ಶುಕ್ರವಾರ, ಸೆಪ್ಟೆಂಬರ್ 18, 2020
24 °C

ತಂಬೂರಿಯೇ ಬದುಕೆನ್ನುವ ರಾಮಯ್ಯ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಇವರು ತಂಬೂರಿ ರಾಮಯ್ಯ. ತಂಬೂರಿಯನ್ನೇ ನಂಬಿ ಬದುಕು ಕಟ್ಟಿಕೊಂಡವರು. ತಂಬೂರಿಗೆ ಮರುಜೀವ ತುಂಬುವುದರಲ್ಲೇ ಸಾರ್ಥಕ್ಯ ಕಂಡುಕೊಂಡ ಕಾಯಕಯೋಗಿ.

ತಮ್ಮದೇ ಪುಟ್ಟ ಜಾಗದಲ್ಲಿ ತಂಬೂರಿ ಬೆಳೆಯುತ್ತಾರೆ, ಪ್ರಗತಿಪರ ರೈತರಿಗೆ ಸೋರೆ ಕಾಯಿ ಬೆಳೆಯುವುದನ್ನು ಹೇಳಿಕೊಡುತ್ತಾರೆ, ಇದರಿಂದಲೇ ತಂಬೂರಿ ವಾದ್ಯ ತಯಾರಿಸುತ್ತಾರೆ, ಹಂಚುತ್ತಾರೆ. ತಂಬೂರಿ ನುಡಿಸುವ ಕಲಾವೈಭವದ ಪ್ರಚಾರ ಮಾಡುತ್ತಾರೆ, ಆಸಕ್ತಿ ಇರುವವರಿಗೆ ಈ ವಾದ್ಯ ನುಡಿಸುವ ಕಲೆಯನ್ನೂ ಧಾರೆ ಎರೆಯುತ್ತಾರೆ ರಾಮಯ್ಯ.

ತಂಬೂರಿ (ಏಕತಾರಿ), ಕಿನ್ನರಿ, ಪುಂಗಿ, ಚಿಟಕಿ, ತಮಟೆ ಕಟ್ಟಿಕೊಂಡು, ಸೈಕಲ್‌ ಮೇಲೆ ಊರು ಸುತ್ತುವ ಇವರು ಐದೂ ವಾದ್ಯಗಳನ್ನು ನುಡಿಸುತ್ತ, ತತ್ವಪದ, ದಾಸರಪದ, ಜಾನಪದ ಗೀತೆಗಳನ್ನು ಹಾಡುತ್ತ ಸಾಗುವ ಅಲೆಮಾರಿ.

ತಂಬೂರಿಯೇ ನನ್ನವ್ವ...

‘ಕೆಂಗೇರಿ ಪಕ್ಕದ ಗೊಲ್ಲಹಳ್ಳಿ ಹೋಬಳಿ ಕೆಂಚನಪಾಳ್ಯ ನಮ್ಮೂರು. ತಂಬೂರಿಯೇ ನನ್ನ ಬದುಕು – ಭವಿಷ್ಯ. ಸೋರೆ, ಬುರುಡೆ, ಬಿದಿರು ಬೋಕಿ, ಬಿಲ್ಲೆ, ತಂತಿಗಳೇ ನನ್ನ ಬಂಧುಗಳು. ಇದರ ಹಿಂದೊಂದು ಕತೆಯೇ ಇದೆ. ಜನಪದ ಗಾಯಕ ಮೇಷ್ಟ್ರ ಮನೆಯಲ್ಲಿ ಜೀತಕ್ಕಿದ್ದೆ. ಅವರು ವಿದ್ಯಾರ್ಥಿಗಳಿಗೆ ಸಂಗೀತ ಹೇಳಿಕೊಡುತ್ತಿದ್ದರು. ಪದ ಕಟ್ಟಿ, ಹಾಡುತ್ತಿದ್ದರು. ಕೆಲಸ ಮಾಡುತ್ತ ಅವರ ಸಂಗೀತ ಪಾಠಕ್ಕೆ ಕಿವಿಗೊಡುತ್ತಿದ್ದೆ. ಪದಗಳು ಬಾಯಿಪಾಠವಾದವು. ಮೋಟಪ್ಪ ಎಂಬುವವರ ಬಳಿ ತತ್ತ್ವಪದ ಕಲಿತೆ. ಅವರೇ ತಂಬೂರಿ ತಯಾರಿಕೆಯನ್ನೂ ಕಲಿಸಿದರು. ಅಂದಿನಿಂದ ಇದೇ ಬದುಕಾಗಿದೆ. ಕಲಿತವರು ಪ್ರೀತಿಯಿಂದ ಕೊಟ್ಟಿದ್ದೇ ನನಗೆ ಜೀವನಾಧಾರ’.

‘ಬಯಸಿದವರ ಮನೆಯಲ್ಲಿ ತಂಬೂರಿ ಇರಬೇಕು, ಹಂಬಲಿಸಿದವರ ಎದೆಯಲ್ಲಿ ತಂಬೂರಿ ತಳವೂರಬೇಕು ಎನ್ನುವುದು ಕನಸು.  ಜೀವನೋಪಾಯಕ್ಕೆ ಎರಡೇ ಎಕರೆ ಭೂಮಿ ಇದೆ. ಸತ್ತವರ ಮನೆಯಲ್ಲಿ ಭಜನೆಗೆ ಹೋಗುತ್ತೇನೆ. ವರ್ಷಕ್ಕೆ 200ರಷ್ಟು ತಂಬೂರಿಗಳನ್ನು ತಯಾರಿಸಿ, ಹಂಚುತ್ತೇನೆ. ಊರೂರು ಸುತ್ತಿ ಕಾರ್ಯಕ್ರಮ ನಡೆಸುತ್ತೇನೆ, ತರಬೇತಿ ನೀಡುತ್ತೇನೆ’ ಎನ್ನುತ್ತಾರೆ ರಾಮಯ್ಯ.

ಏಕದಾರಿ ಬೆಳಕು ತತ್ತ್ವಪದ ಜ್ಞಾನಮಾರ್ಗ

ತಂಬೂರಿ ರಾಮಯ್ಯ ಅವರ ಶ್ರೀ ಮಲೆಮಹದೇಶ್ವರ ಸಾಂಸ್ಕೃತಿಕ ಸೇವಾಟ್ರಸ್ಟ್‌ ವತಿಯಿಂದ ಇಂದು (ನ. 9) ಏಕದಾರಿ ಬೆಳಕು ತತ್ತ್ವಪದ ಜ್ಞಾನಮಾರ್ಗ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ವಿವಿಧ ತಂಡಗಳಿಂದ ತತ್ತ್ವಪದ ಗಾಯನವಿದೆ. ಜಿಲ್ಲಾ ಪಂಚಾಯಿತಿ ಸದಸ್ಯೆ ಕುಸುಮಾ ಶಿವರಾಮಯ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಗೊಲ್ಲಹಳ್ಳಿ ಗ್ರಾ.ಪಂ. ಅಧ್ಯಕ್ಷ ಕೆ.ಎಂ. ಮಹೇಶ, ಸದಸ್ಯ ಕೆ.ವೈ. ಶಿವಣ್ಣ ಅಧ್ಯಕ್ಷತೆ ವಹಿಸಲಿದ್ದಾರೆ.

ಸ್ಥಳ: ಕೆಂಚನಪಾಳ್ಯ ಅಶ್ವಥ್‌ ಕಟ್ಟೆ ಬಸ್‌ ನಿಲ್ದಾಣ, ಕೆಂಗೇರಿ ಹೋಬಳಿ. ಸಹಯೋಗ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ. ಸಮಯ:ನ.9 ಬೆಳಿಗ್ಗೆ 10.30.

ಸಂಪರ್ಕಕ್ಕೆ: 9008831169

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು