ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಗಮ ಸಂಗೀತದ ಹರಿಕಾರ ಪದ್ಮಚರಣರು

Last Updated 11 ಅಕ್ಟೋಬರ್ 2020, 3:57 IST
ಅಕ್ಷರ ಗಾತ್ರ
ADVERTISEMENT
""
""

ಪದ್ಮಚರಣ್ ಅವರದು ಸುಗಮ ಸಂಗೀತ ಲೋಕದಲ್ಲೊಂದು ಚಿರಸ್ಥಾಯಿಯಾಗಿ ನಿಲ್ಲುವಂತಹ ಹೆಸರು. ಕವಿ, ವಯೊಲಿನ್ ವಾದಕ, ರಾಗ ಸಂಯೋಜಕ, ಚಿಂತಕ, ದಾರ್ಶನಿಕ... ಹೀಗೆ ಅವರ ವ್ಯಕ್ತಿತ್ವಕ್ಕೆ ಬಹುಮುಖಿ ಆಯಾಮಗಳಿವೆ. ಅವರ ಜನ್ಮ ಶತಮಾನೋತ್ಸವ ಕೊರೊನಾ ಅಬ್ಬರದಲ್ಲಿ ಸದ್ದಿಲ್ಲದೆ ಸರಿದುಹೋಗಿದೆ. ಆದರೆ, ಅವರ ಶಿಷ್ಯಂದಿರ ಪಡೆ ಅಗಲಿದ ಮಹಾನ್‌ ಗುರುವಿಗೆ ಸಂಗೀತ ನಮನದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ...

***

ಹೋಟೆಲಿನ ಒಂದು ಇಕ್ಕಟ್ಟಾದ ಕೋಣೆ. ಅದೂ ಕಾರಿಡಾರಿನ ಮೂಲೆಯಲ್ಲಿ. ಗಾಳಿ ಬೆಳಕು ಅಷ್ಟಾಗಿಲ್ಲದ 10x8 ಅಡಿಯ ಕೋಣೆಯ ತುಂಬ ಪುಸ್ತಕಗಳ ರಾಶಿ. ಹಗ್ಗದ ಮೇಲೆ ತೂಗಾಡುವ ಟವೆಲ್ಲು-ಅಂಗಿಗಳು. ಮೂಲೆಯ ಪುಟ್ಟ ಮರದ ಮೇಜಿನ ತುಂಬ ಕಿಕ್ಕಿರಿದ ದೈನಂದಿನ ಬಳಕೆಯ ವಸ್ತುಗಳು, ಲೇಖನ ಸಾಮಗ್ರಿಗಳು. ಇಂಥ ಪುಟ್ಟಕೋಣೆಯ ಮುಚ್ಚಿದ ಬಾಗಿಲಿನ ಹಿಂದಿನಿಂದ ಸುಶ್ರಾವ್ಯ ಪಿಟೀಲುವಾದನ ತೂರಿಬರುತ್ತಿತ್ತು. ಸಂಗೀತದ ಗಂಧರ್ವ ಲೋಕವೊಂದು ಧುತ್ತನೇ ಸೃಷ್ಟಿಯಾಗಿಬಿಡುತ್ತಿತ್ತು. ಒಳಗೆ ಹುತ್ತದೊಳಗಿನ ಋಷಿಯಂತೆ ತಾದಾತ್ಮ್ಯದಿಂದ ಸಂಗೀತ ಧ್ಯಾನದೊಳಗೆ ಮುಳುಗಿಹೋಗಿರುತ್ತಿದ್ದ ಆ ರಾಗಋಷಿ ಯಾರು ಬಲ್ಲಿರಾ? ಅವರೇ ಸಂಗೀತಲೋಕದ ಧ್ರುವತಾರೆ ಪದ್ಮಚರಣರು.

ಪದ್ಮಚರಣರ ಆತ್ಮೀಯರೆಲ್ಲ ಅವರನ್ನು ಭೇಟಿಯಾಗುತ್ತಿದ್ದುದೇ ಆ ಹೋಟೆಲ್ಲಿನ ಕೋಣೆಯಲ್ಲಿ. ಮಂಕಾದ ವಾತಾವರಣದೊಳಗೆ ದೂಳು ಮುಸುಕಿದ ವಜ್ರದಂತೆ ಆ ಅಸಾಮಾನ್ಯ ಸಂಗೀತ ಸಾಧಕ ಕುಳಿತಿರುತ್ತಿದ್ದರು.

‘ಪದ್ಮಚರಣ’ -ಹೆಸರಲ್ಲೇ ಒಂದು ಬಗೆಯ ಮೋಡಿ. ಚಿಕ್ಕ-ಚೊಕ್ಕದಾದ ಅನ್ವರ್ಥ ನಾಮ. ಪದ್ಮಚರಣರ ನಿಜ ನಾಮಧೇಯ ಆಸೂರಿ ವೆಂಕಟಕೃಷ್ಣಮಾಚಾರ್ಯ. ಅವರ ನೆಚ್ಚಿನ ಸಂತ ಮಹಾಕವಿ, ಕಲಾವಿದ ‘ಗೀತಗೋವಿಂದ’ದ ಕರ್ತೃ ಜಯದೇವನ ಬಿರುದು ‘ಪದ್ಮಾವತೀ ಚರಣ ಚಾರಣ ಚಕ್ರವರ್ತಿ’ ಎಂಬುದನ್ನೇ ಮೊಟಕುಗೊಳಿಸಿ ‘ಪದ್ಮಚರಣ’ ಎಂಬ ಕಾವ್ಯನಾಮ ಧಾರಣೆ ಮಾಡಿದರು.

ಸಂಗೀತ ಹಿನ್ನೆಲೆಯ ಕುಟುಂಬದಲ್ಲಿ ಜನ್ಮತಾಳಿದ ಪದ್ಮಚರಣರು (1920ರ ಏಪ್ರಿಲ್‌ 21), ಏಳೆಂಟು ವರ್ಷಗಳ ಬಾಲಕನಾಗಿದ್ದಾಗಲೇ ಭಜನೆ ಮಟ್ಟುಗಳನ್ನು ಹಾಡುತ್ತಿದ್ದರಂತೆ. ಅವರ ತಂದೆ-ತಾಯಿಗೆ ಸಿರಿಕಂಠವಿದ್ದುದರಿಂದ ಸದಾ ಮನೆಯಲ್ಲಿ ಹಾಡಿನ ರಸದೌತಣ.

ಸಂಗೀತಕ್ಕೆ ಶ್ರೀಕಾರ ಹಾಕಿದವರು ಅವರ ತಾಯಿ ಜಾನಕಮ್ಮ. ಅಂದಿನಿಂದಲೇ ಅವರಿಗೆ ಕರ್ನಾಟಕ ಶಾಸ್ತ್ರೀಯ ಸಂಗೀತ ಪಾಠ ಆರಂಭವಾಯಿತು. ಪಕ್ಕಾ ಹನುಮಂತಾಚಾರ್ಯರು ಇವರ ಮೊದಲ ಗುರುಗಳು. ಆನಂತರ ಆಮಿದಾಲ ವೆಂಕಟಸ್ವಾಮಿ, ವೆಂಕಪ್ಪ, ಬಿ. ವೆಂಕಟಪ್ಪ ಎಂಬ ನಾಲ್ವರು ಗುರುಗಳಿಂದ ಸುಮಾರು ಹನ್ನೊಂದು ವರ್ಷ ಸಂಗೀತ, ವಯೊಲಿನ್ ವಾದನದ ಪಾಠ. ಆನಂತರ ಮೈಸೂರಿನಲ್ಲಿ ರಾಳ್ಲಪಲ್ಲಿ ಅನಂತ ಕೃಷ್ಣಶರ್ಮರಂಥ ಗುರುಗಳ ಸನ್ನಿಧಿಯಲ್ಲಿ ಪ್ರತಿದಿನ ಸುಮಾರು ಆರು ಗಂಟೆಗಳಂತೆ ಹನ್ನೆರಡು ವರ್ಷಗಳ ಕಾಲ ಸತತ ಸಂಗೀತಾಭ್ಯಾಸ ನಡೆಸಿದ್ದು ಸುಲಭದ ಮಾತೇನಲ್ಲ. ಗುರುಕುಲ ಅಭ್ಯಾಸದಂತೆ ಗುರುಗಳ ಸೇವೆ, ಕಠಿಣ ಶ್ರಮದಾನ, ವಿದ್ಯೆಯ ಗಳಿಕೆ ಇವರ ಸಾಧನೆಯ ಮಜಲುಗಳು.

ಎಚ್‌.ಆರ್‌.ಲೀಲಾವತಿ, ಶಿರ್ಕಾಳಿ ಗೋವಿಂದರಾಜನ್‌ ಅವರೊಂದಿಗೆ ಪದ್ಮಚರಣ್‌

ರಾಳ್ಲಪಲ್ಲಿ ಅನಂತ ಕೃಷ್ಣಶರ್ಮರಿಂದ ಸಂಗೀತ, ಸಾಹಿತ್ಯ, ಲಕ್ಷ್ಯ-ಲಕ್ಷಣಗಳನ್ನು ಶಿಷ್ಟ ಸಂಪ್ರದಾಯವನ್ನು ಆಳವಾಗಿ ಅಭ್ಯಸಿಸುವುದರೊಂದಿಗೆ ಭಾತ್‍ ಖಂಡೆಯವರ ಪುಸ್ತಕಗಳಿಂದ ಹಿಂದೂಸ್ಥಾನಿ ಸಂಗೀತ ಪದ್ಧತಿಯ ಪರಿಚಯ ಮಾಡಿಕೊಂಡು, ಗುರುಗಳಾದ ಶರ್ಮರಿಂದಲೇ ಕೆಲವು ಗತ್ತುಗಳನ್ನು ಕಲಿತರು. ಮುಂದೆ ಮೈಸೂರು ಅರಮನೆಯ ಸಿಂಫೋನಿ ವಾದ್ಯ ಮೇಳದಲ್ಲಿದ್ದ ದಿವ್ಯನಾಥನ್ ಎಂಬುವರಿಂದ ಸ್ವಲ್ಪ ಸಮಯ ಪಾಶ್ಚಿಮಾತ್ಯ ಸಂಗೀತವನ್ನೂ ಕರಗತ ಮಾಡಿಕೊಂಡರು. ಹೀಗೆ ಪದ್ಮಚರಣರಿಗೆ ಈ ಆರು ಜನ ಗುರುಗಳಿಂದ ಇಪ್ಪತ್ತನಾಲ್ಕು ವರ್ಷಗಳ ದೀರ್ಘಾವಧಿಯಲ್ಲಿ ದಕ್ಷಿಣಾದಿ, ಉತ್ತರಾದಿ, ಪಶ್ಚಿಮಾದಿ ಶಾಸ್ತ್ರೀಯ ಸಂಗೀತಗಳ ಕರಾರುವಾಕ್ಕು ಪಾಠ-ಅನವರತ ಅಭ್ಯಾಸ. ಛಲಬಿಡದ ತ್ರಿವಿಕ್ರಮರವರು. ಕನ್ನಡ ಮತ್ತು ತೆಲುಗು ಭಾಷೆಗಳನ್ನು ಚೆನ್ನಾಗಿ ಬಲ್ಲ ಇವರಿಗೆ ಸಂಸ್ಕೃತ ಭಾಷೆಯಲ್ಲೂ ಪಾಂಡಿತ್ಯವಿತ್ತು. ಕ್ರಿಯಾಶೀಲತೆ, ಪ್ರಯೋಗಶೀಲತೆ ಗುರುಗಳಿಂದ ಅವರಿಗೆ ಬಂದ ಬಳುವಳಿ.

ಸೋಲೋ ಕಛೇರಿ

ಆಕಾಶವಾಣಿಯಲ್ಲಿ ಮೂವತ್ತೊಂದು ವರ್ಷಗಳಷ್ಟು ಸುದೀರ್ಘಕಾಲ ಪಿಟೀಲು ವಾದಕರಾಗಿ ಸೇವೆ ಸಲ್ಲಿಸಿದ ಪದ್ಮಚರಣರು ನೂರಾರು ‘ಸೊಲೋ’ ಕಛೇರಿ, ನೂರಾರು ಸಂಗೀತ ಕಛೇರಿಗಳಿಗೆ ಪಕ್ಕವಾದ್ಯಗಾರರಾಗಿ ಖ್ಯಾತಿ ಪಡೆದಿದ್ದಾರೆ. ಇವರು ಪಕ್ಕವಾದ್ಯ ನುಡಿಸಿದ ಸಂಗೀತಗಾರರಲ್ಲಿ ಮೈಸೂರು ವಾಸುದೇವಾಚಾರ್ಯರು, ತಿರುಪ್ಪಾಂಬರಂ ಸ್ವಾಮಿನಾಥ ಪಿಳ್ಳೆ, ಟಿ.ಆರ್. ಮಹಾಲಿಂಗಂ, ಚಿತ್ತೂರು ಸುಬ್ರಹ್ಮಣ್ಯ ಪಿಳ್ಳೆ, ಮಧುರೈ ಮಣಿ, ಜಿ.ಎಸ್.ಬಿ. ಚಂಬೈ ವೈದ್ಯನಾಥ ಭಾಗವತರ್, ಎಂ. ಬಾಲಮುರಳಿಕೃಷ್ಣ, ಎಂ.ಎಲ್. ವಸಂತಕುಮಾರಿ, ಟಿ. ಬೃಂದಾ, ಮುಕ್ತಾ, ಆರ್‌.ಕೆ. ಶ್ರೀಕಂಠನ್ ಮುಖ್ಯರು. ಹಾಗೆಯೇ ಉತ್ತರಾದಿ ಸಂಗೀತದಲ್ಲಿ ಭೀಮಸೇನ ಜೋಶಿ, ಜಿ.ವಿ. ಭಾವೆ, ಲಕ್ಷ್ಮೀಭಾವೆ, ಡಿ.ವಿ. ಹರೀಂದ್ರ ಅವರಿಗೆ ಪಕ್ಕವಾದ್ಯ ನೀಡಿದ್ದಾರೆ. ಪ್ರಧಾನ ಕಲಾವಿದನಲ್ಲಿ ಪರಕಾಯ ಪ್ರವೇಶ ಮಾಡಿ, ಆತನ ಇಂಗಿತಕ್ಕೆ ಹೊಂದಿಕೊಳ್ಳುವ ಚಾತುರ್ಯ ಅವರಿಗೆ ಅಂತರ್ಗತವಾಗಿತ್ತು.

ಪದ್ಮಚರಣರ ಒಲವು ಕ್ರಮೇಣ ಶಾಸ್ತ್ರೀಯ ಸಂಗೀತದಿಂದ ಸುಗಮ ಸಂಗೀತದತ್ತ ಒಲಿಯಿತು. ಪ್ರಾಯಶಃ ಅವರು ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲೇ ಉಳಿದಿದ್ದರೆ ಅವರು ಇನ್ನೊಬ್ಬ ಚೌಡಯ್ಯನಾಗುತ್ತಿದ್ದರೋ ಏನೋ! ಅಂಥಾ ಮೇರುಪ್ರತಿಭೆ ಅವರದು. ಅನನ್ಯ ಶೈಲಿ, ಪಳಗಿದ ಕೈ. ಆದರೆ, ಶಾಸ್ತ್ರೀಯ ಸಂಗೀತ ಕ್ಷೇತ್ರಕ್ಕೆ ಉಂಟಾದ ನಷ್ಟ ಸುಗಮ ಸಂಗೀತ ಕ್ಷೇತ್ರಕ್ಕೆ ಲಾಭವಾಗಿ ಪರಿಣಮಿಸಿದ್ದಂತೂ ನಿರ್ವಿವಾದ. ಸುಗಮ ಸಂಗೀತವನ್ನು ಒಂದು ಸಂಗೀತ ಪ್ರಕಾರವಾಗಿಸಿ ಅದಕ್ಕೆ ಗೌರವ ಸ್ಥಾನಮಾನಗಳನ್ನು ದೊರಕಿಸಿಕೊಟ್ಟ ಸಂಗೀತ ಶಿಲ್ಪಿಗಳಲ್ಲಿ ಕಾಳಿಂಗರಾಯರಂತೆ ಪದ್ಮಚರಣರೂ ಪ್ರಮುಖರು. ಇವರ ಸುಗಮ ಸಂಗೀತ ನಿರ್ಮಾಣಕ್ಕೆ ಶಾಸ್ತ್ರೀಯ ಸಂಗೀತ ಜ್ಞಾನ ಅಡಿಗಲ್ಲಾಯ್ತು. ಎಂತಲೇ ಅವರ ರಾಗ ರಚನೆಗಳಲ್ಲಿ ಶುದ್ಧ ಅಭಿರುಚಿ. ಮನೋಧರ್ಮದಲ್ಲಿ ಆವೇಶ ಆರ್ಭಟ ಅಬ್ಬರಗಳಿಲ್ಲ. ಅನಗತ್ಯ ವಾದ್ಯ ಮೇಳವಿಲ್ಲ. ಸಂಧ್ಯಾರಾಗದ ಸೊಬಗು, ತಂಪು ಅದರ ಪ್ರಮುಖ ಲಕ್ಷಣ.

ಪಿಟೀಲು ಕಛೇರಿಯೊಂದರಲ್ಲಿ...

ರಾಗ ಬ್ರಹ್ಮ

ಆಳವಾದ ಶಾಸ್ತ್ರೀಯ ಸಂಗೀತದ ಪಾಂಡಿತ್ಯದಿಂದ ರೂಪುಗೊಂಡ ಪದ್ಮಚರಣರು ಕನ್ನಡ ಭಾವಗೀತೆ ಲೋಕಕ್ಕೆ ನೀಡಿದ ಕೊಡುಗೆ ಅಪಾರ. ತಮ್ಮದೇ ಆದ ವಿಶಿಷ್ಟ ಛಾಪನ್ನು ರಾಗ ಸಂಯೋಜನೆಯಲ್ಲಿ ಅಳವಡಿಸಿಕೊಂಡಿದ್ದರು. ಈ ಗೀತೆಗಳು ಸದಾಕಾಲ ಶ್ರೋತೃಗಳು ಗುನುಗುನಿಸುವಷ್ಟು ಜನಪ್ರಿಯ, ಎದೆಯೊಳಗೆ ಮಧುರ ನಾದ ನಿನಾದಿಸುವಷ್ಟು ರಸಸ್ಪರ್ಶಿ.

ಅವರು ಸೃಷ್ಟಿಸಿದ ಅದ್ಭುತ ಭಾವಗೀತೆಗಳು ಆ ಕಾಲದ ಹಿರಿ-ಕಿರಿಯ, ಕನ್ನಡ ಕವಿಗಳ ಸುಂದರ ಕವಿತೆಗಳು. ‘ಉಡುಗಣವೇಷ್ಟಿತ’ (ಡಾ. ಜಿ.ಎಸ್. ಶಿವರುದ್ರಪ್ಪನವರ ರಚನೆ), ‘ವನಸುಮದೊಳೆನ್ನ ಜೀವನವು’ (ಡಿವಿಜಿ.), ‘ದೋಣಿ ಸಾಗಲಿ ಮುಂದೆ ಹೋಗಲಿ’ ಮತ್ತು ‘ನಾನೇ ವೀಣೆ ನೀನೇ ತಂತಿ’ (ಕುವೆಂಪು), ‘ನೀ ಬರುವ ದಾರಿಯಲ್ಲಿ’ (ಕೆ.ಎಸ್.ನ)- ಇಂಥ ಸಾವಿರಾರು ಗೀತೆಗಳನ್ನು ಸುಮಧುರ ರಾಗದಲ್ಲಿ ಅರಳಿಸಿ, ಸುಗಮ ಸಂಗೀತ ಜಗತ್ತಿಗೆ ಸ್ಮರಣೀಯ ಕಾಣಿಕೆ ನೀಡಿ ಪದ್ಮಚರಣರು ಸುಗಮ ಸಂಗೀತ ಲೋಕದ ಆದ್ಯ ಪ್ರವರ್ತಕರೆನಿಸಿದ್ದಾರೆ.

ಪದ್ಮಚರಣರ ಸಂಗೀತ ಜ್ಞಾನ ವಿಸ್ತೃತವಾದುದಾಗಿತ್ತು. ಬಹುರೂಪಿಯಾಗಿತ್ತು. ಅವರು ಮುಟ್ಟದ ಸಂಗೀತ ಪ್ರಕಾರವಿಲ್ಲ. ಶಾಸ್ತ್ರೀಯ, ಸುಗಮ, ಜನಪದ, ರಂಗ ಸಂಗೀತ, ಯಕ್ಷಗಾನ ಸಂಗೀತ ಅಲ್ಲದೆ ಅವರಿಗೆ ಘಜಲ್, ವಿದೇಶೀ ಸಂಗೀತಗಳ ಪರಿಚಯವೂ ಇತ್ತು. ಅವರು ಹಾಡಿಕೆಗೆ ಆರಿಸಿಕೊಳ್ಳುವ ಕವನಗಳನ್ನು ಪರಿಶೀಲಿಸಿದರೆ ಅವರ ಉತ್ತಮ ಸಾಹಿತ್ಯ ಪ್ರಜ್ಞೆ, ಅಭಿರುಚಿಗಳ ಮಟ್ಟ ಹಾಗೂ ಪರಿಣತಿಗಳು ಸುವ್ಯಕ್ತ. ಸಾಹಿತ್ಯವನ್ನು ಅನುಭವ-ದ್ರವ್ಯವನ್ನಾಗಿಸುವ ಕಲೆ ಅವರಿಗೆ ಕರಗತವಾಗಿತ್ತು.

ಸಾಹಿತ್ಯಕ್ಕೆ ತಕ್ಕ ರಾಗ ಸಂಯೋಜಿಸುವ ಅವರ ರಸಾಭಿಜ್ಞತೆ, ಭಾವಾಭಿಜ್ಞತೆ, ಕಲಾಭಿಜ್ಞತೆಗೆ ಎಂಥವರೂ ತಲೆದೂಗಬೇಕು. ಅವರು ಕವನಗಳಿಗೆ ರಾಗ ಹಾಕಲು ಯಾವುದೇ ಪೂರ್ವಸಿದ್ಧತೆ ಮಾಡಿಕೊಳ್ಳುತ್ತಿರಲಿಲ್ಲ. ‘Music happens with me’ ರಾಗ ಹಾಕಲು ತಿಣುಕುವ, ತಲೆಕೆಡಿಸಿಕೊಳ್ಳುವ ಪ್ರಮೇಯವೇ ಇಲ್ಲ. ಆಯಾ, ಪದ್ಯಗಳಲ್ಲೇ ಇರುವ ನಾದ ಲಯಗಳನ್ನೇ ಹೆಕ್ಕಿ ತೆಗೆದು ಅದು ರಾಗವನ್ನು ಅರಸಿಕೊಳ್ಳಲು ಬಿಟ್ಟರೆ ರಾಗ ತಾನೇ ತಾನಾಗಿ ಹೊರಹೊಮ್ಮುತ್ತದೆ. ಹಿಸುಹಿಸುಕಿ ಹಣ್ಣು ಮಾಡಿದ್ದು ಕಾವ್ಯವೂ ಅಲ್ಲ, ಸಂಗೀತವೂ ಅಲ್ಲ’ ಎಂಬುದು ಅವರ ದೃಢ ನಂಬಿಕೆಯಾಗಿತ್ತು.

ಪ್ರತಿಕ್ಷಣದಲ್ಲೂ ಪ್ರಯೋಗಶೀಲತೆ ಅವರ ಯಶಸ್ಸಿನ ಗುಟ್ಟು. ಕೀರ್ತಿ, ಪ್ರಶಸ್ತಿ, ಪದಕ, ಹಾರ, ತುರಾಯಿ, ಹಣಗಳಿಕೆ, ಪ್ರಚಾರ ಮುಂತಾದ ಯಾವುದಕ್ಕೂ ಹಪಹಪಿಸದ ಅಪರೂಪದ ಒಂದು ವ್ಯಕ್ತಿತ್ವವೇ ಅವರ ವಿಭಿನ್ನತೆಗೆ ಕನ್ನಡಿ.

ಪದ್ಮಚರಣರ ವ್ಯಕ್ತಿತ್ವಕ್ಕೆ ಈ ಖಚಿತತೆ, ಸ್ಪಷ್ಟ ನಿಲುವು, ನಿಷ್ಠುರ ಅಭಿಪ್ರಾಯ ಮಂಡನೆ, ದಾಸ್ಯಾತೀತ ಮನೋಭಾವ ಬೆಳೆದು ಬಂದ ಬಗೆಗೆ ಅವರು ಹೀಗೆ ಉತ್ತರಿಸುತ್ತಿದ್ದರು:

‘ಮಹಾದಾರ್ಶನಿಕ ಜಿಡ್ಡು ಕೃಷ್ಣಮೂರ್ತಿಯವರ ನಲವತ್ತು ವರ್ಷಗಳಿಗೂ ಮೀರಿದ ಪ್ರಭಾವ ಅವರ ‘Choiceless awareness’ ಎಂಬ ಮೂಲತತ್ವ-ಬಾಳಿನ ಆದರ್ಶ ಹಾಗೂ ಶಿವರಾಮ ಕಾರಂತರ ಐವತ್ತು ವರ್ಷಗಳ ಒಡನಾಟ. ಅವರಿಂದ ಕಲಿತದ್ದು ಬಹಳ. ಬದುಕಬೇಕು, ಬದುಕುತ್ತ ಬೆಳೆಯಬೇಕು, ಬೆಳೆಯುತ್ತ ಕಲಿಯಬೇಕು, ಕಲಿಯುತ್ತ ತಿಳಿಯಬೇಕು. ಅವರು ನನ್ನ ಕಣ್ಣ ಮುಂದಿನ ದೊಡ್ಡ ಆದರ್ಶ, ವಿಚಾರಗಳಿಗೆ ಸ್ಫೂರ್ತಿ’- ಎನ್ನುತ್ತಿದ್ದ ಪದ್ಮಚರಣರು ಚೀನಾ ದೇಶದ ದಾರ್ಶನಿಕ, ಚಿಂತಕ ಜೆನ್ ತಾವೋ, ಸೂಫಿ ಮುಂತಾದವರ ಚಿಂತನೆಗಳನ್ನು ಮೈಗೂಡಿಸಿಕೊಂಡು ರಜನೀಶರ ವಿಚಾರಧಾರೆಗಳನ್ನು ಮೆಚ್ಚುತ್ತಿದ್ದರು. ಎಲ್ಲದರಲ್ಲೂ ಹಂಸ-ಕ್ಷೀರ ನ್ಯಾಯದ ಆಯ್ಕೆ.

ಕಾರಂತರ ನೇತೃತ್ವದಲ್ಲಿ ಪದ್ಮಚರಣರು 1956ರಿಂದ ಯಕ್ಷಗಾನ ಕುರಿತಾದ ರಾಗ ಸಂಶೋಧನೆ ನಡೆಸಿದ್ದರು. ಯಕ್ಷಗಾನದೊಡನೆ ಅವರದು ಅವಿರತ ಸಂಬಂಧ. ಕಾರಂತರ ಹೊಸ ಯಕ್ಷರಂಗದ ಪ್ರದರ್ಶನಗಳಲ್ಲಿ ಇವರು ಪಿಟೀಲು

ವಾದಕರಾಗಿ, ಸಂಗೀತ ಸಂಯೋಜಕರಾಗಿ ಸೇವೆ ಸಲ್ಲಿಸಿದ್ದರು. ರಷ್ಯಾದಲ್ಲಿ ನಡೆದ ಭಾರತದ ಉತ್ಸವದಲ್ಲಿ ಹಾಗೂ ಕೊಲ್ಲಿ ರಾಷ್ಟ್ರಗಳು, ಗ್ರೇಟ್ ಬ್ರಿಟನ್, ಅಮೆರಿಕದಲ್ಲಿ ನಡೆದ ಯಕ್ಷ ರಂಗ ಪ್ರದರ್ಶನಗಳಲ್ಲೂ ಇವರು ಪಾಲ್ಗೊಂಡಿದ್ದರು.

ಪದ್ಮಚರಣರಿಗೆ ರಂಗಭೂಮಿಯ ನಂಟು ಬಹು ಹಿಂದಿನದು. ಎಂ.ಸಿ. ಮಹದೇವಸ್ವಾಮಿಯವರ ಕನ್ನಡ ಥಿಯೇಟರ್ಸ್‌ನವರು ಅಭಿನಯಿಸುತ್ತಿದ್ದ ಬಿ. ಪುಟ್ಟಸ್ವಾಮಯ್ಯನವರ ‘ಚಿರಕುಮಾರ ಸಭಾ’ ನಾಟಕಕ್ಕೆ ಇವರದೇ ಸಂಗೀತ. ಈ ಸಂದರ್ಭದಲ್ಲಿ ರಂಗಸ್ಥಳದ ಬಗೆಗೆ, ರಂಗ ನಾಟಕಗಳ ಬಗೆಗೆ ಆಳವಾದ ಅಧ್ಯಯನ ನಡೆಸಿದ್ದರು. ರಂಗಭೂಮಿಯ ಈ ನಂಟು ಬೆಂಗಳೂರಿನ ಸಂಧ್ಯಾ ಕಲಾವಿದರು ಪ್ರದರ್ಶಿಸಿದ ‘ಪೌಲಸ್ತ್ಯನ ಪ್ರಣಯ ಕಥೆ’, ‘ನಾಗಾನಂದ’, ‘ಎಂದುರೋ ಮಹಾನುಭಾವುಲು’ ನಾಟಕಗಳಿಗಲ್ಲದೆ, ಬ್ರೆಕ್ ನಾಟಕಗಳಿಗೂ ಸಂಗೀತ ಒದಗಿಸುವವರೆಗೆ ಮುಂದುವರಿದಿತ್ತು. ಆಕಾಶವಾಣಿಯ ಅನೇಕ ಶ್ರವ್ಯ ನಾಟಕಗಳಿಗೆ ಸಂಗೀತ ನಿರ್ದೇಶಿಸಿದ ಖ್ಯಾತಿ ಅವರದಾಗಿತ್ತು.

ಚಲನಚಿತ್ರ ರಂಗಕ್ಕೂ ಇವರ ಸೇವೆ ಸಾಕಷ್ಟು ಲಭ್ಯ. ಎಂ.ವಿ. ಕೃಷ್ಣಸ್ವಾಮಿ ನಿರ್ದೇಶನದ ‘ಪಾಪ-ಪುಣ್ಯ’, ಕಾರಂತರ ‘ಕುಡಿಯರ ಕೂಸು’ ಆಧರಿಸಿದ ‘ಮಲೆಯ ಮಕ್ಕಳು’ ಚಿತ್ರಗಳಿಗೆ ಇವರ ಸಂಗೀತ ನಿರ್ದೇಶನ. ಪದ್ಮಚರಣರ ಸಂಗೀತವೇ ಜೀವಾಳವಾದ ‘Nector in Stone’ ಎಂಬ ದೂರದರ್ಶನ ಸಾಕ್ಷ್ಯಚಿತ್ರ ಮಾಲಿಕೆಯಲ್ಲಿ ‘ಬೇಲೂರು’ ಎಂಬ ಸಾಕ್ಷ್ಯಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ, ‘ಸೋಮನಾಥಪುರ’ ಎಂಬ ಚಿತ್ರಕ್ಕೆ ಅಂತರರಾಷ್ಟ್ರೀಯ ಪ್ರಶಸ್ತಿಗಳು ಸಂದಿವೆ.

ಪದ್ಮಚರಣರು ಉತ್ತಮ ಕವಿಯೂ ಹೌದು. ಅವರು ರಚಿಸಿದ ಹಲವಾರು ಸುಂದರ ಭಾವಗೀತೆಗಳು, ಭಕ್ತಿಗೀತೆ, ಕೀರ್ತನೆಗಳು ಇಂದಿಗೂ ಜನಮನದಲ್ಲಿ ಚಿರಸ್ಥಾಯಿಯಾಗಿ ಉಳಿದಿವೆ. ‘ಮನವೇ ಮಂತ್ರಾಲಯ’, ‘ತಿರುಪತಿ ಗಿರಿವಾಸ’, ‘ಶೃಂಗಪುರಾಧೀಶ್ವರಿ’, ‘ಕೈಹಿಡಿದು ನಡೆಸೆನ್ನ ಕೊಲ್ಲಾಪುರವಾಸಿನೀ’, ‘ಪಾಹಿಮಹೇಶ ಪಾಪ ವಿನಾಶ’ ಮುಂತಾದ ತಮ್ಮ ರಚನೆಯ ಕೀರ್ತನೆ ಭಾವಗೀತೆಗಳಿಗೆ ರಾಗದ ಜೀವ ತುಂಬಿ ತಮ್ಮ ಶಿಷ್ಯರ ಗಾನಕಂಠದಲ್ಲಿ ಧಾರೆ ಎರೆದಿದ್ದಾರೆ.

ಉತ್ತಮ ಲೇಖಕರೂ ಆಗಿದ್ದ ಪದ್ಮಚರಣರು ಎಪ್ಪತ್ತರ ದಶಕದಲ್ಲಿ ಅಂಕಣಕಾರರೂ ಆಗಿದ್ದರು! ಸಂಗೀತ ಪ್ರಪಂಚದ ಘನವಿದ್ವಾಂಸರ ಬಗೆಗೆ ಲೇಖನ ಮಾಲಿಕೆ ಬರೆಯುತ್ತಿದ್ದರು. ಈ ಕ್ಯಾಸೆಟ್ ಯುಗದಲ್ಲಂತೂ ಅವರು ಸಂಗೀತ ನಿರ್ದೇಶಿಸಿದ ನೂರಾರು ಕ್ಯಾಸೆಟ್‍ಗಳು ಹೊರಬಂದಿವೆ.

1980-87ರಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅವರನ್ನು ‘ಕರ್ನಾಟಕ ಕಲಾತಿಲಕ’ ಎಂಬ ಬಿರುದಿನೊಂದಿಗೆ ಗೌರವಿಸಿತು. 1994 ರಲ್ಲಿ ಕರ್ನಾಟಕ ಸರ್ಕಾರ ಅವರಿಗೆ ಬಹು ತಡವಾಗಿಯಾದರೂ ‘ರಾಜ್ಯೋತ್ಸವ’ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಅವರ ಅಭಿಮಾನಿಗಳು ಅವರನ್ನು ಸನ್ಮಾನಿಸಿ ‘ಪದ್ಮ ಪಲ್ಲವ’ ಎಂಬ ಸಂಸ್ಮರಣ ಗ್ರಂಥವನ್ನು ಅರ್ಪಿಸಿ ಗೌರವಿಸಿದರು. ಆದರೂ ಅವರ ಮೇರು ಪ್ರತಿಭೆಯನ್ನು ಸರಿಯಾಗಿ ಗುರುತಿಸುವ, ಮೌಲ್ಯೀಕರಿಸುವ ಪ್ರಯತ್ನಗಳು ಪ್ರಾಮಾಣಿಕವಾಗಿ ನಡೆಯಲಿಲ್ಲವೆಂದೇ ಹೇಳಬೇಕು. ಇದು ಬಹುಮುಖ ವ್ಯಕ್ತಿತ್ವದ ಪದ್ಮಚರಣರಿಗಾದ ವೈಯಕ್ತಿಕ ನಷ್ಟವಲ್ಲ. ನಿಜಕ್ಕೂ ಇದು ಇಡೀ ಕಲಾರಂಗಕ್ಕಾದ ಅಪಾರ ನಷ್ಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT