ಗುರುವಾರ , ಸೆಪ್ಟೆಂಬರ್ 23, 2021
22 °C

ನಿಶ್ಯಬ್ದವಾದ ಮಣಿಯ ಮೃದಂಗ

ಪ್ರೊ.ಮೈಸೂರು ವಿ. ಸುಬ್ರಹ್ಮಣ್ಯ Updated:

ಅಕ್ಷರ ಗಾತ್ರ : | |

Prajavani

ಒಂದು ವಾರದ ಹಿಂದೆ ನಿಧನರಾದ ಟಿ.ಎ.ಎಸ್. ಮಣಿ ಅವರು ದೊಡ್ಡ ಸಂಗೀತ ಮನೆತನಕ್ಕೆ ಸೇರಿದವರು. ಕಳೆದ ಶತಮಾನದಲ್ಲಿ ಬಹುಪ್ರಸಿದ್ಧರಾಗಿದ್ದ ಪಾಲ್ಘಾಟ್ ಪರಮೇಶ್ವರ ಅಯ್ಯರ್ ಅವರು ಮಣಿಯವರ ತಾತ. ಅವರ ತಂದೆ ಅರುಣಾಚಲ ಭಾಗವತರು ತಮ್ಮ ಸಹೋದರ ಸೋಮೇಶ್ವರ ಅಯ್ಯರ್ ಅವರ ಜೊತೆಗೂಡಿ ಯುಗಳಗಾಯನ ನೀಡುತ್ತಿದ್ದರು. ಮೈಸೂರು ಮಹಾರಾಜರ ಮುಂದೆಯೂ ಕಾರ್ಯಕ್ರಮ ನೀಡಿ ಮಾನಿತರಾಗಿದ್ದರು.

ಮಣಿ ಅವರ ಇಬ್ಬರೂ ಸಹೋದರಿಯರು -ವಿದುಷಿ ಜಯಾ ಮತ್ತು ಭಾಗ್ಯಾ. ಆ ಕಾಲದ ಪ್ರಸಿದ್ಧ ಗಾಯಕ ಜೋಡಿ. ಹೀಗಾಗಿ ಅವರು ‘ಹುಟ್ಟು ಕಲಾವಿದ’ ಎಂದೇ ಹೇಳಬಹುದು. ಅಂದಿನ ಗಣ್ಯ ಮೃದಂಗವಾದಕರಾಗಿದ್ದ ಸಿ.ಕೆ. ಅಯ್ಯಾಮಣಿ ಅಯ್ಯರ್ ಅವರಲ್ಲಿ ಶಿಕ್ಷಣ ಪಡೆಯಲು ಅವರಿಗೆ ಸಹೋದರಿಯರು ನೆರವಾದರು.

ವಿಜಯದಶಮಿಯ ಶುಭ ದಿನದಂದು ಗುರುಗಳು ಮಣಿಯವರ ಕೈಯಲ್ಲಿ ಮೃದಂಗದ ಮೇಲೆ ‘ತ, ಧೀ, ತೊಂ, ನಂ’ ನುಡಿಸಿಸಿ ಅವರ ಮೃದಂಗ ಯಾತ್ರೆಗೆ ನಾಂದಿ ಹಾಡಿದರು. ತೀವ್ರ ಶ್ರದ್ಧೆ ಹಾಗೂ ನಿರಂತರ ಸಾಧನೆಗಳಿಂದ ಅವರು ತಮ್ಮ ಹತ್ತನೆಯ ವಯಸ್ಸಿನಲ್ಲೇ ಕಛೇರಿ ನೀಡಲು ಪ್ರಾರಂಭಿಸಿ ಮುಂದೆ ರಾಜ್ಯ -ರಾಷ್ಟ್ರದ ಪ್ರಮುಖ ವಿದ್ವಾಂಸರುಗಳಿಗೆಲ್ಲಾ ಪಕ್ವವಾದ, ಪಕ್ಕವಾದ್ಯ ನುಡಿಸಿದ್ದಾರೆ.

ಏಳು ದಶಕಗಳ ಕಾಲದಲ್ಲಿ ಮೂರು ತಲೆಮಾರಿನ ಕಲಾವಿದರಿಗೆ ಮೃದಂಗ ಪಕ್ಕವಾದ್ಯ ನುಡಿಸಿರುವ ಹೆಗ್ಗಳಿಕೆ ಅವರದು. ಚೆಂಬೈ, ಶೆಮ್ಮಂಗುಡಿ, ಎಂ.ಎಸ್. ಸುಬ್ಬುಲಕ್ಷ್ಮಿ, ಪಟ್ಟಮ್ಮಾಳ್, ಎಂ.ಎಲ್. ವಸಂತಕುಮಾರಿ, ದೊರೆಸ್ವಾಮಿ ಅಯ್ಯಂಗಾರ್, ಆರ್.ಕೆ. ಶ್ರೀಕಂಠನ್, ಬಾಲಮುರಳೀಕೃಷ್ಣ, ಲಾಲ್‍ಗುಡಿ, ಆರ್.ಆರ್. ಕೇಶವಮೂರ್ತಿ, ಜೇಸುದಾಸ್, ಚಿಟ್ಟಿಬಾಬು, ದೇವೇಂದ್ರಪ್ಪ, ಸ್ವರಮೂರ್ತಿ, ಬಿ.ಎಸ್. ರಾಜಯ್ಯಂಗಾರ್, ಮಾಲಿ ಮುಂತಾದವರಿಗೆ ದಶಕಗಳ ಕಾಲ ಪಕ್ಕವಾದ್ಯ ನುಡಿಸಿದ್ದಾರೆ. ಈ ಪಟ್ಟಿ ಇನ್ನೂ ಸುದೀರ್ಘವಾದುದು.

ಪ್ರತಿಭಾವಂತ ಗಾಯಕಿ ಆರ್.ಎ. ರಮಾಮಣಿ ಅವರು ಮಣಿ ಅವರ ಧರ್ಮಪತ್ನಿಯಾದ ಮೇಲೆ ಇಬ್ಬರ ಸಂಗೀತ ಪಥವು ಅರ್ಥಪೂರ್ಣವಾಗಿ ಮುನ್ನಡೆಯಿತು. ಮೃದಂಗವಾದಕರಾಗಿ ಮಣಿಯವರು ಓರ್ವ ಆದರ್ಶ ಪಕ್ಕವಾದ್ಯಗಾರ. ಪ್ರಧಾನ ಕಲಾವಿದರನ್ನು ನೆರಳಿನಂತೆ ಅನುಸರಿಸುತ್ತಾ ಯಾವ ಆಡಂಬರ -ಅತಿರೇಕಗಳಿಗೆ ಕೈಹಾಕದೇ ಹಿತಮಿತವಾಗಿ ನುಡಿಸುತ್ತಿದ್ದರು. ತಮ್ಮದೇ ಆದ ಶೊಲ್ಲುಕಟ್ಟು, ಸ್ವಾರಸ್ಯಕರ ಮುಕ್ತಾಯಗಳಿಂದ ಅನುಭವಪೂರಿತ ಕೈಚಳಕದಿಂದ ತನಿಯನ್ನು ಆಕರ್ಷಕವಾಗಿ ನುಡಿಸುತ್ತಿದ್ದರು. ತಮ್ಮೊಡನೆ ಉಪ ಪಕ್ಕವಾದ್ಯಗಾರರನ್ನು ಜೊತೆಗೆ ಸೇರಿಸಿಕೊಂಡು ಕಛೇರಿಯ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದರು.

ತಾಳ ತರಂಗಿಣಿ

ಲಯವಾದ್ಯಗಳು ಪಕ್ಕವಾದ್ಯವಾಗಿ ಪ್ರಸಿದ್ಧ. ಆದರೆ, ಮೃದಂಗ ಮುಂತಾದ ಲಯವಾದ್ಯಗಳಿಗೆ ತನ್ನದೇ ಆದ ವ್ಯಕ್ತಿತ್ವ ಇಲ್ಲವೇ? ಇದನ್ನು ಮನಗಂಡ ಮಣಿ ಮತ್ತು ರಮಾಮಣಿ ಅವರು ‘ತಾಳ ತರಂಗಿಣಿ’ ಎಂಬ ಲಯವಾದ್ಯ ಗೋಷ್ಠಿಯನ್ನು ಪ್ರಾರಂಭಿಸಿದರು. ಅದರಲ್ಲಿ ಮೃದಂಗವಲ್ಲದೇ ಘಟ, ಖಂಜರಿ, ಡೋಲಕ್, ಡೋಲು ಮುಂತಾದ ವಾದ್ಯಗಳು ಮೇಳೈಸಿ ಕೇಳುಗರಿಗೆ ಒಂದು ಹೊಸ ಚೇತೋಹಾರಿ ಅನುಭವ ನೀಡಿತು.

ಇದರಲ್ಲಿ ಮಣಿಯವರು ಮೃದಂಗವಾದನದಲ್ಲಿ ಮಿಂಚಿದರೆ, ರಮಾಮಣಿ ಅವರು ಕೊನ್ನಕೋಲ್‌ನಲ್ಲಿ ಕೇಳುಗರನ್ನು ಕುಣಿಸುತ್ತಿದ್ದರು. ಮುಂದೆ ಕರ್ನಾಟಕ -ಜಾಸ್ ತಂಡ ಪ್ರಪಂಚದ ಅನೇಕ ರಾಷ್ಟ್ರಗಳಲ್ಲಿ ಕಾರ್ಯಕ್ರಮ ನೀಡಿ ಕರ್ನಾಟಕ ಸಂಗೀತದ ಲಯವಾದ್ಯಗಳ ವ್ಯಾಪ್ತಿಯನ್ನು ವಿಸ್ತರಿಸಿದ ಕೀರ್ತಿಯು ಅವರಿಗೆ ಸಲ್ಲುತ್ತದೆ.

1964ರಲ್ಲಿ ಕರ್ನಾಟಕ ಕಾಲೇಜ್ ಆಫ್ ಪರ್ಕಷನ್‌ ಸ್ಥಾಪಿಸಿದ ಮಣಿಯವರು ನೂರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿ ಬೆಂಗಳೂರಿನಲ್ಲಿದ್ದ ಲಯವಾದ್ಯಗಾರರ ಕೊರತೆ ನೀಗಿಸಿದರು. ಇಂದು ವೇದಿಕೆ ಮೇಲೆ ಬೆಳಗುತ್ತಿರುವ ಅನೇಕ ಲಯವಾದ್ಯಗಾರರು ಮಣಿಯವರ ಶಿಷ್ಯರೇ ಎಂಬುದು ಗಮನಾರ್ಹ.

ಅವರ ಶಿಷ್ಯರಲ್ಲಿ ಅನೇಕ ವಿದೇಶಿಯರೂ ಇದ್ದಾರೆ. ಶಿಸ್ತು ಮತ್ತು ದಕ್ಷ ಬೋಧನೆಗೆ ಹೆಸರಾದ ಅವರು ದೊಡ್ಡ ಶಿಷ್ಯ ಸಂಪತ್ತನ್ನೇ ಪಡೆದಿದ್ದರು.

ಶಿಷ್ಯರೊಡಗೂಡಿ ಅವರು ಭಾಗವಹಿಸಿದ ಅಂತರರಾಷ್ಟ್ರೀಯ ಉತ್ಸವಗಳಲ್ಲಿ ಕೆಲವನ್ನು ಇಲ್ಲಿ ಸ್ಮರಿಸಬಹುದು; ಪೋಲೆಂಡ್‌ನಲ್ಲಿ ನಡೆದ ಜಾಸ್, ಜಂಬೂರಿ, ಕೆನಡಾದಲ್ಲಿ ನಡೆದ ಯಡ್‍ಮೆಂಟನ್ ಫೆಸ್ಟಿವಲ್, ಜರ್ಮನಿಯ ಅಂತರರಾಷ್ಟ್ರೀಯ ಲಯವಾದ್ಯಗಳ ಮೇಳ; ರಷ್ಯಾದಲ್ಲಿ ನಡೆದ ಭಾರತೀಯ ಉತ್ಸವದಲ್ಲಿ ತಾಳ ತರಂಗಿಣಿಯನ್ನು ಕೇಳಿ ಹುಚ್ಚೆದ್ದ ಶ್ರೋತೃಗಳು ಸ್ಟಾಂಡಿಂಗ್ ಒವೇಶನ್ ನೀಡಿದ್ದು ಒಂದು ದಾಖಲೆಯೇ! ಹೀಗೆ ಅಮೆರಿಕ, ಹಾಲೆಂಡ್, ಹಾಂಗ್‌ಕಾಂಗ್, ಆಸ್ಟ್ರೇಲಿಯಾ ಮುಂತಾದ ಹಲವಾರು ದೇಶಗಳಲ್ಲಿ ಕೆ.ಸಿ.ಪಿ.ಯ ವಾದನ ಮೊಳಗಿದೆ.

ವಿಶ್ವದ ಬಹುಗಣ್ಯ ಕಲಾವಿದರು ಹಾಗೂ ತಂಡಗಳೊಡನೆ ಅವರು ಪಾಲ್ಗೊಂಡು ಪ್ರಖ್ಯಾತರಾಗಿದ್ದಾರೆ. ಮೆನಾರ್ಡ್ ಫರ್ಗುಷನ್, ಕ್ರಿಶ್ಚಿಯನ್ ಬುಚರ್ಡ್, ಲೂಯಿಸ್ ಬ್ಯಾಂಕ್, ಚಾರ್ಲಿಮ್ಯೂರಿಯನೊ ಮುಂತಾದವರು ಮಣಿ ಅವರ ಮೃದಂಗ ಸಾಥ್ ಹಾಗೂ ನೂತನ ರಚನೆಗಳಿಗೆ ಮಾರು ಹೋಗಿದ್ದಾರೆ. ಈ ವಿದೇಶಿ ವಾದ್ಯಗಾರರೊಡನೆ ಬೆರೆತು, ಸಂಗಂ, ಎಂಬ್ರಿಯು, ಓರಿಯಂಟಲ್ ವಿಂಡ್  ಮುಂತಾದ ಸಿ.ಡಿ.ಗಳನ್ನು ತಂದು ಯೂರೋಪ್‍ನಲ್ಲಿಯೂ ಅವರು ಮನೆ ಮಾತಾಗಿದ್ದಾರೆ.

ಸಂಗೀತ ಶಾಸ್ತ್ರೀಯತೆಯನ್ನು ಉಳಿಸಿಕೊಂಡು ಹೊಸ ಹೊಸ ಆವಿಷ್ಕಾರಗಳನ್ನು ಮಾಡುತ್ತ ಲಯವಾದ್ಯಗಳ ಸಂಗೀತವನ್ನು ನಿತ್ಯ ನೂತನವಾಗಿಸುವ ಕಲೆಗಾರಿಕೆ ಅವರದ್ದಾಗಿತ್ತು. ತಮ್ಮ ಅನುಭವ ಪಾಂಡಿತ್ಯಗಳನ್ನು ಸೇರಿಸಿ ‘ಸೊಗಸುಗಾ ಮೃದಂಗ ತಾಳಮು’ ಎಂಬ ಪುಸ್ತಕವನ್ನು ಬರೆದು ಉಪಕರಿಸಿದ್ದಾರೆ.

ನಿತ್ಯಜೀವನದಲ್ಲಿ ಬಹುಸರಳರಾಗಿದ್ದ ಅವರು ಇಷ್ಟೆಲ್ಲಾ ಎತ್ತರಕ್ಕೆ ಏರಿದರೂ ನಿಗರ್ವಿಗಳಾಗಿದ್ದರು. ಸದಾ ಸಂಗೀತದ ಗುಂಗಿನಲ್ಲೇ ಇದ್ದು ಶಿಷ್ಯ ವಾತ್ಸಲ್ಯದಿಂದ ತುಳುಕುತ್ತಿದ್ದರು. ಸಹಜವಾಗೇ ಅವರಿಗೆ ಅನೇಕ ಬಿರುದು-ಗೌರವಗಳು ಸಂದಿದ್ದವು. ಅವುಗಳಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ‘ಕರ್ನಾಟಕ ಕಲಾಶ್ರೀ’, ಗಾನಕಲಾ ಪರಿಷತ್ತಿನಿಂದ ‘ಗಾನಕಲಾ ಭೂಷಣ’, ಪರ್ಕಸಿವ್ ಆರ್ಟ್ ಸೆಂಟರ್‌ನಿಂದ ‘ಮೃದಂಗ ಕಲಾ ಶಿರೋಮಣಿ’ ಮುಖ್ಯವಾಗಿವೆ. ನಿರಂತರ ಸಾಧಕರಾಗಿದ್ದ ಅವರು, ಯುವ ಕಲಾವಿದರಿಗೆ ಎಂದೂ ಸ್ಫೂರ್ತಿದಾತರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು