ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ಯಾಗರಾಜರ ಆರಾಧನೆ: ‘ಶ್ರೀ ತ್ಯಾಗರಾಜ ಮಾ ಭಾಗ್ಯಮಾ’

Last Updated 11 ಜನವರಿ 2023, 19:45 IST
ಅಕ್ಷರ ಗಾತ್ರ

ಕರ್ಣಾಟಕ ಸಂಗೀತದ ತ್ರಿಮೂರ್ತಿಗಳಲ್ಲಿ ಅತಿ ವಿಶಿಷ್ಟ ಸ್ಥಾನ ತ್ಯಾಗರಾಜರದು. ಅವರನ್ನು ಕೇವಲ ವಾಗ್ಗೇಯಕಾರರೆಂದರೆ ಆ ಚೇತನದ ಬಗೆಗೆ ಏನನ್ನೂ ಹೇಳಿದಂತಾಗದು.

ತಿರುವಾರೂರೆಂಬ ಹಳ್ಳಿಯಲ್ಲಿ ಸಂಪ್ರದಾಯಸ್ಥ ಮನೆತನದಲ್ಲಿ ಜನಿಸಿ, ವಂಶಪಾರಂಪರ್ಯವಾಗಿ ಮಡುಗಟ್ಟಿದ್ದ ಸಂಗೀತ ಸಾಹಿತ್ಯ ಶಾಸ್ತ್ರವಿದ್ವತ್ತುಗಳ ವಾತಾವರಣದಲ್ಲಿ ಬೆಳೆದ ತ್ಯಾಗರಾಜರಿಗೆ ಸಂಗೀತವಿದ್ಯೆ, ಸಾಹಿತ್ಯಾಭಿರುಚಿ, ಶಾಸ್ತ್ರಜ್ಞಾನಗಳು ಕೈಗೂಡಿದ್ದರಲ್ಲಿ ಅಚ್ಚರಿಯೇನಿಲ್ಲ. ತ್ಯಾಗರಾಜರು ಆಹ್ಲಾದಕರವಾದ, ಸಂಗೀತವನ್ನು ರಚಿಸಿದರು, ಸಂಶೋಧನೆಗಳನ್ನು ಮಾಡಿದರು, ಹೊಸ ರಾಗಗಳನ್ನು ಕಂಡುಹಿಡಿದರು, ಹೊಸಹೊಸ ಪ್ರಯೋಗಗಳನ್ನು ಮಾಡಿದರು, ಕರ್ಣಾಟಕ ಸಂಗೀತಕ್ಕೆ ದಾರಿಯನ್ನು ರೂಪಿಸಿದರು - ಇದು ಅವರ ಸಂಗೀತ ಪ್ರತಿಭೆಯ ಮಾತಾದರೆ, ಅದರ ಸಾಹಿತ್ಯಾಂಶವೂ ಸಂಗೀತಾಂಶಕ್ಕೆ ಹೊಯಿಗೈಯ್ಯಾಗಿ ನಿಲ್ಲುವಂಥದೇ - ‘ನೌಕಾಚರಿತ್ರೆ’ ಮೊದಲಾದ ಗೇಯನಾಟಕಗಳೂ ಸಾಹಿತ್ಯ ಸಂಗೀತಗಳ ಹದವಾದ ನೇಯ್ಗೆಯೇ. ಆದರೆ ತ್ಯಾಗರಾಜರ ವ್ಯಕ್ತಿತ್ವ ಈ ಪ್ರತಿಭೆಯನ್ನು ಮೀರಿದ್ದು. ಪುರಂದರದಾಸರ ಹೆಜ್ಜೆಯಲ್ಲಿ ಹೆಜ್ಜೆಯಿಟ್ಟು ಸಾಗಿದ ತ್ಯಾಗರಾಜರದ್ದು ಸಂಗೀತರೂಪದ ದಾಸರಚನೆಗಳೇ. ಇತರ ದಾಸರಚನೆಗಳಂತಲ್ಲದೇ ತ್ಯಾಗರಾಜರ ರಚನೆಗಳ ಸಂಗೀತಾಂಶ, ಅವರ ಶಿಷ್ಯಪರಂಪರೆಯ ಶ್ರದ್ಧೆಯಿಂದಾಗಿ ಮುಕ್ಕಾಗದೇ ಉಳಿದು ಬಂದಿದೆಯಷ್ಟೇ.

ಅಣ್ಣಮಾಚಾರ್ಯ, ಪುರಂದರದಾಸ, ಭದ್ರಾಚಲ ರಾಮದಾಸರೇ ಮೊದಲಾದ ಪೂರ್ವಸೂರಿಗಳ ದಟ್ಟವಾದ ಪ್ರಭಾವ, ತಮ್ಮ ಪರಿಸರದಲ್ಲೇ ದಟ್ಟವಾಗಿದ್ದ ಸಂಗೀತ-ಸಾಹಿತ್ಯ-ಶಾಸ್ತ್ರಜ್ಞಾನ, ದೈವಪ್ರೀತಿ, ಪ್ರತಿಭೆ, ಅನುಭಾವಗಳ ಪರಿಪಾಕ, ಕವಿಹೃದಯದ ಶ್ರೀ ತ್ಯಾಗರಾಜರು. ಅವರ ಪ್ರತಿಭೆಯೇನಿದ್ದರೂ ಈ ಕವಿಹೃದಯದ ಕೈಯ ಸಲಕರಣೆಯಷ್ಟೇ.

ರಾಮ, ತ್ಯಾಗರಾಜರ ಭಾವಜೀವನದ ಅವಿಭಾಜ್ಯ ಅಂಗ - ಕೃಷ್ಣನಂತೆ ಭಾಗವತದ ಹಂದರದಿಂದ ಬಂದು ಆಡಿ ಹೋಗುವ ದೈವಶಿಶುವಲ್ಲ ಈತ - ‘ಮಾನವೇಂದ್ರ’, ಆತ್ಮಬಂಧು; ತಾನಾತನ ಪರಿವಾರ - ‘ಸೀತಮ್ಮ ಮಾಯಮ್ಮ, ಶ್ರೀರಾಮುಡು ಮನ ತಂಡ್ರಿ’ - ಅಷ್ಟೇ ಅಲ್ಲ, ‘ವಾತಾತ್ಮಜ ಸೌಮಿತ್ರಿ ವೈನತೇಯ ರಿಪುಮರ್ದನ ಧಾತ ಭರತಾದುಲು ಸೋದರುಲು’. ಇಂತಹ ಭಕ್ತನ ಮೊರೆಯನ್ನು ರಾಮ ಆಲಿಸುವುದು ಏನಾಶ್ಚರ್ಯ? ಮನೆಗೇ ನಡೆದು ಬರುತ್ತಾನೆ, ‘ನನ್ನು ಪಾಲಿಂಪ ನಡಚಿ ವಚ್ಚಿತಿವೋ ನಾ ಪ್ರಾಣನಾಥಾ’ ಎಂದು ಭಕ್ತನಿತ್ತ ಹಾಲುಹಣ್ಣನ್ನು ಸ್ವೀಕರಿಸುತ್ತಾನೆ, ಆನಂದಭೈರವಿಯ ಜೋಗುಳವನ್ನಾಲಿಸುತ್ತಾ ನೀಲಾಂಬರಿಯ ಉಯ್ಯಾಲೆಯಲ್ಲಿ ತೂಗಿಸಿಕೊಳ್ಳುತ್ತಾನೆ, ಏನನ್ನೋ ಹೇಳುತ್ತಾನೆ, ತೋರುತ್ತಾನೆ, ನಗುನಗುತ್ತಾ ಮರೆಯಾಗುತ್ತಾನೆ, ಸತಾಯಿಸುತ್ತಾನೆ. ಆದರೆ ಕಟ್ಟಕಡೆಗೆ ಮೇಲೆತ್ತಿಯೇ ಎತ್ತುತ್ತಾನೆ, ಹಾಗೊಂದು ನಂಬಿಕೆಯಲ್ಲ, ಗಟ್ಟಿಯರಿವು ಭಕ್ತನಿಗಿದೆ - ಆದರೆ ತನ್ನಂತಹ ‘ದುಡುಕ’ನನ್ನೂ ಹೇಗೆ ಮೇಲೆತ್ತಿಬಿಡುತ್ತಾನೋ ಎಂಬ ಕುತೂಹಲ - ‘ಎಟುಲ ಬ್ರೋತುವೋ ತೆಲಿಯ ಏಕಾಂತ ರಾಮಯ್ಯ’ ಎಂದು ಬೆರಗಾಗುತ್ತಾರೆ ತ್ಯಾಗರಾಜರು. ‘ನಗುಮೋಮುಗನಲೇನಿ’ ಉಂಟಾದ ಅಗಲಿಕೆಯ ದುಃಖವನ್ನು ಪರಿಹರಿಸಲು ಕೊನೆಗೂ ಆ ನಗೆಮೊಗದರಸ ಸೀತಾ ಭರತ ಲಕ್ಷ್ಮಣ ಶತ್ರುಘ್ನ ಸಹಿತ ತನ್ನ ಭವ್ಯರೂಪದಲ್ಲಿ ದರ್ಶನವಿತ್ತಾಗ ‘ಕನುಗೊಂಟಿನಿ ಶ್ರೀರಾಮುನಿ ನೇಡು’ ಎಂದು ಕುಣಿದಾಡಿಬಿಡುತ್ತಾರೆ, ತ್ಯಾಗರಾಜರು.

ಇಂತಹ ‘ಸ್ವರರಾಗಸುಧಾರಸಯುತಭಕ್ತಿ’ಯ ಮಾಧುರ್ಯವನ್ನೀಂಟುತ್ತಾ ‘ರಾಮಭಕ್ತಿಸಾಮ್ರಾಜ್ಯ’ದಲ್ಲಿ ಓಲಾಡುವ ಭಕ್ತ ಕವಿಗೆ, ನಿರ್ಗುಣ ನಿರುಪಾಧಿಕ ನಿರ್ವೇದಕವಾದ ಅದ್ವೈತಸಿದ್ಧಿ ಹೇಗೆ ರುಚಿಸೀತು? ಅದನ್ನವರು ಬಾಯಿಬಿಟ್ಟೇ ನುಡಿಯುತ್ತಾರೆ - ‘ದ್ವೈತಮು ಸುಖಮಾ ಅದ್ವೈತಮು ಸುಖಮಾ?’ ಸ್ವತಃ ಅದ್ವೈತಿಗಳೂ ಶಾಸ್ತ್ರವೇತ್ತರೂ ಆದ ತ್ಯಾಗರಾಜರಿಗೆ ಅದ್ವೈತವೇ ಅಂತಿಮ ಸತ್ಯವೆಂಬ ಅರಿವಿಲ್ಲದಿಲ್ಲ; ಆದರೆ ಭಾವುಕ ಮನಸ್ಸು ಸರಿತಪ್ಪುಗಳ ಚರ್ಚೆಯನ್ನೊಲ್ಲದು. ಭಕ್ತಿರಸವನ್ನೀಂಟಿದ ಮನಸ್ಸಿಗೆ, ಗಮ್ಯಕ್ಕಿಂತಾ ಮಾರ್ಗವೇ ರಮ್ಯ. ಅದೇ ಸುಖ - ಆದ್ದರಿಂದಲೇ ದ್ವೈತವು ‘ಸರಿ’ಯೋ ಅದ್ವೈತವೋ ಎಂಬ ಪ್ರಶ್ನೆಯನ್ನು ತ್ಯಾಗರಾಜರು ಎತ್ತುವುದೇ ಇಲ್ಲ, ‘ಸುಖಮಾ’ ಎಂಬುದಷ್ಟೇ ಅವರ ಕವಿಹೃದಯದ ಪ್ರಶ್ನೆ.

ಶ್ರೀರಾಮನನ್ನು ನವರತ್ನಮಂಟಪದಲ್ಲಿಟ್ಟು ‘ನಾ ಭಾಗ್ಯಮಾ’ ಎಂದು ಪೂಜಿಸುವ ತ್ಯಾಗರಾಜರು ನಿಶ್ಚಯವಾಗಿ ನಮ್ಮ ಭಾಗ್ಯ. ಈ ಸಂತಮಹನೀಯರ ಪುಣ್ಯಾರಾಧನೆಯಂದು ನಾವವರನ್ನು ಪ್ರಾರ್ಥಿಸಬಹುದಾದದ್ದು ಇಷ್ಟು - ‘ಭಾವುಕಮಗು ಸಾತ್ತ್ವಿಕ ಭಕ್ತಿ ಭಿಕ್ಷಲೀಯವೇ.’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT