ಭಾನುವಾರ, ಸೆಪ್ಟೆಂಬರ್ 27, 2020
21 °C

ಅವ್ವ

ಪ್ರೊ. ಚಂದ್ರಶೇಖರ ಹೆಗಡೆ Updated:

ಅಕ್ಷರ ಗಾತ್ರ : | |

ಕಸವೆದ್ದು ಕುಣಿಯುವಾಗ
ಕರೆದು ಮಣಿಸಿ ಬಾಗಿನಿಂದು
ತಣಿಸಿ ಗುಡಿಸಿ ಹಾಕಿದವಳು
ಕೆಮ್ಮುತ್ತಲೇ ಕಾಡಿಬಿಡುವ
ಮಣ್ಣಹುಡಿಯ ಗಂಧವನೇ
ಉಸಿರಾಗಿಸಿಕೊಂಡವಳು

ನಿದ್ದೆಯಿಂದ ಕಣ್ಣುಜ್ಜಿ ಎದ್ದ
ಮಣ್ಣ ಕಣ ಕಣಗಳಿಂದ
ಮೊದಲ ದರ್ಶನಕಾಗಿ
ಹುಡುಕಾಡಿಸಿಕೊಂಡವಳು
ಉದುರಿ ಬಿದ್ದ ಎಲೆಗಳಂತೆ
ಬಸಿರು ಬಸಿದು ಎದೆಯುಸಿರು
ಹೊಸೆದು ಮುಪ್ಪಾಗಿ ಹೆಪ್ಪಾದವಳು

ಮನೆಯಂಗಳದ ತೆಂಗುಮರ
ಕ್ಷಯದ ಕಾಯಿಲೆಯಲಿ ನರಳಿ
ಕೃಶವಾಗಿ ಜೀವ ಬಿಟ್ಟಾಗ
ಮುಂದೆ ಕುಳಿತು ಅತ್ತವಳು

ಅರಳಿದಾಗ ದಾಸವಾಳ
ನಗು ಚೆಲ್ಲಿದಾಗ ಮೊಲ್ಲೆ ಹೂ
ದೇವನಡಿಗೆ ತಂದು ಇಟ್ಟು
ಅರ್ಪಿಸಿಕೊಂಡವಳು

ಸುಗಂಧ ಬೀರುವ ಹಣ್ಣು
ಕಾಯಿ ಚಲ್ಲವರಿಯುವಾಗ
ನಗು ಬೀರಿ ಕನಸು ಕಟ್ಟಿ
ಕಾಣದಂತೆ ದೃಷ್ಟಿ ತೆಗೆದವಳು

ಮಾಳಿಗೆಯ ಮಣ್ಣು ಸೋರಿ
ಮನೆಯೊಳಗೆ ಕೆಸರಾದಾಗ
ಮತ್ತೆ ಬಂದೆಯಾ ಎಂದು
ಬಳಿದು ಹೊರಗೆ ಅಟ್ಟಿದವಳು

ಹೊಂಚು ಹಾಕಿ ಮನೆಯೊಳಗೆ
ಇಣುಕಿ ಬಂದು ದಾಳಿಯಿಡುವ
ಮಳೆ ಹನಿಗಳ ಚೆಲ್ಲಾಟಕೆ
ಬೇಸತ್ತು ನಿದ್ದೆ ಕಳೆದುಕೊಂಡವಳು

ತೊಟ್ಟಿಕ್ಕುವ ಮಾಳಿಗೆಯನೇರಿ
ನಂಟು ಬಿಡದ ಮಣ್ಣು ಹಳಿದು
ಬೇವಿನೆಲೆ ಕೊಂಬೆ ಹರಿದು
ಮನೆಯ ಗುದ್ದಿಗೆ ಬಂಧಿಯಾದವಳು

ಚಂದ್ರ ಚಂದ್ರ ನೆಂದು ಕೂಗಿ
ಮುಗಿಲ ಕಡೆಗೆ ಮುಖ ಮಾಡಿ
ಹಡೆದ ಮಗನ ಮೊಗದಿ
ಚಂದಿರನ ಕಂಡವಳು

ಪಾತ್ರೆಗಳ ತಿಕ್ಕಿ ತೊಳೆದು
ಹೊಳಪಿನಲ್ಲಿ ಮುಖವ ಕಂಡು
ಬೆಳಗಿ ನಲಿಯುತ ಹೊಳೆದು
ಕತ್ತಲೆಗಿಂತ ಕಪ್ಪಾದವಳು

ಮನೆಯ ಸ್ನಾನ ಮಾಡಿಸಿ
ಜೀವಗಳ ಮಲಿನ ತೊಳೆದು
ತನ್ನ ತಾನೇ ಬೆಂದು ನೊಂದು
ಮಲಿನ ಗಂಧಿಯಾದವಳು

ಅರ್ಥ ಕೂಡಿ ಅರ್ಥ ಕಳೆದು
ನಲಿವು ಕೊಟ್ಟು ನೋವು ಮೆಟ್ಟಿ
ಪಾಲು ಪಂಚಾಮೃತ ಕುಡಿದು
ಬದುಕಿಗೈಸಿರಿಯಾದವಳು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.