ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡದಲ್ಲಿ ’ಸಾವಿತ್ರಿ‘

Last Updated 15 ಜುಲೈ 2020, 19:30 IST
ಅಕ್ಷರ ಗಾತ್ರ

ಅರವಿಂದರ ’ಸಾವಿತ್ರಿ‘ ಬಗ್ಗೆ ರಾಜೇಶ್‌ ಅಕ್ಕಿಹಾಳ್‌ ಅವರ ಬರಹ (’ಸಂಸ್ಕೃತಿ ಸಂಭ್ರಮ‘ ಜುಲೈ 9) ಓದಿ ಸಂತೋಷವಾಯಿತು. ಕನ್ನಡಕ್ಕೆ ಅರವಿಂದರ ಸಾಹಿತ್ಯ, ಅದರಲ್ಲೂ ಮುಖ್ಯವಾಗಿ ’ಸಾವಿತ್ರಿ‘ ಈಗಲೂ ಅನುವಾದವಾಗುತ್ತಿದೆ.

ಡಾ. ಆರ್‌. ಕೆ. ಕುಲಕರ್ಣಿ ಅವರು ಸಾವಿತ್ರಿಯ ಸಂಕ್ಷೇಪ ಕನ್ನಡರೂಪವನ್ನು ನೀಡಿದ್ದಾರೆ. ಹೊಸಪೇಟೆಯ ‘ಯಾಜಿ‘ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಗೆ ಮುನ್ನುಡಿ ಬರೆದಿರುವ ಗುರುಲಿಂಗ ಕಾಪಸೆ ಅವರು ’ಒಬ್ಬ ಅಧ್ಯಾತ್ಮಸಾಧಕರಾಗಿ ’ಸಾವಿತ್ರಿ‘ಮಹಾಕಾವ್ಯವನ್ನು ಕೂಲಂಕಷವಾಗಿ ಓದಿದ್ದರಿಂದ ಹೀಗೆ ಸಂಕ್ಷೇಪಿಸಿಕೊಳ್ಳಲು ಸಾಧ್ಯವಾಗಿದೆ‘ ಎಂದಿದ್ದಾರೆ.

ಈಚೆಗೆ ಬಂದ ಇನ್ನೊಂದು ’ಸಾವಿತ್ರಿ‘ ಅನುವಾದ ಮಂದರ್ಕೆ ಮಾಧವ ಪೈ ಅವರದ್ದು; ಶ್ರೀ ಅರವಿಂದೋ ಸೊಸೈಟಿ ರಾಜ್ಯ ಸಮಿತಿ, ಬೆಂಗಳೂರು ಈ ಕೃತಿಯನ್ನು ಪ್ರಕಟಿಸಿದೆ.

ಮನೋಜ್‌ ದಾಸ್‌ ಅವರು ಬರೆದಿರುವ ’ಶ್ರೀ ಅರವಿಂದರು‘ ಕೃತಿಯನ್ನು ಸ. ಸ. ಮಾಳವಾಡರು ಕನ್ನಡಕ್ಕೆ ಅನುವಾದಿಸಿದ್ದಾರೆ (ಕೇಂದ್ರ ಸಾಹಿತ್ಯ ಅಕಾದೆಮಿ). ಮಾಳವಾಡರು ಅನುವಾದಿಸಿರುವ ’ಸಾವಿತ್ರಿ‘ಯ ಕೆಲವು ಭಾಗಗಳನ್ನು ಇಲ್ಲಿ ನೋಡಬಹುದು.

ವರಕವಿ ದ. ರಾ. ಬೇಂದ್ರೆಯವರ ’ಚೈತ್ಯಾಲಯ‘ ಕವನಸಂಗ್ರಹ ಪೂರ್ಣವಾಗಿ ಅರವಿಂದರ ಕವನಗಳ ಭಾವಾನುವಾದಗಳು. ಅರವಿಂದರ ಸುನೀತಗಳನ್ನು ಅನುವಾದಿಸುವಾಗ ಬಂದ ಸಹಜತೆ ಬದಲಾಗಿ ‘ಸಾವಿತ್ರಿ‘ ಅನುವಾದದಲ್ಲಿ ವಿಫಲತೆ ಅನುಭವಕ್ಕೆ ಬಂದಿತು ಎಂದು ವರಕವಿ ಬೇಂದ್ರೆಯವರೇ ಹೇಳಿಕೊಂಡದ್ದರಿಂದ ’ಸಾವಿತ್ರಿ‘ ಅನುವಾದ ಎಷ್ಟು ಕಠಿಣವಾದ ಕೆಲಸ ಎಂಬುದನ್ನು ಊಹಿಸಿಕೊಳ್ಳಬಹುದು. ಅರವಿಂದರ ಕಾವ್ಯಕೃತಿಯ ಶಕ್ತಿ ’ಅನನುಭೂತವಾದ ಭಾವಗಳನ್ನು ಅನುಭವಕ್ಕೆ ಎಟಕುವಂತೆ ಶಬ್ದಶಕ್ತಿ ಸಾಮರ್ಥ್ಯದಿಂದ ಜೀವದ ಬೇರೆ ಭೂಮಿಕೆಗೆ ಎತ್ತುವುದು‘ ಎಂದು ಬೇಂದ್ರೆಯವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT