ಶನಿವಾರ, ಅಕ್ಟೋಬರ್ 24, 2020
24 °C
‘ಪ್ರಜಾವಾಣಿ’ ಆನ್‌ಲೈನ್ ದಸರಾ ಸಂಗೀತೋತ್ಸವಕ್ಕೆ ಚಾಲನೆ ನೀಡಿದ ಪಂಡಿತ್ ರಾಜೀವ್‌ ತಾರಾನಾಥ್‌

ನೊಂದ ಮನಗಳಿಗೆ ಸಂಗೀತ ಮದ್ದು: ಪಂಡಿತ್ ರಾಜೀವ್‌ ತಾರಾನಾಥ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಕೋವಿಡ್‌ನಿಂದ ನಾವೆಲ್ಲರೂ ಕೆಟ್ಟ ಕತ್ತಲೆಯಲ್ಲಿದ್ದೇವೆ. ಹುಮ್ಮಸ್ಸನ್ನೇ ಕಳೆದುಕೊಂಡಿದ್ದೇವೆ. ಇಂತಹ ಹೊತ್ತಲ್ಲಿ ‘ಪ್ರಜಾವಾಣಿ’ ಆಯೋಜಿಸಿರುವ ಸಂಗೀತ ಹಬ್ಬ ಎಲ್ಲರಿಗೂ ಔಷಧವಿದ್ದಂತೆ. ಇದು ಎಲ್ಲರನ್ನೂ ಹುರಿದುಂಬಿಸುವ ಕೆಲಸ ಮಾಡುತ್ತಿದೆ’ ಎಂದು ಖ್ಯಾತ ಸರೋದ್‌ ವಾದಕ, ಪದ್ಮಶ್ರೀ ಪುರಸ್ಕೃತ ಪಂಡಿತ್ ರಾಜೀವ್‌ ತಾರಾನಾಥ್‌ ಶನಿವಾರ ಇಲ್ಲಿ ಹೇಳಿದರು.

ಹತ್ತು ದಿನದ ‘ಪ್ರಜಾವಾಣಿ ಆನ್‌ಲೈನ್ ದಸರಾ ಸಂಗೀತೋತ್ಸವ’ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಎಲ್ಲೆಡೆ ಕೊರೊನಾದ್ದೇ ಮಾತು. ಕೊರೊನಾ ಕರುಣೆಯನ್ನು ಬಿಟ್ಟು ಬರ್ತಿಲ್ಲ. ಉದಾಸೀನ ಕವಿದಿದೆ. ಬೇಸರ ಆವರಿಸಿದೆ. ಈ ಹೊತ್ತಲ್ಲಿ ಈ ಸಂಗೀತ ಹಬ್ಬ ನೊಂದು ಬೆಂದ ಮನಸ್ಸುಗಳಿಗೆ ಔಷಧದಂತೆ ಪರಿಣಾಮಕಾರಿಯಾಗಬಲ್ಲದು’ ಎಂದರು.

‘ಸಂಸ್ಕೃತಿ ಬಹಳ ಮುಖ್ಯ. ಏನು ತಿನ್ನಬೇಕು. ಏನನ್ನು ತಿನ್ನಬಾರದು ಎಂಬುದೇ ಸಂಸ್ಕೃತಿಯಲ್ಲ. ತಿಂದವರನ್ನು ಕೊಲ್ಲುವುದು ಸಂಸ್ಕೃತಿಯಾ..? ರಾಗ ಕೇಳೋಣ, ಹಾಡು ಕೇಳೋಣ, ವಾದ್ಯ ಕೇಳೋಣ ಎಂಬ ಚಿಕಿತ್ಸಕ ಮಾತುಗಳು ಈ ಹಬ್ಬದೊಳಗೆ ಅಡಕಗೊಂಡಿವೆ’ ಎಂದು ರಾಜೀವ್ ತಾರಾನಾಥ್ ಹೇಳಿದರು.

‘ನಾವು ಕ್ರೂರಿಗಳಾಗಿದ್ದೇವೆ. ರಾಜಕೀಯ ದ್ವೇಷಕ್ಕಾಗಿ ಮತ್ತೂ ಕೊಲ್ತೀವಿ. ಮನೆಗಳನ್ನು ಸುಡ್ತೀವಿ. ಒಂದಿಡಿ ಜನಾಂಗವನ್ನು ತುಳಿದು ಬಿಡ್ತೀವಿ. ಅದು ತಪ್ಪು. ಇದೆಲ್ಲಕ್ಕಿಂತ ಮೇಲ್ಮಟ್ಟದ್ದು ಸಂಗೀತ. ನವಿರಾದ, ತಾಯಿಯಂತಹ ಸಂಸ್ಕೃತಿಯದು. ‘ಪ್ರಜಾವಾಣಿ’ ಈ ಹಬ್ಬದ ಮೂಲಕ ಸಂಗೀತ ಉಣಬಡಿಸಲು ಮುಂದಾಗಿದೆ’ ಎಂದು ತಿಳಿಸಿದರು.

‘ದಸರಾ ಕನ್ನಡದ ಹಬ್ಬ. ಕನ್ನಡಿಗರ ಹಬ್ಬ. ಕರ್ನಾಟಕ ಮತ್ತು ಪಶ್ಚಿಮ ಬಂಗಾಳದಲ್ಲಿ ಮಾತ್ರ ಹೆಣ್ಣು ದೇವತೆಯ ಆರಾಧನೆ ನಡೆಯೋದು. ಗಂಡಸರು ದುನಿಯಾ ಆಳಿದ್ದಾರೆ. ಜೊತೆಗೆ ಕೆಡಿಸಿಯೂ ಇದ್ದಾರೆ. ದುನಿಯಾ ಕಾಪಾಡಲು, ಆರೈಸಲು, ಬೆಳೆಸಲು ಹೆಂಗಸರು ಬರಬೇಕಿದೆ’ ಎಂದು ಅಭಿಪ್ರಾಯಪಟ್ಟರು.

‘ಪ್ರಜಾವಾಣಿ’ಯ ಸುದ್ದಿ ಸಂಪಾದಕ ಸುದೇಶ್‌ ದೊಡ್ಡಪಾಳ್ಯ ಮಾತನಾಡಿ ‘ಸದಾ ಹೊಸ ಆಲೋಚನೆ, ಚಿಂತನೆ ಮೈಗೂಡಿಸಿಕೊಳ್ಳುವ ‘ಪ್ರಜಾವಾಣಿ’ ಹೊಸ ದಾರಿಯಲ್ಲಿ ನಡೆಯುವ ಪ್ರಯತ್ನವನ್ನು ನಡೆಸುತ್ತಿದೆ. ಕನ್ನಡ ಪತ್ರಿಕೋದ್ಯಮದಲ್ಲಿ ಇದೊಂದು ಹೆಜ್ಜೆ ಗುರುತಾಗಿದೆ’ ಎಂದರು.

ನಿವೃತ್ತ ಐಜಿಪಿ ಸಿ.ಚಂದ್ರಶೇಖರ್ ಅಭಿನಂದನಾ ಭಾಷಣ ಮಾಡಿದರು. ಪ್ರೊ.ನಾಗಣ್ಣ ಕಾರ್ಯಕ್ರಮ ನಿರೂಪಿಸಿದರು.

88ನೇ ಜನ್ಮದಿನ: ಗೌರವ ಸಲ್ಲಿಕೆ

ತಮ್ಮ 88ನೇ ಜನ್ಮದಿನ ಆಚರಿಸಿಕೊಂಡ ಪಂಡಿತ್ ರಾಜೀವ್ ತಾರಾನಾಥ್ ಅವರಿಗೆ ‘ಪ್ರಜಾವಾಣಿ’ ವಿಶೇಷ ಗೌರವ ಸಲ್ಲಿಸಿತು.

ಸುದ್ದಿ ಸಂಪಾದಕ ಸುದೇಶ್‌ ದೊಡ್ಡಪಾಳ್ಯ, ಮೈಸೂರು ಬ್ಯುರೋ ಮುಖ್ಯಸ್ಥರಾದ ವಿಶಾಲಾಕ್ಷಿ ಅಕ್ಕಿ ಅವರು ರಾಜೀವ್‌ ತಾರಾನಾಥರಿಗೆ ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ, ಹೂವಿನ ಹಾರ ಹಾಕಿ ಗೌರವಿಸಿದರು.

ಯುಗಳ ಪಿಟೀಲು ವಾದನ

ಉದ್ಘಾಟನಾ ಸಮಾರಂಭದ ಬಳಿಕ ಡಾ.ಮೈಸೂರು ಮಂಜುನಾಥ್ ತಮ್ಮ ಪುತ್ರ ವಿದ್ವಾನ್‌ ಸುಮಂತ್‌ ಮಂಜುನಾಥ್‌ ಅವರೊಂದಿಗೆ ಯುಗಳ ಪಿಟೀಲು ವಾದನದ ಸಂಗೀತ ಕಛೇರಿ ನಡೆಸಿಕೊಟ್ಟರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು