ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೂಟ್ಯೂಬ್‌ನಲ್ಲಿ ಹೊಸ ಗಾನಧಾರೆ; ಅನ್‌ಲಾಕ್‌ ಆದ ತಾರೆಯರು...

Last Updated 28 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ಟಿಕ್‌ಟಾಕ್‌ ಸಹಿತ ಹಲವು ಆ್ಯಪ್‌ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದ್ದು ಹಳೇಯ ಸುದ್ದಿ. ಆಗ ಬೇಸರಿಸಿಕೊಂಡ ಯುವಜನರು ಅದೆಷ್ಟೋ ಜನ. ಸೃಜನಶೀಲತೆಗೆ ವೇದಿಕೆಯೊಂದು ಬೇಕಲ್ಲಾ. ಹಾಗೆಯೇ ಬಹುತೇಕರು ಹೊಸ ಸಾಧ್ಯತೆಗೆ ತೆರೆದುಕೊಂಡರು. ಈಗ ಇವರೆಲ್ಲಾ ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್‌ ಸ್ಟಾರ್‌ಗಳಾಗಿದ್ದಾರೆ. ಸುಮ್ಮನೆ ಖುಷಿಗಾಗಿ ಹಾಡುತ್ತಿದ್ದವರೆಲ್ಲಾ ತಮ್ಮದೇ ಅಲ್ಬಂ ಬಿಡುಗಡೆ ಮಾಡಿ ಯೂಟ್ಯೂಬ್‌ನಲ್ಲಿ ಹರಿಯಬಿಟ್ಟಿದ್ದಾರೆ. ಬೆಂಗಳೂರು– ಮಂಗಳೂರಿನ ಪುಟ್ಟ ಸ್ಟುಡಿಯೋಗಳು ಈಗ ಫುಲ್‌ ಬ್ಯುಸಿ. ಎಲ್ಲರಿಗೂ ಕೈತುಂಬಾ ಕೆಲಸ. ಹಾಸ್ಯ ಕಾರ್ಯಕ್ರಮಗಳಿಗಂತೂ ಲೆಕ್ಕವೇ ಇಲ್ಲ.

ಒಂದೆಡೆ ಧ್ವನಿಮುದ್ರಣ ಸ್ಟುಡಿಯೋಗಳು ಹಾಡುಗಳ ರೆಕಾರ್ಡಿಂಗ್‌, ಎಡಿಟಿಂಗ್‌ ನಡೆಸುತ್ತಿವೆ. ಸಣ್ಣ ನಗರಗಳ, ಗ್ರಾಮೀಣ ಪ್ರದೇಶದ ಛಾಯಾಗ್ರಾಹಕರು ವಿಡಿಯೊ ಕ್ಯಾಮೆರಾ ಕೈಗೆತ್ತಿಕೊಂಡಿದ್ದಾರೆ. ಯಾವುದೇ ವೃತ್ತಿಪರ ಸಿನಿಮಾ/ ಚಿತ್ರಗಳಿಗ ಸಂವಾದಿಯಾಗುವ ಗುಣಮಟ್ಟದ ನಿರ್ಮಾಣಗಳು ಬಂದಿವೆ. ಖ್ಯಾತ ನಟ, ನಿರ್ದೇಶಕರನ್ನು ನಾಚಿಸುವ ದೃಶ್ಯಾವಳಿಗಳು ಈ ವಿಡಿಯೊಗಳಲ್ಲಿವೆ. ಮೊಬೈಲ್‌ನಲ್ಲಿ ಶೂಟಿಂಗ್‌ ಮಾಡಿದ ಗುಣಮಟ್ಟದ ದೃಶ್ಯಗಳೂ ಇಲ್ಲಿವೆ. ಇದನ್ನೆಲ್ಲಾ ಗಮನಿಸಿದ ದೊಡ್ಡ ನಿರ್ಮಾಣ ಸಂಸ್ಥೆಗಳೂ ಈ ಕ್ಷೇತ್ರದತ್ತ ಕಣ್ಣು ಹಾಯಿಸಿವೆ. ಕೆಲವು ಆಲ್ಬಂಗಳನ್ನೂ ಹೊರತಂದಿವೆ.

ಕೆಲವು ಚಾನೆಲ್‌ಗಳು ಹೀಗಿವೆ: ‘ಸಂಗೀತಾ ರಾಜೀವ್‌’ (ಹಾಡು: ಏನು ಮಾಡಲಿ), ‘ಸಿರಿ ಮ್ಯೂಸಿಕ್‌’, ‘ಆಲ್‌ ಓಕೆ’ (ಹಾಡು ಏನು ಮಾಡೋದು ಅಂತ ಮಂಕಾಗಿ ಕೂತ್ರೆ ಹೆಂಗೆ, ಚಿಲ್‌ ಮಾಡೋಣ) ‘ಪಿಆರ್‌ಕೆ ಆಡಿಯೊ’ (ಅಲೆಯಾಗಿ ಬಾ) ‘ಸಂಜಯ್‌ ಗೌಡ ಆಡಿಯೊ’ದಲ್ಲಿ ಹತ್ತಾರು ಒಳ್ಳೆಯ ಹಾಡುಗಳು ಟ್ರೆಂಡಿಂಗ್‌ನಲ್ಲಿವೆ. ಸಂಜಯ್‌ ಗೌಡ ಚಾನೆಲ್‌ನ ಹಾಡುಗಳಲ್ಲಿ ಗಾಯಕ ಅರ್ಫಾಜ್‌ ಉಳ್ಳಾಲ ಮಿಂಚುತ್ತಿದ್ದಾರೆ. ಕ್ಲಾಸಿಕ್‌ ಮೀಡಿಯಾ ಚಾನೆಲ್‌ನಲ್ಲೂ ಅರ್ಫಾಜ್‌ ಅವರ ಹಾಡುಗಳು ಭರ್ಜರಿ ಟ್ರೆಂಡಿಂಗ್‌ನಲ್ಲಿವೆ. ‘ಮಲೆನಾಡಿನ ಹೆಣ್ಣು’ ಆಲ್ಬಂನಲ್ಲಿರುವ ಹಾಡಿನಲ್ಲಿ ಯುವ ಜೋಡಿಯ ಭಾವಾಭಿನಯವಿದೆ. ಇದೇ ಹಾಡಿಗೆ ‘ಜಿ1 ಫಿಲ್ಮ್‌ ಮೇಕರ್ಸ್‌’ ಹೆಸರಿನ ಚಾನೆಲ್‌ನಲ್ಲಿ ಬೇರೆ ದೃಶ್ಯಾವಳಿಯ ಭಾವಾಭಿನಯ ಜೋಡಿಸಲಾಗಿದೆ. ಎರಡರ ಮೇಕಿಂಗ್‌ಗಳು ಒಂದನ್ನೊಂದು ಮೀರಿಸುವಂತಿವೆ. ಇದೇ ಚಾನೆಲ್‌ನಲ್ಲಿ ಅರ್ಫಾಜ್‌ ಅವರ ಇನ್ನೊಂದು ಹಾಡು ‘ನೋವಲಿ ತುಂಬಿರೋ ಮನಸಿನ ರೋದನೆ...’ಯೂ ವೀಕ್ಷಕರನ್ನು ತಟ್ಟಿದೆ. ಆಗಸ್ಟ್‌ನಲ್ಲಿ ‘ಸೌಂಡ್‌ ಸೀಸನ್‌ ಚಾನೆಲ್‌’ ಹೊರ ತಂದ ಆಲ್ಬಂನಲ್ಲಿ ‘ವಿಧಿ ಬರೆಯುವ ಬ್ರಹ್ಮ...’ ಈ ಹಾಡನ್ನು ಅಖಿಲಾ ಪಜಿಮಣ್ಣು ಅವರು ಹಾಡಿದ್ದಾರೆ. ಇದು ಸುಮಾರು 6 ಲಕ್ಷಕ್ಕೂ ಅಧಿಕ ವೀಕ್ಷಕರನ್ನು ತಲುಪಿದೆ. ಟ್ರೆಂಡಿಂಗ್‌ನಲ್ಲಿ ಇದು ಮುಂಚೂಣಿಯಲ್ಲಿದೆ. ಇದೇ ಹಾಡನ್ನು ನಿಯಾಜ್‌ ನಾಝ್‌ ಅವರು ಹಾಡಿದ್ದಾರೆ. ಈ ಹಾಡಿಗೆ ಮಂಗಳೂರಿನ ಕೆನರಾ ಕಾಲೇಜು ಆವರಣದಲ್ಲಿ ದೃಶ್ಯ ಚಿತ್ರೀಕರಿಸಲಾಗಿದೆ. ಈ ಹಾಡನ್ನು ಸುಮಾರು 4 ಕೋಟಿಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಅಖಿಲಾ ಅವರು ‘ಮಹಾಮ್ಮಾಯಿ ಸಿನಿಕ್ರಿಯೇಷನ್‌’ ಚಾನೆಲ್‌ನಲ್ಲಿ ಕನ್ನಡ ಚಿತ್ರಗಳ ಖ್ಯಾತ ಗೀತೆಗಳನ್ನು ತಮ್ಮದೇ ಶೈಲಿಯಲ್ಲಿ ಪ್ರಸ್ತುತಪಡಿಸಿದ್ದಾರೆ. ಹಾಡಿಗೆ ಅವರದೇ ಭಾವಾಭಿನಯವೂ ಇದೆ. ಇವೆಲ್ಲಾ ಕೆಲವು ಉದಾಹರಣೆಗಳು ಮಾತ್ರ.

ಡಿಸಿ ಮ್ಯೂಸಿಕ್‌ ಚಾನೆಲ್‌ನಲ್ಲಿ ಗಾಯಕ ಅಧ್ವಿಕ್‌ ಹಾಡಿರುವ ಹಾಡು ‘ನಿನ್ನ ಗುಂಗಲ್ಲಿ....’ ಮೆಚ್ಚುಗೆಗೆ ಪಾತ್ರವಾಗಿದೆ.

90ರ ದಶಕದಲ್ಲಿ ದೂರದರ್ಶನದ ಚಂದನ ವಾಹಿನಿ ಸುಗಮ ಸಂಗೀತ ಗಾಯಕರ ಭಾವಾಭಿನಯವನ್ನು ಸ್ಟುಡಿಯೊ ಗೋಡೆಗಳ ನಡುವೆ ಚಿತ್ರೀಕರಿಸಿ ಪ್ರಸಾರ ಮಾಡುತ್ತಿರುವುದು ಹಲವರಿಗೆ ನೆನಪಿರಬಹುದು.

ಲಾಕ್‌ಡೌನ್‌ ಹಾಗೂ ನಂತರದ ನ್ಯೂ ನಾರ್ಮಲ್‌ ದಿನಗಳು, ಆ್ಯಪ್‌ಗಳ ನಿಷೇಧ, ಪ್ರತಿಭೆಯ ಸಾರ್ವಜನಿಕ ಪ್ರದರ್ಶನಕ್ಕೆ ಹಾಕಲಾದ ನಿರ್ಬಂಧಗಳು ಯುವ ಸಮೂಹ ಡಿಜಿಟಲ್‌ನ ಹೊಸ ವೇದಿಕೆಯೊಂದನ್ನು ಸಮರ್ಥವಾಗಿ ಬಳಸಲು ದಾರಿ ಮಾಡಿಕೊಟ್ಟವು. ಇಲ್ಲಿ ಹಲವು ಉದಯೋನ್ಮುಖ ಗಾಯಕರು, ಕನ್ನಡ ರ‍್ಯಾಪರ್‌ಗಳು, ನಟ–ನಟಿಯರು, ತಂತ್ರಜ್ಞರು ಹೊರಬಂದಿದ್ದಾರೆ. ಹೆಚ್ಚು ಬಂಡವಾಳ ಬೇಡದ, ಸಹಜ ಪರಿಸರದಲ್ಲೇ ಚಿತ್ರಿಸಿದ ಹಾಡುಗಳು ಸಭಾಂಗಣ, ಚಿತ್ರಮಂದಿರಗಳ ಆವರಣದಿಂದಾಚೆಗಿನ ಲಕ್ಷಾಂತರ ವೀಕ್ಷಕರನ್ನು, ಚಿತ್ರೋದ್ಯಮದ ಮಂದಿಯನ್ನೂ ತಲುಪಿದೆ. ಹವ್ಯಾಸಕ್ಕೋ, ವೃತ್ತಿ ಪ್ರವೇಶಕ್ಕೋ ಮಾಡಿಕೊಂಡ ವೇದಿಕೆಗಳು ಭವಿಷ್ಯ ರೂಪಿಸಬಹುದೇ ಎಂಬ ನಿರೀಕ್ಷೆಯಲ್ಲಿ ಈ ಯುವಜನರು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT