡುಗಳಿಗೂ ಮೂಲ ಜನಪದ ಹಾಡಿನ ದಾಟಿ ಮತ್ತು ಸಾಹಿತ್ಯವನ್ನು ಬಳಸಿಕೊಳ್ಳುತ್ತಿದ್ದಾರೆ, ಇವೆಲ್ಲ ಬೇಸರದಸಂಗತಿಗಳು. ನಮ್ಮ ಜನಪದ ಹಾಡುಗಳು ಮೂಲ ದಾಟಿಯಲ್ಲೇ ಇರಬೇಕು. ಅವನ್ನು ನಮ್ಮ ಮುಂದಿನ ತಲೆಮಾರುಗಳಿಗೆ ಮೂಲ ಸ್ವರೂಪದಲ್ಲೇ ಕೊಂಡೊಯ್ಯುವಜವಾಬ್ದಾರಿ ನಮ್ಮ ಮೇಲಿದೆ.

ನಿಮ್ಮ ಪ್ರಕಾರ, ಮೂಲ ಜನಪದವನ್ನು ಉಳಿಸಲು ಸರ್ಕಾರ ಮತ್ತು ಜನಪದ ಅಕಾಡೆಮಿ ಏನು ಮಾಡಬೇಕು?

ಮೂಲ ಜನಪದ ಗಾಯಕರು ಅವಸಾನದ ಅಂಚಿನಲ್ಲಿದ್ದಾರೆ. ಒಬ್ಬ ಜನಪದ ಗಾಯಕ ವಯೋ ಸಹಜವಾಗಿ ತೀರಿ ಹೋದರೆ, ಅವನೊಂದಿಗೆ ಆ ಕಲೆಯೂ ನಶಿಸಿ ಹೋಗುತ್ತದೆ. ಹೀಗಾಗಿ ಅವರ ಹಾಡುಗಳನ್ನು ಆಡಿಯೊ ಅಥವಾ ವಿಡಿಯೊ ಮೂಲಕ ಸಂಗ್ರಹ ಮಾಡುವ ಕೆಲಸ ನಡೆಯಬೇಕಿದ. ಇದರಿಂದ ನಮ್ಮ ಮುಂದಿನ ಪೀಳಿಗೆಗೆ ಅನುಕೂಲವಾಗಲಿದೆ. ಉದಾಹರಣೆಗೆ ಚನ್ನಪಟ್ಟಣದ ಬಳಿ ತಂಬೂರಿ ರಾಜಮ್ಮ ಎಂಬ ಜನಪದ ಕಲಾವಿದರಿದ್ದರು ಅವರು ಮರಣಹೊಂದಿದ ಬಳಿಕ ಅವರ ಕಲೆಯೂ ಅವರೊಂದಿಗೆ ಹೋಯಿತು. ಅವರ ಕಲೆಯನ್ನು ಆಡಿಯೊ ಅಥವಾ ವಿಡಿಯೊದಲ್ಲಿ ಸಂಗ್ರಹಿಸುವ ಕೆಲಸವನ್ನು ಯಾರೂ ಮಾಡಲಿಲ್ಲ. ಇಂದಿನ ಸರ್ಕಾರಗಳಿಗೆ ಮೂಲ ಜನಪದ ಹಾಡುಗಳನ್ನು ಬೆಳೆಸುವ ಗುರಿ ಇಲ್ಲ, ಕನಿಷ್ಠ ಪಕ್ಷ ಅವುಗಳ ಮೂಲ ಮಾದರಿಗಳನ್ನು ಸಂಗ್ರಹಿಸುವ ಕೆಲಸವನ್ನಾದರೂ ಮಾಡಲಿ.

ವಿದೇಶಗಳಲ್ಲಿ ಜನಪದ ಹಾಡುಗಳಿಗೆ ಹೆಚ್ಚಿನ ಬೇಡಿಕೆ ಇದೆಯಂತೆ ಹೌದೇ?

ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ಸಿನಿಮಾ ಹಾಡುಗಳಿಗಿಂತ ಭಾವಗೀತೆಗಳು ಮತ್ತು ಜನಪದ ಹಾಡುಗಳನ್ನು ಹೆಚ್ಚಾಗಿ ಕೇಳುತ್ತಾರೆ. ನಮಗೆ ಸಿನಿಮಾ ಹಾಡುಗಳು ಸಿಗುತ್ತವೆ ಆದರೆ ಜನಪದ ಹಾಡುಗಳು ಸಿಗುವುದಿಲ್ಲ,ನೀವು ಎಷ್ಟು ಬೇಕಾದರೂಜನಪದ ಹಾಡುಗಳನ್ನು ಹಾಡಿ ಎಂದು ಹುರಿದುಂಬಿಸುವುದನ್ನುನೋಡಿದರೆ ತುಂಬಾ ಖುಷಿಯಾಗುತ್ತದೆ.ಮುಖ್ಯವಾಗಿ ಯುರೋಪ್‌,ಗಲ್ಫ್ ಹಾಗೂ ಆಫ್ರಿಕಾದ ದೇಶಗಳು ಸೇರಿದಂತೆ40ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯಕ್ರಮ ನೀಡಿದ್ದೇನೆ.

ಸರ್ಕಾರಿ ಶಿಕ್ಷಕರಾಗಿದ್ದ ನೀವು ಜನಪದ ಹಾಡುಗಳ ಬಗ್ಗೆ ಒಲವು ಬೆಳೆಸಿಕೊಂಡಿದ್ದು ಹೇಗೆ? ನಿಮ್ಮಕಲಾ ತಂಡದ ಬಗ್ಗೆ ಹೇಳಿ.

ನನ್ನ ತಾಯಿ ಮೂಲತತಃ ಜನಪದ ಹಾಡುಗಾರ್ತಿ. ಆಕೆಯ ಹಾಡುಗಳನ್ನು ಕೇಳಿ ಬೆಳೆದವನಾದ್ದರಿಂದ ಸಹಜವಾಗಿಯೇ ನನಗೂ ಜನಪದ ಹಾಡುಗಳ ಬಗ್ಗೆ ಹೆಚ್ಚಿನ ಆಸ್ಥೆ ಇತ್ತು. ಅಮ್ಮನ ಹಾಡಿನ ಪರಂಪರೆಯನ್ನು ಮುಂದುವರೆಸುವ ನಿರ್ಧಾರ ಮಾಡಿ ಸರ್ಕಾರಿ ಕೆಲಸಕ್ಕೆ ರಾಜೀನಾಮೆ ಕೊಟ್ಟು ಹಾಡುವುದನ್ನೇ ಕಾಯಕ ಮಾಡಿಕೊಂಡಿದ್ದೇನೆ. ನಾನು ಕಟ್ಟಿರುವ ‘ಜನಮನದ ಜಾನಪದ ಕಲಾ ತಂಡ’ದಲ್ಲಿ 70ಜನ ಕಲಾವಿದರಿದ್ದಾರೆ. ವಾದ್ಯಗಾರರು,ಹಾಡುಗಾರರು ಹಾಗೂ ಜನಪದ ನೃತ್ಯಗಾರರು ಇದ್ದಾರೆ.

ಜನಪದ ಹಾಡುಗಳಿಗೆ ಮರುಹುಟ್ಟು ಬೇಕೆ?

ಸುಗಮ ಸಂಗೀತ ಅಥವಾ ಭಾವಗೀತೆಗಳಂತೆ ಜನಪದಕ್ಕೆ ಮರುಹುಟ್ಟು ಬೇಕಿಲ್ಲ,ಅದು ಮೂಲ ದಾಟಿಯಲ್ಲೇ ಇರಬೇಕು. ಸರ್ಕಾರ ಜನಪದ ಗಾಯನ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡುವ ಕೆಲಸವನ್ನು ಮಾಡಬೇಕಿದೆ.

ಹಾಡುವ ಕಾಯಕ ಮುಂದುವರಿಸಿದ್ದಾರೆ.
ಭಾಷೆ ಎಷ್ಟೇ ಕುಗ್ಗಿ, ಹಿಗ್ಗಿದರೂ ಜಾನಪದ ಸ್ವರೂಪ ಮಾತ್ರ ಬದಲಾಗದೇ ಮೂಲ ಘಮಲಿನ ಪ್ರಖರತೆಯನ್ನು ಉಳಿಸಿಕೊಂಡಿರುವುದು. ಕನ್ನಡದಲ್ಲಿ ಈಗಲೂ ಜಾನಪದ ಪ್ರಕಾರಗಳು ಮಾಸದಂತೆ ಮೂಲ ದಾಟಿಯಲ್ಲೇ ಉಳಿದುಕೊಂಡಿವೆ. ಹಳ್ಳಿ ಹಾಡುಗಳು ಅಥವಾ ಜನಪದ ಹಾಡುಗಳ ಮೂಲಕ ನಾಡಿನಲ್ಲಿ ಚಿರಪರಿಚಿತರಾಗಿರುವ ಗೋ.ನಾ. ಸ್ವಾಮಿ ಅವರು ಪ್ರಸ್ತುತ ಜನಪದ ಹಾಡುಗಳು ಮತ್ತು ಗಾಯನಕ್ಕಿರುವ ಬೇಡಿಕೆ ಹಾಗೂ ಕೇಳುಗರ ಮನಸ್ಥಿತಿ ಕುರಿತಂತೆ ಮನಬಿಚ್ಚಿ ಮಾತನಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT